Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಘಟಾನುಘಟಿ ಅಭ್ಯರ್ಥಿಗಳೆಲ್ಲ ಕೋಟ್ಯಧಿಪತಿಗಳೇ..!

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌, ಗೀತಾ ಸೇರಿ ಹಲವರು ಉಮೇದುವಾರಿಕೆ ಸಲ್ಲಿಸಿದ್ದು ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. 

Lok Sabha Election 2024 Candidates Assets are in Crores in Karnataka grg
Author
First Published Apr 16, 2024, 6:28 AM IST

ಬೆಂಗಳೂರು(ಏ.16):  ರಾಜ್ಯದಲ್ಲಿ 2ನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸೋಮವಾರ 52 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌, ಗೀತಾ ಸೇರಿ ಹಲವರು ಉಮೇದುವಾರಿಕೆ ಸಲ್ಲಿಸಿದ್ದು ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಬಹುತೇಕ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಕೋಟಿಗಳ ಲೆಕ್ಕದಲ್ಲಿ ಇದೆ. ಪ್ರಮುಖರ ಆಸ್ತಿ ವಿವರ ಇಂತಿದೆ.

ಪ್ರಹ್ಲಾದ ಜೋಶಿ ₹13.96 ಕೋಟಿ ಆಸ್ತಿ ಒಡೆಯ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿರುವ ಪ್ರಹ್ಲಾದ ಜೋಶಿ ಅವರು ತಮ್ಮ ಹೆಸರಿನಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ₹13.96 ಕೋಟಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಗೀತಾ ಶಿವರಾಜಕುಮಾರ್ ಬಳಿ ಇರುವ ಒಟ್ಟು ಆಸ್ತಿ ಇಷ್ಟೊಂದಾ?: ಅಫಿಡವಿಟ್‌ನಲ್ಲಿ ಕೊಟ್ಟ ಮಾಹಿತಿಯಲ್ಲಿ ಏನೇನಿದೆ?

ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿರುವ ಜೋಶಿ ತಮ್ಮಲ್ಲಿ ₹2.72 ಕೋಟಿ ಚರಾಸ್ತಿ, ₹11.24 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹13.96 ಕೋಟಿ ಆಸ್ತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚರಾಸ್ತಿ ಪೈಕಿ ಪ್ರಹ್ಲಾದ ಜೋಶಿ ₹1 ಲಕ್ಷ ನಗದು ಹೊಂದಿದ್ದು, ₹12.14 ಲಕ್ಷ ಮೌಲ್ಯದ 184 ಗ್ರಾಂ ಚಿನ್ನದ ಆಭರಣ, ₹3.65 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ಹೊಂದಿದ್ದಾರೆ.

ಹಾಗೆಯೇ, ಸ್ಥಿರಾಸ್ತಿ ಪೈಕಿ ಹುಬ್ಬಳ್ಳಿ, ಬೆಂಗಳೂರಿನಲ್ಲಿ ₹2.64 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹6.63 ಲಕ್ಷ ಸಾಲವನ್ನೂ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು, ಪತ್ನಿ ಜ್ಯೋತಿ ಹೆಸರಿನಲ್ಲಿ ₹5.93 ಕೋಟಿ ಚರಾಸ್ತಿ ಹಾಗೂ ₹86.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಪೈಕಿ ₹1.10 ಲಕ್ಷ ನಗದು ಹೊಂದಿದ್ದಾರೆ. ₹33 ಲಕ್ಷ ಮೌಲ್ಯದ 500 ಗ್ರಾಂ ಚಿನ್ನದ ಆಭರಣ, ₹1.46 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ವಸ್ತು ಹೊಂದಿದ್ದಾರೆ. ಹಾಗೆಯೇ ₹1.37 ಕೋಟಿ ಸಾಲವನ್ನೂ ಮಾಡಿಕೊಂಡಿದ್ದಾರೆ. ಪ್ರಹ್ಲಾದ ಜೋಶಿ ಅವರ ಕುಟುಂಬದ ಹೆಸರಿನಲ್ಲಿ ₹21.07 ಕೋಟಿ ಆಸ್ತಿ ಇದೆ. ವಿಶೇಷ ಎಂದರೆ ಕುಟುಂಬದ ಯಾರ ಹೆಸರಿನಲ್ಲಿ ಒಂದೂ ಕಾರು ಇಲ್ಲ.

ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ₹2.82 ಕೋಟಿ ಏರಿಕೆಯಾಗಿದೆ. ಹಾಗೆಯೇ, ಕುಟುಂಬದ ಆಸ್ತಿಯಲ್ಲಿ ₹6.9 ಕೋಟಿ ಏರಿಕೆಯಾಗಿದೆ.

ಶೆಟ್ಟರ್‌ ಆಸ್ತಿ 12 ಕೋಟಿ, 1 ಕೋಟಿ ಇಳಿಕೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ₹12.45 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ತಮ್ಮ ಹೆಸರಿನಲ್ಲಿ ₹9.82 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹2.63 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆದರೆ, ಯಾವುದೇ ವಾಹನ ಇಲ್ಲ. ಆಸ್ತಿಯಲ್ಲಿ ಕೋಟ್ಯಧಿಪತಿ ಆಗಿದ್ದರೂ ಶೆಟ್ಟರ್‌ ಅವರ ಮೇಲೆ ₹57.26 ಲಕ್ಷ ಸಾಲವಿದೆ. ಅವರ ಪತ್ನಿ ಶಿಲ್ಪಾ ಶೆಟ್ಟರ್‌ ಅವರ ಹೆಸರಿನಲ್ಲಿ ₹1 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ₹91.10 ಲಕ್ಷ ಮೌಲ್ಯದ ಚರಾಸ್ತಿ ಇದೆ. ಮಕ್ಕಳ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಹಾಗೂ ಚರಾಸ್ತಿ ತೋರಿಸಿಲ್ಲ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್‌ ಅವರ ಒಟ್ಟು ಆಸ್ತಿ ಮೌಲ್ಯ ₹13.51 ಕೋಟಿ ಇತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಅವರ ಆಸ್ತಿ ಸಂಪಾದನೆಯಲ್ಲಿ ₹1 ಕೋಟಿಯಷ್ಟು ಇಳಿಕೆಯಾಗಿದೆ. ಶೆಟ್ಟರ್‌ ತಮ್ಮ ಪತ್ನಿ ಶಿಲ್ಪಾ ಅವರಿಗೆ ₹ 14.40 ಲಕ್ಷ, ಮಕ್ಕಳಾದ ಪ್ರಶಾಂತನಿಗೆ ₹ 26.33 ಲಕ್ಷ , ಇನ್ನೋರ್ವ ಪುತ್ರ ಸಂಕಲ್ಪನಿಗೆ ₹45.11 ಲಕ್ಷ ಮತ್ತು ಸಹೋದರ ಮೋಹನ ಅವರಿಗೆ ₹35.2 ಲಕ್ಷ ಸೇರಿದಂತೆ ಒಟ್ಟು ₹ 1.24 ಕೋಟಿ ಸಾಲ ನೀಡಿದ್ದಾರೆ. ಶೆಟ್ಟರ್‌ ಅವರ ಕೈಯಲ್ಲಿ ₹15. 37 ಲಕ್ಷ ಮತ್ತು ಪತ್ನಿ ಬಳಿ ₹2.50 ಲಕ್ಷ ನಗದು ಹಣವಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಠೇವಣಿ, ಶೇರು, ಬಾಂಡ್‌ಗಳನ್ನು, ಚಿನ್ನಾಭರಣ ಹೊಂದಿದ್ದಾರೆ.

ಅಣ್ಣಾಸಾಬ ಜೊಲ್ಲೆ ಆಸ್ತಿ ₹21.63 ಕೋಟಿ

ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗಿಂತ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಶ್ರೀಮಂತೆಯಾಗಿದ್ದಾರೆ. ಅಣ್ಣಾಸಾಬೇಬ ಜೊಲ್ಲೆ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು ₹ 21.63 ಕೋಟಿ ಆಸ್ತಿ ಹೊಂದಿದ್ದರೆ, ಶಾಸಕಿ ಶಶಿಕಲಾ ಜೊಲ್ಲೆ ₹ 29.55 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ₹ 12.40 ಕೋಟಿ, ಸಾಲ ಹೊಂದಿದ್ದರೆ, ಪತ್ನಿ ಶಶಿಕಲಾ ಜೊಲ್ಲೆ ಹೆಸರಿನಲ್ಲಿ ₹ 9.54 ಕೋಟಿ ಸಾಲವಿದೆ. ₹ 7.21 ಲಕ್ಷ ಆಸ್ತಿ ಹೆಚ್ಚಳ: ಬಿಜೆಪಿ ಅಭ್ಯರ್ಥಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಘೋಷಣೆ ಮಾಡಿಕೊಂಡಿದ್ದ ಆಸ್ತಿಗಿಂತ ಈ ಬಾರಿ ₹7.21(₹7,21,81,887) ಕೋಟಿಯಷ್ಟು ಏರಿಕೆಯಾಗಿದೆ. ಜೊತೆಗೆ ಸಾಲವೂ ₹ 2.74 ಕೋಟಿ (₹ 27419903) ಹೆಚ್ಚಳಗೊಂಡಿದೆ.

2019ರಲ್ಲಿ ₹2,44,82,463 ಇದ್ದ ಚರಾಸ್ತಿ ಈ ಬಾರಿ ₹ 3,38,88,012ರಷ್ಟು ಹೆಚ್ಚಾಗಿ ಒಟ್ಟು ₹5,83,70,475 ಮೌಲ್ಯದ ಚರಾಸ್ತಿ ಹೊಂದಿದ್ದರೆ. 2019ರಲ್ಲಿ ₹11,96,55,000 ಇದ್ದ ಸ್ಥಿರಾಸ್ತಿ ಈ ಬಾರಿ ₹ 3,82,93,875ಗೆ ಹೆಚ್ಚಳಗೊಂಡಿದ್ದು, ಒಟ್ಟು ₹15,79,48,875 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ತಿ ಏರಿಕೆ ಜೊತೆಗೆ ಸಾಲವೂ ಏರಿಕೆ ಕಂಡಿದ್ದು, ಕಳೆದ ಚುನಾವಣೆಯಲ್ಲಿ ₹ 9,66,30,171 ಸಾಲ ಹೊಂದಿದ್ದರೆ, ಈ ಬಾರಿ ಅದು ₹12,40,50,074 ಹೆಚ್ಚಳವಾಗಿದೆ.

ಅಣ್ಣಾಸಾಹೇಬ ಜೊಲ್ಲೆ ಅವಲಂಬಿತರಾದ ಪುತ್ರ ಜ್ಯೋತಿಪ್ರಸಾದ ಜೊಲ್ಲೆ ಹೆಸರಿನಲ್ಲಿ ₹12200730 ಚರಾಸ್ತಿ ಹೊಂದಿದ್ದರೆ, ₹18703125 ಸ್ಥಿರಾಸ್ತಿ ಇದೆ. ₹ 12951124 ಸಾಲ ಇದೆ. ಸೊಸೆ ಪ್ರಿಯಾ ಜ್ಯೋತಿಪ್ರಸಾದ ಜೊಲ್ಲೆ ಹೆಸರಿನಲ್ಲಿ ₹ 3133951 ಚರಾಸ್ತಿ ಮಾತ್ರ ಇದೆ. ಅಣ್ಣಾಸಾಹೇಬ ಜೊಲ್ಲೆ ಅವರ ಕುಟುಂಬ ಒಟ್ಟು ₹ 54,27,,86,727 ಆಸ್ತಿ ಹೊಂದಿದೆ.

ಮಾಜಿ ಸಿಎಂ ಬೊಮ್ಮಾಯಿ, ಪತ್ನಿ ಬಳಿ 51 ಕೋಟಿ ಆಸ್ತಿ

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 29.58 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರ ಜತೆಗೆ ೨೦ ಕೋಟಿ ರು. ಮೌಲ್ಯದ ಪಿತ್ರಾರ್ಜಿತ ಆಸ್ತಿಯೂ ತಮಗೆ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಬರೋಬ್ಬರಿ 98 ಕೋಟಿ ರೂ ಆಸ್ತಿಗೆ ಒಡೆಯ ಬಿಜೆಪಿ ರೆಬೆಲ್ ಶಾಸಕ ಕೆಎಸ್‌ ಈಶ್ವರಪ್ಪ!

ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಬೊಮ್ಮಾಯಿ ಬಳಿ ೩ ಲಕ್ಷ ರು. ನಗದು, ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ ೫೧ ಲಕ್ಷ ರು. ಠೇವಣಿ, ಬಾಂಡ್, ವಿವಿಧ ಕಂಪನಿ ಶೇರುಗಳಲ್ಲಿ ೩.೩೦ ಕೋಟಿ ರು. ಹೂಡಿಕೆ, ೧೦ ಲಕ್ಷ ರು. ಸಾಲ ನೀಡಿದ್ದು, ೧.೫೯ ಕೋಟಿ ರು. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಆದರೆ, ಇವರು ಯಾವುದೇ ಸ್ವಂತ ವಾಹನ ಹೊಂದಿಲ್ಲ. ಒಟ್ಟು ೬.೧೨ ಕೋಟಿ ರು. ಮೌಲ್ಯದ ಚರಾಸ್ತಿ ಬೊಮ್ಮಾಯಿ ಅವರ ಬಳಿಯಿದೆ.

೯೬.೮೦ ಲಕ್ಷ ರು. ಮೌಲ್ಯದ ಕೃಷಿ ಜಮೀನು, ೭ ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು, ೬.೩೦ ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, ಬೆಂಗಳೂರು ಹಾಗೂ ಶಿಗ್ಗಾವಿಯಲ್ಲಿ ೯.೧೮ ಕೋಟಿ ರು. ಮೌಲ್ಯದ ವಾಸದ ಮನೆ ಸೇರಿದಂತೆ ೨೩.೪೫ ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ೫.೩೧ ಕೋಟಿ ರು. ಸಾಲದ ಹೊರೆಯೂ ಇವರಿಗಿದೆ. ಪತ್ನಿ ಬಳಿ ೧.೩೨ ಕೋಟಿ ಮೌಲ್ಯದ ಚರಾಸ್ತಿ, ಪುತ್ರಿ ಬಳಿ ೧.೫೩ ಕೋಟಿ ಮೌಲ್ಯದ ಚರಾಸ್ತಿ ಇದೆ.

ಹಾವೇರಿ: ಗಡ್ಡದೇವರಮಠ ಆಸ್ತಿ ₹55.67 ಕೋಟಿ

ಹಾವೇರಿ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ತಾವು ₹55.67 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಆನಂದಸ್ವಾಮಿ ಅವರ ಬಳಿ ₹೫೦ ಸಾವಿರ ನಗದು, ಬ್ಯಾಂಕ್‌ ಮತ್ತು ಫೈನಾನ್ಸ್‌ಗಳಲ್ಲಿ ₹೧.೬೯ ಕೋಟಿ, ವಿಮೆ, ಅಂಚೆ ಕಚೇರಿ ಇತ್ಯಾದಿಗಳಲ್ಲಿ ₹೭.೭೬ ಕೋಟಿ ಠೇವಣಿ ಹೊಂದಿದ್ದಾರೆ. ವಿವಿಧ ಸಂಸ್ಥೆ, ಫರ್ಮ್ಸ್‌, ಟ್ರಸ್ಟ್‌ಗಳು ಹಾಗೂ ವೈಯಕ್ತಿಕ ಸಾಲವಾಗಿ ₹೫.೧೫ ಕೋಟಿ ತೊಡಗಿಸಿದ್ದಾರೆ. ಒಂದು ಹೊಂಡಾ ಸಿಟಿ ಕಾರು, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಬ್ರಿಡ್ ಹಾಗೂ ಒಂದು ಬೈಕ್ ಸೇರಿದಂತೆ ₹50.54 ಲಕ್ಷ ಮೌಲ್ಯದ ವಾಹನಗಳನ್ನು ಇವರು ಹೊಂದಿದ್ದಾರೆ. ₹7.80 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು ₹19.16 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

₹6.20 ಕೋಟಿ ಮೌಲ್ಯದ ೫೬ ಎಕರೆ ಕೃಷಿ ಜಮೀನು ಹೊಂದಿದ್ದು, ₹೧೬.೮೭ ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಬೆಳಗಾವಿ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ₹೧೨.೧೫ ಕೋಟಿ ಮೌಲ್ಯದ ವಾಸದ ಮನೆ ಹೊಂದಿದ್ದಾರೆ. ಅಲ್ಲದೇ ಬೆಳಗಾವಿ, ಮೈಸೂರು ಜಿಲ್ಲೆಯಲ್ಲಿ ₹೧.೨೭ ಕೋಟಿ ಮೌಲ್ಯದ ಆಸ್ತಿ ಸೇರಿದಂತೆ ಒಟ್ಟು ₹19.16 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹36.51 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು ₹55.67 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರು ₹೨೨.೪೬ ಕೋಟಿ ಸಾಲ ಸಹ ಹೊಂದಿದ್ದಾರೆ. ಇನ್ನು ೨ ಕೆಜಿ ಬಂಗಾರ ಪಿತ್ರಾರ್ಜಿತವಾಗಿ ಬಂದಿದೆ.

ಶಿವಮೊಗ್ಗ: ಗೀತಾ 89.05 ಕೋಟಿ ರು. ಆಸ್ತಿ ಒಡತಿ

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಗೀತಾ ಅವರು ತಮ್ಮ ಕುಟುಂಬದ ಒಟ್ಟು ಆಸ್ತಿ ₹89.05 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 23.50 ಕೋಟಿ ರು. ಚರಾಸ್ತಿ ಮತ್ತು 65.50 ಕೋಟಿ ರು. ಸ್ಥಿರಾಸ್ತಿ ಇದೆ. ಗೀತಾ ಮತ್ತವರ ಪತಿ ಸೇರಿದಂತೆ ಕುಟುಂಬದ ಆಸ್ತಿ 24.16 ಕೋಟಿ ರು.ಗಳಾಗಿದೆ.

ಗೀತಾ ಅವರಲ್ಲಿ 3 ಲಕ್ಷ ರು. ಮತ್ತು ಅವರ ಪತಿಯ ಬಳಿ 33.58 ಲಕ್ಷ ರು. ನಗದು ಹಣವಿದೆ. 3.5 ಕೋಟಿ ರು. ಮೌಲ್ಯದ ವಜ್ರ, ಬಂಗಾರದ ಆಭರಣಗಳು ಹಾಗೂ 3.40 ಲಕ್ಷ ರು. ಮೌಲ್ಯದ 30 ಕೆ.ಜಿ. ಬೆಳ್ಳಿಯ ವಸ್ತುಗಳಿವೆ. 6 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ ಮತ್ತು 54 ಕೋಟಿ ರು. ಮೌಲ್ಯದ ವಸತಿ ಕಟ್ಟಡಗಳಿವೆ. ಗೀತಾ ಅವರು 64.60 ಲಕ್ಷ ರು. ಮತ್ತು ಅವರ ಪತಿ 9.77 ಕೋಟಿ ರು. ಠೇವಣಿ ಹಣ ಹೊಂದಿದ್ದಾರೆ. ಭೂ ಅಭಿವೃದ್ಧಿಯ ಮೇಲೆ ಗೀತಾ ಅವರು 34.5 ಮತ್ತು ಅವರ ಪತಿ 31 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಕಾರು ಮತ್ತು ಇತರೆ ಸಾಲ ಸೇರಿದಂತೆ ಒಟ್ಟು 24.16 ಕೋಟಿ ರು. ಸಾಲ ಇದೆ.

ಗೀತಾ ಅವರ ಬಳಿ 1.07 ಕೋಟಿ ರು. ಮೌಲ್ಯದ ಟೊಯೋಟಾ ಹೈಬ್ರಿಡ್‌ ಕಾರು ಇದ್ದರೆ, ಇವರ ಪತಿ ಬಳಿ ಒಟ್ಟು 57.70 ಲಕ್ಷ ರು. ಮೌಲ್ಯದ ಟೊಯೋಟಾ ಫಾರ್ಚೂನರ್, ಮಾರುತಿ ಎರ್ಟಿಗಾ ಮತ್ತು ವೊಲ್ವೋ ಎಸ್ 90 ವಾಹನಗಳಿವೆ. ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.

ವಿಜಯಪುರ:ಮರಾಜು ಆಲಗೂರಗಿಂತ ಪತ್ನಿಯೇ ಶ್ರೀಮಂತೆ

ವಿಜಯಪುರ: ಕಾಂಗ್ರೆಸ್ ಹುರಿಯಾಳು ಪ್ರೊ.ಎಚ್.ಆರ್.ಆಲಗೂರ (ರಾಜು ಆಲಗೂರ) ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಅಭ್ಯರ್ಥಿಗಿಂತ ಅವರ ಪತ್ನಿ ಸಾವಿತ್ರಿ ಅವರೇ ಒಂದು ಕೈ ಮುಂದಿದ್ದಾರೆ.

ರಾಜೂ ಆಲಗೂರ ಆಸ್ತಿ ವಿವರ:

₹5 ಲಕ್ಷ ನಗದು, ₹37 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರು, ₹15 ಲಕ್ಷ ಮೌಲ್ಯದ ಮಹಿಂದ್ರಾ ಸ್ಕಾರ್ಪಿಯೋ, ₹5 ಲಕ್ಷ 84 ಸಾವಿರ ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹91,74,326 ಚರಾಸ್ತಿ ಹೊಂದಿದ್ದಾರೆ. ₹1.12 ಕೋಟಿ ಮೌಲ್ಯದ ಒಂದು ಮನೆ, ₹45 ಲಕ್ಷ ಮೌಲ್ಯದ ಒಂದು ಮನೆ ಸೇರಿ ಎರಡು ಮನೆಗಳು, ₹1.10 ಕೋಟಿ ಮೌಲ್ಯದ 10 ಎಕರೆ ಕೃಷಿ ಜಮೀನು, ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು ₹4.55 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪತ್ನಿ ಸಾವಿತ್ರಿ ಆಲಗೂರ ಆಸ್ತಿ ವಿವರ:

₹2 ಲಕ್ಷ ನಗದು, ₹46.18 ಲಕ್ಷ ಮೌಲ್ಯದ ಕಾರು, ₹4.70 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ₹16,79,000 ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹1,67,80,894 ಚರಾಸ್ತಿ ಹೊಂದಿದ್ದಾರೆ. ₹85 ಲಕ್ಷ ಮೌಲ್ಯದ ಕೃಷಿ ಭೂಮಿ, ₹6 ಕೋಟಿ ಮೌಲ್ಯದ ಹೊಟೇಲ್ ಸೇರಿ ಒಟ್ಟು ₹6,85,25,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿಯಲ್ಲಿ ಪತಿಗಿಂತ ಪತ್ನಿ ₹75.96 ಲಕ್ಷ ಮೌಲ್ಯದ ಆಸ್ತಿಯನ್ನು ಹೆಚ್ಚಿಗೆ ಹೊಂದಿದ್ದು, ಸ್ಥಿರಾಸ್ತಿಯಲ್ಲಿ ₹2.30 ಕೋಟಿ ಮೌಲ್ಯದ ಆಸ್ತಿಯನ್ನು ಹೆಚ್ಚಿಗೆ ಹೊಂದಿದ್ದಾರೆ.

ಬೆಳಗಾವಿ: ಸಚಿವೆ ಲಕ್ಷ್ಮಿ ಪುತ್ರನ ಬಳಿ ₹13.63 ಕೋಟಿ ಆಸ್ತಿ

ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳಕರ್‌ ಒಟ್ಟು ₹13.63 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ.

ಸೋಮವಾರ ನಾಮಪತ್ರ ಸಲ್ಲಿಸಿದ ಮೃಣಾಲ್‌ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಮೃಣಾಲ್‌ ಅವರು ತಮ್ಮ ಬಳಿ ₹1.75 ಲಕ್ಷ ಮತ್ತು ಪತ್ನಿ ಹಿತಾ ಅವರ ಬಳಿ ₹46 ಸಾವಿರ ನಗದು ಇರುವುದಾಗಿ ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ ₹10 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹3.62 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ₹23.55 ಲಕ್ಷ ಚರಾಸ್ತಿ ಮತ್ತು ಪುತ್ರಿ ಐರಾ ಹೆಸರಿನಲ್ಲಿ ₹7.85 ಲಕ್ಷ ಚರಾಸ್ತಿ ಇದೆ. ಮೃಣಾಲ್‌ ಅವರು ಹರ್ಷಾ ಶುಗರ್ಸ್‌ಗೆ ₹3.66 ಕೋಟಿ ಸಾಲ ನೀಡಿದ್ದಾರೆ. ತಮ್ಮ ಬಳಿ ₹3.78 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಪತ್ನಿ ಬಳಿ ₹14.65 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳಿವೆ. ಅಲ್ಲದೆ, ವಿವಿಧ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಲ್ಲಿ ₹6.16 ಕೋಟಿ ಸಾಲ ಮಾಡಿದ್ದಾರೆ. ಅವರು ವಾರ್ಷಿಕ ₹29.31ಲಕ್ಷ ಆದಾಯ ಹೊಂದಿದ್ದಾರೆ. ಕೋಟ್ಯಧೀಶರಾದರೂ ಸ್ವಂತ ವಾಹನ ಹೊಂದಿಲ್ಲ.

Follow Us:
Download App:
  • android
  • ios