Asianet Suvarna News Asianet Suvarna News

ಬೆಂಗ್ಳೂರಿನ ಪ್ರವಾಹ ಪರಿಸ್ಥಿತಿ ತಡೆಗಾಗಿ ವಿಶ್ವಬ್ಯಾಂಕ್‌ ಸಾಲ..!

ಬಿಬಿಎಂಪಿ ಜತೆಗೆ ಜಲಮಂಡಳಿಯೂ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯುತ್ತಿದೆ. ನೂತನ ಭೂಗತ ಒಳಚರಂಡಿ ವ್ಯವಸ್ಥೆ ಅಳವಡಿಕೆ, ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ ₹1 ಸಾವಿರ ಕೋಟಿ ಸಾಲ ಪಡೆಯುತ್ತಿದೆ.  

World Bank Loan for Flood Prevention in Bengaluru grg
Author
First Published May 10, 2024, 4:37 AM IST

ಬೆಂಗಳೂರು(ಮೇ.10):  ಕಳೆದ ಕೆಲವರ್ಷಗಳಿಂದ ಆರ್ಥಿಕವಾಗಿ ಸದೃಢಗೊಳ್ಳುತ್ತಿರುವ ಬಿಬಿಎಂಪಿ ಇದೀಗ ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ 1,500 ಕೋಟಿ ರು. ಸಾಲ ಪಡೆಯಲು ನಿರ್ಧರಿಸಿದೆ.

ಆರ್ಥಿಕ ಶಿಸ್ತು ಕಾಪಾಡದೆ ಕೆ.ಆರ್‌. ಮಾರುಕಟ್ಟೆ, ಯೂನಿಟಿ ಕಟ್ಟಡ ಸೇರಿದಂತೆ ಇನ್ನಿತರ ಆಸ್ತಿಗಳನ್ನು ಅಡವಿಟ್ಟು ಸಾವಿರಾರು ಕೋಟಿ ರು. ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿದ್ದ ಬಿಬಿಎಂಪಿ, ಕಳೆದ ಆರೇಳು ವರ್ಷಗಳಿಂದ ಈಚೆಗೆ ಆರ್ಥಿಕ ಸದೃಢತೆಯತ್ತ ಸಾಗುತ್ತಿದೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಸಾಲದಿಂದ ಮುಕ್ತವಾಗಿ ಅಡವಿಟ್ಟಿದ್ದ ಕಟ್ಟಡಗಳನ್ನೆಲ್ಲ ವಾಪಾಸು ಪಡೆದಿತ್ತು. ಆದರೆ, ಇದೀಗ ರಾಜಕಾಲುವೆ ದುರಸ್ತಿ ಸೇರಿದಂತೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಅಗತ್ಯವಿರುವ ಹಣಕ್ಕಾಗಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲು ಮುಂದಾಗಿದೆ. 1,500 ಕೋಟಿ ರು.ಗೆ ಬೇಡಿಕೆ ಇಟ್ಟಿರುವ ಬಿಬಿಎಂಪಿಗೆ, ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಸಾಲ ಪಡೆಯಲು ಹಸಿರು ನಿಶಾನೆಯನ್ನೂ ತೋರಿದೆ. ಅಲ್ಲದೆ, ವಿಶ್ವ ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ರಾಜ್ಯ ಸರ್ಕಾರದಿಂದ ಬ್ಯಾಂಕ್‌ ಗ್ಯಾರಂಟಿ ನೀಡಲಿದೆ.

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ನಿರ್ಬಂಧವಿಲ್ಲ; ಸ್ಪಷ್ಟೀಕರಣ ಕೊಟ್ಟ ಬಿಬಿಎಂಪಿ!

173 ಕಿ.ಮೀ. ರಾಜಕಾಲುವೆ ದುರಸ್ತಿ

ನಗರದಲ್ಲಿ 820 ಕಿ.ಮೀ.ಗೂ ಹೆಚ್ಚಿನ ಮಳೆ ನೀರುಗಾಲುವೆ (ರಾಜಕಾಲುವೆ) ಇದೆ. ಅದರಲ್ಲಿ 400 ಕಿ.ಮೀ.ಗೂ ಹೆಚ್ಚಿನ ರಾಜಕಾಲುವೆಯನ್ನು ದುರಸ್ತಿ ಮಾಡಲಾಗಿದೆ. ಉಳಿದ ರಾಜಕಾಲುವೆಗಳ ದುರಸ್ತಿ ಮಾಡಲು ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲಾಗುತ್ತಿದೆ. ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ 173 ಕಿ.ಮೀ. ಉದ್ದದ ರಾಜಕಾಲುವೆಗಳಲ್ಲಿ ತಡೆಗೋಡೆ ನಿರ್ಮಾಣ, ರಾಜಕಾಲುವೆ ದಡದ ಸೌಂದರ್ಯೀಕರಣ ಮಾಡಲಾಗುತ್ತದೆ.

ಪ್ರವಾಹ ತಡೆಗೆ ಹಲವು ಯೋಜನೆಗಳು:

ಜತೆಗೆ ನಗರದ ಪ್ರಮುಖ ಕೆರೆಗಳ ದುರಸ್ತಿ, ಹೂಳು ತೆಗೆಯುವುದು, ಚರಂಡಿಗಳ ದುರಸ್ತಿ, ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ವಿಶ್ವ ಬ್ಯಾಂಕ್‌ನಿಂದ ಪಡೆಯಲಾಗುವ ಹಣವನ್ನು ಬಳಸಲಾಗುತ್ತದೆ. ಈ ಬಗ್ಗೆ ವಿಶ್ವ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಭೆಯನ್ನೂ ನಡೆಸಿದ್ದು, ಬಿಬಿಎಂಪಿ ರೂಪಿಸಿರುವ ಯೋಜನೆಗಳ ನೀಲಿನಕ್ಷೆಯನ್ನು ವಿಶ್ವ ಬ್ಯಾಂಕ್‌ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.

ಚರಂಡಿ, ರಾಜಕಾಲುವೆ ಸ್ವಚ್ಛತೆಗೆ 5 ದಿನ ಡೆಡ್‌ಲೈನ್‌: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ

ಜಲಮಂಡಳಿಯಿಂದಲೂ ಸಾಲಕ್ಕೆ ಬೇಡಿಕೆ

ಬಿಬಿಎಂಪಿ ಜತೆಗೆ ಜಲಮಂಡಳಿಯೂ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯುತ್ತಿದೆ. ನೂತನ ಭೂಗತ ಒಳಚರಂಡಿ ವ್ಯವಸ್ಥೆ ಅಳವಡಿಕೆ, ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ ₹1 ಸಾವಿರ ಕೋಟಿ ಸಾಲ ಪಡೆಯುತ್ತಿದೆ.

ನಗರದಲ್ಲಿ ಪ್ರವಾಹ ಪೀಡಿತ ಪರಿಸ್ಥಿತಿ ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಶ್ವ ಬ್ಯಾಂಕ್‌ನಿಂದ ನೆರವು ಪಡೆಯಲಾಗುತ್ತಿದೆ. ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ, ಕೆರೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸದ್ಯ ಇದು ಪ್ರಾಥಮಿಕ ಹಂತದಲ್ಲಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಕ್ತಾಯದ ನಂತರ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

Follow Us:
Download App:
  • android
  • ios