Asianet Suvarna News Asianet Suvarna News

ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್'ಫೋನ್ ಎಂದು ಹೇಳಿಕೊಂಡಿದ್ದ ಫ್ರೀಡಂ-251 ಕಥೆ ಏನಾಯಿತು?

ಜೂನ್ 30ರಷ್ಟರಲ್ಲಿ 25 ಲಕ್ಷ ಸ್ಮಾರ್ಟ್'ಫೋನ್ ಹ್ಯಾಂಡ್'ಸೆಟ್ಟನ್ನು ಗ್ರಾಹಕರಿಗೆ ತಲುಪಿಸುವುದಾಗಿ ತಾನು ನೀಡಿದ ಭರವಸೆಯನ್ನು ಕಂಪನಿ ಮರೆತೇಬಿಟ್ಟಿತು.

what happened to freedom251 smartphone

ನವದೆಹಲಿ(ನ. 30): ಕೆಲ ತಿಂಗಳ ಹಿಂದೆ ಫ್ರೀಡಂ 251 ಎಂಬ ಹೆಸರು ದಿಢೀರ್ ಸುದ್ದಿಯಾಗತೊಡಗಿತು. ಕೇವಲ 251 ರೂಪಾಯಿಗೆ ಸ್ಮಾರ್ಟ್'ಫೋನ್ ನೀಡುವುದಾಗಿ ರಿಂಗಿಂಗ್ ಬೆಲ್ಸ್ ಎಂಬ ಸಂಸ್ಥೆಯು ಘೋಷಿಸಿತ್ತು. ಅಷ್ಟೇ ಅಲ್ಲ, ಅದರ ವೆಬ್'ಸೈಟ್'ನಲ್ಲಿ ಬುಕಿಂಗ್ ಮಾಡುವುದಾಗಿ ಹೇಳಿದ್ದೇ ತಡ, ನೋಡನೋಡುತ್ತಿದ್ದಂತೆಯೇ ಕೋಟ್ಯಂತರ ಸಂಖ್ಯೆಯಲ್ಲಿ ರಿಜಿಸ್ಟ್ರೇಶನ್ ಆಗಿಹೋದವು. ಒಂದು ಅಂದಾಜಿನ ಪ್ರಕಾರ ಸುಮಾರು 7 ಕೋಟಿ ಮೊಬೈಲ್'ಗಳು ಬುಕ್ ಆದವು. ವೆಬ್'ಸೈಟ್'ನ ಸರ್ವರ್ ಕೈಗೊಡದೇ ಹೋಗಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು.

ದುಡ್ಡು ಕೊಳ್ಳೆ ಹೊಡೆಯಲು ಫ್ರೀಡಂ-251 ಮೊಬೈಲ್ ಬಿಡಲಾಗಿದೆ ಎಂಬ ಆಪಾದನೆ ಕೇಳಿಬಂದ ಬಳಿಕ ಸಂಸ್ಥೆಯು ಕ್ಯಾಷ್ ಆನ್ ಡೆಲಿವರಿ ಅವಕಾಶ ನೀಡಿತು. ಬುಕ್ ಮಾಡಿದ ಅನೇಕ ದಿನಗಳವರೆಗೆ ಅದರ ಸುದ್ದಿಯೇ ಇರಲಿಲ್ಲ. ಜುಲೈನಲ್ಲಿ 5 ಸಾವಿರ ಜನರಿಗೆ ಸ್ಮಾರ್ಟ್'ಫೋನ್ ನೀಡಿದ್ದೇವೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥೆ ಘೋಷಿಸಿತು. ಕ್ಯಾಷ್ ಆನ್ ಡೆಲಿವರಿ ಆಪ್ಷನ್'ನಲ್ಲಿ ಬುಕ್ ಮಾಡಿದ 65 ಸಾವಿರ ಗ್ರಾಹಕರಿಗೆ ಫೋನ್ ತಲುಪಿಸುವುದಾಗಿ ಹೇಳಿತು. ಜೂನ್ 30ರಷ್ಟರಲ್ಲಿ 25 ಲಕ್ಷ ಸ್ಮಾರ್ಟ್'ಫೋನ್ ಹ್ಯಾಂಡ್'ಸೆಟ್ಟನ್ನು ಗ್ರಾಹಕರಿಗೆ ತಲುಪಿಸುವುದಾಗಿ ತಾನು ನೀಡಿದ ಭರವಸೆಯನ್ನು ಕಂಪನಿ ಮರೆತೇಬಿಟ್ಟಿತು.

ಫ್ರೀಡಂ251 ಸ್ಮಾರ್ಟ್'ಫೋನ್ ಕೈಗೆ ಪಡೆದ ಒಬ್ಬೇ ಒಬ್ಬ ಗ್ರಾಹಕರ ಉದಾಹರಣೆ ಮಾಧ್ಯಮಗಳಿಗೆ ಸಿಕ್ಕಿಲ್ಲ. ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್'ಫೋನ್ ಎಂಬ ಪ್ರಚಾರ ಪಡೆದು ಮಾರುಕಟ್ಟೆಗೆ ನುಗ್ಗಿದ ಈ ಫ್ರೀಡಂ251 ಭಾರತೀಯ ತಂತ್ರಜ್ಞಾನ ಕ್ಷೇತ್ರದ ಅತ್ಯಂತ ನಿರಾಶೆ ಸಂಗತಿ ಎಂದು ಒಂದು ವಲಯ ಹೇಳಿದರೆ, ಮತ್ತೊಂದು ವಲಯವು ಇದು ಮಹಾಮೋಸ ಎಂದು ಬಣ್ಣಿಸಿದೆ.

ಅಂದಹಾಗೆ, ಇಷ್ಟೆಲ್ಲಾ ಪ್ರಚಾರ ಪಡೆದ ರಿಂಗಿಂಗ್ ಬೆಲ್ಸ್ ಸಂಸ್ಥೆ ಪರಾರಿಯಾಗಿಲ್ಲ ಎಂಬುದು ಗಮನಾರ್ಹ. ತಾನು ಪಡೆದ ಮಾರುಕಟ್ಟೆ ಮತ್ತು ಹೆಸರನ್ನು ಬಳಸಿಕೊಂಡು ಟಿವಿ ಮತ್ತು ಹೈ ಎಂಡ್ ಸ್ಮಾರ್ಟ್'ಫೋನ್'ಗ ತಯಾರಿಯಲ್ಲಿ ಸಂಸ್ಥೆ ನಿರತವಾಗಿದೆ. ಫ್ರೀಡಂ251 ಸ್ಮಾರ್ಟ್'ಫೋನ್'ನಲ್ಲಿ ಬಳಸಿದ 'ಅಗ್ಗ'ದ ಪ್ರಚಾರದ ತಂತ್ರವನ್ನೇ ಅದು ತನ್ನ ಇತರ ಉತ್ಪನ್ನಗಳಿಗೆ ಬಳಸಿಕೊಳ್ಳುವುದನ್ನು ಮುಂದುವರಿಸಿದೆ. ಅದರ ಜೊತೆಗೆ, ಕಡಿಮೆ ಬೆಲೆಯಲ್ಲಿ ಹೈಎಂಡ್ ಸ್ಮಾರ್ಟ್'ಫೋನ್'ಗಳನ್ನೂ ತಯಾರಿಸುತ್ತಿರುವುದಾಗಿ ರಿಂಗಿಂಗ್ ಬೆಲ್ಸ್ ಹೇಳಿಕೊಂಡಿದೆ.

Follow Us:
Download App:
  • android
  • ios