Asianet Suvarna News Asianet Suvarna News

ಗಲ್ಲು ಶಿಕ್ಷೆ ತಪ್ಪಿಸಲು ಮುಸ್ಲಿಂ ಯುವಕನಿಗೆ 34 ಕೋಟಿ ರೂ ಕೊಟ್ಟ ಕೇರಳಿಗರು, ಮಾನವೀಯತೆಗೊಂದು ಸಲಾಂ!

ಕಳೆದ 18 ವರ್ಷದಿಂದ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೇರಳದ ಅಬ್ದುಲ್‌ಗೆ ಬಿಡುಗಡೆ ಭಾಗ್ಯ ಸಿಗುತ್ತಿದೆ. ಇದಕ್ಕೆ ಕಾರಣ ಕೇರಳಿಗರ ಮಾನವೀಯತೆ. ಬರೋಬ್ಬರಿ 34 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ವಿಶ್ವಾದ್ಯಂತ ಇರುವ ಕೇರಳಿಗರು ಸಂಗ್ರಹಿಸಿದ್ದಾರೆ. ಗಲ್ಲು ಕುಣಿಕೆಯಿಂದ ಅಬ್ದುಲ್ ರಕ್ಷಿಸಿದ ಮಲೆಯಾಳಿಗಳ ರೋಚಕ ಘಟನೆ ಇಲ್ಲಿದೆ.
 

Keralites massive crowdfund raised rs 34 crore to save Abdul Rahim on death row in Saudi Arabia ckm
Author
First Published Apr 13, 2024, 5:30 PM IST

ಶೋಭಾ ಎಂ.ಸಿ

ಆಯುಷ್ಯ ಗಟ್ಟಿ ಇದ್ದರೆ ಬೆಂಕಿಗೆ ಬಿದ್ದರೂ ಬದುಕ್ತಾರೆ ಅನ್ನೋ ಮಾತಿದೆ. ಇದು ಕೇರಳದ ಮುಸ್ಲಿಂ ಯುವಕನ ಬದುಕಲ್ಲಿ ನಿಜವಾಗಿದೆ. 18 ವರ್ಷದಿಂದ ಜೈಲಿನಲ್ಲಿದ್ದ, ಇನ್ನೇನು ಕೆಲವೇ ದಿನಗಳಲ್ಲಿ ಗಲ್ಲಿಗೇರಬೇಕಿದ್ದ ಈತನ ಆಯುಷ್ಯವನ್ನು  ಅಕ್ಷರಶಃ ಗಟ್ಟಿ ಮಾಡಿದ್ದು ಕೇರಳದ ಜನತೆ. ತಮ್ಮ ನೆಲದ ಯುವಕನನ್ನು ಸಾವಿನಿಂದ ಬಚಾವ್​ ಮಾಡಲು, ವಿಶ್ವಾದ್ಯಂತ ನೆಲೆಸಿರುವ ಮಲಯಾಳಿಗಳು ಮರುಗಿ ಒಂದಾದ ಕಥೆ ಇದು. ಆ ಯುವಕನನ್ನು ಸಾವಿನ ಕುಣಿಕೆಯಿಂದ ಕಾಪಾಡಲು ಕೇರಳಿಗರು ಸಂಗ್ರಹಿಸಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 34 ಕೋಟಿ ರೂ. ಅಚ್ಚರಿ ಅನ್ನಿಸಿದ್ರು ಸತ್ಯ ಕಥೆ. 
ನಡೆದಿದ್ದು ಇಷ್ಟು. 

ಕೇರಳದ ಕೋಳಿಕ್ಕೋಡ್​ನಲ್ಲಿ ಆಟೋ ಚಲಾಯಿಸುತ್ತಿದ್ದ ಅಬ್ದುಲ್ ರಹೀಂ, ಕೆಲಸ ಅರಸಿ ಹೋಗಿದ್ದು ಸೌದಿ ಅರೇಬಿಯಾಗೆ. 15 ವರ್ಷದ ಮಾನಸಿಕ ಅಸ್ವಸ್ಥ ಮಗನನ್ನು  ಆರೈಕೆ ಮಾಡುವ ಕೆಲಸಕ್ಕೆ ಸೌದಿಯ ಕುಟುಂಬವೊಂದು ಅಬ್ದುಲ್​ನನ್ನು ನೇಮಿಸಿಕೊಂಡಿತ್ತು. ಒಂದು ದಿನ ಅಬ್ದುಲ್, ​ಹುಡುಗನನ್ನು ಕಾರ್​ನಲ್ಲಿ ಕರೆದೊಯ್ಯುತ್ತಿದ್ದ  ವೇಳೆ ನಡೆದ ಗಲಾಟೆಯಲ್ಲಿ ಅಸ್ವಸ್ಥಗೊಂಡ ಬಾಲಕ ಕಾರಿನಲ್ಲೇ ಮೃತಪಟ್ಟಿದ್ದ. ಜೈಲು ಸೇರಿದ್ದ ಅಬ್ದುಲ್  ಮರಣದಂಡನೆಗೆ ಶಿಕ್ಷೆಗೆ ಗುರಿಯಾದ. ಎಷ್ಟೇ ಮೇಲ್ಮನವಿ ಸಲ್ಲಿಸಿದ್ರೂ, ಸೌದಿ ಅರೇಬಿಯಾ ಕೋರ್ಟ್​ ಗಲ್ಲು ಶಿಕ್ಷೆ ಕಡಿತಗೊಳಿಸಲಿಲ್ಲ. ಮೃತ ಬಾಲಕನ ಕುಟುಂಬವೂ ಕ್ಷಮಾದಾನ ನೀಡಲು ಬಿಲ್​ಕುಲ್ ಒಪ್ಪದ ಕಾರಣ, ಸೌದಿ ಅರೇಬಿಯಾ ಕೋರ್ಟ್​ 2018ರಲ್ಲಿ ಗಲ್ಲು ಶಿಕ್ಷೆ ಎತ್ತಿ ಹಿಡಿಯಿತು. ನೇಣಿಗೆ ಕುಣಿಕೆ ಏರಬೆಕಿದ್ದ ಅಬ್ದುಲ್​ ರಹೀಂ ನನ್ನು ಕಾಪಾಡಲು ಆತನ ಕುಟುಂಬ, ಸ್ನೇಹಿತರು ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಆದ್ರೆ, ಒಂದು ದಿನ ಅಬ್ದುಲ್ ರಹೀಂ, ಅದೃಷ್ಟ ಖುಲಾಯಿಸಿತ್ತು. ಅಬ್ದುಲ್​ ಬದುಕುವ ಸಣ್ಣ ಆಶಾಕಿರಣ ಗೋಚರಿಸಿತೊಡಗಿತ್ತು. ಅಬ್ದುಲ್​ ಕುಟುಂಬ, ಸ್ನೇಹಿತರ ಸಂಧಾನದ ಫಲವಾಗಿ, ಮೃತ ಬಾಲಕನ ಕುಟುಂಬ ಅಬ್ದುಲ್​​​ಗೆ ಕ್ಷಮಾದಾನ ನೀಡಲು ಒಪ್ಪಿತು. ಆದರೆ, ಕ್ಷಮಾದಾನಕ್ಕೆ ಪರಿಹಾರ ಮೊತ್ತವಾಗಿ ಕೇಳಿದ್ದು ‘ಬ್ಲಡ್​ ಮನಿ’. 15 ಮಿಲಿಯನ್​ ಸೌದಿ ರಿಯಾನ್​. ಅಂದಾಜು 33. 24 ಕೋಟಿ ರೂಪಾಯಿ.  2023 ಅಕ್ಟೋಬರ್ 16 ರಂದು ಅಬ್ದುಲ್​ ಮತ್ತು ಮೃತ ಬಾಲಕನ ಕುಟುಂಬಸ್ಥರ ನಡುವೆ ಒಪ್ಪಂದವಾಯ್ತು. ಅದರಂತೆ, ಕೇವಲ 6 ತಿಂಗಳಲ್ಲಿ ಪರಿಹಾರ ಮೊತ್ತವಾಗಿ 34 ಕೋಟಿ ರೂ. ನೀಡಬೇಕಿತ್ತು. ತಕ್ಷಣವೇ ಕಾರ್ಯಪ್ರವೃತರಾದ ಅಬ್ದುಲ್​ ರಹೀಂ ಕುಟುಂಬಸ್ಥರು, ಸ್ನೇಹಿತರು ಕ್ರಿಯಾ ಸಮಿತಿ ರಚಿಸಿಕೊಂಡು, ಸಮುದಾಯ ಹಣ ಸಂಗ್ರಹಕ್ಕೆ ಮುಂದಾದ್ರು. ಎಷ್ಟೇ ಪ್ರಯತ್ನಿಸಿದ್ರೂ ದೇಣಿಗೆ 5 ಕೋಟಿ ರೂ. ದಾಟಲಿಲ್ಲ. ಒಂದೆಡೆ ಡೆಡ್​ಲೈನ್​ ಮೀರುವ ಆತಂಕ, ಅಬ್ದುಲ್ ಗಲ್ಲಿಗೇರುವ ಭಯ.. 

ಮಕ್ಕಳ ಓದಿಗೆ ದುಡ್ಡಿಲ್ಲದೇ ಹೆತ್ತವಳ ಪರದಾಟ: ಪರಿಹಾರದ ಹಣಕ್ಕಾಗಿ ಬಸ್‌ಗೆ ಸಿಕ್ಕಿ ಜೀವ ಬಿಟ್ಟ ತಾಯಿ..!!

ಅದರ ಮಧ್ಯೆ ನಡೆದಿದ್ದು ಅಕ್ಷರಶಃ ಪವಾಡದಂಥ ಘಟನೆಗಳು. ಸೋಷಿಯಲ್ ಮೀಡಿಯಾ ಮೂಲಕ ಹಣ ಸಂಗ್ರಹಕ್ಕಿಳಿದ ಕ್ರಿಯಾ ಸಮಿತಿ, ‘ಸೇವ್ ಅಬ್ದುಲ್’​ ಅಭಿಯಾನ ಆರಂಭಿಸಿದವು. ಕೊನೆಯ 4 ದಿನಗಳಲ್ಲಿ ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ 75ಕ್ಕೂ ಹೆಚ್ಚು ಸಂಸ್ಥೆಗಳು, ಕೇರಳ ಮೂಲದ ಉದ್ಯಮಿ ಬಾಬಿ ಚೆಮ್ಮನ್ನೂರ್, ಕೇರಳ ರಾಜ್ಯದ ವಿವಿಧ ರಾಜಕೀಯ ಸಂಘಟನೆಗಳು, ಜನರ ಸಾಮಾನ್ಯರು ಧಾರಾಳವಾಗಿ ಹಣ ನೀಡ ತೊಡಗಿದ್ರು. 

ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದ್ದ ಬಾಬಿ ಚೆಮ್ಮನೂರು, ಕೆಲವೇ ದಿನಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟ ಆಯೋಜಿಸಿದರು. ಇದರಿಂದ ಬಂದ ಸಂಪೂರ್ಣ ಹಣವನ್ನು ರಹೀಮ್‌ ಬಿಡುಗಡೆಗೆ  ದೇಣಿಗೆ ನೀಡಿದ್ದರು. ಜಗತ್ತಿನಾದ್ಯಂತ ಇರೋ ಮಲಯಾಳಿಗಳು, ಅಬ್ದುಲ್ ರಹೀಮ್​ ಕಾಪಾಡಲು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ರು. ಮಲಯಾಳಿಗಳ ಸಂಘಟಿತ ಪ್ರಯತ್ನದಿಂದಾಗಿ ಐದೇ ದಿನದಲ್ಲಿ 34 ಕೋಟಿ ರೂ. ಸಂಗ್ರಹವಾಯ್ತು. ಕೊನೆಗೂ ಅಬ್ದುಲ್ ರಹೀಂ ಗಲ್ಲು ಶಿಕ್ಷೆಯಿಂದ ಪಾರಾಗಿದ್ದ, 18 ವರ್ಷದ ಬಳಿಕ ತಾಯ್ನೆಲ ಸೇರಿಕೊಳ್ಳಲಿದ್ದಾನೆ. ಸಾವಿನ ಕುಣಿಕೆಯಿಂದ ಮಗ ಪಾರಾಗಿದ್ದು ಹೆತ್ತವರ ಸಂತಸ ಇಮ್ಮಡಿಗೊಳಿಸಿದ್ರೆ, ಮಲಯಾಳಿಗಳ ಒಗ್ಗಟ್ಟು, ಮಾನವೀಯತೆಯ ಗುಣಕ್ಕೆ ಜಗತ್ತೇ ಶಹಬ್ಬಾಶ್ ಎನ್ನುತ್ತಿದೆ..

ಆ ದಿಟ್ಟ ತಾಯಿ ಹೋರಾಟಕ್ಕೆ ಸಿಗದ ಜಯ, ಕೈಗೆ ಬಂದ ಮಗನ ಕಿತ್ಕೊಂಡ ದೇವರು!
 

Follow Us:
Download App:
  • android
  • ios