Asianet Suvarna News Asianet Suvarna News

ಕನ್ನಡದ ಕಬೀರ ಇಬ್ರಾಹಿಂ ಸುತಾರ : ಅಸಾಮಾನ್ಯ ಕನ್ನಡಿಗ

`ಭೇದ ಎನಿಸದೇ ಕೂಡಿ ಬಾಳುವುದೇ ನಿಜ ಬದುಕು' ಎನ್ನುವುದನ್ನು ವಿವಿಧ ಧರ್ಮಗಳ ಸಾರ, ವೇದಗಳ ಉಕ್ತಿ, ವಚನಗಳ ಮೂಲಕ ಮನದಟ್ಟು ಮಾಡುತ್ತ ಧರ್ಮಸಮನ್ವಯತೆ ಮತ್ತು ಭಾವೈಕ್ಯತೆ ಮೂಡಿಸುವಲ್ಲಿ ಸುತಾರ ಯಶಸ್ವಿಯಾಗಿದ್ದಾರೆ. ಇವರ ಸಂವಾದಿ ರೂಪದ ಪ್ರವಚನ ಶೈಲಿ ಕೇಳುಗರಿಗೆ ಹೃದ್ಯವಾಗಿದೆ.

He is Kannada Kabira

ನೀಳಕಾಯದ, ಎತ್ತರ ನಿಲುವಿನ ಭಕ್ತಿ, ವಿನಯಗಳೇ ಮೈವೆತ್ತಂತಿರುವ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಿರಿಯ ಜೀವ ಇಬ್ರಾಹಿಂ ಸುತಾರ ಎರಡೂ ಕೈಗಳನ್ನು ಜೋಡಿಸಿ ಮಿಶ್ರದೇಶ ರಾಗದಲ್ಲಿ ತನ್ಮಯರಾಗಿ ಹೀಗೆ ಪ್ರಾರ್ಥಿಸುತ್ತಿದ್ದರೆ ನೆರೆದಿದ್ದ ಸಭಿಕರೆಲ್ಲ ತಮ್ಮ ಸುತ್ತಲಿನ ಎಲ್ಲ ಭೇದಗಳನ್ನು ಬದಿಗಿಟ್ಟು ಅಕ್ಷರಶಃ ಮಂತ್ರಮುಗ್ಧ. ಹಾಡು ಮುಗಿಯುವ ಹೊತ್ತಿಗೆ ಅಲ್ಲಿ ಭಾವೈಕ್ಯದ ದಿಗ್ದರ್ಶನ.

ಉತ್ತರ ಕರ್ನಾಟಕದ ಪಾರಿಜಾತ ಕಲೆಯನ್ನು ಭಜನೆಗೆ ಅಳವಡಿಸಿ ಸಂವಾದ ರೂಪದ ಹೊಸ ಸಂಗೀತ ಪ್ರವಚನದಿಂದಾಗಿ ಇಬ್ರಾಹಿಂ ಸುತಾರ ಇಂದು ರಾಜ್ಯಾದ್ಯಂತ ಅಷ್ಟೇ ಅಲ್ಲ, ನೆರೆ ರಾಜ್ಯ ಮತ್ತು ವಿದೇಶಗಳಲ್ಲೂ ಚಿರಪರಿಚಿತ. ವೇದ, ಪುರಾಣ, ತತ್ವಶಾಸ್ತ್ರ, ಮಹಾಕಾವ್ಯ, ಧರ್ಮಗ್ರಂಥಗಳ ಸಾಹಿತ್ಯ ಸಾರವನ್ನು ಅತ್ಯಂತ ಸರಳವಾಗಿ ಕೇಳುಗರ ಹೃದಯಕ್ಕಿಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸುತಾರ, ಕಳೆದ 40 ವರ್ಷಗಳಿಂದ ಮನಸುಗಳನ್ನು ಕಟ್ಟುವ ಕೈಂಕರ್ಯದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿದ್ದಾರೆ.

`ಭೇದ ಎನಿಸದೇ ಕೂಡಿ ಬಾಳುವುದೇ ನಿಜ ಬದುಕು' ಎನ್ನುವುದನ್ನು ವಿವಿಧ ಧರ್ಮಗಳ ಸಾರ, ವೇದಗಳ ಉಕ್ತಿ, ವಚನಗಳ ಮೂಲಕ ಮನದಟ್ಟು ಮಾಡುತ್ತ ಧರ್ಮಸಮನ್ವಯತೆ ಮತ್ತು ಭಾವೈಕ್ಯತೆ ಮೂಡಿಸುವಲ್ಲಿ ಸುತಾರ ಯಶಸ್ವಿಯಾಗಿದ್ದಾರೆ. ಇವರ ಸಂವಾದಿ ರೂಪದ ಪ್ರವಚನ ಶೈಲಿ ಕೇಳುಗರಿಗೆ ಹೃದ್ಯವಾಗಿದೆ.

ತಾರುಣ್ಯದಲ್ಲಿ `ರಂಜಾನ್ ಜಾಗರಣೆ ಸಂಘ' ಕಟ್ಟಿ ಸ್ನೇಹಿತರೊಂದಿಗೆ ಅಹೋರಾತ್ರಿ ರಿವಾಯತ್, ಅಲಾಯಿ, ತತ್ವ ಪದಗಳನ್ನು ಹಾಡಿ ಜನರನ್ನು ರಂಜಿಸುತ್ತಿದ್ದ ಯುವಕ ಇಬ್ರಾಹಿಂ ಸುತಾರ ಮುಂದೆ `ಭಾವೈಕ್ಯ ಜನಪದ ಸಂಗೀತ ಮೇಳ' ಕಟ್ಟಿ ಆ ಮೂಲಕ ತಮ್ಮ ಭಜನೆ ಮತ್ತು ತತ್ವಶಾಸ್ತ್ರ ಪ್ರವಚನದಿಂದಾಗಿ ಕರ್ನಾಟಕದ ಮನೆಮಾತಾದರು. ಜನತೆ ಇವರನ್ನು ಅಭಿಮಾನದಿಂದ `ಕನ್ನಡದ ಕಬೀರ' ಎಂದು ಕರೆಯುತ್ತಾರೆ. 76ರ ಇಳಿವಯದಲ್ಲೂ ಈ ಮಾಗಿದ ಜೀವ `ಭಾವೈಕ್ಯತೆಯ ಸಂದೇಶ ಸಾರುತ್ತ ಪ್ರೇಮವನ್ನು ಬೆಳೆಸುವ' ಕಾಯಕದಲ್ಲಿ ತೊಡಗಿದೆ.

ಕೂಡಲಸಂಗಮ, ಬನವಾಸಿ, ಬೆಂಗಳೂರು, ಹಂಪಿ, ಬಸವಕಲ್ಯಾಣ, ಸೊಲ್ಲಾಪುರ, ಭುವನೇಶ್ವರ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಈ ದೇಶದ ಧರ್ಮಸಮನ್ವಯತೆ ಮತ್ತು ಭಾವೈಕ್ಯತೆಗೆ ಇಬ್ರಾಹಿಂ ಸುತಾರ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಇಂಚಲ ಮಠದಿಂದ ಕನ್ನಡದ ಕಬೀರ, ಆಳ್ವಾ ನುಡಿಸಿರಿ ಪ್ರಶಸ್ತಿ ಸೇರಿದಂತೆ ಈ ವರೆಗೆ 38 ಪ್ರಶಸ್ತಿಗಳು ಇವರ ಮುಡಿಗೇರಿವೆ.

Follow Us:
Download App:
  • android
  • ios