ಸುವರ್ಣನ್ಯೂಸ್'ನಲ್ಲಿ ಜಗ್ಗಿ ವಾಸುದೇವ್ ಸಂದರ್ಶನ; ಮೋದಿ, ಯೋಗ, ಸಾಧನೆ ಬಗ್ಗೆ ಗುರುವಿನ ಅಮೂಲ್ಯ ಸಂದೇಶಗಳು
news
By Suvarna Web Desk | 03:14 PM Monday, 13 March 2017

ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರದ್ದು ದೇಶ ವಿದೇಶದಲ್ಲಿ ಖ್ಯಾತಿವೆತ್ತ ಹೆಸರು. ಇವರ ಮಾತುಗಳಿಗೆ ಅಪಾರ ಜನಮನ್ನಣೆ ಇದೆ. ಜಗ್ಗಿ ವಾಸುದೇವ್ ಅವರೊಂದಿಗೆ ಸುವರ್ಣನ್ಯೂಸ್'ನ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ....

ಭಾಗ 1:

ಈಶ್ವರ ಎಲ್ಲೇ ಇದ್ದರೂ, ಯೋಗಿಯಂತೆಯೇ ಕುಳಿತಿರುತ್ತಾನೆ. ಹೀಗಾಗಿ ಇವನು ಆದಿಯೋಗಿ. ಯೋಗಿ ಎಂದರೆ, ಬ್ರಹ್ಮಾಂಡವನ್ನು ಅರ್ಥ ಮಾಡಿಕೊಂಡವನು. ಶಿವ ಬ್ರಹ್ಮಾಂಡವನ್ನು ಅನುಭವಿಸಿದವನು. ನಾವು ಬ್ರಹ್ಮಾಂಡವನ್ನು ಅರ್ಥ ಮಾಡಿಕೊಂಡವರು. ಆದರೆ, ಆದಿಯೋಗಿ ಬ್ರಹ್ಮಾಂಡವನ್ನು ತನ್ನೊಳಗೇ ಅನುಭವಿಸಿದವನು. ಹೀಗಾಗಿಯೇ ಶಿವ ಆದಿಯೋಗಿ.

ನಿಮ್ಮ ಸಾಧನೆಯಿಂದ ನಿಮ್ಮ ಗುರುತು:
ಬ್ರಹ್ಮಾಂಡದಲ್ಲಿ ನಾವು ಯಾವುದನ್ನೂ ಸೃಷ್ಟಿಸಿಲ್ಲ. ಆದರೆ, ಅವುಗಳಿಂದಾಗಿ ನಾವಿದ್ದೇವೆ. ನಾವೀಗ ಕೇವಲ ಸೂರ್ಯನನ್ನು ನೋಡುತ್ತಿದ್ದೇವೆ. ರಾತ್ರಿ ಕೋಟ್ಯಂತರ ನಕ್ಷತ್ರಗಳನ್ನು ನೋಡುತ್ತೇವೆ. ಇವುಗಳ ನಡುವೆ ಶೂನ್ಯವಿದೆ. ಆ ಶೂನ್ಯವೇ ಶಿವ.

ಈಗ ನಿಮ್ಮನ್ನು ಪತ್ರಕರ್ತ ಎನ್ನುತ್ತೇವೆ. ಏಕೆಂದರೆ, ಅದರಲ್ಲಿ ನೀವು ಅನುಭವಿ. ನೀವು ಯಾವ ಕ್ಷೇತ್ರದಲ್ಲಿ ಅನುಭವ ಹೊಂದಿದ್ದೀರೋ, ವೈದ್ಯರಾದರೆ ವೈದ್ಯ, ಎಂಜಿನಿಯರ್ ಆದರೆ ಎಂಜಿನಿಯರ್. ನಿಮ್ಮ ಸಾಧನೆಯಿಂದ ನಿಮ್ಮನ್ನು ಗುರುತಿಸುತ್ತೇವೆ. ನೀವು ಸಮಾಜಕ್ಕೆ ಏನು ಕೊಟ್ಟಿದ್ದೀರಿ ಎಂಬುದರ ಮೇಲೆ ನೀವು ಜಗತ್ತಿನಲ್ಲಿ ನೆನಪಿನಲ್ಲಿರುತ್ತೀರಿ. ಈಗ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನೆನಪಿರುವುದು ಕೆಲವೇ ಮಂದಿ. ಆದಿಯೋಗಿ ಕೂಡಾ ಹಾಗೆಯೇ.

ಆದಿಯೋಗಿಯ ಸಂದೇಶವೇನು?
ಮುಕ್ತಿಗಾಗಿ 112 ಮಾರ್ಗಗಳನ್ನು ತೋರಿಸಿದ್ದಾನೆ. ಹೀಗಾಗಿಯೇ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನಿರ್ಮಿಸಿದ್ದೇವೆ. ನೀವು ಕುರ್ಚಿಯನ್ನು ನೋಡಿದರೆ, ಅದರ ಮೇಲೆ ಕುಳಿತುಕೊಳ್ಳಬೇಕೋ..ಬೇಡವೋ ಗೊತ್ತಾಗುತ್ತೆ. ಹಾಗೆಯೇ ನಮ್ಮ ದೇಹ ಹೇಗಿರುತ್ತೆ ಎನ್ನುವುದರ ಮೇಲೆ ಮುಂದೆ ಹೇಗಿರುತ್ತೇವೆ ಎಂಬುದು ಗೊತ್ತಾಗುತ್ತೆ. ಇದು ಜ್ಯೋತಿಷ್ಯವಲ್ಲ. ನೀವು ಕಾರ್ ಸ್ಟಾರ್ಟ್ ಮಾಡಿದಾಗ ಕೆಟ್ಟ ಶಬ್ಧ ಬಂದರೆ, ಯಾವುದೋ ಜ್ಯಾಮಿಟ್ರಿ ಸರಿಯಿಲ್ಲ ಎಂದರ್ಥ. ಅದನ್ನು ಸರಿಯಾಗಿ ಕೂಡಿಸಿದಾಗ ಕಾರ್ ಸರಿ ಹೋಗುತ್ತೆ. ಎಲ್ಲವೂ ಹಾಗೆ. ಆದಿಯೋಗಿಯ ಸಂದೇಶವೇ ಇದು.

ಯಾಕೆ ಬೇಕು ಪ್ರಚಾರ?
(ಬರಗಾಲದ ಸಂದರ್ಭದಲ್ಲಿ ಇಂಥದ್ದೊಂದು ದೊಡ್ಡ ವಿಗ್ರಹ ಸ್ಥಾಪನೆ ಆಗಬೇಕಿತ್ತಾ..? ಎಂಬ ಪ್ರಶ್ನೆ ಕೇಳಿದಾಗ...)
ಇಂಥ ಪ್ರಶ್ನೆ ಕೇಳುವವರು ಹೊಟ್ಟೆ ತುಂಬಾ ಉಣ್ಣುತ್ತಾರೆ. ನಾವು ಮಕ್ಕಳಿಗಾಗಿ, ತಮಿಳುನಾಡಿನ ಬಡವರಿಗಾಗಿ, ಕಾಡು ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಏನನ್ನೂ ಮಾಡದ ಇಂಥವರೇ ಈ ಪ್ರಶ್ನೆ ಕೇಳುವುದು. ಆದರೆ, ಅವರಿಗೆ ಕೇಳುವ ಹಕ್ಕಿದೆ. ಕೇಳಿದ್ದಾರೆ. ನಾನು ಉತ್ತರಿಸುತ್ತೇನೆ. ನಾವೀಗ ದೇಶದಲ್ಲಿ ಉತ್ತಮ ಆರ್ಥಿಕ ಅಭಿವೃದ್ಧಿಯತ್ತ ನೋಡುತ್ತಿದ್ದೇವೆ. ಆದಿಯೋಗಿ ಇದರ ಸಂಕೇತ. ಇದು ಆದಿಯೋಗಿಯ ಪ್ರಚಾರವಲ್ಲ. ನಾವು ಬಡತನದಿಂದ ಹೊರಬಂದು ದೇಶ ಕಟ್ಟಬೇಕು. ಜನ ದೇಶವನ್ನು ಕಟ್ಟಲು ಶ್ರಮಿಸಬೇಕು. ಇದು ಅದರ ಸಂಕೇತ. ಈಶ್ವರನಿಗೆ ಇದು ಅಗತ್ಯವೂ ಇಲ್ಲ. ಇದು ಆದಿಯೋಗಿಯ ಪ್ರಚಾರವೂ ಅಲ್ಲ.                

==========

ಭಾಗ 2:

ಗುರುಗಳ ಸೃಷ್ಟಿಯಾಗಬೇಕಿದೆ:
ನೀವು ಯಾವುದೇ ಕ್ಷೇತ್ರ ತೆಗೆದುಕೊಳ್ಳಿ. ಡಾಕ್ಟರ್, ಎಂಜಿನಿಯರ್, ಪತ್ರಕರ್ತರು, ರಾಜಕಾರಣಿಗಳು.. ಎಲ್ಲದರಲ್ಲೂ ಜನ ಒಳ್ಳೆ ಕೆಲಸ ಮಾಡಿದ್ದಾರೆ. ಅದರಲ್ಲಿ ಕೆಲವರು ಅದರ ದುರುಪಯೋಗವನ್ನೂ ಮಾಡಿಕೊಂಡಿದ್ದಾರೆ. ಆದರೆ, ಗುರುಗಳ ಸಂಖ್ಯೆ ಹೆಚ್ಚಾಗಿಲ್ಲ. ಇದನ್ನು ಇನ್ನೂ ಹೆಚ್ಚಿಸಬೇಕಿದೆ. ಹೊಸ ಗುರುಗಳನ್ನು ಸೃಷ್ಟಿಸಬೇಕಿದೆ. ದೇಶಕ್ಕೆ ಹೊಸ ಹೊಸ ಇನ್ನಷ್ಟು ಗುರುಗಳ ಅಗತ್ಯವಿದೆ. ನಾನು ಅದೇ ಕೆಲಸದಲ್ಲಿದ್ದೇನೆ.

ಗುರುವಾದವನು ಬಹಳ ಕ್ರೂರಿಯಾಗಿರುತ್ತಾನೆ. ಕ್ರೌರ್ಯ, ನಮ್ಮ ಒಳಗೇ ಇರುತ್ತೆ. ನಾನೂ ಅಷ್ಟೆ. ಆ ಕ್ರೌರ್ಯದ ಮನಸ್ಥಿತಿಯಿಂದ ಜನರನ್ನು ಹೊರತರಬೇಕು. ಅದು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ. ಏಕೆಂದರೆ, ಜನ ಆಧ್ಯಾತ್ಮಿಕ ಗುರುಗಳನ್ನು ನಂಬುತ್ತಾರೆ. ಆದರೆ, ಈಗ ಆಧ್ಯಾತ್ಮಿಕ ಗುರುಗಳನ್ನು ತನಿಖೆ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ. ಇದು ಹೋಗಬೇಕು.

ಎಲ್ಲರಿಗೂ ಗುರುಗಳು ಬೇಕು. ಉದ್ಯಮಿಗಳಿಂದ ಹಿಡಿದು ಸಾಮಾನ್ಯನವರೆಗೆ ಗುರುಗಳು ಬೇಕು. ಹೀಗಾಗಿಯೇ ಇಲ್ಲಿಗೆ ಪ್ರಧಾನಿಗಳೂ ಬರುತ್ತಾರೆ. ಇಲ್ಲದಿದ್ದರೆ, ಅವರು ಇಲ್ಲಿಗೆ ಬರುತ್ತಿರಲಿಲ್ಲ. ಕೆಲವರು ಯಾವ್ಯಾವುದೋ ಉದ್ದೇಶಕ್ಕೆ ಹೇಳುತ್ತಲೇ ಇದ್ದಾರೆ.

ತೆಂಡೂಲ್ಕರ್ ಬೆಡ್'ರೂಂ ವಿಚಾರ ನಿಮಗೇಕೆ ಬೇಕು?
ನಾನು ಹೇಳುವುದಿಷ್ಟು. ನಿಮಗೆ ನಂಬಿಕೆಯಿದೆಯಾ..? ಬನ್ನಿ. ನಾನು ಏನೋ ಹೇಳುತ್ತೇನೆ. ಇಷ್ಟವಾಯಿತಾ..ಅನುಸರಿಸಿ. ಇಷ್ಟವಾಗಲಿಲ್ಲವಾ..? ಬಿಟ್ಟುಬಿಡಿ. ನಾನು ದಶಕದ ಹಿಂದೆ ಇಲ್ಲಿಗೆ ಬಂದಾಗ, ತೆಂಡೂಲ್ಕರ್ ಬಗ್ಗೆ ದೊಡ್ಡ ಚರ್ಚೆಯಾಗುತ್ತಿತ್ತು. ತೆಂಡೂಲ್ಕರ್ ನಿಮಗೆ ಗೊತ್ತು. ದೊಡ್ಡ ಕ್ರಿಕೆಟ್ ಆಟಗಾರ. ನೀವು ತೆಂಡೂಲ್ಕರ್ ಕ್ರಿಕೆಟ್​'ಗೆ ಏನು ಮಾಡಿದ ಎನ್ನುವುದನ್ನಷ್ಟೇ ತಿಳಿದುಕೊಳ್ಳಿ. ಆತ ಬೆಡ್'​ರೂಂನಲ್ಲಿ ಏನು ಮಾಡಿದ ಅನ್ನೋದನ್ನು ತಿಳಿದುಕೊಂಡು ಏನು ಸಾಧಿಸುತ್ತೀರಿ..? ಎಲ್ಲರ ಜೀವನದ ಬಗ್ಗೆ ನೀತಿ ಪಾಠ ಹೇಳುವುದನ್ನು ಬಿಡಿ.

ನೀವು ಪತ್ರಕರ್ತ. ನೀವು ಪತ್ರಕರ್ತರಾಗಿ ಹೇಗೆ ಅನ್ನೋದನ್ನು ನಾನು ತಿಳಿದುಕೊಳ್ಳಬೇಕು. ನಿಮ್ಮ ವೈಯಕ್ತಿಕ ಜೀವನದ ಆಸಕ್ತಿಗಳು ನನಗೆ ಬೇಕಿಲ್ಲ.

ಏಕತೆಯ ಮಹತ್ವ:
ತುಂಬಾ ಜನಕ್ಕೆ ಏಕತೆ ಎಂದರೆ ಏನೆಂದು ಗೊತ್ತಿಲ್ಲ. ಮಾತನಾಡುತ್ತಾರೆ. ನಾವು ನಮ್ಮ ಶಾಲೆಯಲ್ಲಿ, ಮನೆಯಲ್ಲಿ ಆ ಏಕತೆಯನ್ನು ತರಬೇಕು. ಆ ಏಕತೆಯ ವಾತಾವರಣ ಸೃಷ್ಟಿಸಲು ಮೊದಲು ನಂಬಿಕೆ ಹುಟ್ಟಬೇಕು.  ನಾನು ಈ ಆಶ್ರಮದಿಂದ ಎರಡು ವರ್ಷ ಹೊರ ಹೋದರೂ, ಏನೂ ಆಗಲ್ಲ. ಎಲ್ಲವೂ ಎಂದಿನಂತೆ ನಡೆಯುತ್ತೆ. ಏಕೆಂದರೆ, ಇಲ್ಲೊಂದು ವ್ಯವಸ್ಥೆಯಿದೆ. ಆ ವ್ಯವಸ್ಥೆಯಲ್ಲೇ ಏಕತೆಯಿದೆ.

ನೋಡಿ, ಅಲ್ಲೊಬ್ಬ ಕಾರ್ಮಿಕ ಕೆಲಸ ಮಾಡುತ್ತಿದ್ದಾನೆ. ಊಟ ಮಾಡೋಕೆ ಆತ ಕೈಯ್ಯನ್ನು ಒಂದು ಸಲ ತೊಳೆದುಕೊಂಡ. ಆತ ಡಾಕ್ಟರ್ ಆಗಿದ್ದರೆ, ಆತ ತನ್ನ ಕೈಯ್ಯನ್ನು ಹಲವು ಬಾರಿ, ಇನ್ನಷ್ಟು ತೊಳೆದುಕೊಳ್ಳುತ್ತಿದ್ದ.

ಶಿಕ್ಷಣ, ಆರೋಗ್ಯ, ಆಧ್ಯಾತ್ಮ ವ್ಯಾಪಾರವಾಗಬಾರದು:
ನೋಡಿ, ನಮ್ಮ ಆಶ್ರಮದಲ್ಲೂ ಶಾಲೆಗಳಿವೆ. ಆ ಶಾಲೆಗೆ ಬರುವ ಉಪನ್ಯಾಸಕರು ಸೇವೆಯ ಮನೋಭಾವದಿಂದ ಬರಬೇಕು. ಅದು ಅವರಿಗೆ ವೃತ್ತಿಯಾಗಿರಬಾರದು. ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮ ಯಾವತ್ತೂ ಬ್ಯುಸಿನೆಸ್ ಆಗಿರಬಾರದು. ಆದರೆ, ದುರಂತ ನೋಡಿ, ಆ ಮೂರೂ ಬ್ಯುಸಿನೆಸ್ ಆಗಿಬಿಟ್ಟಿವೆ.

ನೋಡಿ, ನಾವೂ ಈಶ ಹೆಸರಲ್ಲಿ ಬ್ಯುಸಿನೆಸ್ ಮಾಡುತ್ತಿದ್ದೇವೆ. ಆದರೆ, ಬ್ಯುಸಿನೆಸ್​'ಗೆ ಈಶ ಬ್ಯುಸಿನೆಸ್ ಪ್ರೈ. ಲಿ. ಎಂದು ಹೆಸರಿಟ್ಟಾಗ ಹಲವರು ಅದನ್ನು ಪ್ರಶ್ನಿಸಿದರು. ಗುರೂಜಿ, ಈಶ ಅನ್ನೋ ಹೆಸರು ಬೇಡ ಎಂದರು. ನಾನು ಅವರಿಗೆ ಹೇಳಿದೆ. ಇದು ಸ್ಪಷ್ಟವಾಗಿರಬೇಕು. ಈಶ ಬ್ಯುಸಿನೆಸ್​ ಎಂಬುದು ವ್ಯವಹಾರಕ್ಕಾಗಿ. ಈಶ ಫೌಂಡೇಷನ್ ಎಂಬುದು ಸೇವೆಗಾಗಿ. ಈಶ ಬ್ಯುಸಿನೆಸ್'​ನಲ್ಲಿ ನಾನು ಸೇವೆ, ಆಧ್ಯಾತ್ಮ ತರಬಹುದು. ಆದರೆ, ಈಶ ಫೌಂಡೇಶನ್'​ನಲ್ಲಿ ನಾನ್ಯಾವತ್ತೂ ವ್ಯವಹಾರ ತರುವುದಿಲ್ಲ. ಅದು ಸೇವೆ ಮಾತ್ರ.

===========

ಭಾಗ 3:

ಆಧ್ಯಾತ್ಮದ ಬಗ್ಗೆ ತಪ್ಪು ಕಲ್ಪನೆ:
ಆದ್ಯಾತ್ಮ ಯಾವತ್ತೂ ಬೇರೆ. ಇದು ವಾನಪ್ರಸ್ಥವಲ್ಲ. ನೀವು ಶ್ರೀಮಂತರಾಗಿದ್ದರೆ 60 ವರ್ಷವಾದಾಗ ಕಾಡಿಗೆ ಹೋಗುವುದು ಒಂದು ರೀತಿ. ಆದರೆ, ಜೀವನ ಇರುವುದು ನಾವು ಎಂಥ ಬಾಳು ಬದುಕಿದೆವು ಎಂಬುದರಲ್ಲಿ. ಜೀವನವನ್ನು ಸುಂದರವಾಗಿ ಕಳೆಯಬೇಕು. ಕೆಲವು ಪತ್ರಕರ್ತರು ಕೇಳುತ್ತಾರೆ. ನೀವು ನಿಮ್ಮ ಕಾರ್'​ನ್ನು ನೀವೇ ಡ್ರೈವ್ ಮಾಡುತ್ತೀರಾ..? ನೀವು ಹೇಗೆ ಗುರುವಾಗುತ್ತೀರಿ ಎನ್ನುತ್ತಾರೆ. ಅದು ತಪ್ಪು. ನನಗೆ ಹೆಲಿಕಾಪ್ಟರ್ ನಡೆಸುವ ಲೈಸೆನ್ಸ್ ಕೂಡಾ ಇದೆ. ಇದಕ್ಕೂ ಆದ್ಯಾತ್ಮಕ್ಕೂ ಸಂಬಂಧವಿಲ್ಲ. ಆದ್ಯಾತ್ಮ ಎಂದರೆ, ಎಲ್ಲದರಿಂದ ಕಳಚಿಕೊಳ್ಳುವುದು ಎಂದುಕೊಳ್ಳುತ್ತಾರೆ. ಅದೇ ತಪ್ಪು. ಬಂಧನ, ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದು ಆದ್ಯಾತ್ಮವಲ್ಲ. ಎಲ್ಲ ಕೆಲಸಗಳ ನಡುವೆಯೇ ಉನ್ನತಿ ಕಾಣುವುದು ಆದ್ಯಾತ್ಮ. ಇದು ಆಗಬೇಕು. ಚಿಕ್ಕ ವಯಸ್ಸಿನಲ್ಲೇ ಆಗಬೇಕು.

ಯೋಗಕ್ಕೆ ಭೇದಭಾವವಿಲ್ಲ:
ಇತಿಹಾಸದಲ್ಲಿ ಯಾವತ್ತೂ, ಯಾರೊಬ್ಬರೂ ಕೂಡಾ ಹಣೆಗೆ ಗನ್ ಇಟ್ಟೋ, ಕುತ್ತಿಗೆ ಕತ್ತರಿಸುತ್ತೇನೆ ಎಂದು ಬೆದರಿಸಿಯೋ ಯೋಗ ಮಾಡಿಸಿದ ಉದಾಹರಣೆ ಇಲ್ಲ. ಇನ್ನೂರು ಕೋಟಿ ಜನ ಜಗತ್ತಿನಲ್ಲಿ ಈಗ ಯೋಗ ಮಾಡುತ್ತಿದ್ದಾರೆ. ಮುಂದಿನ 25 ವರ್ಷಗಳಲ್ಲಿ 500 ಕೋಟಿ ಜನ ಯೋಗ ಮಾಡುತ್ತಾರೆ. ಅನುಮಾನವಿಲ್ಲ.

ಯೋಗ ಎಂದರೆ ಅದು ಜಾತಿ, ದೇಶ, ಮನುಷ್ಯ, ಪ್ರಾಣಿ ಎಂಬ ಬೇಧಭಾವವೇ ಇಲ್ಲ. ಯೋಗ ಎಲ್ಲರನ್ನೂ, ಒಳಗೊಂಡಿದೆ. ಅದು ಆಂತರಿಕ ಭಾವನೆಯಿಂದ ಉದ್ಭವವಾಗುತ್ತೆ.

ಈಗ ನೋಡಿ, ಮಣ್ಣು ಇದೆ. ಅಲ್ಲೊಂದು ಗಿಡ ನೆಡಿ. ಆಹಾರ ಸಿಗುತ್ತೆ. ಅದನ್ನು ತಿಂದರೆ, ನಿಮ್ಮ ರೀತಿ ಆಗುತ್ತೇವೆ. ನೀವು ಸತ್ತಾಗ ನಿಮ್ಮನ್ನು ಮಣ್ಣಿಗೆ ಹಾಕಿದರೆ, ನೀವು ಮತ್ತೆ ಮಣ್ಣಾಗುತ್ತೀರಿ. ಮತ್ತೆ ಆ ಮಣ್ಣು ಆಹಾರವಾಗುತ್ತೆ. ಹಾಗೆಂದು ನಮ್ಮ ಊಟದ ತಟ್ಟೆಗೆ ಹಾಕಿದರೆ, ಮಣ್ಣು ತಿನ್ನುತ್ತೇವಾ..? ಇಲ್ಲ. ಹಾಗೆಯೇ ಪ್ರತಿಯೊಂದೂ ಬೇರೆ..ಬೇರೆ. ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ.

ಯೋಗ ಎಂದರೆ ದೇಶವಿಲ್ಲ. ಹಾಗೆಂದು ಅಂದುಕೊಳ್ಳಲು ಸಾಧ್ಯವಿಲ್ಲ. ಆ ಹೆಮ್ಮೆ ಇರಬೇಕು. ಯೋಗ ನಮ್ಮದು ಎಂಬ ಹೆಮ್ಮೆ ಇರಬೇಕು. ಯೋಗ ಹುಟ್ಟಿದ್ದು ನಮ್ಮಿಂದ. ಹಾಗೆಂದು ಯೋಗ ಭಾರತೀಯರಿಗೆ ಮಾತ್ರ ಅಲ್ಲ. ಗುರುತ್ವಾಕರ್ಷಣೆ ಗುರುತಿಸಿದ್ದು ಯೂರೋಪಿಯನ್ನರು. ಹಾಗೆಂದು ಗುರುತ್ವಾಕರ್ಷಣೆ ಯೂರೋಪಿಯನ್'ಗೆ ಮಾತ್ರ ಅಂತ ಅನ್ನೋಕೆ ಸಾಧ್ಯವಿಲ್ಲ. ಅಲ್ಲವೇ..ಯೋಗವೂ ಹಾಗೆ. ನಮ್ಮದು ಎಂಬ ಹೆಮ್ಮೆಯಿರಲಿ. ಆ ಯೋಗ ವಿಜ್ಞಾನವನ್ನು ನಾವು ವಿಶ್ವದೆಲ್ಲೆಡೆ ಹರಡಬೇಕು.

ಮೋದಿಯಿಂದ ಅಭಿವೃದ್ಧಿ:
ಆರೋಗ್ಯ, ಶಿಕ್ಷಣ ಮತ್ತು ಪರಿಸರ. ಇದು ಮೋದಿಗೆ ನಾನು ಕೊಡುವ ಸಲಹೆ. ಆದರೆ, ಇದೆಲ್ಲವನ್ನೂ ಮಾಡಲು ಮೊದಲು ಆರ್ಥಿಕವಾಗಿ ನಾವು ಬಲವಾಗಬೇಕು. ಈಗ ಮೋದಿ ಅದನ್ನು ಮಾಡುತ್ತಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೆ, ಈ ಆರೋಗ್ಯ, ಶಿಕ್ಷಣ ಮತ್ತು ಪರಿಸರದ ಅಭಿವೃದ್ಧಿಯೂ ಆಗುತ್ತೆ.

(ಸಂದರ್ಶಕ: ಪ್ರಶಾಂತ್ ನಾತು, ಸುವರ್ಣನ್ಯೂಸ್)

Show Full Article