Asianet Suvarna News Asianet Suvarna News

'ಮಗಳಿಗೆ ನಾನು ಮಂಗಳಮುಖಿ ಅಂತ ಗೊತ್ತಿಲ್ಲ': ಇದು ಚಾಂದಿನಿಯವರ ಮನಮಿಡಿಯುವ ಕತೆ

ಇವರ ಹೆಸರು ಚಾಂದಿನಿ, ಟಿ.ನರಸೀಪುರ ತಾಲೂಕಿನ ಇವರು ಸದ್ಯ ವಾಸವಿರುವುದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಮತ್ತು ಹಿಜ್ರಾ ಭಾಷೆ ಮಾತನಾಡಬಲ್ಲ ಈಕೆ ಹೋರಾಟಗಾರ್ತಿ. ಅನೇಕ ಸ್ಕೂಲು, ಕಾಲೇಜುಗಳಿಗೆ ಹೋಗಿ ಪಾಠ ಮಾಡುತ್ತಾರೆ. ಅಷ್ಟೇ ಅಲ್ಲ, ಇವರು ಕವಯಿತ್ರಿ ಕೂಡ. ಇವರ ಮೊದಲ ಕವನ ಸಂಕಲನದ ಹೆಸರು ಮನದ ಕಣ್ಣು. ಇವರ ಒಂದು ಪದ್ಯ ಕುವೆಂಪು ವಿವಿಯಲ್ಲಿ ಪಠ್ಯವಾಗಿದೆ. ಸುಮಾರು ವರ್ಷಗಳಿಂದ ತನ್ನವರಿಗಾಗಿ ದುಡಿಯುತ್ತಿರುವ ಈ ಜೀವಕ್ಕೆ ಒಬ್ಬಳು ಮಗಳಿದ್ದಾಳೆ. ಆ ಹುಡುಗಿ ಏಳನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ಮಗಳ ಬಗ್ಗೆ ಮಾತನಾಡಿದರೆ ಸಾಕು ಚಾಂದಿನಿಯವರಿಗೆ ಖುಷಿಯಾಗುತ್ತದೆ.
 

My daughter Doesnt Know That am a transgendrer

ಇವರ ಹೆಸರು ಚಾಂದಿನಿ, ಟಿ.ನರಸೀಪುರ ತಾಲೂಕಿನ ಇವರು ಸದ್ಯ ವಾಸವಿರುವುದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಮತ್ತು ಹಿಜ್ರಾ ಭಾಷೆ ಮಾತನಾಡಬಲ್ಲ ಈಕೆ ಹೋರಾಟಗಾರ್ತಿ. ಅನೇಕ ಸ್ಕೂಲು, ಕಾಲೇಜುಗಳಿಗೆ ಹೋಗಿ ಪಾಠ ಮಾಡುತ್ತಾರೆ. ಅಷ್ಟೇ ಅಲ್ಲ, ಇವರು ಕವಯಿತ್ರಿ ಕೂಡ. ಇವರ ಮೊದಲ ಕವನ ಸಂಕಲನದ ಹೆಸರು ಮನದ ಕಣ್ಣು. ಇವರ ಒಂದು ಪದ್ಯ ಕುವೆಂಪು ವಿವಿಯಲ್ಲಿ ಪಠ್ಯವಾಗಿದೆ. ಸುಮಾರು ವರ್ಷಗಳಿಂದ ತನ್ನವರಿಗಾಗಿ ದುಡಿಯುತ್ತಿರುವ ಈ ಜೀವಕ್ಕೆ ಒಬ್ಬಳು ಮಗಳಿದ್ದಾಳೆ. ಆ ಹುಡುಗಿ ಏಳನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ಮಗಳ ಬಗ್ಗೆ ಮಾತನಾಡಿದರೆ ಸಾಕು ಚಾಂದಿನಿಯವರಿಗೆ ಖುಷಿಯಾಗುತ್ತದೆ.

ಅವಳು ನನ್ನ ಮಗಳು: ಯಾಕೆ ನಿಮಗೆ ದತ್ತು ಪಡೆಯಬೇಕು ಅಂತನ್ನಿಸಿತು ಅಂತ ಕೇಳಿದರೆ ಚಾಂದಿನಿ ಸ್ಪಷ್ಟವಾಗಿ ಹೇಳುತ್ತಾರೆ. 

‘ಅವಳು ನನ್ನ ಮಗಳು. ದತ್ತು ಮಗಳು ಅಂತ ಹೇಳುವುದಕ್ಕೆ ನಂಗೆ ಇಷ್ಟಇಲ್ಲ. ದಯವಿಟ್ಟು ಹಾಗೆ ಹೇಳಬೇಡಿ. ನಾನು ಹುಡುಗ ಆಗಿದ್ದಾಗಲೂ ನಂಗೆ ಹೆಣ್ಣಿನ ಆಸೆಗಳಿದ್ದವು. ನೇಲ್‌ ಪಾಲಿಶ್‌ ಹಚ್ಚುವುದು, ವಯ್ಯಾರದಿಂದ ನಡೆಯುವುದು ಇತ್ಯಾದಿ ಆಸೆಗಳು. ಸಮಾಜ ಅದನ್ನು ಒಪ್ಪುತ್ತಿರಲಿಲ್ಲ. ಅದಕ್ಕಾಗಿ ನಾನು ಪ್ರಕೃತಿಯ ಮುಂದೆ ಆ ಆಸೆಗಳನ್ನು ತೀರಿಸಿಕೊಳ್ಳುತ್ತಿದ್ದೆ. ಯಾಕೆಂದರೆ ಪ್ರಾಣಿಗಳು, ಗಿಡ ಮರಗಳು ನನ್ನನ್ನು ನೋಯಿಸುತ್ತಿರಲಿಲ್ಲ. ಅನಂತರ ನಾನು ನನಗಿಷ್ಟದಂತೆ ಬದುಕುವ ಆಸೆಯಿಂದ ಹೆಣ್ಣಾಗಿ ಬದಲಾದೆ. ಒಬ್ಬ ಹೆಣ್ಣಿಗೆ ಇರುವಂತಹ ಆಸೆಗಳು ನನಗೂ ಇತ್ತು. ನನಗೊಂದು ಮಗು ಬೇಕು ಅನ್ನಿಸುತ್ತಿತ್ತು. ಒಂದು ಸಲ ನಾನು ನನ್ನ ಗೆಳತಿ ಮನೆಗೆ ಹೋಗಿದ್ದೆ. ಅವಳು ಡೆಲಿವರಿ ಸಮಯದ ನೋವಿನ ಬಗ್ಗೆ ಮಾತನಾಡಿ ನಂಗೆ ಮಗು ಇಷ್ಟವಿಲ್ಲ ಎಂದಳು. ನಂಗೆ ತುಂಬಾ ನೋವಾಯಿತು. ದೇವರನ್ನು ಪ್ರಾರ್ಥಿಸಿದೆ. ಆಸೆ ಇರುವವರಿಗೆ ಮಗು ಕೊಡಲ್ಲ, ಮಗು ದಯಪಾಲಿಸಿದವರಿಗೆ ಮಗು ಬೇಡವಾಗಿದೆ ಅಂತ ಬೇಸರಿಸಿಕೊಂಡೆ. ಅನಂತರ ನನ್ನ ಆಪ್ತರಲ್ಲಿ ಈ ಆಸೆಯನ್ನು ಹೇಳಿಕೊಂಡೆ. ಆತ್ಮೀಯರ ಸಹಾಯದಿಂದ ನನ್ನ ಮಗಳು ಮನೆಗೆ ಬಂದಳು. ನನ್ನ ಮಗಳು ನನಗೆ ದೇವರು ಕೊಟ್ಟವರ.'

ಅವಳಿಗೆ ನಾನು ಮಂಗಳಮುಖಿ ಅಂತ ಗೊತ್ತಿಲ್ಲ

ಮಗಳು ಬಂದ ಮೇಲಿನ ಬದುಕು ಹೇಗಿದೆ ಅಂತ ಮಾತನಾಡುವಾಗ ಚಾಂದಿನಿ ಖುಷಿಯಾಗುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಿ ಸ್ವಲ್ಪ ಆತಂಕಗೊಳ್ಳುತ್ತಾರೆ. ‘ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇಷ್ಟವಿಲ್ಲ. ನಾನು ಯಾವತ್ತೂ ಹುಟ್ಟುಹಬ್ಬ ಆಚರಿಸಿಕೊಂಡವಳಲ್ಲ. ಆದರೆ ಈ ಸಲ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡೆ. ಅದಕ್ಕೆ ಕಾರಣ ನನ್ನ ಮಗಳು. ಅವಳು ತಾನು ಕೂಡಿಟ್ಟದುಡ್ಡಲ್ಲಿ ಕೇಕ್‌ ತಂದಿದ್ದಳು. ನಾನು ಕಟ್‌ ಮಾಡಿದೆ. ಒಂದು ಬೆಳ್ಳಿ ಉಂಗುರವನ್ನು ನನಗೆ ಗಿಫ್ಟ್‌ ಮಾಡಿದಳು. ಎಷ್ಟುಖುಷಿಯಾಯಿತು ಗೊತ್ತಾ? ನನ್ನ ಜೀವನದ ದೊಡ್ಡ ಖುಷಿ ಅವಳು. ಆದರೆ ಅವಳಿಗೆ ನಾನು ಮಂಗಳಮುಖಿ ಅಂತ ಗೊತ್ತಿಲ್ಲ. ಅವಳ ಫ್ರೆಂಡ್ಸಿಗೂ ಗೊತ್ತಿಲ್ಲ. ಅವಳು ಹೋಗುತ್ತಿರುವ ಸ್ಕೂಲಿನ ಟೀಚರ್‌ಗಳಿಗೂ ಗೊತ್ತಿಲ್ಲ. ಹಾಗಾಗಿ ನಾನು ಅವಳ ಸ್ಕೂಲಿಗೂ ಹೋಗಲ್ಲ. ಅವಳು ಯಾವಾಗಲೂ ಬಂದು ಸ್ಕೂಲಿಗೆ ಬಾ ಅಮ್ಮಾ ಅಂತ ಕರೆಯುತ್ತಾಳೆ. ಅವಳ ಸ್ಕೂಲ್‌ ಡೇ ಇದ್ದಾಗೆಲ್ಲಾ ಕರೆದರೂ ನಾನು ಮೀಟಿಂಗ್‌ ಇದೆ ಅಂತ ಕಾರಣ ಕೊಟ್ಟು ಸುಮ್ಮನಾಗುತ್ತೇನೆ. ಅವಳಿಗೆ ತುಂಬಾ ಸುಳ್ಳು ಹೇಳುತ್ತೇನೆ. ನಂಗೆ ನೆನೆಸಿಕೊಂಡರೆ ಬೇಜಾರಾಗತ್ತೆ.'

ಸುಮಾರು ಮಂದಿಗೆ ಮಕ್ಕಳಿದ್ದಾರೆ

‘ಸ್ಕೂಲಲ್ಲಿ ಗೊತ್ತಾದರೆ ಅವರೆಲ್ಲಾ ನನ್ನ ಮಗಳನ್ನು ಹೇಗೆ ನೋಡುತ್ತಾರೋ ಅನ್ನುವ ಭಯ ನನಗಿದೆ. ಅವಳ ಫ್ರೆಂಡ್ಸಿಗೆ ಗೊತ್ತಾಗಿ ಅವಳ ಜೊತೆ ಹೇಗೆ ವರ್ತಿಸಬಹುದು ಅಂತ ಯೋಚಿಸಿದರೆ ಸ್ವಲ್ಪ ಗಾಬರಿಯಾಗುತ್ತದೆ. ಅವಳ ಫ್ರೆಂಡ್ಸಿಗೆ ಪರಿಚಯ ಮಾಡಿಸಬೇಕು ಅಂತ ತುಂಬಾ ಆಸೆ ನನ್ನ ಮಗಳಿಗೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದು ಸಲ ಫೋಟೋ ಕೊಟ್ಟೆ. ಕೆಲವು ಸಲ ಫೋನ್‌ ಮಾಡಿಸಿ ಕೊಡುತ್ತಾಳೆ. ಆದರೆ ನನಗೆ ಫೋನಲ್ಲಿ ಜಾಸ್ತಿ ಮಾತನಾಡೋದಕ್ಕೆ ಭಯ. ಎಲ್ಲಿ ನನ್ನ ಧ್ವನಿ ಗೊತ್ತಾಗತ್ತೋ ಎಂದುಕೊಂಡು ಸಣ್ಣಗೆ ಮಾತನಾಡುತ್ತೇನೆ. ನನ್ನಂತೇ ನಮ್ಮ ಸಮುದಾಯದಲ್ಲಿ ತುಂಬಾ ಮಂದಿಗೆ ಮಕ್ಕಳಿದ್ದಾರೆ. ಆದರೆ ಅವರೂ ಕೂಡ ಇದೇ ಭಯದಿಂದ ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ನಾವು ಮಂಗಳಮುಖಿಯರು ಮಕ್ಕಳು ಬೇಕು ಅಂತ ಆಸೆ ಪಡುವುದು ಮತ್ತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವುದು ಸುಲಭ. ಆದರೆ ಆಮೇಲಿನ ಜೀವನ ಅಷ್ಟೇನೂ ಸುಲಭವಲ್ಲ.'

ನನ್ನ ಮಗಳು ನನ್ನನ್ನು ಒಪ್ಪಿಕೊಂಡರೆ ಸಾಕು

ಚಾಂದಿನಿಯವರಿಗೆ ಮಗಳನ್ನು ತುಂಬಾ ಓದಿಸಬೇಕು ಅನ್ನೋ ಆಸೆ. ಮಗಳು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಅನ್ನೋ ಆಸೆ. ಮಂಗಳಮುಖಿಯೊಬ್ಬರ ಮಗಳು ಸಮಾಜದಲ್ಲಿ ದೊಡ್ಯ ವ್ಯಕ್ತಿಯಾಗಬೇಕು ಅನ್ನೋ ಹಂಬಲ. ಅದರ ಜೊತೆ ಇನ್ನೊಂದು ಆಸೆಯೂ ಇದೆ. ‘ಎಲ್ಲಕ್ಕಿಂತ ಮೊದಲು ಮಗಳು ನಮ್ಮನ್ನು ಒಪ್ಪಿಕೊಂಡರೆ ಸಾಕು.' ಹೀಗೆ ಹೇಳುವ ಚಾಂದಿನಿಯವರಿಗೆ ಮಗಳ ಸ್ಕೂಲಲ್ಲಿ ಪಾಠ ಮಾಡಬೇಕು ಅನ್ನೋ ಒಂದು ಆಸೆ ಹಾಗೇ ಉಳಿದಿದೆ.

ಕನ್ನಡಪ್ರಭ ಸ್ಪೆಷಲ್

Follow Us:
Download App:
  • android
  • ios