Asianet Suvarna News Asianet Suvarna News

ಮಾಡಬಾರದ್ದನ್ನು ಮಾಡಿ ಜಾತಿ ಹೆಸರಲ್ಲಿ ರಕ್ಷಣೆ ಪಡೆವುದು ಹೇಯ: ಎಚ್‌ಡಿಕೆ ಹೇಳಿಕೆಗೆ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

ಮಾಡಬಾರದ್ದನ್ನು ಮಾಡಿ ಜಾತಿ, ಧರ್ಮ ಹಾಗೂ ಮನೆಯ ಹೆಸರಿನಲ್ಲಿ ರಕ್ಷಣೆ ಪಡೆಯುವುದು ಇನ್ನೂ ಹೀನಾಯ' ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Prajwal Revanna Case Minister Krishna Byre Gowda Slams On HD Kumaraswamy gvd
Author
First Published May 10, 2024, 8:03 AM IST

ಬೆಂಗಳೂರು (ಮೇ.10): 'ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರು ಎಂಬ ಕಾರಣಕ್ಕೆ ಪ್ರಪಂಚದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಎಸಗಿದವರನ್ನು ಸಮರ್ಥಿಸಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ. ಮಾಡಬಾರದ್ದನ್ನು ಮಾಡಿ ಜಾತಿ, ಧರ್ಮ ಹಾಗೂ ಮನೆಯ ಹೆಸರಿನಲ್ಲಿ ರಕ್ಷಣೆ ಪಡೆಯುವುದು ಇನ್ನೂ ಹೀನಾಯ' ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪ್ರಪಂಚದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಕುಮಾರಸ್ವಾಮಿ ಅವರು ರೇವಣ್ಣ ಅವರನ್ನು ವಿಚಾರಣೆ ಮಾಡಬಾರದಿತ್ತು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. 

ರೇವಣ್ಣ, ಪ್ರಜ್ವಲ್‌ರನ್ನು ವಿಚಾರಿಸದೆ ದಾರಿಯಲ್ಲಿರುವ ಸಂತ್ರಸ್ತರನ್ನು ವಿಚಾರಣೆ ಮಾಡಬೇಕಾ ಎಂದು ಕಿಡಿಕಾರಿದ್ದಾರೆ. ಇವರು ಮಾಡಿರುವ ಕೃತ್ಯ ಒಕ್ಕಲಿಗ ಸಮಾಜಕ್ಕೆ ಕಳಂಕ. ಒಕ್ಕಲಿಗ ಸಮಾಜವನ್ನು ಅಡ್ಡ ಇಟ್ಟು ಕೊಂಡು ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಇಂತಹ ಘನಘೋರ ಹೀನಾಯ ಪ್ರಕರಣದಲ್ಲಿ ಅಡ್ಡಸ್ಟ್‌ಮೆಂಟ್ ಆದರೆ ಮಾನವೀಯತೆಗೆ ಬೆಲೆ ಇರಲ್ಲ, ಹೀಗಾಗಿ ಗೌರವವಾಗಿ ತನಿಖಾ ಸಂಸ್ಥೆ ಜತೆ ಸಹಕರಿಸಲಿ ಎಂದು ಆಗ್ರಹಿಸಿದರು. ಪ್ರಕರಣದಲ್ಲಿ ಆರೋಪಿ ಯಾರ ಮನೆಯವರು ಎಂಬುದು ಮುಖ್ಯವಲ್ಲ. ಇದರಲ್ಲಿ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿದು ಯೂಸ್‌ ಆಂಡ್‌ ಥ್ರೋ ಪಾಲಿಟಿಕ್ಸ್: ಡಿಎಸ್‌ ಜೊತೆ ಬಿಜೆಪಿ ಯೂಸ್‌ ಆಂಡ್‌ ಥ್ರೋ ಪಾಲಿಟಿಕ್ಸ್‌ ಮಾಡಿದೆ ಎನ್ನುವುದಕ್ಕೆ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು. ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ನಡೆದ ವಿವಿಧ ರೈತರು, ಸಂಘಟನೆಗಳೊಂದಿಗೆ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಮತ ಬೇಕಾದಾಗ ವೇದಿಕೆ ಮೇಲೆ ಒಬ್ಬರನ್ನೊಬ್ಬರು ಆಲಿಂಗನ ಮಾಡಿಕೊಂಡ ಬಿಜೆಪಿ ನಾಯಕರು ಪ್ರಜ್ವಲ್‌ ರೇವಣ್ಣಗೆ ಸೇರಿದ ಮತಗಳನ್ನು ಮೋದಿಗೆ ಸೇರಿದ್ದು ಎಂದು ಪ್ರಚಾರ ಮಾಡಿ, ಎಲ್ಲೆಲ್ಲಿ ಜೆಡಿಎಸ್ ಮತ ಬೇಕಿತ್ತೋ ಅಲ್ಲಲ್ಲಿ ಬಿಜೆಪಿಗೆ ಹಾಕಿಸಿಕೊಂಡರು. ಪ್ರಜ್ವಲ್‌ ರೇವಣ್ಣ ಸೋಲಬೇಕು ಎನ್ನುವ ಉದ್ದೇಶದಿಂದಲೇ ಕೊನೆಕ್ಷಣ ವಿಡಿಯೋ ಬಿಡುಗಡೆ ಮಾಡಿದರು. ಇದಕ್ಕೆಲ್ಲ ಸೂತ್ರದಾರರು ಬಿಜೆಪಿ ನಾಯಕರಾಗಿದ್ದಾರೆ ಎಂದು ಆರೋಪಿಸಿದರು.

ಪೆನ್‌ಡ್ರೈವ್‌ ಹಿನ್ನೆಲೆ ಏನೆಂದು ನಾವು ಬಿಚ್ಚಿಡಬೇಕಾ?: ಡಿ.ಕೆ.ಶಿವಕುಮಾರ್

ಚುನಾವಣೆಗೆ ಎರಡು ದಿನಗಳ ಮುಂಚೆ ವಿಡಿಯೋ ಬಿಡುಗಡೆ ಮಾಡಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ವೋಟ್‌ ಹಾಕಿಸಿಕೊಂಡು ಇದೀಗ ಜೆಡಿಎಸ್‌ಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ಜೈಲಿಗೆ ಹಾಕಿ, ಕೋರ್ಟ್‌ಗೆ ಹಾಕಿ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಜೆಡಿಎಸ್‌ಗೆ ವಿಚ್ಛೇದನ ನೀಡಲು ಪೀಠಿಕೆ ಹಾಕಿ ಅವರಿಗೂ ಚೆಂಬನ್ನು ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು. ಡಿಸೆಂಬರ್‌ನಲ್ಲಿಯೇ ಬಿಜೆಪಿ ಮುಖಂಡರೇ ಪ್ರಜ್ವಲ್‌ ಕುರಿತು ಪತ್ರ ಬರೆದಿದ್ದರು. ವೋಟು ಹೋಗುತ್ತವೆ ಎನ್ನುವ ಕಾರಣಕ್ಕಾಗಿ ಇಷ್ಟು ದಿನ ಸುಮ್ಮನಿದ್ದರು. ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಳಸಿಕೊಂಡರು. ಇದು ಬಿಜೆಪಿಯ ಯೂಸ್‌ ಆಂಡ್‌ ಥ್ರೋ ರಾಜಕೀಯವಾಗಿದೆ ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios