Asianet Suvarna News Asianet Suvarna News

ಕಾಂಗ್ರೆಸ್‌ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲ್ಲ: ಎಚ್ಡಿಕೆ

ಎತ್ತಿನಹೊಳೆ ಹೆಸರಿನಲ್ಲಿ ನಮ್ಮ ರೈತರಿಗೆ ಮೋಸ ಮಾಡುತ್ತಿದ್ದಾರೆ. ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಕೊಡುವ ಕೆಲಸವನ್ನೂ ಸರಿಯಾಗಿ ಮಾಡದಿರುವುದು ದುರಂತ ಎಂದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ 

Congress not Completed the Yettinahole Project says HD Kumaraswamy grg
Author
First Published Apr 16, 2024, 2:12 PM IST

ದೊಡ್ಡಬಳ್ಳಾಪುರ(ಏ.16): ಬಯಲುಸೀಮೆ ಜಿಲ್ಲೆಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ವೋಟು ಪಡೆಯುತ್ತಿದೆಯೇ ಹೊರತು ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ಕಳೆದ 10 ವರ್ಷಗಳಲ್ಲಿ ಮಾಡಿಲ್ಲ. ಇನ್ನು10 ವರ್ಷವಾದರೂ ಅವರು ಯೋಜನೆಯನ್ನು ಕಾರ್ಯಗತ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಹೆಸರಿನಲ್ಲಿ ನಮ್ಮ ರೈತರಿಗೆ ಮೋಸ ಮಾಡುತ್ತಿದ್ದಾರೆ. ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಕೊಡುವ ಕೆಲಸವನ್ನೂ ಸರಿಯಾಗಿ ಮಾಡದಿರುವುದು ದುರಂತ ಎಂದರು.

ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ನದ್ದು ಪಿಕ್‌ಪಾಕೆಟ್‌ ಸರ್ಕಾರ, ಕುಮಾರಸ್ವಾಮಿ

ನೇಕಾರರ ಸಮಸ್ಯೆಗಳ ಬಗ್ಗೆ ತಮಗೆ ಸ್ಪಷ್ಟವಾದ ಅರಿವಿದೆ. ಇಂದು ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ನೇಕಾರರು ಅತ್ಯಂತ ಸಂಕಷ್ಟದಲ್ಲಿದ್ದು, ಕೇಂದ್ರದಲ್ಲಿ ಹಲವು ಉತ್ತಮ ಯೋಜನೆಗಳಿವೆ. ಅವುಗಳಡಿಯಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿ. ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿಪಡಿಸುವ ಜೊತೆಗೆ ಮನೆಬಾಗಿಲಿಗೆ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸುವುದು ಬದ್ದತೆ ಎಂದರು.

ಮೇಕೆದಾಟು ಮರೀಚಿಕೆ:

ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ ಕಾಂಗ್ರೆಸ್ಸಿಗರು ಮೇಕೆದಾಟು ಜಲಾಶಯ ಕಟ್ಟುವ ಪ್ರಯತ್ನವನ್ನೂ ಮಾಡಿಲ್ಲ. ಅದಕ್ಕೆ ವಿರೋಧ ವ್ಯಕ್ತಪಡಿಸುವ ತಮಿಳುನಾಡು ಸರ್ಕಾರದ ಜೊತೆ ಸೇರಿದ್ದಾರೆ. ನಮ್ಮ ನೀರಿನ ಹಕ್ಕನ್ನು ತಮಿಳುನಾಡಿಗೆ ಬರೆದುಕೊಟ್ಟಂತೆ ವರ್ತಿಸುತ್ತಾರೆ ಎಂದು ಟೀಕಿಸಿದರು.

ರಾಹುಲ್‌ ವಿರುದ್ದ ಲೇವಡಿ:

ತಮಿಳುನಾಡಿನಲ್ಲಿ ಭಾಷಣ ಮಾಡಿದ ರಾಹುಲ್‌ ಗಾಂಧಿ, ಅವರ ಸರ್ಕಾರ ಅಧಿಕಾರಕ್ಕೆ ಬಂದರೆ 30 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆ ಮಾಡಿ 11 ತಿಂಗಳಾದರೂ ಒಂದೇ ಒಂದು ಉದ್ಯೋಗ ನೀಡಿಲ್ಲ. ಸರಿ ಸುಮಾರು 2.75 ಲಕ್ಷ ಉದ್ಯೋಗಗಳು ಖಾಲಿ ಇವೆ. ಇತ್ತ ಮೊದಲು ಗಮನ ಹರಿಸಿ ಎಂದು ಲೇವಡಿ ಮಾಡಿದರು.

ಇನ್ನೂ 50 ವರ್ಷ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ: ಡಾ। ಕೆ.ಸುಧಾಕರ್‌

ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಬೆಂ.ಗ್ರಾ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಮುಖಂಡರಾದ ಎಚ್. ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ಹರೀಶ್‌ಗೌಡ, ಲಕ್ಷ್ಮೀಪತಯ್ಯ ಸೇರಿದಂತೆ ಉಭಯ ಪಕ್ಷಗಳ ಹಲವು ಮುಖಂಡರು ಹಾಜರಿದ್ದರು.

ಬೋಗಸ್‌ ಗ್ಯಾರಂಟಿ ದಿಕ್ಕುತಪ್ಪಿಸುವ ಯತ್ನ:

ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಹೇಗಿದ್ದರೂ 40 ಸೀಟು ದಾಟುವುದಿಲ್ಲ ಎಂದು ಗ್ಯಾರಂಟಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಮನಬಂದಂತೆ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಮನೆ ಮನೆಗೂ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತಿದೆ. ದೇಶವನ್ನು ಆಳುವುದು ಅಂದರೆ ಜನರ ಬದುಕನ್ನ ಕಟ್ಟಿಕೊಡುವ ಜವಾಬ್ದಾರಿ. ಆದರೆ ಕಾಂಗ್ರೆಸ್ ಪಕ್ಷ 60 ವರ್ಷ ಈ ದೇಶವನ್ನ ಹಾಳು ಮಾಡಿದೆಯೇ ಹೊರತು ಜನರ ಬದುಕಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎಂದರು.

Follow Us:
Download App:
  • android
  • ios