Asianet Suvarna News Asianet Suvarna News

ಚಾಮರಾಜನಗರ : ಕುಗ್ರಾಮಗಳಿಗೆ ಇನ್ನಾದರೂ ಸಿಗುತ್ತಾ ಮೂಲಸೌಕರ್ಯ..!

ಸುಸಜ್ಜಿತವಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿರುವ ಇಂಡಿಗನತ್ತ ಗ್ರಾಮ. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ತೀರ ಹಿಂದುಳಿದಿದೆ. ಮಲೆ ಮಾದೇಶ್ವರ ಬೆಟ್ಟ ಶ್ರೀ ಕ್ಷೇತ್ರದಿಂದ 9 ಕಿಮೀ ದೂರದಲ್ಲಿರುವ ಇಂಡಿಗನತ್ತ ಗ್ರಾಮ ಮೂಲಭೂತ ಸೌಲಭ್ಯಗಳಿಲ್ಲದೆ ಮತದಾನ ಬಹಿಷ್ಕರಿಸಿ ಚುನಾವಣೆ ವೇಳೆಯಲ್ಲಿ ನಡೆದ ಘರ್ಷಣೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

Chamrajnagar Villages getting more infrastructure  SNR
Author
First Published May 2, 2024, 11:18 AM IST

 ಹನೂರು : ಸುಸಜ್ಜಿತವಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿರುವ ಇಂಡಿಗನತ್ತ ಗ್ರಾಮ. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ತೀರ ಹಿಂದುಳಿದಿದೆ. ಮಲೆ ಮಾದೇಶ್ವರ ಬೆಟ್ಟ ಶ್ರೀ ಕ್ಷೇತ್ರದಿಂದ 9 ಕಿಮೀ ದೂರದಲ್ಲಿರುವ ಇಂಡಿಗನತ್ತ ಗ್ರಾಮ ಮೂಲಭೂತ ಸೌಲಭ್ಯಗಳಿಲ್ಲದೆ ಮತದಾನ ಬಹಿಷ್ಕರಿಸಿ ಚುನಾವಣೆ ವೇಳೆಯಲ್ಲಿ ನಡೆದ ಘರ್ಷಣೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಏ.26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಹಾಗೂ ಮತಗಟ್ಟೆ ಹಾನಿ ಮಾಡಿರುವುದರ ಬಗ್ಗೆ ಮತ್ತು ಮಂದಾರೆ ಗ್ರಾಮದ ನಿವಾಸಿಗಳ ಮೇಲೆ ಹಲ್ಲೆ ಸೇರಿದಂತೆ ಮೂರು ಪ್ರಕರಣಗಳಲ್ಲಿ 250ಕ್ಕೂ ಹೆಚ್ಚು ಇಂಡಿಗನತ್ತ ಗ್ರಾಮದ ನಿವಾಸಿಗಳ ಮೇಲೆ ದೂರು ದಾಖಲಾಗಿದ್ದು 35ಕ್ಕೂ ಹೆಚ್ಚು ಮಂದಿ ಜೈಲು ಪಾಲಾಗಿದ್ದಾರೆ. ಕೆಲವರು ಗ್ರಾಮವನ್ನೇ ತೊರೆದು ತಲೆಮರೆಸಿಕೊಂಡಿದ್ದು ಗ್ರಾಮದಲ್ಲಿ ಪೊಲೀಸರ ಸರ್ಪಗಾವಲಿನ ನಡುವೆ ಇರುವಂತ ಹೆಂಗಸರು ಮಕ್ಕಳು ಭಯದ ವಾತಾವರಣದಿಂದ ತಮ್ಮವರನ್ನು ದೂರ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದ್ದಾರೆ.

ಆರ್ಥಿಕ ಸಂಕಷ್ಟದ ವೇಳೆ ಬಂದ ಗಂಡಾಂತರ: ಇಂಡಿಗನತ್ತ ಗ್ರಾಮದಲ್ಲಿ ಇರುವ ಅವಿದ್ಯಾವಂತ ನಿರುದ್ಯೋಗಿಗಳೆಲ್ಲ ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತದವರೆಗೆ ಜೀಪ್ ವಾಹನಗಳಿಂದ ಬಂದಂತ ವರಮಾನದಿಂದ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು. ಮಹಿಳೆಯರು ಸಹ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುತ್ತಿದ್ದ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕಾನೂನಿನಿಂದ ಚಾರಣಕ್ಕೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಕೆಲಸವಿಲ್ಲದೆ ಇತ್ತ ಸೌಲಭ್ಯವು ಇಲ್ಲದೆ ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡರು ಎಂದು ಬಲವಾದ ಕಾರಣ ಕೇಳಿ ಬಂದಿದೆ.

ತುಳಸಿಕೆರೆ, ಇಂಡಿಗನತ್ತ, ಮೆಂದರೆ, ನಾಗಮಲೆ, ಪಡಸಲನತ್ತ ಗ್ರಾಮದ ನಿವಾಸಿಗಳಲ್ಲಿ ಸೇರಿ ಚುನಾವಣಾ ಬಹಿಷ್ಕರಿಸಿ ಮತದಾನ ವೇಳೆ ನಡೆದ ಘರ್ಷಣೆಯಿಂದ ಆರ್ಥಿಕ ಸಂಕಷ್ಟದಿಂದ ಇಲ್ಲಿನ ಕೆಲವರು ಮಾಡಿದ ತಪ್ಪಿನಿಂದ ಇಡೀ ಗ್ರಾಮದ ನಾಗರಿಕರು ಹಾಗೂ ಮಕ್ಕಳು ಮಹಿಳೆಯರು ವಯಸ್ಸಾದವರು ನಲಗುವಂತಾಗಿದೆ.

ಇಂಡಿಗನತ್ತ ಗ್ರಾಮಕ್ಕೆ ಕಪ್ಪು ಚುಕ್ಕೆ : ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಂಡಿಗನತ್ತ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಚುನಾವಣೆ ಮತದಾನ ಬಹಿಷ್ಕರಿಸುತ್ತಾ ಬಂದಿವೆ. ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 146 ತೆರೆದಿರುವುದರಿಂದ ನಿವಾಸಿಗಳನ್ನು ಲೋಕಸಭಾ ಚುನಾವಣೆ ಮತದಾನ ವೇಳೆ ಚುನಾವಣೆ ಬಹಿಷ್ಕರಿಸಿ ಗ್ರಾಮದಲ್ಲಿದ್ದ ನಿವಾಸಿಗಳನ್ನು ಇನ್ಸ್‌ಪೆಕ್ಟರ್ ಜಗದೀಶ್ ಮೆಂದರೆ ಗ್ರಾಮದ ನಿವಾಸಿಗಳನ್ನು ಮತದಾನ ಮಾಡುವಂತೆ ಪ್ರೇರೇಪಿಸಿ ಕರೆತಂದಿದ್ದರು. ಈ ವೇಳೆಯಲ್ಲಿ ಎರಡು ಗ್ರಾಮಗಳ ಘರ್ಷಣೆಗೆ ಕಾರಣವಾಯಿತು. ತಾಲೂಕು ದಂಡಾಧಿಕಾರಿ ಸೇರಿದಂತೆ ಮತಗಟ್ಟೆ ಧ್ವಂಸಗೊಳಿಸಿ, ಇವಿಎಂ ಮಷಿನ್ ಸಹ ಹಾಳು ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ಉಂಟು ಮಾಡಲು ಮಲೆ ಮಾದೇಶ್ವರ ಬೆಟ್ಟ ಇನ್ಸ್‌ಪೆಕ್ಟರ್ ಜಗದೀಶ್ ಚುನಾವಣೆ ಬಹಿಷ್ಕರಿಸಿರುವ ಮತಗಟ್ಟೆ ಇರುವ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸದೆ ಬೆರಳಿಣಿಕೆಯಷ್ಟು ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಭದ್ರತೆ ವೈಫಲ್ಯದಿಂದ ನಡೆದಂತಹ ಘಟನೆಯಿಂದ ಇಂಡಿಗನತ್ತ ಗ್ರಾಮಕ್ಕೆ ಕಪ್ಪು ಚುಕ್ಕೆ ಜೊತೆಗೆ ಗ್ರಾಮದ ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗುವಂತೆ ಘಟನೆ ನಡೆದಿರುವುದು ರಾಷ್ಟ್ರಮಟ್ಟದಲ್ಲಿ ಸಹ ಸದ್ದು ಮಾಡಿದೆ.

ಘಟನೆ ಬಗ್ಗೆ ಸಹ ಚಾಮರಾಜನಗರ ಜಿಲ್ಲಾಧಿಕಾರಿ ಸಹ ಈ ಘಟನೆಯ ಬಗ್ಗೆ ಏ.26ರಂದು ಚಾಮರಾಜನಗರದಲ್ಲಿ ಮಾಧ್ಯಮದವರಿಗೆ ಭದ್ರತಾ ವೈಫಲ್ಯದಿಂದ ಘಟನೆ ಜರುಗಿದೆ. ಹೀಗಾಗಿ ನಡೆದಿರುವ ಘಟನೆಯನ್ನು ಇಲಾಖೆ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಘಟನೆಗೆ ಕಾರಣರಾದವರನ್ನು ಹಾಗೂ ಪ್ರೇರೇಪಿಸಿದ ಅಧಿಕಾರಿ ವರ್ಗದವರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಜನ ಜಾನುವಾರುಗಳ ಸಂಕಷ್ಟ:

ಏ.26ರಂದು ನಡೆದ ಗಲಭೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿ ಗ್ರಾಮದ ಜನತೆ ಬಂಧನ ಭೀತಿಯಿಂದ ಮನೆಗಳಿಗೆ ಬೀಗ ಜಡಿದು ಗ್ರಾಮ ತೊರೆದಿದ್ದಾರೆ. ಇದರಿಂದ ಅಲ್ಲಿನ ನಿವಾಸಿಗಳ ಸಾಕು ಪ್ರಾಣಿಗಳು ನೀರು ಮೇವು ಇಲ್ಲದೆ ಮತ್ತು ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸಂಕಷ್ಟದಿಂದ ನಲಗುತ್ತಿದ್ದಾರೆ.

ಜಿಲ್ಲಾಡಳಿತ ಗಮನ ಹರಿಸಲಿ: ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಮತಗಟ್ಟೆ ಧ್ವಂಸಗೊಳಿಸಿ ಕೆಲವರು ಜೈಲು ಪಾಲಾದರೆ ಇನ್ನು ಕೆಲವರು ಗ್ರಾಮ ತೊರೆದಿದ್ದಾರೆ. ಉಳಿದಂತೆ ಬೆರಳಿಣಿಕೆಯಷ್ಟು ಮತದಾನವಾಗಿದೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಮಹಿಳೆಯರು, ವೃದ್ಧರು, ಮಕ್ಕಳು ತಮ್ಮ ಮನೆಯ ಪುರುಷರಿಲ್ಲದೆ ಆರ್ಥಿಕ ಸಂಕಷ್ಟದಿಂದ ಮನೆಗಳಿಂದ ಹೊರಬರದೆ ಪೋಲಿಸ್ ಸರ್ಪಗಾವಲಿರುವ ಗ್ರಾಮದಲ್ಲಿ ಯಾರಿಗೂ ಸಮಸ್ಯೆಯನ್ನು ಹೇಳಲಾಗದೆ ನಿವಾಸಿಗಳು ಬಂಧನ ಭೀತಿಯಲ್ಲಿದ್ದಾರೆ. ಸಂಕಷ್ಟದಿಂದ ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ, ನಲಗುತ್ತಿರುವ ನಿವಾಸಿಗಳಿಗೆ ಜಿಲ್ಲಾಡಳಿತ ಸೂಕ್ತ ನೆರವು, ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios