Asianet Suvarna News Asianet Suvarna News

ಬೆಂ.ಗ್ರಾಮಾಂತರ ಕ್ಷೇತ್ರ - ಗೆಲುವಿನ ದಡ ಸೇರಲು ಕಮಲ ರಣತಂತ್ರ!

ತೀವ್ರ ಕುತೂಹಲ ಕೆರಳಿಸಿ ರಾಜ್ಯದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಗೆಲುವಿನ ದಡ ಸೇರಿಸಲು ಕಮಲಪತಿಗಳು ರಣತಂತ್ರ ಹೆಣೆದಿದ್ದಾರೆ.

Bengaluru Rural  - BJP  Masterplan to join the shore of victory snr
Author
First Published Apr 19, 2024, 1:55 PM IST

-ಎಂ.ಅಫ್ರೋಜ್ ಖಾನ್

  ರಾಮನಗರ :  ತೀವ್ರ ಕುತೂಹಲ ಕೆರಳಿಸಿ ರಾಜ್ಯದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಗೆಲುವಿನ ದಡ ಸೇರಿಸಲು ಕಮಲಪತಿಗಳು ರಣತಂತ್ರ ಹೆಣೆದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತವರು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಭದ್ರಕೋಟೆಯಾಗಿ ರೂಪುಗೊಂಡಿದೆ. ಇದನ್ನು ಬೇಧಿಸುವ ಸಲುವಾಗಿಯೇ ಬಿಜೆಪಿ ವರಿಷ್ಠರು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಮೊದಲಿನಿಂದಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಬದ್ಧ ವೈರಿಗಳು. ಎರಡು ಕುಟುಂಬಗಳ ಸದಸ್ಯರು ಕೆಲ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಮುಖಾಮುಖಿಯಾಗಿದ್ದು ಇದೆ. ಗೌಡರ ಕುಟುಂಬದ ಸದಸ್ಯರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಸುಲಭವಾಗಿ ಜೆಡಿಎಸ್ ನ ಸಹಕಾರ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿಯೇ ಬಿಜೆಪಿ ವರಿಷ್ಠರು ಡಾ.ಸಿ.ಎನ್.ಮಂಜುನಾಥ್ ಅವರನ್ನು ಅಖಾಡಕ್ಕಿಳಿಸಿದೆ.

ಅಶೋಕ್ ರಿಂದ ಅಶ್ವತ್ಥ್ ಗೆ ಸಾರಥ್ಯ :

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಉಸ್ತುವಾರಿಯನ್ನು ತೆರೆಮರೆಯಲ್ಲಿ ಸದ್ದಿಲ್ಲದೆ ಬಿಜೆಪಿ ಬದಲಾವಣೆ ಮಾಡಿದೆ. ಈ ಹಿಂದೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ನೀಡಿದ್ದ ಕ್ಷೇತ್ರದ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಹೆಗಲಿಗೆ ವಹಿಸಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ಹೋದ ಬಳಿಕ ರಾಜಕೀಯ ಲೆಕ್ಕಾಚಾರಗೆಳಲ್ಲವೂ ಅದಲು ಬದಲಾಗಿದೆ.

ಈ ಕ್ಷೇತ್ರದಲ್ಲಿ ಡಿಕೆ ಸಹೋದರರು ರಾಜಕೀಯವಾಗಿ ಬಲಿಷ್ಠರಾಗಿದ್ದು, ಅವರನ್ನು ಸಮರ್ಥವಾಗಿ ಎದುರಿಸಲು ಚತುರ ರಾಜಕಾರಣಿ, ಎದೆಗಾರಿಕೆ ಇರುವ ನಾಯಕನ ಅಗತ್ಯವಿತ್ತು. ಈ ಕಾರಣದಿಂದಲೇ ಬಿಜೆಪಿ ವರಿಷ್ಠರು ಅಶೋಕ್ ರವರ ಸ್ಥಾನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಆಯ್ಕೆ ಮಾಡಿ ಉಸ್ತುವಾರಿಯ ಜವಾಬ್ದಾರಿ ನೀಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅಶ್ವತ್ಥ ನಾರಾಯಣ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಅಶ್ವತ್ಥ ನಾರಾಯಣ ಮತ್ತು ಡಿ.ಕೆ.ಸುರೇಶ್ ಮುಖಾಮುಖಿ ಆಗಿ ರಣರಂಗವನ್ನೇ ಸೃಷ್ಟಿ ಮಾಡಿದ್ದರು. ಅಶ್ವತ್ಥ ನಾರಾಯಣ ಅವರಿಗೆ ಉಸ್ತುವಾರಿ ನೀಡಿದರೆ ವರ್ಕ್ ಔಟ್ ಆಗುತ್ತದೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.

ಶಾಸಕರು - ಪರಾಜಿತರ ನಿಯೋಜನೆ :

ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಅನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ‌ಮಾಗಡಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಶಾಸಕರ ಜೊತೆಗೆ ಪರಾಜಿತ ಅಭ್ಯರ್ಥಿಗಳನ್ನು ನಿಯೋಜಿಸಲಾಗಿದ್ದು, ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿ ಹಗಲಿರುಳು ಕಾರ್ಯನಿರ್ವಹಣೆ ಮಾಡಬೇಕಿದೆ.

ಅದರಲ್ಲೂ ಪ್ರಮುಖವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂ‌.ಕೃಷ್ಣಪ್ಪ ಜನಪ್ರತಿನಿಧಿಯಾಗಿದ್ದು, ಅವರ ಕ್ಷೇತ್ರದಲ್ಲಿ 7 ಲಕ್ಷ ಮತಗಳಿದೆ. ಇದರಲ್ಲಿ ಶೇ.90 ಕ್ಕೂ ಹೆಚ್ಚು ಮತ ಚಲಾವಣೆಯಾಗುವಂತೆ ನೋಡಿಕೊಂಡು ಡಾ.ಸಿ.ಎನ್. ಮಂಜುನಾಥ್‌ಗೆ ದೊಡ್ಡ ಪ್ರಮಾಣದ ಮತಗಳನ್ನು ಲೀಡ್ ಆಗಿ ಕೊಡಿಸಬೇಕೆಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.

ಮತ್ತೊಂದೆಡ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮುನಿರತ್ನ ಬಿಜೆಪಿ ಶಾಸಕರಾಗಿದ್ದು, ಅವರ ಕ್ಷೇತ್ರದಲ್ಲಿ 5 ಲಕ್ಷ ಮತದಾರರಿದ್ದಾರೆ.ಈ ಕ್ಷೇತ್ರದಲ್ಲೂ ಕೂಡ ಶೇ.90 ಕ್ಕಿಂತ ಹೆಚ್ಚು ಮತಗಳ ಲೀಡ್ ಮಂಜುನಾಥ್ ಪರ ಚಲಾವಣೆಯಾಗುವಂತೆ ನೋಡಿಕೊಳ್ಳುವುದರೊಂದಿಗೆ ಲೀಡ್ ಕೊಡಿಸಲೇಬೇಕು. ಅನೇಕಲ್‌ನಲ್ಲಿ 4 ಲಕ್ಷ ಮತಗಳಿದ್ದು, ಇಲ್ಲೂ ಕೂಡ ಡಾ.ಮಂಜುನಾಥ್‌ಗೆ ಲೀಡ್ ಕೊಡಿಸಲೇಬೇಕು.

ಈ ಮೂರು ಕ್ಷೇತ್ರಗಳಲ್ಲೇ ಲೆಕ್ಕ ಹಾಕಿದರೆ, 16 ಲಕ್ಷ ಮತಗಳಾಗುತ್ತದೆ. ಜೊತೆಗೆ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಮತ್ತು ಅನೇಕಲ್ ಭಾಗಗಳಲ್ಲಿ ನಗರಗಳೇ ಹೆಚ್ಚಾಗಿದ್ದು, ಬಿಜೆಪಿ ಬೆಂಬಲಿಸುವ ಮತಗಳಿವೆ. ಈ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ‌ಮತಗಳನ್ನು ಲೀಡ್ ಆಗಿ ಮಾಡಿಕೊಳ್ಳಲೇಬೇಕು.ಇದನ್ನು ಹೊರತುಪಡಿಸಿ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿಯಾಗಿ 2 ರಿಂದ 2.5 ಲಕ್ಷ ಮತಗಳಿದೆ.ಇದನ್ನು ಕ್ರೂಢಿಕರಣ ಮಾಡಿದರೆ 12.50 ಲಕ್ಷ ಮತಗಳು ಆಗಲಿದೆ.

ಈ 5 ಕ್ಷೇತ್ರಗಳ ಪೈಕಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಜುಗಲ್‌ಬಂದಿ ವರ್ಕ್‌ಔಟ್ ಮಾಡಬೇಕು.ಇತ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿಗೆ ಲೋಕಸಭಾ ಚುನಾವಣೆ ಅಂದರೆ ಲೀಡ್ ಬರುತ್ತಲೇ ಇದೆ.ಇದನ್ನೇ ಈಗಲೂ ಮುಂದುವರೆಸಿದರೆ, ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಪ್ರಯತ್ನ ಮಾಡಿದರೆ ಮಂಜುನಾಥ್‌ ರವರ ಗೆಲುವಿನ ಹಾದಿ ಸುಲಭವಾಗಬಹುದು ಎಂದು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

 ಒಕ್ಕಲಿಗರ ಮತಗಳೇ ನಿರ್ಣಾಯಕ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ,‌ ವಿಸ್ತೀರ್ಣ ಹಾಗೂ ಜನಸಂಖ್ಯೆ ಎರಡಲ್ಲೂ ಅತ್ಯಂತ ದೊಡ್ಡ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದೆ. 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ. ಹೀಗಾಗಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ರವರ ಗೆಲುವಿಗಾಗಿ ಅವಿರತವಾಗಿ ಶ್ರಮಿಸಲು ವೇದಿಕೆ ಸಿದ್ಧಪಡಿಸುತ್ತಿರುವ ಬಿಜೆಪಿ ನಾಯಕರು ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ರಾಜಕೀಯ ತಂತ್ರಗಾರಿಕೆ ಗುಮಾನಿ

ಡಿಕೆ ಸಹೋದರರು ಬಿಜೆಪಿ - ಜೆಡಿಎಸ್ ಮೈತ್ರಿಯ ಶಕ್ತಿ ಕುಂದಿಸಲು ಚನ್ನಪಟ್ಟಣ ಮಾತ್ರವಲ್ಲದೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಉಭಯ ಪಕ್ಷಗಳ ಪ್ರತಿನಿಧಿಗಳು, ಮುಖಂಡರು ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಗಾಳ ಹಾಕಿ ಯಶಸ್ವಿಯಾಗುತ್ತಿದ್ದಾರೆ. ಡಿಕೆ ಸಹೋದರರು ಹೂಡುತ್ತಿರುವ ತಂತ್ರಗಳಿಗೆ ಕಮಲ - ದಳಪತಿಗಳು ಪ್ರತಿ ತಂತ್ರ ಹೆಣೆಯದೆ ಮೌನ ವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಎರಡು ಪಕ್ಷಗಳ ಪ್ರಮುಖರು ಗಾಳಕ್ಕೆ ಸಿಲುಕಿ ಪಕ್ಷಾಂತರ ಆಗುತ್ತಿದ್ದಾರೊ ಅಥವಾ ಅದರ ಹಿಂದೆ ದಳಪತಿ - ಸೈನಿಕನ ರಾಜಕೀಯ ತಂತ್ರಗಾರಿಕೆ ಅಡಗಿದೆಯೋ ಎಂಬ ಗುಮಾನಿಯೂ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

Follow Us:
Download App:
  • android
  • ios