Asianet Suvarna News Asianet Suvarna News

ಸ್ವಚ್ಛ ಭಾರತದಿಂದ ಗಾಂಧೀಜಿ ಕನಸು ಸಾಕಾರ

ಭಾರತ ಮತ್ತು ಸಿಂಗಾಪುರದ ನಿರ್ಮಲೀಕರಣದ ಪ್ರಯಾಣದ ಹಾದಿಗೆ ಸಾಕಷ್ಟುಸಾಮ್ಯತೆಯಿದೆ. ವಾಸ್ತವವಾಗಿ ಸ್ವಚ್ಛ ಭಾರತ ಮಿಷನ್‌ ಭಾರತದ ಪರಿಸರವನ್ನು ಬದಲಿಸುವ ಯೋಜನೆ ಮಾತ್ರವಲ್ಲ. ಆಳದಲ್ಲಿ ‘ನಮ್ಮ ಯೋಚನೆ, ಕೆಲಸ ಮತ್ತು ಬದುಕನ್ನೇ ರೂಪಾಂತರಿಸುವ ಪರಿವರ್ತನಾ ಶಕೆ’ ಇದು.

MK Gandhi 150 Yrs Swachh Bharat is Tribute To Gandhiji Lee Hsien Loong
Author
Bengaluru, First Published Oct 2, 2018, 11:18 AM IST

ಲೀ ಸೀನ್‌ ಲೂಂಗ್‌, ಸಿಂಗಾಪುರ ಪ್ರಧಾನಿ
ಗಾಂಧೀಜಿ 150ನೇ ಜನ್ಮ ವರ್ಷಾಚರಣೆಗೆ ಸಿಂಗಾಪುರ ಪ್ರಧಾನಿ ಲೇಖನ

ಭಾರತ ಮತ್ತು ಸಿಂಗಾಪುರದ ನಿರ್ಮಲೀಕರಣದ ಪ್ರಯಾಣದ ಹಾದಿಗೆ ಸಾಕಷ್ಟುಸಾಮ್ಯತೆಯಿದೆ. ವಾಸ್ತವವಾಗಿ ಸ್ವಚ್ಛ ಭಾರತ ಮಿಷನ್‌ ಭಾರತದ ಪರಿಸರವನ್ನು ಬದಲಿಸುವ ಯೋಜನೆ ಮಾತ್ರವಲ್ಲ. ಆಳದಲ್ಲಿ ‘ನಮ್ಮ ಯೋಚನೆ, ಕೆಲಸ ಮತ್ತು ಬದುಕನ್ನೇ ರೂಪಾಂತರಿಸುವ ಪರಿವರ್ತನಾ ಶಕೆ’ ಇದು.

ನಾಲ್ಕು ವರ್ಷದ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ‘ಸ್ವಚ್ಛ ಭಾರತ’ವನ್ನು ಕಾಣಲು ‘ಸ್ವಚ್ಛ ಭಾರತ ಮಿಷನ್‌’ ಯೋಜನೆಯನ್ನು ಜಾರಿಗೊಳಿಸಿದರು. ಅಕ್ಟೋಬರ್‌ 2, 2019 ಗಾಂಧೀಜಿ ಅವರ 150ನೇ ಜನ್ಮಶತಮಾನೋತ್ಸವ ಪೂರ್ಣಗೊಳ್ಳುವ ವರ್ಷ ಕೂಡ. ಗಾಂಧೀಜಿ ಅವರು ನೈರ್ಮಲ್ಯವನ್ನು ರಾಷ್ಟ್ರೀಯ ಆದ್ಯತೆಯಾಗಿಸಲು ಕರೆ ನೀಡಿದವರು. ಈ ಹಾದಿಯಲ್ಲಿ ಕಳೆದ ನಾಲ್ಕು ವರ್ಷದಿಂದೀಚೆಗೆ ಭಾರತ ಸಾಕಷ್ಟು ಪ್ರಗತಿ ಕಂಡಿದೆ. ಸುಮಾರು 8.6 ಕೋಟಿ ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಂಡಿವೆ. ಸುಮಾರು 4,70,000 ಹಳ್ಳಿಗಳು ಬಯಲು ಶೌಚಮುಕ್ತವಾಗಿವೆ.

ಸಿಂಗಾಪುರ ಕ್ಲೀನ್‌ ಸಿಟಿ ಆಗಿದ್ಹೇಗೆ?

ಹಿಂದೊಮ್ಮೆ ಸಿಂಗಾಪುರ ಕೂಡ ಇದೇ ಹಾದಿಯಲ್ಲಿ ಪ್ರಯಾಣಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸ್ವಚ್ಛತೆಗೆ ಮತ್ತು ಪರಿಸರದ ಹಸಿರೀಕರಣಕ್ಕೆ ಸಾಕಷ್ಟು ಶ್ರಮ ಪಟ್ಟಿದೆ. ಮೊದಮೊದಲು ನಮ್ಮ ದೇಶದಲ್ಲಿ ಮನೆಯ ಬಳಿ ಇರುವ ಕೊಳಚೆಯನ್ನು ಬಕೆಟ್‌ಗಳಲ್ಲಿ ಸಂಗ್ರಹಿಸಿ, ಟ್ರಕ್‌ಗಳ ಮೂಲಕ ಕೊಂಡೊಯ್ದು ಅದನ್ನು ಒಳಚರಂಡಿಗೆ ಸುರಿಯಲಾಗುತ್ತಿತ್ತು. ಅದು ನದಿಯನ್ನು ಮಲಿನಗೊಳಿಸುತ್ತಿತ್ತು. ನದಿಯ ನೀರು ವಿಷಕಾರಿಯಾಗುತ್ತಿತ್ತು. ಅಲ್ಲದೆ ಮಾನವ ತ್ಯಾಜ್ಯವನ್ನು ಕೂಡ ಹತ್ತಿರದ ನದಿಗಳಿಗೆ ಹಾಗೂ ಸರೋವರಗಳಿಗೆ ಸುರಿಯಲಾಗುತ್ತಿತ್ತು. ಅದರಿಂದ ನೀರು ಮತ್ತಷ್ಟುಮಲಿನವಾಗುತ್ತಿತ್ತು. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು. ಪರಿಣಾಮ ಜಲಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದವು.

ನಮ್ಮ ದೇಶದ ಪಿತಾಮಹ ಇದರ ವಿರುದ್ಧ ಒಂದು ನಿರ್ಣಯಕ್ಕೆ ಬಂದರು. ‘ಕ್ಲೀನ್‌ ಸಿಂಗಾಪುರ್‌ ಕ್ಲೀನ್‌’ ಎಂಬ ರಾಷ್ಟ್ರೀಯ ಚಳವಳಿಯನ್ನೇ ಅವರು ಆರಂಭಿಸಿದರು. ಅದರ ಭಾಗವಾಗಿ ಪ್ರತಿ ಮನೆ ಮನೆಯನ್ನೂ ಸ್ವಚ್ಛಗೊಳಿಸಿದೆವು. ನಮ್ಮ ನದಿಗಳನ್ನು ಮಾಲಿನ್ಯ ಮುಕ್ತವಾಗಿಸಿದೆವು. ಸಿಂಗಾಪುರವನ್ನು ಕ್ಲೀನ್‌ ಆ್ಯಂಡ್‌ ಗ್ರೀನ್‌ ನಗರವಾಗಿಸಿದೆವು. ಅದರಲ್ಲೂ ಮುಖ್ಯವಾಗಿ ಸಿಂಗಾಪುರದ ನದಿಗಳನ್ನು ಆದ್ಯತೆಯ ಮೇರೆಗೆ ಸ್ವಚ್ಛವಾಗಿಸಿದೆವು. ಆ ಪ್ರಕ್ರಿಯೆಯಲ್ಲಿ ಸಾವಿರಾರು ಗಲ್ಲಿಗಳು, ಕಾರ್ಖಾನೆಗಳು, ಹಂದಿ ಸಾಕಣೆ ಕೇಂದ್ರಗಳು, ನದಿಗಳನ್ನು ಮಲಿಗೊಳಿಸುತ್ತಿದ್ದ ಲೆಕ್ಕವಿಲ್ಲದಷ್ಟುಮೂಲಗಳನ್ನು ಸ್ವಚ್ಛಗೊಳಿಸಿದೆವು. ಇಂದು ಸಿಂಗಾಪುರದ ನದಿಗಳು ಸ್ವಚ್ಛವಾಗಿ ಸ್ವಚ್ಛಂದವಾಗಿ ಮರೀನಾ ಜಲಾಶಯ ಮೂಲಕವಾಗಿ ನಗರವನ್ನು ದಾಟಿ ಹರಿಯುತ್ತಿವೆ. ಸದ್ಯ ಅದೇ ನಮ್ಮ ಜಲಮೂಲವಾಗಿದೆ.

ಭಾರತದಲ್ಲಿ ಪರಿವರ್ತನಾ ಶಕೆ

ಭಾರತ ಸಿಂಗಾಪುರಕ್ಕಿಂತ ಭಿನ್ನ ದೇಶ. ಭಾರತದ ಗಂಗಾ ನದಿಯು ಸಿಂಗಾಪುರದ ನದಿಗಿಂತ ಸಾವಿರ ಪಟ್ಟು ಉದ್ದವಿದೆ. ಆದಾಗ್ಯೂ ಭಾರತ ಮತ್ತು ಸಿಂಗಾಪುರದ ನಿರ್ಮಲೀಕರಣದ ಪ್ರಯಾಣದ ಹಾದಿಗೆ ಸಾಕಷ್ಟುಸಾಮ್ಯತೆ ಇದೆ. ಮೊದಲಿಗೆ ಎರಡೂ ದೇಶಗಳು ನಾಯಕತ್ವದ ಮಹತ್ವದ ಬಗ್ಗೆ ಅನುಭವ ಪಡೆದಿವೆ. ನಮ್ಮ ದೇಶದ ಈ ಹಿಂದಿನ ಪ್ರಧಾನಿ ಲೀ ಕ್ವಾನ್‌ ಯೂ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಕೂಡ ದೇಶದ ಸ್ವಚ್ಛತೆಗೆ ಮತ್ತು ಹಸಿರೀಕರಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಸಾರ್ವಜನಿಕ ಆಂದೋಲನಗಳಲ್ಲಿ ನೇತೃತ್ವ ವಹಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸಿದ್ದಾರೆ. ಇಬ್ಬರೂ ಸ್ವತಃ ಪೊರಕೆ ಹಿಡಿದು ಜನರೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ‘ಸಿಂಗಾಪುರ ಪ್ರಧಾನಿ ಲೀ ಅವರೇ ತಮಗೆ ಪ್ರೇರಣೆ’ ಎಂದಿದ್ದಾರೆ. ವಾಸ್ತವವಾಗಿ ಸ್ವಚ್ಛ ಭಾರತ ಮಿಷನ್‌ ಭಾರತದ ಪರಿಸರವನ್ನು ಬದಲಿಸುವ ಯೋಜನೆ ಮಾತ್ರವಲ್ಲ. ಆಳದಲ್ಲಿ ‘ನಮ್ಮ ಯೋಚನೆ, ಕೆಲಸ ಮತ್ತು ಬದುಕನ್ನೇ ರೂಪಾಂತರಿಸುವ ಪರಿವರ್ತನಾ ಶಕೆ.’

ನೀರಿನ ಅಭಾವಕ್ಕೂ ಇದೆ ಉತ್ತರ

ಎರಡನೆಯದಾಗಿ ಇಂತಹ ವಿಷಯಗಳಲ್ಲಿ ದೀರ್ಘಕಾಲಿಕವಾಗಿ ಬದ್ಧತೆಯಿಂದ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ. ಸಿಂಗಾಪುರದ ಸ್ವಚ್ಛತಾ ಚಳವಳಿಯ ಅನುಷ್ಠಾನದಲ್ಲಿ ಅನುಸರಿದ ಮೊದಲ ಘಟ್ಟಎಂದರೆ, ಮಳೆ ನೀರನ್ನು ಕಲುಷಿತಗೊಳ್ಳದಂತೆ ತಡೆಯುವುದು. ಹಾಗಾಗಿ ಆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲಾಗುತ್ತಿದೆ. ಇದೇ ವೇಳೆ ಒಳಚರಂಡಿ ನೀರನ್ನೂ ಶುದ್ಧೀಕರಿಸಿ ಸಿಂಗಾಪುರದಲ್ಲಿ ಬಳಕೆ ಮಾಡಲಾಗುತ್ತದೆ. ನಾವು ಬಳಕೆ ಮಾಡಿದ ನೀರನ್ನು ಏನು ಮಾಡಬಹುದು ಎಂಬ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀರಿನ ಪುನರ್‌ಬಳಕೆಗೆ ಮುಂದಾಗಿ, ನೀರಿನ ಅಭಾವದ ಸಮಸ್ಯೆಗೂ ಉತ್ತರ ಕಂಡುಕೊಂಡೆವು.

ಭಾರತದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆಯನ್ನು ಎಲ್ಲ ಜನರು ಹಾಗೂ ಶಾಲಾ ಕಾಲೇಜುಗಳ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಸದ್ಯ ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. 2018ರ ಯುನಿಸೆಫ್‌ನ ‘ಶಾಲೆಗಳಲ್ಲಿನ ಕುಡಿಯುವ ನೀರು, ನೈರ್ಮಲ್ಯ: ಜಾಗತಿಕ ವರದಿ’ಯಲ್ಲಿ ಭಾರತದ ಬಹುತೇಕ ಎಲ್ಲಾ ಶಾಲೆಗಳು ನೈರ್ಮಲ್ಯ ಯೋಜನೆಯನ್ನು ಅನುಷ್ಠಾನಗೊಳಿಸಿವೆ ಎಂದು ಹೇಳಲಾಗಿದೆ. ಅದು 2006ರ ವೇಳೆಗೆ ಶೇ.50ರಷ್ಟು ಮಾತ್ರ ಅನುಷ್ಠಾನಗೊಂಡಿತ್ತು.

ಅನುಭವಗಳಲ್ಲೇ ಇದೆ ಪರಿಹಾರ

ಮೂರನೆಯದಾಗಿ ಭಾರತ ಮತ್ತು ಸಿಂಗಾಪುರ ಎರಡೂ ಅಂತಾರಾಷ್ಟ್ರೀಯ ಸಹಕಾರದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಒಂದೇ ಪರಿಹಾರ ಎರಡೂ ದೇಶಗಳ ಸಮಸ್ಯೆಗೂ ಉತ್ತರವಾಗಲಾರದು. ಆದರೆ ಆ ಅನುಭವವನ್ನು ಕೇಳಿ ಅವರಿಂದ ಕಲಿಯುವುದು ಸಾಕಷ್ಟಿರುತ್ತದೆ. ಜಾಗತಿಕ ನಾಯಕರೊಂದಿಗೆ ತಮ್ಮ ಸ್ವಚ್ಛ ಭಾರತದ ಸಾಧನೆಯ ಹಾದಿಯ ಅನುಭವವನ್ನು ಹಂಚಿಕೊಳ್ಳಲು ಭಾರತ ‘ಅಂತಾರಾಷ್ಟ್ರೀಯ ಮಹಾತ್ಮ ಗಾಂಧಿ ನೈರ್ಮಲ್ಯ ಸಮಾವೇಶ’ ಆಯೋಜಿಸುತ್ತಿರುವುದಕ್ಕೆ ನನ್ನ ಅಭಿನಂದನೆಗಳು. ಸಿಂಗಾಪುರ ಕೂಡ ‘ಬಿನ್ನೈಲ್‌ ವಲ್ಡ್‌ರ್‍ ಸಿಟೀಸ್‌ ಸಮಿಟ್‌; ಮತ್ತು ಸಿಂಗಾಪುರ ಇಂಟರ್‌ನ್ಯಾಷನಲ್‌ ವಾಟರ್‌ ವೀಕ್‌’ ಎಂಬ ಅಂತಾರಾಷ್ಟ್ರೀಯ ವೇದಿಕೆಯನ್ನು ಆಯೋಜಸಿತ್ತು. 2013ರಲ್ಲಿ ಜಾಗತಿಕ ನಿರ್ಮಲೀಕರಣದ ಸವಾಲಿನ ಕುರಿತು ಅರಿವು ಮೂಡಿಸಲು ವಿಶ್ವಸಂಸ್ಥೆ ಸಿಂಗಾಪುರದ ಕ್ರಾಂತಿಕಾರಿ ಕ್ರಮವಾದ ‘ಎಲ್ಲರಿಗಾಗಿ ನಿರ್ಮಲೀಕರಣ’ ಎಂಬ ಚಳವಳಿಯನ್ನು ಅಳವಡಿಸಿಕೊಂಡು, ನವೆಂಬರ್‌ 19ನ್ನು ‘ವಿಶ್ವ ಶೌಚ ದಿನ’ವನ್ನಾಗಿ ಆಚರಿಸಲು ಆರಂಭಿಸಿತು.

ಸಿಂಗಾಪುರ ತನ್ನ ಅನುಭವವನ್ನು ಭಾರತದೊಂದಿಗೆ ಸಂತೋಷದಿಂದ ಹಂಚಿಕೊಳ್ಳಲಿದೆ. ಭಾರತ ವಾಸಯೋಗ್ಯವಾದ ಸುಸ್ಥಿರ ಸ್ಮಾರ್ಟ್‌ ನಗರಗಳನ್ನು ದೇಶದೆಲ್ಲೆಡೆ ನಿರ್ಮಾಣ ಮಾಡಲು ಮುಂದಾಗಿದೆ. ಭಾರತದ ನಗರ ಯೋಜನೆ, ನೀರು ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆಗೆ ಸಿಂಗಾಪುರ ಸಹಕಾರ ನೀಡಲಿದೆ. ಹಾಗೆಯೇ ಭಾರತದ ಸಹಕಾರಕ್ಕೂ ಎದುರು ನೋಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಎಲ್ಲ ಪ್ರಜೆಗಳಿಗೂ ‘ಸ್ವಚ್ಛ ಭಾರತ ಮಿಷನ್‌’ನ ‘ಕ್ಲೀನ್‌ ಇಂಡಿಯಾ’ ಕನಸು ಯಶಸ್ಸು ಕಾಣಲೆಂದು ಹಾರೈಸುತ್ತೇನೆ. ಹಾಗೆಯೇ ವಿಶ್ವಸಂಸ್ಥೆಯ ಉದ್ದೇಶಿತ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಎರಡೂ ದೇಶಗಳ ಸಹಕಾರ ಹೀಗೇ ಇರಲಿ ಎಂದು ಆಶಿಸುತ್ತೇನೆ.

Follow Us:
Download App:
  • android
  • ios