Asianet Suvarna News Asianet Suvarna News

‘ಹೆಬ್ಬುಲಿ’ ಯೋಧನ ಕತೆ, ಸತ್ಯ ಘಟನೆಯಲ್ಲ: ಸುದೀಪ್

Hebbuli To Be Released on 23 Feb

ಏನಿದು ಹೆಬ್ಬುಲಿ?

ದೇಶಕ್ಕೋಸ್ಕರ ಎಲ್ಲವನ್ನೂ ತ್ಯಾಗ ಮಾಡಿ ದುಡಿವ ಯೋಧನ ಕತೆ. ನಮಗೋಸ್ಕರ ಆತ ದುಡಿಯುತ್ತಿರುತ್ತಾನೆ, ಅಂಥವನನ್ನು, ಅವನ ಕುಟುಂಬವನ್ನು ಕಾಯುವುದು ವ್ಯವಸ್ಥೆಯ ಕರ್ತವ್ಯ. ಒಂದೊಮ್ಮೆ ಅದನ್ನು ನಾವು ಮಾಡದೇ ಹೋದರೆ, ಅವನು ವ್ಯವಸ್ಥೆ ಮೇಲೆ ನಂಬಿಕೆ ಕಳಕೊಂಡರೆ ಅವನಿಗಿಂತ ಅಪಾಯಕಾರಿ ಆಯುಧ ಇನ್ನೊಂದಿಲ್ಲ. ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಹೇಳುತ್ತಿರುವ ಕತೆ. ಬಹುಶಃ ಎಲ್ಲರಿಗೂ ಇದು ತಟ್ಟುತ್ತದೆ

ಯೋಧ, ಯುದ್ಧನ ಚಿತ್ರಣ ಈ ಚಿತ್ರದಲ್ಲಿ ಎಷ್ಟು ಪ್ರಮಣದಲ್ಲಿದೆ?

ತುಂಬ ಕಡಿಮೆ ಅಂತನೇ ಹೇಳಬಹುದು, ಆದರೆ ನಾನು ಪಾರಾ ಕಮಾಂಡರ್ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಇಡೀ ಚಿತ್ರದಲ್ಲಿ ಒಬ್ಬ ಯೋಧ ಇರುತ್ತಾನೆ, ಅಷ್ಚು ಹೇಳಬಹುದು.

ಪಾರಾ ಕಮಾಂಡರ್ ಪಾತ್ರಕ್ಕೋಸ್ಕರ ಎಷ್ಚು ಸಿದ್ಧತೆ ಮಾಡಿಕೊಂಡಿರಿ?

ಎಷ್ಟು ಬೇಕೋ ಅಷ್ಟು ಮಾತ್ರ. ಯಾಕೆಂದರೆ ಇದು ಯಾವುದೋ ಒಬ್ಬ ವ್ಯಕ್ತಿಯ ಜೀವನವನ್ನಾಧರಿಸಿದ್ದೋ, ಒಂದು ನಿರ್ದಿಷ್ಟ ಘಟನೆಯನ್ನಾಧರಿಸಿದ್ದೋ ಅಲ್ಲ. ಹಾಗಾಗಿದ್ದರೆ ನಾನು ಅವನ ಬಟ್ಟೆ, ಹಾವಭಾವ, ರೀತಿ ನೀತಿಗಳ ಬಗ್ಗೆ ಓದು ಮತ್ತು ಒಡನಾಟದಿಂದ ತಿಳಿದುಕೊಳ್ಳುತ್ತಿದ್ದೆ. ಆದರೆ ಇದು ಒಬ್ಬ ಪಾರಾ ಕಮಾಂಡರ್ ಪಾತ್ರದ ಸುತ್ತ ನಡೆವ ಒಂದು ಕತೆ, ಅದಕ್ಕೆ ಎಷ್ಟು ಬೇಕೋ ಅಷ್ಚು ನಾನು ತಿಳಿದುಕೊಂಡೆ, ಸೆಟ್ ನಲ್ಲಿ ನಿರ್ದೇಶಕರು ಹೇಳಿದ್ದನ್ನು ಕೇಳಿ ತಿಳಿದುಕೊಂಡೆ ಅಷ್ಟೇ.

ಸಿನಿಮಾದ ಬಗ್ಗೆ ತುಂಬ ನಿರೀಕ್ಷೆ ಇದೆಯಲ್ಲಾ?

ನಿರೀಕ್ಷೆ ಅನ್ನುವುದನ್ನು ನಾವು ಲಂಚ ಕೊಟ್ಟು ಪ್ರೇಕ್ಷಕರಲ್ಲಿ ಹುಟ್ಟಿಸಲಿಕ್ಕಾಗುವುದಿಲ್ಲ, ಅದು ಹುಟ್ಟುತ್ತದೆ ಅಷ್ಟೇ. ಈ ಚಿತ್ರದ ಬಗ್ಗೆ ಮೊದಲಿನಿಂದ ಇದರ ಬಗ್ಗೆ ಬರುತ್ತಿರುವ ಮಾತುಗಳು, ಕುತೂಹಲ ನಿಜಕ್ಕೂ ಖುಷಿ ಕೊಡುತ್ತದೆ. ಅದಕ್ಕೆ ಮಾಧ್ಯಮಗಳಲ್ಲಿ ಬಂದ ಸುದ್ದಿ, ಪ್ರಕಟಿಸಿದ ಫೋಟೋಗಳೂ ಕಾರಣ. ಅದಕ್ಕೆ ನಾನು ಆಭಾರಿ. ಹಾಗಂತ ಇದು ಅದ್ಭುತವಾದ, ಅಪರೂಪವಾದ ಕತೆ, ಹಿಂದೆ ಬಂದೇ ಇಲ್ಲ ಅಂತ ಹೇಳುತ್ತಿಲ್ಲ. ಒಂದು ಸೂಕ್ಷ್ಮ ಹಾಗೂ ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಪ್ರೇಕ್ಷಕನಿಗೆ ಇಷ್ಟವಾಗುವಂತೆ ಹೇಳಬೇಕಾಗುತ್ತದೆ. ಅದನ್ನು ಇಲ್ಲಿ ಮಾಡಿದ್ದೇವೆ.

ಕತೆ ಕೇಳದೇ ಕೃಷ್ಣ ಅವರಿಗೆ ನಿರ್ದೇಶನಕ್ಕೆ ಅವಕಾಶ ಕೊಟ್ಟಿರಂತೆ.

ಕತೆ ಕೇಳದೇ ಕೃಷ್ಣ ಅವರನ್ನು ಕರೆದು ಸಿನಿಮಾ ಮಾಡು ಅಂತ ಹೇಳಿದ್ದು ನಿಜ, ಹಾಗಂತ ಕತೆ ಕೇಳುವುದೇ ಇಲ್ಲ ಅಂತ ಅಲ್ಲ. ಅದರರ್ಥ ನನಗೆ ಛಾಯಾಗ್ರಾಹಕ, ನನ್ನ ಸ್ನೇಹಿತ ಕೃಷ್ಣ ಅವರ ಮೇಲೆ ನಂಬಿಕೆ ಅಷ್ಟೇ. ಹಾಗಂತ ಚಿತ್ರೀಕರಣ ಪ್ರಾರಂಭವಾಗುವ ತಿಂಗಳ ಮೊದಲು ಕತೆ ಕೇಳಿದೆ, ಇಷ್ಟವಾಯ್ತು. ಅವರು ಇಗೋ ಇಲ್ಲದ ನಿರ್ದೇಶಕ. ನಾನು ಹೀಗಲ್ಲ ಹಾಗೆ ಮಾಡೋಣ ಅಂತ ಸಲಹೆ ಕೊಟ್ಟಿದ್ದನ್ನು ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ.

ನಿಮ್ಮ ಗೆಟಪ್ ವೈರಲ್ ಆಗಿದೆಯಲ್ಲ?

ಸಂತೋಷವಾಗುತ್ತದೆ, ಮಕ್ಕಳು ಸಹ ಆ ಹೇರ್ ಸ್ಟೈಲ್ ಅನುಸರಿಸುತ್ತಿದ್ದಾರೆ. ನಾನು ಉದ್ದ ಕೂದಲು ಬಿಟ್ಟಿದ್ದೆ, ಅದನ್ನು ಈ ರೀತಿ ವಿಭಿನ್ನವಾಗಿ ಕತ್ತರಿಸಿ, ಬೇರೆಯದೇ ಥರದ ಹೇರ್ ಸ್ಟೈಲ್ ಮಾಡಿದರೆ ಹೇಗೆ ಅನ್ನುವ ಸೂಚನೆ ಬಂತು. ಒಂದು ಸಲ ಟ್ರೈ ಮಾಡಿದೆವು, ಚೆನ್ನಾಗಿ ಕಾಣುತ್ತಿತ್ತು, ಒಪ್ಪಿಕೊಂಡೆ. ಅದು ಇಷ್ಟೊಂದು ವೈರಲ್ ಆಗುತ್ತದೆ ಅಂತ ಅಂದುಕೊಂಡಿರಲಿಲ್ಲ.

ವಿಕಾಸ ನೇಗಿಲೋಣಿ, ಕನ್ನಡಪ್ರಭ ವಾರ್ತೆ,

Follow Us:
Download App:
  • android
  • ios