Asianet Suvarna News Asianet Suvarna News

Iran Israel Conflict: ಇಸ್ರೇಲ್ ಮೇಲೆ ಇರಾನ್ ದಾಳಿಯ ಪರಿಣಾಮಗಳು: ಗಿರೀಶ್ ಲಿಂಗಣ್ಣ

ತನ್ನ ದಾಳಿಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಇರಾನ್, ಅದಾದ ಬಳಿಕ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಚಕಮಕಿಯನ್ನು ನಿಲ್ಲಿಸಲು ಉತ್ಸುಕತೆ ತೋರಿದೆ. ಅಮೆರಿಕಾ ಮತ್ತು ನೆರೆಯ ಅರಬ್ ರಾಷ್ಟ್ರಗಳ ನೆರವಿನೊಂದಿಗೆ ಇಸ್ರೇಲ್ ತನ್ನೆಡೆಗೆ ಸಾಗಿ ಬಂದ 99% ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿತು. 

Author of Space and Defense Analyst Girish Linganna Talks Over Iran Israel Conflict grg
Author
First Published Apr 16, 2024, 10:08 AM IST

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬೆಂಗಳೂರು(ಏ.16):  ಶನಿವಾರ ರಾತ್ರಿ ಇರಾನ್ ಇದ್ದಕ್ಕಿದ್ದ ಹಾಗೇ ಇಸ್ರೇಲ್ ಮೇಲೆ ಭಾರೀ ಪ್ರಮಾಣದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ, ಮಧ್ಯ ಪೂರ್ವ ಪ್ರದೇಶದಲ್ಲಿ ದೊಡ್ಡದಾದ ಯುದ್ಧ ಆರಂಭಗೊಳ್ಳುವ ಆತಂಕಕ್ಕೆ ನಾಂದಿ ಹಾಡಿತು. ಆದರೆ, ಭಾನುವಾರ ಬೆಳಗಿನ ವೇಳೆಗೆ ಪರಿಸ್ಥಿತಿ ಅಷ್ಟೊಂದು ಉಲ್ಬಣಗೊಳ್ಳದಂತೆ ಕಂಡುಬಂತು.

ತನ್ನ ದಾಳಿಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಇರಾನ್, ಅದಾದ ಬಳಿಕ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಚಕಮಕಿಯನ್ನು ನಿಲ್ಲಿಸಲು ಉತ್ಸುಕತೆ ತೋರಿದೆ. ಅಮೆರಿಕಾ ಮತ್ತು ನೆರೆಯ ಅರಬ್ ರಾಷ್ಟ್ರಗಳ ನೆರವಿನೊಂದಿಗೆ ಇಸ್ರೇಲ್ ತನ್ನೆಡೆಗೆ ಸಾಗಿ ಬಂದ 99% ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿತು. ಇಸ್ರೇಲ್ ರಕ್ಷಣೆಯನ್ನೂ ಮೀರಿ ಒಳ ಪ್ರವೇಶಿಸಿದ ಇರಾನಿನ ಕ್ಷಿಪಣಿಗಳು ಒಂದು ಸೇನಾ ನೆಲೆಗೆ ಸಣ್ಣ ಪ್ರಮಾಣದ ಹಾನಿಯನ್ನಷ್ಟೇ ಉಂಟುಮಾಡಲು ಶಕ್ತವಾದವು. ಈ ದಾಳಿಯಲ್ಲಿ ಒಂದು ಮಗು ಗಾಯಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದ್ದರಿಂದ ಈ ಪರಿಸ್ಥಿತಿಯನ್ನು ಇಸ್ರೇಲ್ ಪಾಲಿನ ಗೆಲುವು ಎಂದೇ ಪರಿಗಣಿಸಬಹುದು.

ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ

ಪ್ರಸ್ತುತ ದಾಳಿಗೆ ಎರಡು ವಾರಗಳ ಮುನ್ನ, ಇರಾನಿನ ಪ್ರಮುಖ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸುವ ತನ್ನ ಕಾರ್ಯಾಚರಣೆಯನ್ನು ಇಸ್ರೇಲ್ ಇನ್ನಷ್ಟು ತೀವ್ರಗೊಳಿಸಿ, ಸಿರಿಯಾದಲ್ಲಿನ ಇರಾನಿನ ರಾಯಭಾರ ಕಚೇರಿಯಲ್ಲಿ ಇರಾನಿಯನ್ ಜನರಲ್ ಒಬ್ಬರ ಹತ್ಯೆ ನಡೆಸಿತ್ತು. ಸಾಮಾನ್ಯವಾಗಿ ರಾಯಭಾರ ಕಚೇರಿಗಳನ್ನು ದಾಳಿಗಳಿಗೆ ತುತ್ತಾಗದ ಸುರಕ್ಷಿತ ಪ್ರದೇಶ ಎಂದು ಪರಿಗಣಿಸಲಾಗಿದ್ದು, ಅದರ ಮೇಲೆ ದಾಳಿ ನಡೆಸಿರುವುದು ಇಸ್ರೇಲಿನ ಧೈರ್ಯಶಾಲಿ ಹೆಜ್ಜೆಯಾಗಿತ್ತು.

ಇಸ್ರೇಲ್ ನಡೆಸಿದ ಹತ್ಯೆಗೆ ಇರಾನ್ ನೀಡಿರುವ ಶಿಕ್ಷೆ

ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇಸ್ರೇಲ್ ಮೇಲಿನ ದಾಳಿಯನ್ನು ಇಸ್ರೇಲ್ ನಡೆಸಿದ ಹತ್ಯೆಗೆ ಇರಾನ್ ನೀಡಿರುವ ಶಿಕ್ಷೆ ಎಂದರು. ಆದರೆ, ಇಂತಹ ಗಂಭೀರ ದಾಳಿಯಿಂದಲೂ ಯಾವುದೇ ಗುರುತರ ಹಾನಿಯೂ ಇಸ್ರೇಲ್ ಮೇಲೆ ಆಗಿಲ್ಲದಿರುವುದು ಅದು ಇರಾನಿನ ಆಧುನಿಕ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ವಿರುದ್ಧವೂ ಸೂಕ್ತ ರಕ್ಷಣೆ ಹೊಂದಿರುವುದನ್ನು ಸೂಚಿಸುತ್ತದೆ.

ಇಸ್ರೇಲ್ ಮೇಲೆ ನಡೆಸುವ ಯಾವುದೇ ದಾಳಿ ಅಂತಿಮವಾಗಿ ಇರಾನ್ ಬದಲಿಗೆ ಇಸ್ರೇಲ್‌ಗೇ ಅನುಕೂಲಕರವಾಗಿ ಪರಿಣಮಿಸಲಿದೆ ಎಂದು ಇರಾನ್ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ನೇವಲ್ ಪೋಸ್ಟ್ ಗ್ರಾಜುಯೇಟ್ ಸ್ಕೂಲ್‌ನಲ್ಲಿ ಇರಾನಿಯನ್ ಮಿಲಿಟರಿ ತಜ್ಞರಾಗಿರುವ ಅಫ್ಶನ್ ಒಸ್ತೋವರ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದೆ ಎಂದರೆ, ಕಾರ್ಯತಂತ್ರದ ಯೋಚನೆಗಳಿಂದಲೂ ಭಾವನೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಇರಾನ್‌ಗೆ ಮುಖ್ಯವಾದಂತೆ ತೋರುತ್ತದೆ ಎಂದು ಅವರು ವಿವರಿಸಿದ್ದಾರೆ.

ಇಸ್ರೇಲ್ ಇರಾನ್‌ಗೆ ಗಂಭೀರ ಹೊಡೆತ ನೀಡಿ, ಅದರ ಪರಿಣಾಮಗಳನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಂದು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಬಂಧ ಸ್ಥಿರವಾಗಿದೆ ಎನ್ನಲು ಸಾಧ್ಯವಿಲ್ಲ. ಅವೆರಡರ ನಡುವಿನ ಸಂಬಂಧ ಬಹಳಷ್ಟು ಉದ್ವಿಗ್ನಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಒಂದು ಪ್ರಮುಖ ವಿಚಾರವೆಂದರೆ, ಇಸ್ರೇಲ್ ನಾಯಕರಿಗೆ ತಮ್ಮ ಅದೃಷ್ಟ ಪರೀಕ್ಷೆಯನ್ನು ಯಾವಾಗ ನಿಲ್ಲಿಸಬೇಕು ಎಂಬ ಅರಿವಿದೆಯೇ ಎನ್ನುವುದು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಕದನದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ತನ್ನ ಅಧಿಕಾರ ಉಳಿಸಿಕೊಳ್ಳಲು ಕೆಲವು ತೀವ್ರಗಾಮಿ ಸಹಯೋಗಿಗಳ ಮೇಲೆ ಅವಲಂಬಿತರಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ನೆತನ್ಯಾಹು ಅವರಿಗೆ ಇಲ್ಲಿಯವರೆಗೆ ಲಭಿಸಿರುವ ಮೇಲುಗೈಯನ್ನು ಗೆಲುವಾಗಿ ಪರಿಗಣಿಸುವಂತೆ ಕರೆ ನೀಡಿದ್ದು, ಇನ್ನೂ ಯುದ್ಧ ಮುಂದುವರಿಸಲು ಪ್ರಯತ್ನಿಸದೆ, ಇಸ್ರೇಲ್ ಶಾಂತಿಯುತವಾಗಿ ನಡೆದುಕೊಳ್ಳುವಂತೆ ಮಾಡಲು ಪ್ರಯತ್ನ ನಡೆಸಿದ್ದಾರೆ. ಆದರೆ ನೆತನ್ಯಾಹು ಬೈಡನ್ ಮಾತು ಕೇಳಿಸಿಕೊಳ್ಳುತ್ತಾರೆಂದು ಹೇಳಲು ಸಾಧ್ಯವಿಲ್ಲ.

ಇಸ್ರೇಲ್-ಇರಾನ್ ನಡುವೆ ಇನ್ನೂ ಹೆಚ್ಚಿನ ಕದನಗಳು  ಸಂಭವ

ಒಂದು ವೇಳೆ ಸದ್ಯದ ಮಟ್ಟಿಗೆ ಇಸ್ರೇಲ್ ಜಾಗರೂಕವಾಗಿ ಮುಂದುವರಿಯಲು ನಿರ್ಧರಿಸಿದರೂ, ಈ ಚಕಮಕಿ ದೀರ್ಘಕಾಲೀನ ಪರಿಣಾಮ ಹೊಂದಿರಲಿದ್ದು, ಇಸ್ರೇಲ್ ಮತ್ತು ಇರಾನ್ ನಡುವೆ ಇನ್ನೂ ಹೆಚ್ಚಿನ ಕದನಗಳು ನಡೆಯುವ ಸಂಭವಗಳು ಹೆಚ್ಚಿವೆ.

ಶನಿವಾರ ರಾತ್ರಿಯ ವೇಳೆ ಇರಾನ್ ದಾಳಿ ನಡೆಸಿದ ಸುದ್ದಿ ಹೊರಬರುತ್ತಿದ್ದಂತೆ, ಇರಾನ್ ಕುರಿತು ಅಪಾರ ಜ್ಞಾನ ಹೊಂದಿರುವ ಅಮೆರಿಕಾದ ಮಾಜಿ ಭದ್ರತಾ ಅಧಿಕಾರಿಯೊಬ್ಬರು ತನ್ನ ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಅವರು ಇರಾನ್ ದಾಳಿ ನಡೆಸಿದರೂ, ಅದರ ಯಾವುದೇ ಡ್ರೋನ್ ಗುರಿ ತಲುಪಲು ಸಾಧ್ಯವಿಲ್ಲ ಎಂದು ಊಹಿಸಿದ್ದರು.

ಇರಾನ್‌ ಕಾರ್ಯವಿಧಾನ ಈ ಬಾರಿ ಬಹಳ ಅಸಾಧಾರಣವಾಗಿತ್ತು. ಕಳೆದ ಹಲವು ವಾರಗಳಿಂದ, ಇರಾನ್ ತಾನು ಇಸ್ರೇಲ್ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಸೂಚನೆ ನೀಡುತ್ತಾ ಬಂದಿತ್ತು. ಈ ಮೂಲಕ ಇಸ್ರೇಲ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಇರಾನ್ ದಾಳಿಯನ್ನು ಎದುರಿಸಲು ಸಿದ್ಧರಾಗಲು ಸಾಕಷ್ಟು ಕಾಲಾವಕಾಶ ನೀಡಿತ್ತು. ಇರಾನ್ ಪ್ರಯೋಗಿಸಿದ್ದ ಕ್ಷಿಪಣಿಗಳು ಸಾಕಷ್ಟು ನಿಧಾನವಾಗಿ ಚಲಿಸುವ ಕ್ಷಿಪಣಿಗಳಾಗಿದ್ದು, ಅವುಗಳು ಇಸ್ರೇಲ್ ವಾಯು ಪ್ರದೇಶವನ್ನು ತಲುಪಲು ಹಲವು ಗಂಟೆಗಳೇ ಬೇಕಾಗಿದ್ದವು. ಅದರೊಡನೆ, ಈ ಕ್ಷಿಪಣಿಗಳು ಜೋರ್ಡಾನ್‌ನಂತಹ ಇಸ್ರೇಲಿನ ನೆರೆ ರಾಷ್ಟ್ರಗಳನ್ನು ದಾಟಿ ಸಾಗಬೇಕಾಗಿದ್ದರಿಂದ, ಆ ರಾಷ್ಟ್ರಗಳೂ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತಿದ್ದವು. ಇರಾನ್ ಕ್ಷಿಪ್ರವಾಗಿ ಚಲಿಸುವ ಕ್ಷಿಪಣಿಗಳನ್ನು ಬಳಸಿ, ಇಸ್ರೇಲ್‌ನ ವಾಯು ರಕ್ಷಣೆಯನ್ನು ಭೇದಿಸಬಹುದು ಎಂಬ ಆರಂಭಿಕ ಆತಂಕಗಳೂ ಈ ದಾಳಿಯ ವೇಳೆ ಸುಳ್ಳಾದವು. ಇರಾನ್ ದಾಳಿಗಳು ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ, ಇರಾನ್ ಉದ್ದೇಶಗಳೇನು ಎಂದು ಎರಡು ರೀತಿಯಲ್ಲಿ ಊಹಿಸಬಹುದು.

ಮೊದಲನೆಯ ಸಾಧ್ಯತೆಯೆಂದರೆ, ಇರಾನ್ ಸದ್ಯದ ಪರಿಸ್ಥಿತಿಯನ್ನು ತಪ್ಪಾಗಿ ಅಂದಾಜಿಸಿದೆ. ಇರಾನ್ ಬಹುಶಃ ಇಸ್ರೇಲ್‌ಗೆ ವ್ಯಾಪಕ ಹಾನಿ ನಡೆಸಲು ಉದ್ದೇಶಿಸಿದ್ದರೂ, ತನ್ನ ಶತ್ರುವಿನ ರಕ್ಷಣಾ ಸಾಮರ್ಥ್ಯವನ್ನು ಅಂದಾಜಿಸುವಲ್ಲಿ ವಿಫಲವಾಗಿದೆ. ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ, ದಕ್ಷಿಣ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿರುವುದನ್ನು ಗಮನಿಸಿದ ಮಿಲಿಟರಿ ತಜ್ಞರು ಮತ್ತು ಪತ್ರಕರ್ತರು ಈ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ.
ಇದಕ್ಕೆ ಪರ್ಯಾಯ ಯೋಚನೆಯೆಂದರೆ, ಇರಾನ್ ಬಹುಶಃ ಇಸ್ರೇಲ್ ಮೇಲೆ ಭಾರೀ ಹಾನಿ ಎಸಗಲು ಪ್ರಯತ್ನ ನಡೆಸಿರಲಿಲ್ಲ. ಒಂದು ವೇಳೆ ಈ ಸಾಧ್ಯತೆ ನಿಜವಾದರೆ, ಇರಾನ್ ರಾಯಭಾರ ಕಚೇರಿಯ ಮೇಲಿನ ದಾಳಿ ನಡೆಸಿದ ಬಳಿಕವೂ ಸುಮ್ಮನಿದ್ದು, ಜಗತ್ತಿನ ಕಣ್ಣಲ್ಲಿ ದುರ್ಬಲ ಎಂದು ಕಾಣುವುದನ್ನು ತಪ್ಪಿಸುವ ಸಲುವಾಗಿ, ಸಾಂಕೇತಿಕವಾಗಿ ಇರಾನ್ ದಾಳಿ ನಡೆಸಿರುವ ಸಂಭವವಿದೆ.

ಈ ಪರಿಸ್ಥತಿಯನ್ನು ಹೋಲುವಂತಹ ಐತಿಹಾಸಿಕ ಉದಾಹರಣೆಗಳೂ ಕಣ್ಣ ಮುಂದಿವೆ. 2020ರಲ್ಲಿ ಅಮೆರಿಕಾ ಇರಾನಿನ ಉನ್ನತ ಮಿಲಿಟರಿ ಮುಖಂಡ ಕಾಸಿಮ್ ಸೊಲೆಮಾನಿಯ ಹತ್ಯೆ ನಡೆಸಿದ ಬಳಿಕ, ಇರಾನ್ ಅಮೆರಿಕಾದ ವಾಯುನೆಲೆಗಳ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಮೆರಿಕಾ ಹೆಚ್ಚು ಕೋಪಗೊಂಡು, ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳದಂತೆ ತಡೆಯುವ ರೀತಿಯಲ್ಲಿ ಜಾಗರೂಕವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದಾಗಿ ಅಮೆರಿಕನ್ ನೆಲೆಗಳಿಗೆ ಹಾನಿಯೇನೂ ಉಂಟಾಗಿರಲಿಲ್ಲ. ಆದರೆ, ಇರಾನ್ ದಾಳಿ ನಡೆಸಿದೆ ಎಂಬ ಸಂದೇಶವೂ ರವಾನೆಯಾಗಿತ್ತು.

ಇದೇ ರೀತಿಯಲ್ಲಿ, ಇರಾನ್ ಇದೇ ರೀತಿಯ ಉದ್ದೇಶವನ್ನು ಈ ಬಾರಿಯೂ ಪ್ರದರ್ಶಿಸಿತ್ತು. ತಾನು ಉಡಾಯಿಸಿದ ಮೊದಲ ಡ್ರೋನ್ ಇಸ್ರೇಲಿ ವಾಯು ಪ್ರದೇಶವನ್ನು ತಲುಪುವ ಮೊದಲೇ, ಇರಾನಿಯನ್ ಸರ್ಕಾರದ ಓರ್ವ ಅಧಿಕಾರಿ ಟ್ವೀಟ್ ಮೂಲಕ "ಈ ವಿಚಾರ ಇಲ್ಲಿಗೆ ಮುಕ್ತಾಯ ಕಂಡಿದೆ" ಎಂದು ಬರೆದಿದ್ದರು. ಇದು ಅಂತಾರಾಷ್ಟ್ರೀಯ ರಾಜತಾಂತ್ರಿಕ ಪರಿಭಾಷೆಯಲ್ಲಿ, ಒಂದು ರೀತಿ ನಾವು ನಡೆಸಿರುವ ದಾಳಿ ಕೇವಲ ಸಾಂಕೇತಿಕ ಎಂದು ಘೋಷಿಸಿದಂತಾಗಿತ್ತು!

ಒಂದು ವೇಳೆ ಇರಾನ್ ಉದ್ದೇಶ ಗಂಭೀರ ಅಪಾಯ ತಂದೊಡ್ಡುವುದು ಅಲ್ಲದೇ ಹೋಗಿದ್ದರೆ, ಈ ದಾಳಿಯನ್ನು ಸಂಪೂರ್ಣ ವಿಫಲ ಎಂದು ಪರಿಗಣಿಸಬೇಕಾಗಿಲ್ಲ. ಆದರೆ ಇದು ಜಗತ್ತಿನ ಕಣ್ಣಿಗೆ ಕಾರ್ಯತಂತ್ರದ ಸೋಲಿನಂತೆಯೇ ಕಂಡುಬರುತ್ತಿದೆ. ಇರಾನಿನ ಅಸಮರ್ಥ ಪ್ರತಿಕ್ರಿಯೆಯನ್ನು ಗಮನಿಸಿದರೆ, ಇಸ್ರೇಲ್ ಇನ್ನು ಮುಂದೆ ಯಾವುದೇ ಹೆಚ್ಚಿನ ದಾಳಿಯ ಭಯವಿಲ್ಲದೆ ಇರಾನಿನ ಹಿತಾಸಕ್ತಿಗಳನ್ನು ಗುರಿಯಾಗಿಸಿ ದಾಳಿ ಮಾಡಬಹುದು. ಇದಕ್ಕೆ ಇಸ್ರೇಲ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಹೋಲಿಸಿದರೆ, ಇರಾನ್ ಮಿಲಿಟರಿ ಸಾಮರ್ಥ್ಯ ಕಡಿಮೆಯಾಗಿರುವುದು ಪೂರಕವಾಗಿದೆ.

ಪರಿಸ್ಥಿತಿ ಇಲ್ಲಿಂದ ಮುಂದಕ್ಕೆ ಶಮನವೂ ಆಗಬಹುದು ಅಥವಾ ವಿಕೋಪಕ್ಕೂ ತೆರಳಬಹುದು. ಇರಾನಿನ ಬಹುಪಾಲು ಅಸಮರ್ಥ ಮಿಲಿಟರಿ ಪ್ರತಿಕ್ರಿಯೆಯ ಬಳಿಕ, ಇಸ್ರೇಲ್ ಡಮಾಸ್ಕಸ್ ರಾಯಭಾರ ಕಚೇರಿಯ ದಾಳಿಯ ವೇಳೆಗಿಂತಲೂ ಈಗ ಹೆಚ್ಚು ಸಮರ್ಥವಾಗಿ ತೋರುತ್ತಿದೆ.

ಇಸ್ರೇಲ್ ಒಂದು ದೊಡ್ಡ ಅಪಾಯವನ್ನು ಎದುರಿಸಿ, ಇರಾನಿನ ಮಿಲಿಟರಿ ನಾಯಕರೊಬ್ಬರ ಹತ್ಯೆ ನಡೆಸುವ ಕಾರ್ಯಾಚರಣೆ ಕೈಗೊಂಡಿತು. ಇದರ ಪರಿಣಾಮವಾಗಿ, ನೇರ ಯುದ್ಧವೇ ನಡೆದು ಹೋಗಬಹುದಾಗಿತ್ತು. ಆದರೆ, ಇಸ್ರೇಲ್ ಯಾವುದೇ ಹಾನಿಗೊಳಗಾಗದೆ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೆ, ಸದ್ಯೋಭವಿಷ್ಯದಲ್ಲಿ ತನ್ನ ಭೂ ಪ್ರದೇಶ ಇರಾನಿನ ಯಾವುದೇ ನೇರ ದಾಳಿಯಿಂದ ಸುರಕ್ಷಿತವಾಗಿದೆ ಎನ್ನುವುದನ್ನು ಖಾತ್ರಿಪಡಿಸಿದೆ.
ಇರಾನ್ ದೊಡ್ಡ ಪ್ರಮಾಣದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿರುವುದರಿಂದ, ಇಸ್ರೇಲ್‌ಗೆ ಅಮೆರಿಕನ್ ಕಾಂಗ್ರೆಸ್‌ನ ರಿಪಬ್ಲಿಕನ್ ಪಕ್ಷದ ಸದಸ್ಯರ ಬೆಂಬಲವೂ ಲಭಿಸಿದೆ. ರಿಪಬ್ಲಿಕನ್ ಪಕ್ಷದ ಸದಸ್ಯರು ಉಕ್ರೇನ್ ಯುದ್ಧಕ್ಕೆ ಬೆಂಬಲ ನೀಡುವ ಕುರಿತು ಚರ್ಚೆ ನಡೆಸುತ್ತಾ, ತಿಂಗಳುಗಳ ಕಾಲ ಸಹಾಯಧನ ಬಿಡುಗಡೆಯಾಗದಂತೆ ತಡೆದಿದ್ದರು. ಆದರೆ, ಒಂದು ವೇಳೆ ಇಸ್ರೇಲ್ ಏನಾದರೂ ಇರಾನ್ ದಾಳಿಗೆ ಉಗ್ರವಾಗಿ ಪ್ರತಿಕ್ರಿಯೆ ನೀಡಲು ಮುಂದಾದರೆ, ಆಗ ಪರಿಸ್ಥಿತಿ ವಿಷಮಗೊಳ್ಳಬಹುದು.

ಪೂರ್ಣಪ್ರಮಾಣದ ಯುದ್ಧಕ್ಕೆ ಹಾದಿ ಮಾಡಿಕೊಡಬಹುದು

ಒಂದೊಮ್ಮೆ ಇಸ್ರೇಲ್ ಈಗ ಇರಾನ್ ಮೇಲೆ ಪ್ರತಿ ದಾಳಿ ನಡೆಸಿದರೆ, ಅದು ಇರಾನನ್ನು ಇನ್ನಷ್ಟು ಕೆರಳಿಸಿ, ಅದು ಇಸ್ರೇಲ್ ಮೇಲೆ ಮತ್ತೆ ದಾಳಿ ನಡೆಸಬಹುದು. ದಾಳಿ ಪ್ರತಿದಾಳಿಗಳ ಈ ಸರಣಿ ಮುಂದುವರಿದು, ಅಂತಿಮವಾಗಿ ಪೂರ್ಣಪ್ರಮಾಣದ ಯುದ್ಧಕ್ಕೆ ಹಾದಿ ಮಾಡಿಕೊಡಬಹುದು. ಹಾಗೇನಾದರೂ ಯುದ್ಧ ಸಂಭವಿಸಿದರೆ, ಅದರಲ್ಲಿ ಲೆಬನಾನಿನ ಹೆಜ್ಬೊಲ್ಲಾ ಸಂಘಟನೆಯಂತಹ ಇರಾನಿನ ಸ್ಥಳೀಯ ಸಹಯೋಗಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ ಸಾವುನೋವಿನ ಸಂಖ್ಯೆ ಬಹಳಷ್ಟು ಹೆಚ್ಚಾಗಲಿದೆ.

ಅಮೆರಿಕನ್ ಸರ್ಕಾರ ಇರಾನಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಗುರುತಿಸಿ, ನಾಶಪಡಿಸಲು ಇಸ್ರೇಲ್‌ಗೆ ಉತ್ತಮ ಸಹಕಾರ ನೀಡಿತ್ತು. ಇಸ್ರೇಲ್ ಈಗ ಮತ್ತೆ ಪ್ರತಿದಾಳಿ ನಡೆಸುವುದನ್ನು ಅಮೆರಿಕಾ ಬಲವಾಗಿ ವಿರೋಧಿಸುತ್ತಿದ್ದು, ಒಂದು ವೇಳೆ ಇಸ್ರೇಲ್ ಏನಾದರೂ ಮತ್ತೆ ದಾಳಿ ನಡೆಸಿದರೆ, ಅದು ಅಮೆರಿಕಾಗೆ ಇನ್ನಷ್ಟು ತಲೆನೋವು ಉಂಟುಮಾಡಲಿದೆ.

ಇಸ್ರೇಲ್ ಈಗ ಮರಳಿ ದಾಳಿ ನಡೆಸಿದ್ದೇ ಆದರೆ, ಇಲ್ಲಿಯ ತನಕದ ಅದರ ಸಂಭಾವ್ಯ ಗೆಲುವು ಕಾರ್ಯತಂತ್ರದ ಸೋಲಾಗಿ ಪರಿಣಮಿಸಲಿದೆ. ಇದೆಲ್ಲ ಲೆಕ್ಕಾಚಾರದ ಹೊರತಾಗಿಯೂ, ಇಸ್ರೇಲ್ ಸರ್ಕಾರ ಯುದ್ಧವನ್ನು ತೀವ್ರಗೊಳಿಸುವ ಆಲೋಚನೆಯಲ್ಲಿದೆ. ಇಸ್ರೇಲಿ ಮಾಧ್ಯಮ ವರದಿಗಾರನೊಬ್ಬನ ಪ್ರಕಾರ, ಒಂದು ವೇಳೆ ಸಾರ್ವಜನಿಕರೇನಾದರೂ ಇಸ್ರೇಲಿ ಸರ್ಕಾರದ ಆಂತರಿಕ ಮಾತುಕತೆಗಳಿಗೆ ಕಿವಿಯಾದರೆ, ಲಕ್ಷಾಂತರ ಜನರು ದೇಶದಿಂದ ಹೊರಹೋಗುವ ಸಲುವಾಗಿ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಧಾವಿಸಲಿದ್ದಾರೆ!

ಬೆನ್ ಗುರಿಯನ್ ವಿಮಾನ ನಿಲ್ದಾಣ ಇಸ್ರೇಲ್‌ನ ಪ್ರಮುಖ ವಿಮಾನ ನಿಲ್ದಾಣವಾಗಿದ್ದು, ಮಧ್ಯ ಪೂರ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇಸ್ರೇಲ್‌ನ ಪ್ರಥಮ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರ ಹೆಸರು ಹೊಂದಿರುವ ಈ ವಿಮಾನ ನಿಲ್ದಾಣ, ಅಂತರಾಷ್ಟ್ರೀಯ ವಿಮಾನಗಳಿಗೊಂದು ಪ್ರಮುಖ ಕೇಂದ್ರವಾಗಿದೆ. ಇದು ಇಸ್ರೇಲಿ ನಾಗರಿಕರು ಮತ್ತು ವಿದೇಶೀ ಪ್ರವಾಸಿಗರಿಗೆ ಜಗತ್ತಿನ ಸಂಪರ್ಕದ ಕೊಂಡಿಯಾಗಿದೆ. ಬೆನ್ ಗುರಿಯನ್ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಮತ್ತು ಭದ್ರತಾ ತಪಾಸಣೆಗಳು ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಿನವು ಎನ್ನಬಹುದಾಗಿದೆ.

ಅಕ್ಟೋಬರ್ 7ಕ್ಕೂ ಮುನ್ನ, ಪ್ರಧಾನಿ ನೆತನ್ಯಾಹು ಮಿಲಿಟರಿ ಪಡೆಯನ್ನು ಅತ್ಯಂತ ಜಾಗರೂಕವಾಗಿ ಬಳಸುತ್ತಿದ್ದರು. ಆದರೆ, ಹಮಾಸ್ ಉಗ್ರರ ದಾಳಿಯ ಬಳಿಕ, ನೆತನ್ಯಾಹು ಅವರು ಗಾಜಾದಾದ್ಯಂತ ಅತ್ಯಂತ ತೀಕ್ಷ್ಣವಾದ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ಸಾವಿರಾರು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆ ಇಸ್ರೇಲ್ ಪಾಲಿಗೆ ಕಾರ್ಯತಂತ್ರದ ಸೋಲು ಎನ್ನಲಾಗುತ್ತಿದೆ.

ಇಸ್ರೇಲ್ ಒಳಗಿನ ಒಂದಷ್ಟು ವಿವೇಕಯುತ ವ್ಯಕ್ತಿಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದ್ದಾರೆ. ಯುದ್ಧ ಸಚಿವ ಸಂಪುಟದ ಸದಸ್ಯರಾದ ಬೆನ್ನಿ ಗ್ಯಾಂಟ್ಜ್ ಅವರು ಈ ಯುದ್ಧ ಇನ್ನೂ ಮುಗಿದಿಲ್ಲ ಎಂದಿದ್ದಾರೆ. ಆದರೆ ಅವರು ಅದಕ್ಕಾಗಿ ಇಸ್ರೇಲ್ ಸ್ಥಳೀಯವಾಗಿ ಸಹಯೋಗವನ್ನು ಸಾಧಿಸಿ, ಸೂಕ್ತ ಸಮಯದಲ್ಲಿ, ಸರಿಯಾದ ವಿಧಾನದಲ್ಲಿ ಇರಾನನ್ನು ಅದರ ತಪ್ಪಿಗೆ ಜವಾಬ್ದಾರನನ್ನಾಗಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದಾಗಿ, ಇಸ್ರೇಲ್ ತಕ್ಷಣವೇ ತೀವ್ರ ಮಿಲಿಟರಿ ಕ್ರಮ ಕೈಗೊಳ್ಳದಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದೆಲ್ಲ ಪ್ರಯತ್ನ

ಗಳ ಹೊರತಾಗಿಯೂ, ಇಸ್ರೇಲ್ ತೀವ್ರ ಬಿಕ್ಕಟ್ಟನ್ನು ತಪ್ಪಿಸುವ ಸಾಧ್ಯತೆಗಳೂ ಇವೆ. ಆದರೆ, ಒಂದು ವೇಳೆ ಇಸ್ರೇಲ್ ಏನಾದರೂ ದಾಳಿ ಮಾಡಿದ್ದೇ ಆದಲ್ಲಿ, ಅದರ ಸ್ಥಿರತೆಯ ಮೇಲೆ ದೀರ್ಘಕಾಲೀನ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಉದ್ವಿಗ್ನತೆ ಮತ್ತು ಹಿಂಸಾಚಾರ ಇನ್ನಷ್ಟು ಹೆಚ್ಚಲಿದೆ

ಯುನಿವರ್ಸಿಟಿ ಆಫ್ ಒಟ್ಟಾವಾದ ಮಧ್ಯ ಪೂರ್ವ ತಜ್ಞರಾಗಿರುವ ಥಾಮಸ್ ಜುನೂ ಅವರು, ಒಂದು ವೇಳೆ ಇಸ್ರೇಲ್ ಏನಾದರೂ ಈಗ ದಾಳಿ ಮಾಡದೆ ಹೋದರೆ, ಇರಾನಿನ ಆಕ್ರಮಣದ ಕಾರಣದಿಂದ ಪರಿಸ್ಥಿತಿ ಈಗಾಗಲೇ ಬದಲಾಗಿದೆ ಎಂದು ಭಾವಿಸಬಹುದು. ಜುನೂ ಅವರು ಇಸ್ರೇಲ್ ದಾಳಿ ನಡೆಸಿದ್ದೇ ಆದರೆ, ಇನ್ನು ಮುಂದೆ ಉದ್ವಿಗ್ನತೆ ಮತ್ತು ಹಿಂಸಾಚಾರ ಇನ್ನಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ

ಈ ಅಭಿಪ್ರಾಯವನ್ನು ಬೆಂಬಲಿಸುವ ರೀತಿಯಲ್ಲಿ ಮಾತನಾಡಿರುವ ಇರಾನಿನ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥರಾದ ಹೊಸೇನ್ ಸಲಾಮಿ ಅವರು, ಇರಾನ್ ಈಗ ಇಸ್ರೇಲ್ ಜೊತೆ ಸಂವಹನ ನಡೆಸಲು ಹೊಸ ನಿಯಮಗಳನ್ನು ರೂಪಿಸುತ್ತಿದೆ ಎಂದಿದ್ದಾರೆ. ಇರಾನಿನ ಪಡೆಗಳ ವಿರುದ್ಧ ಇಸ್ರೇಲ್ ಎಲ್ಲೇ ದಾಳಿ ನಡೆಸಿದರೂ, ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಇರಾನ್ ನೇರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಸಿರಿಯಾದಲ್ಲಿ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ ರೀತಿಯಲ್ಲೇ ಇಸ್ರೇಲ್ ಯಾವುದೇ ಪ್ರತಿಕ್ರಿಯೆಯ ಭಯವಿಲ್ಲದೆ ಇರಾನಿನ ಹಿತಾಸಕ್ತಿಗಳ ಮೇಲೆ ದಾಳಿ ನಡೆಸುತ್ತಿತ್ತು. ಈಗ ಇರಾನಿನ ಧೋರಣೆಯಲ್ಲಿನ ಬದಲಾವಣೆಗಳು ಇಸ್ರೇಲ್ ದಾಳಿ ಮಾಡಿದ್ದೇ ಆದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ದಾರಿ ಮಾಡಿಕೊಡಲಿದೆ ಎಂಬುದನ್ನು ಸೂಚಿಸಿದೆ.

ಶನಿವಾರ ರಾತ್ರಿ, ಜನರು ಇದ್ದಕ್ಕಿದ್ದಂತೆ ಟ್ವಿಟರ್‌ನಲ್ಲಿ ಮೂರನೇ ಮಹಾಯುದ್ಧದ ಕುರಿತು ಮಾತನಾಡತೊಡಗಿದ್ದರು. ಆದರೆ, ಅಂತಹ ಭಯಗಳೆಲ್ಲ ಉತ್ಪ್ರೇಕ್ಷೆಯಿಂದ ಕೂಡಿವೆ. ಸದ್ಯದ ಮಟ್ಟಿಗೆ ಮಧ್ಯ ಪೂರ್ವ ಪ್ರದೇಶ ಅತ್ಯಂತ ಉದ್ವಿಗ್ನವೇ ಆಗಿದ್ದರೂ, ಈ ಉದ್ವಿಗ್ನತೆ ಸ್ಫೋಟಗೊಳ್ಳುವ ಸಾಧ್ಯತೆಗಳೂ ಇವೆ.

Follow Us:
Download App:
  • android
  • ios