Asianet Suvarna News Asianet Suvarna News

ತುರ್ತು ಸಂದರ್ಭದಲ್ಲಿ ಮಾತ್ರ ಸೇನೆ ಕರೆಸಿ; ರೈಲ್ವೇ, ಲೋಕೋಪಯೋಗಿ ಕೆಲಸಕ್ಕೆ ಬೇಡ

ಭಾರತೀಯ ರೈಲ್ವೇಯು ದೇಶದ ಅತೀ ದೊಡ್ಡ ಸಂಸ್ಥೆಗಳಲ್ಲೊಂದು. ಇತ್ತೀಚಿನವರೆಗೆ, ಅದಕ್ಕೇ ಮೀಸಲಾದ ದಿನದಂದು ಪ್ರತ್ಯೇಕವಾದ ಬಜೆಟನ್ನು ಕೂಡಾ ಮಂಡಿಸಲಾಗುತಿತ್ತು. ಕಳೆದ ಹಲವಾರು ದಶಕಗಳಲ್ಲಿ ದೇಶದ ಈ ಜೀವನಾಡಿಯ ಅಸಮರ್ಪಕ ರಾಜಕೀಯ ನಿರ್ವಹಣೆಯನ್ನು ನಾವು ಕಂಡಿದ್ದೇವೆ. ರೈಲ್ವೇ ಇಲಾಖೆಯಲ್ಲಿ ಸಮರ್ಥ ಹಾಗೂ ಸಮರ್ಪಣಾ ಮನೋಭಾವ ಹೊಂದಿರುವ ಸಿಬ್ಬಂದಿಗಳು ಇದ್ದಾರೆ, ಆದರೂ ನಿರಂತರ ಅಪಘಾತಗಳು ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಂಡುಬರುವ ನಿರ್ಲಕ್ಷ್ಯತನವೇ ಭಾರತೀಯ ರೈಲ್ವೇಯನ್ನು ವ್ಯಾಖ್ಯಾನಿಸುತ್ತಾ ಬಂದಿದೆ.

Call in the Army when all else fails not to do the railways and PWDs job

ಭಾರತೀಯ ರೈಲ್ವೇಯು ದೇಶದ ಅತೀ ದೊಡ್ಡ ಸಂಸ್ಥೆಗಳಲ್ಲೊಂದು. ಇತ್ತೀಚಿನವರೆಗೆ, ಅದಕ್ಕೇ ಮೀಸಲಾದ ದಿನದಂದು ಪ್ರತ್ಯೇಕವಾದ ಬಜೆಟನ್ನು ಕೂಡಾ ಮಂಡಿಸಲಾಗುತಿತ್ತು. ಕಳೆದ ಹಲವಾರು ದಶಕಗಳಲ್ಲಿ ದೇಶದ ಈ ಜೀವನಾಡಿಯ ಅಸಮರ್ಪಕ ರಾಜಕೀಯ ನಿರ್ವಹಣೆಯನ್ನು ನಾವು ಕಂಡಿದ್ದೇವೆ. ರೈಲ್ವೇ ಇಲಾಖೆಯಲ್ಲಿ ಸಮರ್ಥ ಹಾಗೂ ಸಮರ್ಪಣಾ ಮನೋಭಾವ ಹೊಂದಿರುವ ಸಿಬ್ಬಂದಿಗಳು ಇದ್ದಾರೆ, ಆದರೂ ನಿರಂತರ ಅಪಘಾತಗಳು ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಂಡುಬರುವ ನಿರ್ಲಕ್ಷ್ಯತನವೇ ಭಾರತೀಯ ರೈಲ್ವೇಯನ್ನು ವ್ಯಾಖ್ಯಾನಿಸುತ್ತಾ ಬಂದಿದೆ.

ದಶಕಗಳಿಂದ ನಡೆದುಬಂದಿರುವ ನಿರ್ಲಕ್ಷ್ಯತನದ ಪರಿಣಾಮವಾಗಿ ಬರೇ ರೈಲು ಅಪಘಾತಗಳು ಮಾತ್ರವಲ್ಲ, ಹಲವಾರು ಮಂದಿಯ ಪ್ರಾಣಕ್ಕೆ ಎರವಾದ ಎಲ್ಫಿನ್’ಸ್ಟೋನ್ ದುರ್ಘಟನೆಗಳು ನಡೆಯುತ್ತಿರುವುದು ಆಶ್ಚರ್ಯ ಪಡುವಂತಹ ವಿಷಯವಲ್ಲ. ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರು ರೈಲಿನಲ್ಲಿ ಪ್ರಯಾಣಿಸುವುದರಿಂದ, ನಿರ್ಲಕ್ಷ್ಯಕ್ಕೊಳಗಾಗಿರುವ ಮೂಲಭೂತ ಸೌಕರ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಆದ್ಯತೆಯ ಮೇರೆಗೆ ನಡೆಯುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ, ಇಬ್ಬರು ಕೇಂದ್ರ ಸಂಪುಟ ಸಚಿವರು (ರಕ್ಷಣಾ ಸಚಿವರು ಮತ್ತು ರೈಲ್ವೇ ಸಚಿವರು) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಕೆಲದಿನಗಳ ಹಿಂದೆ ಮುಂಬೈಯಲ್ಲಿ ಸಭೆ ಸೇರಿ, ಚರ್ಚಿಸಿದ ಬಳಿಕ, 3 ಪಾದಚಾರಿ ಮೇಲ್ಸೆತುವೆಗಳನ್ನು ನಿರ್ಮಿಸುವ ಹೊಣೆಯನ್ನು ಸೇನೆಗೆ ವಹಿಸುವುದಾಗಿ ಘೋಷಿಸಿದ್ದನ್ನು ನಾವು ನೋಡಿದ್ದೇವೆ.

ಮೇಲ್ನೋಟಕ್ಕೆ, ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ. (ಇಸ್ರೋ ಹೊರತು ಪಡಿಸಿ) ಸೇನೆಯು ದೇಶದ ಅತೀ ವೃತ್ತಿಪರ ಹಾಗೂ ಸಮರ್ಥ ಸಂಸ್ಥೆಯಾಗಿದೆ. ಹೋರಾಡುವುದು ಅದರ ಪ್ರಾಥಮಿಕ ಕರ್ತವ್ಯವಾಗಿದೆಯಾದರೂ, ಶಾಂತಿ ನೆಲೆಸಿರುವ ಸಂದರ್ಭದಲ್ಲಿ, ತುರ್ತು ಸಂದರ್ಭಗಳಲ್ಲಿ ನಾಗರೀಕ ವಲಯದಲ್ಲೂ ಸೇವೆ ಸಲ್ಲಿಸಬಹುದಾಗಿದೆ. ಅದು ನೆರೆ, ಭೂಕಂಪದಂತಹ ಪ್ರಾಕೃತಿಕ ವಿಕೋಪವಾಗಿರಲಿ ಅಥವಾ ಗಲಭೆಯಂತಹ ಮಾನವಕೃತ ಸಂದರ್ಭವಾಗಿರಲಿ, ಸೇನೆಯು ತನ್ನ ಕರ್ತವ್ಯವನ್ನು ಬಹಳ ಶ್ರದ್ಧೆಯೊಂದಿಗೆ ಹಾಗೂ ಸಮರ್ಪಣಾ ಭಾವದೊಂದಿಗೆ ನಿರಂತರವಾಗಿ ಮಾಡುತ್ತಾ ಬಂದಿದೆ. ಹಾಗಾದರೆ, ಮುಂಬೈ ಸೇತುವೆ ಕಟ್ಟುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವುದು ಯಾಕೆ?

ಒಂದು ಮೂಲಭೂತ ಅಂಶವನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ತರಬೇತಿ ಪಡೆದ ಸಶಸ್ತ್ರ ಪಡೆಗಳನ್ನು ನಾಗರೀಕ ಉದ್ದೇಶಗಳಿಗೆ ಸತತವಾಗಿ ಬಳಸಿಕೊಳ್ಳುವುದು ಉತ್ತಮ ಸಂಪ್ರದಾಯವಲ್ಲ. ಸಾಮಾನ್ಯವಾಗಿ, ತುರ್ತು ಸಂದರ್ಭಗಳಲ್ಲಿ ನಾಗರೀಕ ಆಡಳಿತದ ಸಂಪನ್ಮೂಲಕ್ಕೆ ಪೂರಕವಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅಥವಾ ನಾಗರೀಕ ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದ ಸಂದರ್ಭಗಳಲ್ಲಿ ಸಶಸ್ತ್ರ ಪಡೆಗಳನ್ನು ನಾಗರೀಕ ಉದ್ದೇಶಗಳಿಗೆ ಕರೆಸಿಕೊಳ್ಳಲಾಗುತ್ತದೆ.

ದೇಶದ ಅತೀ ಶ್ರೀಮಂತ ಬಿಎಂಸಿ ಎಂಬ ಸ್ಥಳೀಯಾಡಳಿತ ಸಂಸ್ಥೆ ಹೊಂದಿರುವ ಮುಂಬೈ ನಗರದ ಸೇತುವೆ ನಿರ್ಮಾಣ ಕೆಲಸವನ್ನು ಸೇನೆಗೆ ವಹಿಸಲಾಗಿದೆ. ಇಲ್ಲಿನ ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಯು ಅಗಾಧವಾದ ಸಂಪನ್ಮೂಲಗಳನ್ನು ಹೊಂದಿದೆ.  ರೈಲ್ವೇ ಇಲಾಖೆಯು 1.3 ಮಿಲಿಯನ್ ಕಾರ್ಯಪಡೆಯನ್ನು ಹೊಂದಿದ್ದು, ಅದಕ್ಕೇಂದೇ ಆದ ಯೊಜನೆಗಳನ್ನು ಹಾಗೂ ಸಮರ್ಥವಾದ ನಿರ್ಮಾಣ ಸಾಮರ್ಥ್ಯವನ್ನೂ ಹೊಂದಿದೆ. ಈ ಮೂರು ಇಲಾಖೆಗಳು ಒಟ್ಟು ಸೇರಿ ಮಾಡಬೇಕಾದುದನ್ನು ಸೇನೆಗೆ ವಹಿಸುವುದರ ಹಿಂದಿನ ಮರ್ಮ ಮನವರಿಕೆಯಾಗುವತಹದ್ದಲ್ಲ.

ಲೋಕೋಪಯೋಗಿ ಇಲಾಖೆ, ರೈಲ್ವೇ ಇಲಾಖೆ ಅಥವಾ ಬಿಎಂಸಿಯ ಹೊಣೆಗಾರಿಕೆಯಾಗಿರುವ ಕೆಲಸದಲ್ಲಿ ಸೇನೆಯನ್ನು ಬಳಸುವ ಆಲೋಚನೆಯನ್ನು, ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಹಾಗೂ ಮುತುವರ್ಜಿಯಿಂದ ನಿಭಾಯಿಸುವ ಸಾಮರ್ಥ್ಯವುಳ್ಳ ರೈಲ್ವೇ ಸಚಿವರು ವಿರೋಧಿಸಬೇಕಿತ್ತು. ಸೇನೆಯನ್ನು ಇಲ್ಲಿ ಬಳಸುವುದರಿಂದ ಆ ಮೂರು ಸಂಸ್ಥೆಗಳ ಅಸಮರ್ಥತೆಯನ್ನು ಎತ್ತಿಹಿಡಿದಂತಾಗುತ್ತದೆ. ಕಾಲುಸೇತುವೆಗಳಂತಹ  ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಕನಿಷ್ಠ ಸುರಕ್ಷತೆಯನ್ನು ಕಾಪಾಡಲು ಈ ಮೂರು ಸಂಸ್ಥೆಗಳು ವಿಫಲವಾದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಆದುದರಿಂದ ಇಲ್ಲಿ ಸ್ಪಷ್ಟವಾಗುವ ವಿಷಯವೇನೆಂದರೆ, ಎಲ್ಫಿನ್’ಸ್ಟೋನ್ ರೋಡ್ ಸೇತುವೆ ಕುಸಿತದಿಂದಾಗಿ ಮುಂಬೈಯಲ್ಲಿ ತುರ್ತು ಸಂದರ್ಭ ಉಂಟಾಗಿದೆ. ಕಂಟ್ರಾಕ್ಟ್ ನೀಡುವ ರೈಲ್ವೇಯ ಸಾಂಪ್ರದಾಯಿಕ ಶೈಲಿಯ ಕಾರಣದಿಂದಾಗಿ , ರೈಲ್ವೇ, ಲೋಕೋಪಯೋಗಿ ಅಥವಾ ಬಿಎಂಸಿಯಿಂದ ಶೀಘ್ರದಲ್ಲಿ ಯಾವುದೇ ಪರಿಹಾರ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ ಇತರೆ ಅಂಗಗಳು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದರೆ, ಸರ್ಕಾರವು ಅಂತಹ ಯೋಜನೆಗಳನ್ನು ತುರ್ತಾಗಿ ಸಾಕಾರಗೊಳಿಸಲು ಸೇನೆಯನ್ನು ಬಳಸಿಕೊಳ್ಳುತ್ತದೆ. ಎಲ್ಲಾ ಆಯ್ಕೆಗಳು ಮುಗಿದಾಗ ಅತಿಯಾಗಿ ಭಾರತೀಯ ಜನರು ನಂಬಿಕೊಂಡಿರುವುದು ಇಲ್ಲಿನ ಸೇನೆಯನ್ನೇ. "ಎಲ್ಲವೂ ವಿಫಲವಾದಾಗ , ಸೇನೆಗೆ ಬುಲಾವ್’ ಎಂಬಂತೆ ಮುಂಬೈಗರು ಕೂಡಾ ಕರೆ ನೀಡಿದ್ದಾರೆ.  

ಅಧಿಕಾರಿವರ್ಗ ಹಾಗೂ ಸೇನೆಯ ನಡುವೆ ವೈಮನಸ್ಸು ಉಂಟಾಗಿದೆಯೆನ್ನಲಾಗುವ ಸಂದರ್ಭದಲ್ಲಿ, ಸೇನೆಗೆ ಈ ಹೊಣೆಗಾರಿಕೆಯನ್ನು ವಹಿಸಿರುವುದು, ಹಾಲಿ ಹಾಗೂ ನಿವೃತ್ತ ಸೇನಾಧಿಕಾರಿಗಳಿಗೆ ಅಸಮಾಧಾನ ಉಂಟುಮಾಡಿದೆ.  ಎಷ್ಟೇ ಕಷ್ಟ ಎದುರಾದರೂ ಮೌನವಾಗಿ ಸಹಿಸುವಂತಹ ಕಠಿಣ ಶಿಸ್ತಿನಿಂದ ನಮ್ಮ ಸೇನೆಯು ರೂಪಿಸಲ್ಪಟ್ಟಿವೆ. ಈಗಿನ ಸರ್ಕಾರ 'ಒಂದು ಶ್ರೇಣಿ ಒಂದು ಪಿಂಚಣಿ' ಜಾರಿಗೊಳಿಸುವ ಮುಂಚೆ,  ಕಳೆದ ನಾಲ್ಕು ದಶಕಗಳಿಂದಲೂ ಸೇನೆಯು ಸರ್ಕಾರದ ರಾಜಕಾರಣವನ್ನು ಮೌನವಾಗಿ ಸಹಿಸುತ್ತಾ ಬಂದಿದೆ.

ಸೇನೆಯನ್ನು ನಿಯೋಜಿಸುವ ಈ ನಿರ್ಧಾರವು ಯಾವುದೇ ರಾಜಕೀಯ ಪ್ರತಿಷ್ಠೆಗಾಗಿರದೇ, ನಾಗರೀಕ ಆಡಳಿತ ವೈಫಲ್ಯವೆಂಬ ಅಗ್ನಿಪರೀಕ್ಷೆಯಲ್ಲಿ ಜಯವನ್ನು ನೂತನ ರಕ್ಷಣಾ ಸಚಿವರು ಖಾತ್ರಿಪಡಿಸಬೇಕು.  ರೈಲ್ವೇ ಇಲಾಖೆಯ ಯೋಜನೆಗಳನ್ನು ಶಿಸ್ತುಬದ್ಧವಾಗಿ ಹಾಗೂ ಸಮರ್ಥವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಚಿವರು ತಮ್ಮ ಶಕ್ತಿ-ಸಾಮರ್ಥ್ಯವನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಗುಣಮಟ್ಟದ ಯೋಜನೆಗಳನ್ನು ಹಾಗೂ ಸೇತುವೆಗಳನ್ನು ನಿರ್ಮಿಸುವ ಸಂಸ್ಥೆಯಾಗಿ ರೈಲ್ವೇ ಇಲಾಖೆಯು ರೂಪುಗೊಳ್ಳಬೇಕು.

 

Follow Us:
Download App:
  • android
  • ios