Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಕುಮಾರಸ್ವಾಮಿ, ಡಿಕೆಶಿಯದ್ದು ವೈಯಕ್ತಿಕ ಜಗಳ: ಆರ್‌. ಅಶೋಕ್

ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಬಲಗೊಳ್ಳದೇ ಇರುವುದನ್ನು ಮನಗಂಡ ಬಿಜೆಪಿ ವರಿಷ್ಠರು ಅಂತಿಮವಾಗಿ ಜೆಡಿಎಸ್ ಜತೆ ಸ್ನೇಹ ಹಸ್ತ ಚಾಚಿದರು. ಇದು ಎಷ್ಟರಮಟ್ಟಿಗೆ ಲಾಭ ತಂದು ಕೊಡುತ್ತದೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ. 

HD Kumaraswamy DK Shivakumar Personal Quarrel Says R Ashok grg
Author
First Published Apr 19, 2024, 11:48 AM IST

ಬೆಂಗಳೂರು(ಏ.19):  ಬಿಜೆಪಿಯ ಹಿರಿಯ ನಾಯಕ ಹಾಗೂ ಪಕ್ಷದ ಒಕ್ಕಲಿಗ ಮುಖ ಎಂದು ಗುರುತಿಸಲ್ಪಡುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸಿದ ಬಳಿಕ ಅಶೋಕ್ ಅವರು ಎದುರಿಸುತ್ತಿರುವ ಮೊದಲ ಚುನಾವಣೆಯೂ ಹೌದು. ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಬಲಗೊಳ್ಳದೇ ಇರುವುದನ್ನು ಮನಗಂಡ ಬಿಜೆಪಿ ವರಿಷ್ಠರು ಅಂತಿಮವಾಗಿ ಜೆಡಿಎಸ್ ಜತೆ ಸ್ನೇಹ ಹಸ್ತ ಚಾಚಿದರು. ಇದು ಎಷ್ಟರಮಟ್ಟಿಗೆ ಲಾಭ ತಂದು ಕೊಡುತ್ತದೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಅವರು 'ಕನ್ನಡಪ್ರಭ'ಕ್ಕೆ 'ಮುಖಾಮುಖಿ'ಯಾದಾಗ..

• ಲೋಕಸಭಾ ಚುನಾವಣೆಗೆ ಬಿಜೆಪಿಯ ಸಿದ್ಧತೆ, ಪ್ರಚಾರ ವೈಖರಿ ಹೇಗಿದೆ?

ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಕಳೆದ ನಾಲೈದು ತಿಂಗಳಿಂದ ಹತ್ತು ಹಲವು ಸಭೆಗಳನ್ನು ನಡೆಸಿ ಕಾರ್ಯಕರ್ತರಿಗೆ ಸಲಹೆ- ಸೂಚನೆಗಳನ್ನು ನೀಡಿದ್ದಾರೆ. ಬಿಜೆಪಿ ಪಡೆ ಯುದ್ಧಕ್ಕೆ ಸನ್ನದ್ಧವಾಗಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ರಾಜ್ಯಾದ್ಯಂತ ಮನೆ ಮನೆಗೂ ಕರಪತ್ರಗಳನ್ನು ತಲುಪಿಸಿದ್ದೇವೆ. ಪ್ರಚಾರದಲ್ಲಿ ಬಿಜೆಪಿಯೇ ಮುಂದಿದೆ. ಇದು ದೇಶದ ಚುನಾವಣೆ ಎಂಬಂತೆ ಜನರು ನೋಡುತ್ತಿದ್ದಾರೆ. ಮೋದಿ ವರ್ಸಸ್ ರಾಹುಲ್ ಗಾಂಧಿ ಎಂಬಂತೆ ಬಿಂಬಿತವಾಗಿದೆ. ಮುಖ್ಯ ವಿಷಯ ದೇಶದ ರಕ್ಷಣೆ. ಸುಭದ್ರ ನಾಯಕತ್ವ, ಸ್ಥಿರ ಸರ್ಕಾರ, ಇದೇ ಈ ಬಾರಿಯ ಚುನಾವಣೆಯ ವಿಷಯ.

ರಾಜ್ಯದಲ್ಲಿ ಮಿತಿ ಮೀರಿದ ಭಯೋತ್ಪಾದನಾ ಚಟುವಟಿಕೆ; ಹಿಂದೂಗಳ ಮೇಲೆ ಹಲ್ಲೆ: ಆರ್ ಅಶೋಕ್

• ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು?

24ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. 28 ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. 24 ಸ್ಥಾನಗಳಂತೂ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಬಿಜೆಪಿಯೇತರ ಪಕ್ಷಗಳ ಮುಖಂಡರ ಮೇಲೆ ಐಟಿ, ಇಡಿ ಮತ್ತು ಸಿಬಿಐ ದಾಳಿ ಎಗ್ಗಿಲ್ಲದೆ ನಡೆಯುತ್ತಿವೆ. ಬಿಜೆಪಿ ಮುಖಂಡರು ಅಕ್ರಮ ಎಸಗುವುದೇ ಇಲ್ಲವೇ? ಅಕ್ರಮ ಎಲ್ಲೇ ಇದ್ದರೂ ಮೋದಿ ಅವರು ಬಿಟ್ಟಿಲ್ಲ. ನಮ್ಮ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಮನೆ ಮೇಲೂ ಐಟಿ ದಾಳಿಯಾಗಿದೆ. ಬೆಂಗಳೂರಿನಲ್ಲೂ ಹಲವು ಬಿಬಿಎಂಪಿ ಮಾಜಿ ಸದಸ್ಯರ ಮನೆ ಮೇಲೂ ದಾಳಿ ನಡೆದಿದೆ. ಈ ದೇಶವನ್ನು ಐವತ್ತು ವರ್ಷಗಳ ಕಾಲ ಲೂಟಿ ಮಾಡಿದವರು ಕಾಂಗ್ರೆಸ್ ನವರು, ಹೀಗಾಗಿ, ಆ ಪಕ್ಷದ ಮುಖಂಡರಲ್ಲಿ ಅಕ್ರಮ ಹಣ ಹೆಚ್ಚಿದೆ. ಹಾಗಾಗಿಯೇ ಅವರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ.

• ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿಯ ವೇಗಕ್ಕೆ ತಡೆ ಒಡ್ಡುವುದಿಲ್ಲವೇ?

ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಈ ಯೋಜನೆಗಳಿಗೆ ಬೇರೆ ಕಡೆಯಿಂದ ಹಣ ತಂದು ನೀಡುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ, ನಮ್ಮ ಮೇಲೆ ತೆರಿಗೆ ಹಾಕಿ ನಮಗೇ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ ಎಂಬುದು ಈಗ ಜನರಿಗೆ ಅರ್ಥವಾಗುತ್ತಿದೆ. ವಿದ್ಯುತ್ ದರ, ಹಾಲಿನ ದರ. ಮದ್ಯದ ದರ, ಸ್ಟಾಂಪ್ ಡ್ಯೂಟಿ ಎಲ್ಲವನ್ನೂ ಸರ್ಕಾರ ಹೆಚ್ಚಳ ಮಾಡಿದೆ. ತೆರಿಗೆ ಹೆಚ್ಚಿಸಿದ್ದರಿಂದ ಜನರು ಮನೆ, ನಿವೇಶನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಖಜಾನೆ ಖಾಲಿಯಾಗಿದ್ದರಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ಯಾರಂಟಿಗಳ ಮೂಲಕ ಸರ್ಕಾರ ನಮಗೆ ಮೋಸ ಮಾಡುತ್ತಿದೆ ಎಂಬ ಭಾವನೆ ಬಂದಿದೆ.

• ಬರ ಪರಿಹಾರ ವಿಳಂಬ ಮತ್ತು ತೆರಿಗೆ ಪಾಲಿನ ಕುರಿತು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಆರೋಪದಿಂದ ಬಿಜೆಪಿಗೆ ಹಿನ್ನಡೆ ಉಂಟಾಗುವುದಿಲ್ಲವೇ?

ಈ ಎರಡೂ ವಿಷಯಗಳು ಜನರ ಮನಸ್ಸಿಗೆ ಹೋಗಿಲ್ಲ. ಸರ್ಕಾರ ನಡೆಸುತ್ತಿರುವುದು ಕಾಂಗ್ರೆಸ್ ಸರ್ಕಾರ, ಬರ ನಿರ್ವಹಣೆ ಮಾಡಬೇಕಾಗಿದ್ದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ. ಎಲ್ಲಿಂದ ಹಣ ತರುತ್ತೀರಿ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಎಲ್ಲ ರಾಜ್ಯಗಳಿಗೂ ವಿಪತ್ತು ನಿರ್ವಹಣಾ ನಿಧಿಯನ್ನು ಮೊದಲೇ ನಿಗದಿ ಮಾಡುತ್ತದೆ. ವಿಶೇಷ ಸಂದರ್ಭದಲ್ಲಿ ಕೊಡಬೇಕಾದಾಗ ರಾಜ್ಯ ಸರ್ಕಾರ ಮನವಿ ನೀಡಬೇಕು. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸುವುದಕ್ಕೆ ವಿಳಂಬ ಮಾಡಿದೆ. ಜತೆಗೆ ಕೇಂದ್ರ ಪರಿಹಾರ ನೀಡುವ ಮೊದಲು ನಾವು ರಾಜ್ಯದಿಂದ ಹಣ ಬಿಡುಗಡೆ ಮಾಡಿ ಪರಿಹಾರ ನೀಡಬೇಕು. ನಮ್ಮ ಸರ್ಕಾರದ ಅವಧಿಯಲ್ಲೂ ಹೀಗೆಯೇ ಆಗಿತ್ತು. ಆಗ ನಾವೇ ಮೊದಲು ರಾಜ್ಯದ ಖಜಾನೆಯಿಂದ ಬಿಡುಗಡೆ ಮಾಡಿದ್ದೆವು. ಈಗ ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ,

• ನಿಮ್ಮ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯಾಕೆ ಈ ಮಟ್ಟದ ಬಂಡಾಯ ಸಾರಿದ್ದಾರೆ?

ಶಿವಮೊಗ್ಗದಲ್ಲೇ ಇತ್ಯರ್ಥ ಆಗುತ್ತದೆ ಎಂದು ಭಾವಿಸಿದ್ದೆವು. ಮಾತುಕತೆ ನಡೆದಿರುವುದು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ. ಈಶ್ವರಪ್ಪ ಅವರು ಯಾವತ್ತೂ ಪಕ್ಷದಲ್ಲಾಗಲಿ, ಪಕ್ಷದ ಕೋರ್‌ಕಮಿಟಿ ಸಭೆಯಲ್ಲಾಗಲಿ ಪುತ್ರನ ಟಿಕೆಟ್ ಬಗ್ಗೆ ಪ್ರಸ್ತಾಪಿಸಿಲ್ಲ. ಯಡಿಯೂರಪ್ಪ ಅವರ ಬಳಿ ಚರ್ಚಿಸಿದ್ದರು. ಅವರಿಬ್ಬರೇ ಮಾತಾಡಿಕೊಂಡಿದ್ದರಿಂದ ಅವರ ನಡುವೆಯೇ ಇತ್ಯರ್ಥವಾಗಬೇಕು.

• ಈಶ್ವರಪ್ಪ ಅವರನ್ನು ಮನವೊಲಿಸುವ ಪ್ರಯತ್ನ ಪಕ್ಷದಿಂದ ಗಂಭೀರವಾಗಿ ನಡೆದಂತೆ ಕಾಣುತ್ತಿಲ್ಲ?

ಮನವೊಲಿಸುವ ಪ್ರಯತ್ನ ನಡೆದಿದೆ. ಆದರೆ, ಈಶ್ವರಪ್ಪ ಅವರು ಆಚಲವಾಗಿದ್ದಾರೆ. 45 ವರ್ಷಗಳ ಕಾಲ ಪಕ್ಷದ ಕೆಲಸ ಮಾಡಿರುವ ಈಶ್ವರಪ್ಪ ಅವರು ಈಗ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಡೆ ಒಪ್ಪುವಂಥದ್ದಲ್ಲ. ಇಷ್ಟು ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಸ ಕಿವುಚಿದಂತಾಗಿದೆ.

• ಹಾಗಾದರೆ ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದು ತಪ್ಪಾ? ಒಂದು ವರ್ಷ ಕಾಲ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡಿದ್ದರಲ್ಲ?

ತಪ್ಪು ಅಂತ ಅಲ್ಲ. ಆದರೆ, ಅವರು ತುಂಬಾಮುಂಚಿತವಾಗಿಯೇ ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಚರ್ಚೆ ಮಾಡಬೇಕಿತ್ತು. ಅವರು ಶಿವಮೊಗ್ಗಕ್ಕೆ ಸೀಮಿತವಾಗಿ ಪ್ರಯತ್ನ ಮಾಡಿದರು. ರಾಜ್ಯದ ಕೋ‌ರ್ ಕಮಿಟಿ ಗಮನಕ್ಕೆ ತರಲೇ ಇಲ್ಲ, ಹಾವೇರಿ ಕ್ಷೇತ್ರದಲ್ಲೇ ಓಡಾಡಿದ ಮೇಲೆ ಈಶ್ವರಪ್ಪ ಅವರು ಈಗ ಶಿವಮೊಗ್ಗದಿಂದ ಯಾಕೆ ಸ್ಪರ್ಧಿಸಬೇಕು? ಹಾವೇರಿಯಿಂದಲೇ ಸ್ಪರ್ಧಿಸಬೇಕಿತ್ತು. ನೋಡೋಣ. ಇನ್ನೂ ನಾಮಪತ್ರ ವಾಪಸಾತಿಗೆ ಸಮಯವಿದೆ. ಮ್ಯಾಜಿಕ್ ನಡೆಯುವ ವಿಶ್ವಾಸವಿದೆ.

• ಜೆಡಿಎಸ್ ಜತೆಗಿನ ಮೈತ್ರಿ ಸುಗಮವಾಗಿ ಸಾಗಿದೆಯೇ? ಸಮನ್ವಯತೆ ಸಾಧ್ಯವಾಗಿದೆಯೇ?

ಮೈತ್ರಿ ಸುಗಮವಾಗಿಯೇ ಸಾಗಿದೆ. ಯಾವುದೇ ತೊಂದರೆ ಯಿಲ್ಲ. ದೇವೇಗೌಡರ ಬಲ ಸಿಕ್ಕಿದೆ ನಮಗೆ. ಎಲ್ಲೇ ಕರೆದರೂ ಬಂದು ಪ್ರಚಾರ ಕೈಗೊಳ್ಳುವೆ ಎಂಬ ಮಾತನ್ನು ದೇವೇಗೌಡರು ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಂಬಂಧ ಅಣ್ಣ-ತಮ್ಮಂದಿರ ರೀತಿಯಿದೆ. ಸಮನ್ವಯತೆ ಮೂಡಿದೆ.

• ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯತೆ ಮೂಡಿದರೂ ಕೆಳಹಂತದಲ್ಲಿ ಆಗಬೇಕಲ್ಲ?

ನೂರಕ್ಕೆ ನೂರರಷ್ಟು ಕೆಳಹಂತದಲ್ಲಿ ಸಮನ್ವಯತೆ ಸಾಧ್ಯವಾಗಿದೆ. ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ಜೆಡಿಎಸ್ ಮುಖಂಡರು ಕಾರ್ಯಕರ್ತರು ಕುಳಿತುಕೊಳ್ಳುತ್ತಿದ್ದಾರೆ. ಬಂದು

• ಜೆಡಿಎಸ್ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಲಾಭವಾಗುತ್ತದೆಯೇ?
ಖಂಡಿತ ಲಾಭ ಆಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಶೇ.40ರಷ್ಟು ಜೆಡಿಎಸ್ ಮತ ಗಳಿಸುತ್ತಿತ್ತು. ಇನ್ನುಳಿದ ಶೇ.60ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಬರುತ್ತಿತ್ತು. ಈಗ ಜೆಡಿಎಸ್ ಜತೆ ಕೈಜೋಡಿಸಿರುವುದರಿಂದ ಮತ್ತು ಮೋದಿ ಅಲೆಯಿರುವುದರಿಂದ ಶೇ.80ರಷ್ಟು ಮತಗಳ ಬೆಂಬಲ ನಮಗೆ ಸಿಗಲಿದೆ. ಮೈತ್ರಿಯಿಂದ ಒಳ್ಳೆಯದಾಗಲಿದೆ.

• ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಗಟ್ಟಿಯಾದ ನೆಲೆ ರೂಪಿಸಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ?

ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತ ಗಳಿಕೆ ಪ್ರಮಾಣ ಹೆಚ್ಚಿರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಕಡಮೆಯಾಗುತ್ತದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇನ್ನಷ್ಟು ಕುಸಿತ ಕಂಡು ಬರುತ್ತದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಲಿದೆ.

• ನಿಮಗೆ ಮತ್ತು ಡಾ.ಅಶ್ವತ್ಥನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೂ ಒಕ್ಕಲಿಗ ಸಮುದಾಯದ ಒಲವು ಗಳಿಸುವಲ್ಲಿ ವಿಫಲರಾದಿರಲ್ಲವೇ?

ಇದುವರೆಗೂಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಲಿಂಗಾಯತ ಸಮುದಾಯಕ್ಕೆ ಸಿಕ್ಕಿದೆ. ನಡುವೆ ಒಂಬತ್ತು ತಿಂಗಳ ಕಾಲ ಡಿ.ವಿ.ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಅದು ಕೇರ್‌ಟೇಕರ್ ರೀತಿ ಇತ್ತು. ಒಕ್ಕಲಿಗರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ, ನಾಯಕನಾಗಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಆನಿಸತೊಡಗಿರಬಹುದು.

• ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವಂತೆ ಕಳೆದ ವರ್ಷ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದರೂ ಅದರಲ್ಲಿ ಯಶಸ್ಸು ಕಾಣದೇ ಇದ್ದುದರಿಂದ ಈಗ ಜೆಡಿಎಸ್ ಜತೆ ಕೈಜೋಡಿಸುವ ನಿರ್ಧಾರ ಕೈಗೊಂಡರಂತೆ?

ಆ ರೀತಿ ಇಲ್ಲ, ಅಮಿತ್ ಶಾ ಅವರ ಸೂಚನೆಯಂತೆ ನಾವು ಪ್ರಯತ್ನ ಮಾಡಿದಬಳಿಕ ಕಳೆದ ವಿಧಾನಸಭಾಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಶೇ.5ರಷ್ಟು ಮತ ಗಳಿಕೆ ಪ್ರಮಾಣ ಹೆಚ್ಚಾಯಿತು. ಸ್ಥಾನ ಗೆಲ್ಲದಿರಬಹುದು. ಆದರೆ, ಮತ ಗಳಿಕೆ ಹೆಚ್ಚಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿನ ಮತ ಗಳಿಕೆ ಶೇ.25ರಷ್ಟು ಹೆಚ್ಚಲಿದೆ.

• ಪ್ರಸಕ್ತ ಲೋಕಸಭಾ ಚುನಾವಣೆ ಬಳಿಕವೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯುತ್ತಾ?

ಖಂಡಿತ ಮುಂದುವರೆಯುತ್ತದೆ. ಈ ಚುನಾವಣೆಯಲ್ಲಿ ಉತ್ತಮ ಸ್ಥಾನ ಗಳಿಸಿದಲ್ಲಿ ಸಹಜವಾಗಿಯೇ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಮತ್ತು ಜನರಿಗೆ ಮೈತ್ರಿ ಬಗ್ಗೆ ನಂಬಿಕೆ ಮೂಡುತ್ತದೆ. ಇಡೀ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕಾರ್ಯಕರ್ತರು ಹೊಡೆದಾಡುವ ಪರಿಸ್ಥಿತಿ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಇದೆ.

• ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಮೈತ್ರಿ ಕೂಟದ ಒಕ್ಕಲಿಗ ನಾಯಕತ್ವ ವಹಿಸಿಕೊಂಡಂತೆ

ನನಗೆ ಕಂಡಂತೆ ಆ ರೀತಿ ನಡೆದಿಲ್ಲ. ಅವರು ಬಿಜೆಪಿ ಜತೆ ಬರುತ್ತಿದ್ದಾರೆ ಅಷ್ಟೇ.

• ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾ‌ರ್ ನಡುವೆ ಪೈಪೋಟಿ ನಡೆಯುತ್ತಿರುವ ನಡುವೆ ಅಶೋಕ್ ಕಳೆದು ಹೋಗಿದ್ದಾರಾ?

ನಾನು 10 ವರ್ಷದ ಹಿಂದೆಯೇ ಡಿಸಿಎಂ ಆಗಿದ್ದೆ; ಡಿಕೆಶಿ ಜ್ಯೂನಿಯರ್ ಈಗ ಡಿಸಿಎಂ ಆಗಿದ್ದಾರೆ: ಆರ್. ಅಶೋಕ್ ಟಾಂಗ್

ಹಾಗೇನೂ ಇಲ್ಲ. ನನ್ನ ಅಸ್ತಿತ್ವವನ್ನು ಒಕ್ಕಲಿಗರಲ್ಲಿ ಹಾಗೂ ಬಿಜೆಪಿಯಲ್ಲಿ ನಿರಂತರವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಕುಮಾರಸ್ವಾಮಿ ಮತ್ತು ಶಿವಕುಮಾರ್‌ನಡುವೆ ವೈಯಕ್ತಿಕ ಜಗಳ ನಡೆಯುತ್ತಿದೆ. ಅದು ಒಕ್ಕಲಿಗ ನಾಯಕತ್ವಕ್ಕಾಗಿ ಅಲ್ಲ. ನಿನ್ನ ಆಸ್ತಿ ಎಷ್ಟು, ನನ್ನ ಆಸ್ತಿ ಎಷ್ಟು, ನೀನು ಎಷ್ಟು ಭ್ರಷ್ಟಾಚಾರ ಮಾಡಿದ್ದೀಯ, ನಾನು ಎಷ್ಟು ಭ್ರಷ್ಟಾಚಾರ ಮಾಡಿದ್ದೇನೆ. ಎಂಬ ಜಿದ್ದಾಜಿದ್ದಿ ನಡೆಯುತ್ತಿದೆ. ಹೀಗಾಗಿ, ನಾನು ಈ ಟ್ಯಾಕ್ ನಿಂದ ದೂರ ಇದ್ದೇನೆ. ಇದ್ದೇನೆ. ನನ್ನ ಬಗ್ಗೆ ಹಾಗೆ ಹೇಳುವಂಥದ್ದು ಏನೂ ಇಲ್ಲ. ನಾವು ಜಾತಿ ಮೊದಲು ಎನ್ನುವುದಿಲ್ಲ, ದೇಶ ಮೊದಲು. ನಂತರ ಧರ್ಮ. 

• ಶೋಭಾ ಕರಂದ್ಲಾಜೆ ಬೆಂಗಳೂರಿಗೆ ಬರದಂತೆ ತಡೆಯುವುದಕ್ಕಾಗಿಯೇ ನೀವು ಸದಾನಂದಗೌಡರನ್ನು ಕಣಕ್ಕಿಳಿಸಲು ಪ್ರಯತ್ನಿಸಿದಿರಾ?

ಶೋಭಾ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಎಂದುಕೊಂಡಿದ್ದೆವು. ಹೀಗಾಗಿ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದ ಸದಾನಂದಗೌಡರನ್ನು ಮತ್ತೆ ಕಣಕ್ಕಿಳಿಸಲು ನಾನೂ ಸೇರಿದಂತೆ ಕ್ಷೇತ್ರದ ಮುಖಂಡರು ಪ್ರಯತ್ನ ಮಾಡಿದೆವು. ಆದರೆ, ವರಿಷ್ಠರು ಈಗ ತೀರ್ಮಾನ ಕೈಗೊಂಡಿದ್ದಾರೆ. ಶೋಭಾ ಕರಂದ್ಲಾಜೆ ಸೇರಿದಂತೆ ಬೆಂಗಳೂರಿನ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳೂ ಗೆಲ್ಲಬೇಕು. ಆ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇವೆ. 

Follow Us:
Download App:
  • android
  • ios