Asianet Suvarna News Asianet Suvarna News

ಬಳ್ಳಾರಿಯ ಪಾಪಿ ಪೊಲೀಸ್; ಹೆಂಡ್ತಿಗೆ ಆ್ಯಸಿಡ್ ಕುಡಿಸಿ ಪರಾರಿ..!

ಆತನೊಬ್ಬ ಪೊಲೀಸ್ ಪೇದೆ, ಸಮಾಜದಲ್ಲಿ ನಡೆಯುವ, ಕಿರುಕುಳ, ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಬೇಕಾದ ಆರಕ್ಷಕ. ಆದರೆ ಇಲ್ಲೊಬ್ಬ ಪೊಲೀಸ್ ಪೇದೆಯೊಬ್ಬ ಪೊಲೀಸ್ ಇಲಾಖೆಗೆ ಕಳಂಕ ತರುವಂತಾ ಕೆಲಸಮಾಡಿದ್ದಾನೆ. ತಾಳಿ ಕಟ್ಟಿದ ಹೆಂಡತಿಗೆ ಆ್ಯಸಿಡ್ ಕುಡಿಸಿ ಪರಾರಿಯಾಗಿದ್ದಾನೆ.

bellary police venkatesh assault on his wife in dowry case

ಬಳ್ಳಾರಿ: ಬೇಲಿಯೇ ಎದ್ದು ಹೊಲ ಮೇಯುವುದಕ್ಕೆ ಇನ್ನೂ ಒಂದು ಉದಾಹರಣೆ ಇಲ್ಲಿದೆ. ಪೊಲೀಸ್ ಪೇದೆಯೊಬ್ಬ ತನ್ನ ಹೆಂಡತಿಗೆ ಆ್ಯಸಿಡ್ ಕುಡಿಸಿ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮಾತನಾಡುವುದಕ್ಕೂ ಆಗದೇ ಆಹಾರ ಸೇವಿಸುವುದಕ್ಕೂ ಆಗದೇ ಆಸ್ಪತ್ರೆ ಬೆಡ್ ಮೇಲೆ ಆತನ ಹೆಂಡತಿ ವಿಲವಿಲ ಒದ್ದಾಡುವಂತಾಗಿದೆ. ವೆಂಕಟೇಶ್ ಎಂಬ ಪೇದೆಯೇ ಆ ದುರುಳ. ಈತನ ದೌರ್ಜನ್ಯಕ್ಕೆ ತುತ್ತಾಗಿ ಬಸವಳಿದವಳು ಆತನ ಪತ್ನಿ ಆಶಾ.

ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ವಾಸವಾಗಿರುವ ಆಶಾಗೆ 2006ರಲ್ಲಿ ಪೊಲೀಸ್ ಪೇದೆ ವೆಂಕಟೇಶ್ ಜೊತೆ ವಿವಾಹವಾಗುತ್ತದೆ. ವರದಕ್ಷಿಣೆ ಹಣ ನೀಡಿ ದಾಮ್ ದೂಮ್ ಆಗಿ ಮದುವೆ ಮಾಡಿಕೊಡಲಾಗುತ್ತದೆ. ಮೊದಲೊಂದು ವರ್ಷ ಸುಖವಾಗಿ ಜೀವನ ನಡೆಸಿದ್ದ ಪೊಲೀಸಪ್ಪ ನಂತರ ತನ್ನ ಖತರ್ನಾಕ್ ಬುದ್ದಿ ತೋರಿಸುತ್ತಾನೆ. ಹೆಂಡತಿಗೆ ದಿನ ನಿತ್ಯ ವರದಕ್ಷಿಣೆ ಹಣ ತರುವಂತೆ ಪೀಡುಸುತ್ತಿರುತ್ತಾನೆ. ಪೋಷಕರು ಕೂಡ ಅಲ್ಪ ಸ್ವಲ್ಪ ಹಣ ನೀಡಿ ಸಮಾಧಾನ ಪಡಿಸುತ್ತಿರುತ್ತಾರೆ. ಯಾವಾಗ ಹೆಂಡತಿಯ ತಂದೆಗೆ ನಿವೃತ್ತಿ ಹಣ ಬಂತು ಆಗ ಈ ಪೊಲೀಸಪ್ಪ ರಾಕ್ಷಸನಾಗುತ್ತಾನೆ. ಹೆಂಡತಿಗೆ ಹಣ ತರುವಂತೆ ಕಿರುಕುಳ ನೀಡತೊಡಗುತ್ತಾನೆ. ಆದರೆ ಇದಕ್ಕೆ ಪತ್ನಿ ಆಶಾ ಒಪ್ಪದೇ ಪ್ರತಿರೋಧಿಸುತ್ತಾಳೆ. ಇದರಿಂದ ಕ್ರುದ್ಧಗೊಳ್ಳುವ ಪೇದೆ ವೆಂಕಟೇಶ್ ಜುಲೈ11ರಂದು ತನ್ನ ಪತ್ನಿ ಆಶಾಳನ್ನು ಕೊಲ್ಲುವ ಉದ್ದೇಶದಿಂದ ಆ್ಯಸಿಡಿ ಕುಡಿಸಿ ಪರಾರಿಯಾಗುತ್ತಾನೆ. ಅಕ್ಕಪಕ್ಕದ ಜನರು ಕೂಡಲೇ ಆಶಾಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಬದುಕಿಸಲು ನೆರವಾಗುತ್ತಾರೆ.

ಆಶಾ ನರಳಾಟ:
ಆಶಾ ಈಕೆ ನಡೆದಾಡಲು ಸಾಧ್ಯವಾಗದೆ ಮಾತನಾಡಲು ಕಷ್ಟ ಪಡುತ್ತಿದ್ದಾಳೆ. ಹಾಸಿಗೆಯಲ್ಲೇ ನರಳುವಂತಹ ಪರಿಸ್ಥತಿ. ಅಷ್ಟೇ ಅಲ್ಲ ಆಹಾರ ಸೇವಿಸಲು ಆಗದೆ ಸಿರಿಂಜ್ ಮೂಲಕ ದ್ರವ ಪದಾರ್ಥ ಸೇವಿಸಬೇಕಾಗಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಹಣವನ್ನ ತಂದೆ ನರಸಿಂಹಲು ಖರ್ಚುಮಾಡಿದ್ದಾರೆ. ಮಗಳ ಸ್ಥಿತಿಯನ್ನ ಕಂಡ ಪೋಷಕರು ಕಣ್ಣೀರಿಡುತ್ತಿದ್ದಾರೆ.

ದೂರು ನೀಡಿದರೂ ಪ್ರಯೋಜನವಿಲ್ಲ:
ಸುವರ್ಣನ್ಯೂಸ್ ಜೊತೆ ತಮ್ಮ ದುಃಖ ತೋಡಿಕೊಂಡ ಆಶಾ ತಂದೆ ನರಸಿಂಹುಲು, ತನ್ನ ಅಳಿಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲವೆನ್ನುತ್ತಾರೆ. ಎಸ್'ಪಿ ಸೇರಿದಂತೆ ಹಲವರ ಬಳಿ ಇವರು ದೂರು ನೀಡಿರುತ್ತಾರೆ. ಆದರೆ, ಯಾರೂ ಕೂಡ ಯಾವ ಕ್ರಮ ಕೈಗೊಳ್ಳದೇ ಏನಾದರೂ ಸಬೂಬು ಹೇಳುತ್ತಿರುತ್ತಾರೆ ಎಂದು ನರಸಿಂಹುಲು ಹೇಳಿದ್ದಾರೆ. ಇತ್ತ, ವೆಂಕಟೇಶ್ ಬಳ್ಳಾರಿ ಠಾಣೆಯಿಂದ ತೋರಣಗಲ್'ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆನ್ನಲಾಗಿದೆ.

ಎರಡು ಮಕ್ಕಳಿರುವ ನತದೃಷ್ಟೆ ಆಶಾಗೆ ನ್ಯಾಯ ದೊರಕುವ ವಿಶ್ವಾಸ ಮಂಕಾಗಿದೆ. ಪೊಲೀಸ್ ಇಲಾಖೆಯು ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿ ಈ ಹೆಣ್ಮಗಳಿಗೆ ನ್ಯಾಯ ದೊರಕಿಸಬೇಕಿದೆ.

- ಶ್ರೀನಿವಾಸಶೆಟ್ಟಿ, ಸುವರ್ಣನ್ಯೂಸ್, ಬಳ್ಳಾರಿ

Follow Us:
Download App:
  • android
  • ios