Asianet Suvarna News Asianet Suvarna News

ಕಳೆದ ಕಾಲದ ಹೆಜ್ಜೆ ಗುರುತು-ನ್ಯಾಯಮೂರ್ತಿ ಶಿವರಾಜ ಪಾಟೀಲರ ಆತ್ಮಕಥನ

ನ್ಯಾಯಮೂರ್ತಿ ಶಿವರಾಜ ಪಾಟೀಲರ ಆತ್ಮಕಥನ 'ಕಳೆದ ಕಾಲ ನಡೆದ ದೂರ' ಬೆಡುಗಡೆಗೆ ಸಿದ್ಧವಾಗಿದೆ. ಹಿರಿಯರ ಬಗ್ಗೆ ಗೌರವ, ಕಿರಿಯರ ಕುರಿತು ಪ್ರೀತಿ, ಸಹೋದ್ಯೋಗಿಗಳ ಕುರಿತು ಅಕ್ಕರೆ, ತನ್ನ ಬದುಕಿನ ಕುರಿತು ಸ್ಪಷ್ಟ ನಿಲುವು ಇಟ್ಟುಕೊಂಡು ಅವರು ಸಾಗಿದ ಬದುಕಿನ ಪುಟಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಕೃತಿಯ ಕೆಲವು ಪ್ರಸಂಗಗಳು ಇಲ್ಲಿವೆ.

A Footprint of the Past, Autobiography of Justice Shivraj Patil Vin
Author
First Published Jan 14, 2024, 12:11 PM IST

ಚುನಾವಣೆಗೆ ನಿಲ್ಲಲಿಲ್ಲ
ವೀರೇಂದ್ರ ಪಾಟೀಲರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀಮತಿ ಬಸವರಾಜೇಶ್ವರಿ ಅವರು ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು, ಮುಖ್ಯಮಂತ್ರಿಗಳನ್ನು ನೀವು ತಕ್ಷಣ ಭೇಟಿಯಾಗಬೇಕಂತೆ ಎಂದು ತಿಳಿಸಿದರು. ಆಗಲೇ ಹೇಳಿದಂತೆ ಪಾಟೀಲರಿಗೂ ನನಗೂ ವೈಯಕ್ತಿಕವಾಗಿ ಪರಿಚಯ ಇತ್ತು. ಅವರ ವೈಯಕ್ತಿಕ ಮತ್ತು ಪಕ್ಷದವರ ಯಾವುದೇ ಕೇಸುಗಳನ್ನು ನಾನೇ ನೋಡುತ್ತಿದ್ದೆ. ಹಾಗಾಗಿ ಅವರ ಅಪೇಕ್ಷೆಯಂತೆ ನಾನು ಅವರನ್ನು ಕಾಣಲು ಹೋದೆ. ಗುಲಬರ್ಗಾದಲ್ಲಿ ಮುಖ್ಯಮಂತ್ರಿಗಳು ಐವಾನ್‌ಶಾಹಿ ಅತಿಥಿಗೃಹದ ಒಂದು ಭಾಗದಲ್ಲಿ ತಂಗಿದ್ದರು. ಇನ್ನೊಂದು ಭಾಗದಲ್ಲಿ ವಿಭಾಗೀಯ ಆಯುಕ್ತರ ಕಚೇರಿ ಇತ್ತು. ನಾನು ಅವರನ್ನು ಕಾಣಲು ಹೋದಾಗ ವಿಪರೀತ ಜನಸಂದಣಿ ಇದ್ದುದರಿಂದ, ಹಿಂದಿನ ಬಾಗಿಲಿನ ಮೂಲಕ ಬಂದು ತಮ್ಮನ್ನು ಕಾಣುವಂತೆ ಮುಖ್ಯಮಂತ್ರಿಗಳು ನನಗೆ ಹೇಳಿದರು. ಹಿಂದಿನ ಬಾಗಿಲ ಬಳಿಯಿದ್ದ ಸ್ನಾನಗೃಹದ ಒಳಗೆ ನಿಂತು ನನ್ನೊಂದಿಗೆ ಅವರು ಮಾತನಾಡಿದರು. ಆ ಸ್ನಾನಗೃಹ ಬಹಳ ದೊಡ್ಡದಾಗಿತ್ತು. ಅದು ಹೈದರಾಬಾದ್ ನಿಜಾಮನಿಗಾಗಿ ನಿರ್ಮಿಸಿದ್ದಾಗಿತ್ತು.

`ಪಾಟೀಲರೇ, ನೀವು ದೇವದುರ್ಗ ಕ್ಷೇತ್ರದವರು. ಈ ಬಾರಿ ಚುನಾವಣೆಗೆ ನೀವು ಸ್ಪರ್ಧಿಸಬೇಕು. ಅದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಿರಿ. ಶರಣಪ್ಪ ಮತ್ತು ಸದಾಶಿವಪ್ಪ ಅವರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿಲ್ಲ. ಅವರಿಬ್ಬರೂ ಜಗಳದಲ್ಲಿ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಇಬ್ಬರಿಗೂ ಟಿಕೆಟ್ ಕೊಡುವುದಿಲ್ಲ. ಆದರೆ ನಿಮಗೆ ಟಿಕೆಟ್ ಕೊಡುವ ಪ್ರಸ್ತಾಪಕ್ಕೆ ಇಬ್ಬರೂ ಸಮ್ಮತಿಸಿದ್ದಾರೆ. ನೀವು ಚಿಂತೆ ಮಾಡುವುದು ಬೇಡ. ನಾವೆಲ್ಲ ವ್ಯವಸ್ಥೆ ಮಾಡುತ್ತೇವ'' ಎಂದು ವಿವರಿಸಿದರು. ನಾನು ಮೌನವಾಗಿ ಕೇಳಿಸಿಕೊಂಡು ವಿನಯಪೂರ್ವಕವಾಗಿ, `ಸರ್, ತಮಗೆ ಕೃತಜ್ಞತೆಗಳು. ಆದರೆ, ನನಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ. ವಕೀಲನಾಗಿ ನನಗೆ ಒಳ್ಳೆಯ ಹೆಸರು, ವರ್ಚಸ್ಸು ಇದೆ. ಕಾಂಗ್ರೆಸ್ಸಿನ ಎಲ್ಲಾ ಕೇಸುಗಳನ್ನೂ ನಾನು ನೋಡಿಕೊಳ್ಳುತ್ತಿದ್ದೇನೆ, ಮುಂದೆಯೂ ನೋಡಿಕೊಳ್ಳುತ್ತೇನೆ` ಎಂದು ಹೇಳಿದೆ. ನನ್ನ ಈ ದೃಢತೀರ್ಮಾನ ಕೇಳಿ ಮುಖ್ಯಮಂತ್ರಿಗಳು ಸುಮ್ಮನಾದರು. ನನ್ನ ಅಭಿಪ್ರಾಯದಲ್ಲಿ, ರಾಜಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ನ್ಯಾಯಯುತವಾಗಿ ದುಡಿದು ಹಣ ಸಂಪಾದಿಸಿ ರಾಜಕೀಯಕ್ಕೆ ಹೋಗಬೇಕು. ಹಣ ಮಾಡಿಕೊಳ್ಳುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಹೋಗಬಾರದು.

ಔತ್ತಮ್ಯದ ಗೀಳಿನಲ್ಲಿ

ಶಿಕ್ಷಕರ ಮಡದಿಗೆ ಶಿಕ್ಷಕ
ನಾನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶನಾಗುವಂತೆ ಶಿಫಾರಸ್ಸು ಮಾಡಿದವರು ಜಸ್ಟೀಸ್ ಪಿ.ಸಿ.ಜೈನ್ ಅವರು. ಪ್ರಮಾಣವಚನ ಬೋಧಿಸಿದ್ದು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ರಾಮಾಜೋಯಿಸ್ ಅವರು. ನಾನು ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿದ್ದಾಗ ಈ ಇಬ್ಬರೂ ನಮ್ಮ ಕೋರ್ಟ್ ಹಾಲ್‌ನಲ್ಲಿ ನಮ್ಮ ಪೀಠದ ಮುಂದೆ ಹಿರಿಯ ವಕೀಲರಾಗಿ ವಾದ ಮಂಡಿಸಲು ಬರುತ್ತಿದ್ದರು. ನಾನು ಗುಲಬರ್ಗಾದಲ್ಲಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿಯೂ ಪ್ರಾಂಶುಪಾಲನಾಗಿಯೂ ಇದ್ದಾಗ ವಿದ್ಯಾರ್ಥಿಗಳ ಪೈಕಿ ನನ್ನ ಕೆಲವು ಶಿಕ್ಷಕರೂ ಇದ್ದರು. ಅದು ಸಂಜೆ ಕಾಲೇಜು ಆಗಿದ್ದ ಕಾರಣ, ಅವರು ಸಂಜೆ ಕಾನೂನು ಪದವಿ ವಿದ್ಯಾರ್ಥಿಗಳಾಗಿ ಬರುತ್ತಿದ್ದರು. ಕುಸುಮಾಕರ ದೇಸಾಯಿ ಎಂಬ ವಕೀಲರು ನಮ್ಮ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ನನಗೆ ಪಾಠ ಮಾಡಿದ್ದರು. ಮುಂದೆ ನಾನೇ ಅರೆಕಾಲಿಕ ಉಪನ್ಯಾಸಕನಾದಾಗ ಅವರ ಪತ್ನಿ ಸರಿತಾ ದೇಸಾಯಿಯವರಿಗೆ ಪಾಠ ಮಾಡಿದ್ದೆ. ಕಾಲಗತಿಯಲ್ಲಿ ಕೆಲವೊಮ್ಮೆ ಇಂಥ ಪ್ರಸಂಗಗಳು ನಡೆಯುತ್ತವೆ.

ಸಮಯದ ವಿನಿಯೋಗ
ಒಂದು ದಿನ ಕರ್ನಾಟಕದಿಂದ ದೆಹಲಿಗೆ ಬಂದಿದ್ದ ಇಬ್ಬರು ಐಎಎಸ್ ಪ್ರ್ರೊಬೆಷನರಿ ಅಧಿಕಾರಿಗಳು ನನ್ನ ನಿವಾಸಕ್ಕೆ ದೂರವಾಣಿ ಕರೆ ಮಾಡಿ, ನನ್ನನ್ನು ಸೌಜನ್ಯದ ಭೇಟಿಗೆ ಬರಬಹುದೇ ಎಂದು ಕೇಳಿದರು. `ನೀವು ಕರ್ನಾಟಕದವರು ಖಂಡಿತವಾಗಿಯೂ ಬನ್ನಿ'' ಎಂದು ಹೇಳಿದೆ. ಅವರೊಂದಿಗೆ ನಾನು ಅರ್ಧ ಗಂಟೆ ಮಾತನಾಡಿದ ಮೇಲೆ, ಅವರು ಹೊರಡಲು ಅನುವಾದರು. ಆಗ ಅವರು, `ಸರ್, ನೀವು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಇಷ್ಟೊಂದು ಕೆಲಸದ ಒತ್ತಡವಿದ್ದರೂ ನಮ್ಮೊಂದಿಗೆ ಅರ್ಧ ಗಂಟೆಯನ್ನು ನಮಗಾಗಿ ಕೊಟ್ಟಿರಿ. ನಿಮ್ಮನ್ನು ಕಂಡು ಮಾತನಾಡಿಸಬೇಕು ಎಂದು ನಾವು ಕೇವಲ ಎರಡು ನಿಮಿಷ ಭೇಟಿಗೆ ಅವಕಾಶ ಕೇಳಿದೆವು. ಆದರೆ ನೀವು ಅರ್ಧ ಗಂಟೆಯನ್ನು ನಮಗಾಗಿ ಕೊಟ್ಟಿದ್ದಕ್ಕಾಗಿ ಕೃತಜ್ಞರಾಗಿದ್ದೇವೆ'' ಎಂದರು. ಆಗ ನಾನು ಅವರಿಗೆ ಹೇಳಿದೆ:

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

`ನಾನು ಅರ್ಧ ಗಂಟೆ ಸಮಯವನ್ನು ನಿಮಗೆ ಕೊಟ್ಟಿಲ್ಲ. ಆ ಅರ್ಧ ಗಂಟೆಯನ್ನು ನಿಮ್ಮಲ್ಲಿ ವಿನಿಯೋಗ ಮಾಡಿದ್ದೇನೆ. ನೀವು ನನ್ನ ಸಲಹೆಯಂತೆ ಕರ್ತವ್ಯಪಾಲನೆ ಮಾಡಿದರೆ, ನನ್ನ ಸಮಯದ ವಿನಿಯೋಗ ಸಾರ್ಥಕವಾದಂತೆ. ನಾನು ಸುಪ್ರೀಂ ಕೋರ್ಟ್ ಜಡ್ಜ್ ಆಗಿರುವ ಕಾರಣ ನನ್ನ ಕ್ಷೇತ್ರ ಸೀಮಿತವಾಗಿರುತ್ತದೆ. ಅಂದರೆ, ನಮ್ಮ ಪೀಠದ ಮುಂದೆ ಬರುವ ಪ್ರಕರಣಗಳನ್ನಷ್ಟೇ ನಾನು ಇತ್ಯರ್ಥ ಮಾಡಬಹುದು. ಆದರೆ, ನೀವು ಮುಂದೆ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವಾಗ ಇಡೀ ಜಿಲ್ಲೆಯೇ ನಿಮ್ಮ ಕಾರ್ಯಕ್ಷೇತ್ರವಾಗುತ್ತದೆ. ಸೇವೆ ಮಾಡಲು ನಮಗಿಂತಲೂ ಹೆಚ್ಚಿನ ಅವಕಾಶ ನಿಮಗಿರುತ್ತದೆ. ಆದ್ದರಿಂದ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಅನುಕಂಪದಿಂದ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ. ನೀವು ಹಾಗೆ ಮಾಡಿದಾಗ ನನ್ನ ಅರ್ಧಗಂಟೆ ಸಮಯವನ್ನು ನಿಮ್ಮಲ್ಲಿ ವಿನಿಯೋಗ ಮಾಡಿದ್ದು ಸಾರ್ಥಕವಾಗುತ್ತದೆ'' ಎಂದು ಹೇಳಿದೆ. ಒಮ್ಮೆ ಕಳೆದುಹೋದ ಸಮಯ ಮತ್ತೆ ಎಂದೂ ವಾಪಸ್ ಬಾರದು. ಹಾಗಾಗಿ, ಸಮಯದ ಸದುಪಯೋಗ ಮತ್ತು ಸದ್ವಿನಿಯೋಗ ಬಹಳ ಮುಖ್ಯ.

ನಿರಪರಾಧ ಸಾಬೀತು
ಒಮ್ಮೆ ಒಂದು ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೆ ಬಂದಿತ್ತು. ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದ್ದರಿಂದ ಅಪರಾಧಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಜಸ್ಟೀಸ್ ಯು.ಸಿ.ಬ್ಯಾನರ್ಜಿ ಹಾಗೂ ಇನ್ನೋರ್ವ ನ್ಯಾಯಾಧೀಶರು ಪೀಠದಲ್ಲಿದ್ದು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಮೊದಲ ದಿನ ಇಬ್ಬರೂ ನ್ಯಾಯಾಧೀಶರು ವಾದ-ಪ್ರತಿವಾದವನ್ನು ಆಲಿಸಿ, `ಸಾಮಾನ್ಯವಾಗಿ ಕೆಳಗಿನ ಎರಡೂ ಕೋರ್ಟ್‌ಗಳು ಒಂದೇ ರೀತಿಯ ತೀರ್ಪು ನೀಡಿದ್ದರೆ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಲಾಗುವುದಿಲ್ಲ'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕೋರ್ಟ್ ಸಮಯ ಮುಗಿದಿದ್ದರಿಂದ ಕಲಾಪವನ್ನು ಮರುದಿನಕ್ಕೆ ಮುಂದೂಡಲಾಯಿತು.

ಮರುದಿನ ಒಂದು ಅನಿರೀಕ್ಷಿತ ಬೆಳವಣಿಗೆ ನಡೆಯಿತು. ಜಸ್ಟೀಸ್ ಬ್ಯಾನರ್ಜಿ ಅವರ ಸಹಪಾಠಿ ನ್ಯಾಯಮೂರ್ತಿಗಳು ಅಂದು ಕಾರಣಾಂತರಗಳಿಂದ ಬರಲಾಗದಿದ್ದ ಕಾರಣ, ಪೀಠಕ್ಕೆ ನನ್ನನ್ನು ನಿಯೋಜಿಸಿದರು. ಹಾಗಾಗಿ, ನಾನು ಆ ಕೇಸಿನ ಎಲ್ಲ ವಿವರಗಳನ್ನು ಓದಿಕೊಂಡು ಹೋಗಿದ್ದೆ. ಪ್ರಕರಣದಲ್ಲಿ ಆರು ಮಂದಿ ಅಪರಾಧಿಗಳು. ಅವರಲ್ಲಿ ಇಬ್ಬರು ಅಣ್ಣತಮ್ಮಂದಿರು ಮತ್ತು ಅವರಿಬ್ಬರ ತಲಾ ಇಬ್ಬರು ಮಕ್ಕಳು. ಆ ಊರು ವೈಷಮ್ಯದಿಂದ ಎರಡು ಭಾಗವಾಗಿತ್ತು. ಕೊಲೆಯಾದ ವ್ಯಕ್ತಿಯ ಮನೆಯವರು ಎದುರಾಳಿ ಕುಟುಂಬದ ಎಲ್ಲಾ ಆರು ಮಂದಿ ಗಂಡಸರ ಮೇಲೆ ಕೇಸು ದಾಖಲಿಸಿದ್ದರು. ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದವು. ನನಗೂ ಮೇಲ್ನೋಟಕ್ಕೆ ತೀರ್ಪು ಸರಿ ಎಂದು ಕಂಡುಬಂದರೂ, ಎಂದಿನಂತೆ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಪ್ರಕರಣದಲ್ಲಿ ನಾಲ್ಕೈದು ಮಂದಿ ಸ್ವತಂತ್ರ ಸಾಕ್ಷಿಗಳಿದ್ದರೂ, ಒಬ್ಬನ ಸಾಕ್ಷಿಯನ್ನು ಮಾತ್ರ ಮಾಡಿಸಿ, ಉಳಿದವರನ್ನು ಕೈಬಿಡಲಾಗಿತ್ತು. ಸಾಕ್ಷಿ ನೀಡಿದವನು ಕೊಲೆಯಾದವನ ಸಂಬಂಧಿ ಆಗಿದ್ದನು. ನಾನು ಅಧ್ಯಯನ ಮಾಡುವ ವೇಳೆ ನನ್ನ ಕಣ್ಣಿಗೆ ಬಿದ್ದ ಇಂತಹ ಕೆಲವು ನ್ಯೂನತೆಗಳನ್ನು ಗುರುತು ಮಾಡಿಕೊಂಡಿದ್ದೆ.

ವಿಚಾರಣೆ ಆರಂಭವಾಗುತ್ತಲೇ ಜಸ್ಟೀಸ್ ಬ್ಯಾನರ್ಜಿಯವರು, `ಎರಡೂ ಕೋರ್ಟಿನವರು ಒಂದೇ ರೀತಿ ತೀರ್ಪು ಕೊಟ್ಟಿದ್ದಾರೆ. ಇಂತಹ ಕೇಸಿನಲ್ಲಿ ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ'' ಎಂದು ಹೇಳಿದರು. ಆದರೆ, ನಾನು ಸರ್ಕಾರಿ ವಕೀಲರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ ಎಂದೆ. `ಮೊದಲನೆಯದಾಗಿ, ಐವರು ಪ್ರತ್ಯಕ್ಷ ಸಾಕ್ಷಿಗಳ ಪೈಕಿ ನಾಲ್ವರು ಸ್ವತಂತ್ರ ಸಾಕ್ಷಿಗಳು. ಒಬ್ಬ ಫಿರ್ಯಾದಿದಾರನ ಸಂಬಂಧಿಕ. ಆತನ ಸಾಕ್ಷಿಯನ್ನು ಮಾತ್ರ ಮಾಡಿಸಿ, ಉಳಿದ ನಾಲ್ವರು ಸ್ವತಂತ್ರ ಸಾಕ್ಷಿಗಳನ್ನು ಏಕೆ ಮಾಡಿಸಲಿಲ್ಲ? ಎರಡನೆಯದಾಗಿ, ಕೊಲೆಯಾದವನನ್ನು ಹೊತ್ತುಕೊಂಡು ಆಸ್ಪತ್ರೆಗೆ ಹೋಗುವಾಗ, ಹೊತ್ತುಕೊಂಡು ಹೋದವನ ಬಟ್ಟೆಯಲ್ಲಿ ರಕ್ತದ ಕಲೆಗಳೇ ಇಲ್ಲವಲ್ಲ? ಆತನ ಹೇಳಿಕೆಯನ್ನೂ ದಾಖಲು ಮಾಡಿಕೊಂಡಿಲ್ಲ. ಇಂತಹ ಹಲವು ನ್ಯೂನತೆಗಳನ್ನು ನಾನು ಗಮನಿಸಿದ್ದೇನೆ. ಈ ಸಂದೇಹಗಳಿಗೆ ನಿಮ್ಮ ಉತ್ತರವೇನು? ನೀವು ಸರ್ಕಾರಿ ವಕೀಲರಾಗಿ ಕೋರ್ಟ್‌ಗೆ ಸಹಕರಿಸಬೇಕಾದುದು ನ್ಯಾಯ. ಎರಡೂ ಕುಟುಂಬಗಳ ಮಧ್ಯೆ ವೈಷಮ್ಯವಿತ್ತು. ಹೀಗಿರುವಾಗ ಕೆಳಗಿನ ಕೋರ್ಟುಗಳು ನೀಡಿರುವ ಆದೇಶಗಳು ಸರಿಯಾಗಿವೆ ಎಂದು ನಿಮಗೆ ಅನಿಸುತ್ತದೆಯೇ?'' ಎಂದು ಪ್ರಶ್ನಿಸಿದೆ. ಸರ್ಕಾರಿ ವಕೀಲರು `ಇಲ್ಲ. ಸರಿಯಾಗಿಲ್ಲ'' ಎಂದು ಒಪ್ಪಿಕೊಂಡರು. ಪೀಠದ ಅಧ್ಯಕ್ಷರಾಗಿದ್ದ ಜಸ್ಟೀಸ್ ಬ್ಯಾನರ್ಜಿಯವರಿಗೆ ಆಶ್ಚರ್ಯ. ಕೂಡಲೇ ಅವರು ನನ್ನ ಬೆನ್ನುತಟ್ಟಿ, `ಪಾಟೀಲರೇ, ನೀವು ಸರಿಯಾದ ಅಂಶಗಳನ್ನೇ ಪತ್ತೆ ಹಚ್ಚಿದ್ದೀರಿ. ಒಂದು ವೇಳೆ, ನಿನ್ನೆಯೇ ತೀರ್ಪು ಕೊಟ್ಟಿದ್ದಿದ್ದರೆ ನಿರಪರಾಧಿಗಳಿಗೆ ವಿನಾಕಾರಣ ಜೀವಾವಧಿ ಶಿಕ್ಷೆಯಾಗುತ್ತಿತ್ತು. ನಮ್ಮಿಂದಾಗಿ ಎರಡೂ ಕುಟುಂಬದ ಪರಿಸ್ಥಿತಿ ಹದಗೆಡುತ್ತಿತ್ತು. ಒಂದು ವೇಳೆ, ಆ ಕುಟುಂಬದ ಎಲ್ಲ ಪುರುಷರಿಗೆ ಶಿಕ್ಷೆಯಾಗಿದ್ದಿದ್ದರೆ ಆ ಕುಟುಂಬದ ಮಕ್ಕಳ ಗತಿ ಏನಾಗುತ್ತಿತ್ತು. ಎಷ್ಟು ದೊಡ್ಡ ಅನಾಹುತವನ್ನು ತಪ್ಪಿಸಿದಿರಿ! ಈ ಪ್ರಕರಣದ ತೀರ್ಪನ್ನು ನೀವೇ ಬರೆಯಿರಿ'' ಎಂದು ಹೇಳಿದರು. ನಾನು ತೀರ್ಪು ಬರೆಸಿದೆ. ಕೆಳಗಿನ ಎರಡೂ ಕೋರ್ಟುಗಳು ನೀಡಿದ ತೀರ್ಪನ್ನು ತಳ್ಳಿಹಾಕಿ, ಆ ಆರೂ ಜನ ನಿರಪರಾಧಿಗಳು ಎಂದು ನಾವು ತೀರ್ಪು ನೀಡಿದೆವು.

Follow Us:
Download App:
  • android
  • ios