Asianet Suvarna News Asianet Suvarna News

ಯುದ್ಧ ಯಾರಿಗೂ ಬೇಡ ಅಮೆರಿಕ ಸಂಯಮ ವಹಿಸಲಿ

Editorial

ಅಮೆರಿಕ ಕೆಣಕಿದರೆ ನಾವು ಕೈಕಟ್ಟಿಕೂರುವುದಿಲ್ಲ. ಯುದ್ಧವೇ ನಮ್ಮ ಅನಿವಾರ್ಯ ಆಯ್ಕೆಯಾಗಲಿದೆ ಎಂಬ ಉತ್ತರಕೊರಿಯಾದ ಹೇಳಿಕೆ, ಕಳೆದ ಒಂದು ವಾರದಿಂದ ಯುದ್ಧದ ಆತಂಕದಲ್ಲಿರುವ ಜಗತ್ತಿಗೆ ಮತ್ತೊಂದು ಆಘಾತ ನೀಡಿದೆ. ಕಳೆದ ಕೆಲವು ದಿನಗಳಿಂದ ಉತ್ತರಕೊರಿಯಾದ ದಾಯಾದಿ ರಾಷ್ಟ್ರ ದಕ್ಷಿಣ ಕೊರಿಯಾದೊಂದಿಗೆ ಅಮೆರಿಕ ಜಂಟಿ ಸಮರಾಭ್ಯಾಸ ಆರಂಭಿಸಿದ ಬೆನ್ನಲ್ಲೇ ಕೊರಿಯಾ ವಲಯದಲ್ಲಿ ಯುದ್ಧದ ಕ್ಷಣಗಣನೆ ಆರಂಭವಾಗಿದೆ. ಜೊತೆಗೆ ಅಮೆರಿಕ ಉತ್ತರಕೊರಿಯಾದ ಸುತ್ತ ಶಕ್ತಿಶಾಲಿ ಯುದ್ಧ ವಿಮಾನಗಳು ಸೇರಿದಂತೆ ಭಾರೀ ಪ್ರಮಾಣದಲ್ಲಿ ತನ್ನ ಪಡೆಗಳನ್ನು ಜಮಾವಣೆ ಮಾಡಿದೆ. ಈ ನಡುವೆ, ಏ.15ರಂದು ಉತ್ತರಕೊರಿಯಾ ತನ್ನ ಸಂಸ್ಥಾಪನಾ ದಿನ ಆಚರಿಸುತ್ತಿದೆ. ಆ ವಿಶೇಷ ದಿನದ ಹಿನ್ನೆಲೆಯಲ್ಲಿ ಆ ರಾಷ್ಟ್ರ ತನ್ನ 6ನೇ ಅಣ್ವಸ್ತ್ರ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ ಎಂಬ ವರದಿಗಳಿವೆ. ಅಂತಹ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಜೊತೆಗೆ ಈ ವಿಷಯದಲ್ಲಿ ಉತ್ತರಕೊರಿಯಾಕ್ಕೆ ಬುದ್ಧಿ ಹೇಳುವಂತೆಯೂ ಅದರ ಮಿತ್ರರಾಷ್ಟ್ರ ಚೀನಾಕ್ಕೆ ಅಮೆರಿಕ ತಾಕೀತು ಮಾಡಿದೆ. ಈ ನಡುವೆ ಅಮೆರಿಕದ ಎಚ್ಚರಿಕೆಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಉತ್ತರಕೊರಿಯಾ, ಟ್ರಂಪ್‌ ಆಡಳಿತ ಅಟ್ಟಹಾಸ ನಡವಳಿಕೆ ತೋರುತ್ತಿದೆ. ಆಕ್ರಮಣಕಾರಿ ವರಸೆಯ ಮೂಲಕ ಅದು ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ನಾವು ಅಂತಹದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಸಂದರ್ಭ ಬಂದರೆ ಯುದ್ಧಕ್ಕೂ ಸಿದ್ಧ ಎಂದಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ದಾಳಿ, ಪ್ರತಿ ದಾಳಿಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಮತ್ತೊಂದೆಡೆ, ಅಮೆರಿಕ ಆಷ್ಘಾನಿಸ್ತಾನದಲ್ಲಿ ಐಎಸ್‌ಐಎಸ್‌ ಉಗ್ರರ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ ವಿಶ್ವದ ಅತಿದೊಡ್ಡ ಬಾಂಬ್‌ ಬಳಸಿ ಅಡಗುತಾಣಗಳನ್ನು ಸರ್ವನಾಶ ಮಾಡಿದೆ. ಆಷ್ಘಾನಿಸ್ತಾನದ ಗುಡ್ಡಗಾಡು ಪ್ರದೇಶದಲ್ಲಿ ಅಲ್‌ಖೈದಾ, ತಾಲಿಬಾನ್‌ ಹಾಗೂ ಪಾಕಿಸ್ತಾನಿ ಮೂಲದ ಹಲವು ಭಯೋತ್ಪಾದಕ ಸಂಘಟನೆಗಳು ಐಎಸ್‌ಐಎಸ್‌ ನೆರಳಿನಲ್ಲಿ ಸಕ್ರಿಯವಾಗಿದ್ದು, ಆ ವಲಯದ ಮೇಲಿನ ಅಮೆರಿಕ ದಾಳಿ ಇಸ್ಲಾಂ ಭಯೋತ್ಪಾದಕ ಗುಂಪುಗಳ ಪ್ರತೀಕಾರಕ್ಕೆ ಮುನ್ನುಡಿ ಬರೆದಿದೆ. ಜೊತೆಗೆ ಸಿರಿಯಾದ ಜನವಸತಿ ಪ್ರದೇಶದ ಮೇಲೆ ನಡೆಸಿದ ರಾಸಾಯನಿಕ ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಕಳೆದ ವಾರ ಅಲ್ಲಿನ ಬಷರ್‌ ಅಲ್‌ ಅಸದ್‌ ಸರ್ಕಾರದ ಸೇನಾ ನೆಲೆ ಮೇಲೆ ದಾಳಿ ನಡೆಸಿತು. ಆ ದಾಳಿಯನ್ನು ಖಂಡಿಸಿ ಸಿರಿಯಾ ಅಧ್ಯಕ್ಷರ ಮಿತ್ರರಾಷ್ಟ್ರಗಳಾದ ರಷ್ಯಾ ಮತು ಇರಾನ್‌ ಅಮೆರಿಕ ಆಕ್ರಮಣದ ವಿರುದ್ಧ ಎಚ್ಚರಿಕೆಯ ಸಂದೇಶ ರವಾನಿಸಿವೆ. ಅದೇ ಹೊತ್ತಿಗೆ ದಕ್ಷಿಣ ಚೀನಾ ಸಮುದ್ರದ ಮೇಲಿನ ಹಿಡಿತದ ವಿಷಯದಲ್ಲಿ ಚೀನಾ, ಜಪಾನ್‌ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ಕೂಡ ತಿಳಿಯಾಗಿಲ್ಲ.

ಒಟ್ಟಾರೆ, ಕಳೆದ ಒಂದು ವಾರದಿಂದೀಚೆಗೆ ಅಮೆರಿಕ ತನ್ನ ಆಕ್ರಮಣಕಾರಿ ನಡೆಗಳ ಮೂಲಕ ಜಗತ್ತನ್ನು ಮೂರನೇ ಮಹಾಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಆದರೆ, ಅಂತಹದ್ದೊಂದು ಯುದ್ಧ ಸಂಭವಿಸಿದರೆ, ಅದು ಯುದ್ಧ ಕಾಯುವ ದೇಶಗಳ ನಡುವಿನ ವಿಷಯ ಎಂದು ವಿಶ್ವ ಸಮುದಾಯ ಕೈಕಟ್ಟಿಕೂರಲಾಗದು. ಏಕೆಂದರೆ, ಯುದ್ಧವೆಂದರೆ ಎರಡು ದೇಶಗಳ ಅಥವಾ ಒಂದು ನಿರ್ದಿಷ್ಟಪ್ರದೇಶಕ್ಕೆ ಸೀಮಿತ ವಿದ್ಯಮಾನ ಎಂಬ ಸ್ಥಿತಿ ಈಗಿಲ್ಲ. ಯಾವುದೇ ಮೂಲೆಯಲ್ಲಿ ನಡೆಯುವ ಒಂದು ಯುದ್ಧ ಇಡೀ ಜಗತ್ತಿನ ಜನಜೀವನದ ಮೇಲೆ ಪರಿಣಾಮ ಬೀರುವಷ್ಟುರಾಷ್ಟ್ರಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಅದೂ ಅಣ್ವಸ್ತ್ರ ಹೊಂದಿರುವ ಈ ರಾಷ್ಟ್ರಗಳ ನಡುವಿನ ಯುದ್ಧೋನ್ಮಾದ ಜಗತ್ತಿನ ಸರ್ವನಾಶದೊಂದಿಗೆ ಪರ್ಯವಸಾನ ಹೊಂದಬಹುದು. ಈ ವಾಸ್ತವಾಂಶವನ್ನು ಅರಿತು, ಅಮೆರಿಕ ತನ್ನ ನೀತಿಗಳಲ್ಲಿ ಸಂಯಮ ಮತ್ತು ಸಂವಹನಕ್ಕೆ ಆದ್ಯತೆ ನೀಡಬೇಕಿದೆ. ಉತ್ತರಕೊರಿಯಾದ ಉದ್ಧಟತನಕ್ಕೂ ಕಡಿವಾಣ ಹಾಕಬೇಕಿದೆ. ಹಾಗಾಗಿ ಇದೀಗ ವಿಶ್ವಸಂಸ್ಥೆ ಹಾಗೂ ಅದರ ನಾಯಕರು ಹೊಣೆಯರಿತು ತುರ್ತಾಗಿ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಬೇಕಿದೆ.