Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ನಾಡಿದ್ದು ಮತದಾನಕ್ಕೆ ಬೆಂಗಳೂರು ಸಜ್ಜು..!

ಬೆಂಗಳೂರಿನಲ್ಲಿ ಒಟ್ಟು 1,01,27,869 ಮತದಾರರಿದ್ದು, ಈ ಪೈಕಿ 52,16,091 ಪುರುಷ, 49,09,958 ಮಹಿಳಾ ಮತದಾರರು ಹಾಗೂ 1,820 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಈ ಪೈಕಿ 31,173 ಅಂಗವಿಕಲರು, 1,60,232 ಯುವ ಮತದಾರರು, 1,665 ಸೇವಾ ಮತ್ತು 2,158 ಎನ್‌ಆರ್‌ಐ ಮತದಾರರಿದ್ದಾರೆ. 

Bengaluru is Ready for Voting on April 26th in Lok Sabha Elections 2024 grg
Author
First Published Apr 24, 2024, 8:43 AM IST

ಬೆಂಗಳೂರು(ಏ.24):   ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1.01 ಕೋಟಿ ಮತದಾರರಿದ್ದು, ಏ.26ರ ಮತದಾನಕ್ಕೆ 8,984 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್‌ ಮಾಹಿತಿ ನೀಡಿದ್ದಾರೆ.

ಮಂಗಳವಾರ ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ತುಷಾರ್‌ ಗಿರಿನಾಥ್‌, ಒಟ್ಟು 1,01,27,869 ಮತದಾರರಿದ್ದು, ಈ ಪೈಕಿ 52,16,091 ಪುರುಷ, 49,09,958 ಮಹಿಳಾ ಮತದಾರರು ಹಾಗೂ 1,820 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಈ ಪೈಕಿ 31,173 ಅಂಗವಿಕಲರು, 1,60,232 ಯುವ ಮತದಾರರು, 1,665 ಸೇವಾ ಮತ್ತು 2,158 ಎನ್‌ಆರ್‌ಐ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

Indian Elections: ಮಹಿಳೆಯರಿಗೆ ಭಾರತದಲ್ಲಿ ಮತದಾನದ ಹಕ್ಕು ಸಿಕ್ಕಿದ್ಯಾವಾಗ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8,984 ಮತಗಟ್ಟೆಗಳಿದ್ದು, ಈ ಪೈಕಿ ಸೂಕ್ಷ್ಮ 2,003 ಹಾಗೂ ಅತೀ ಸೂಕ್ಷ್ಮ 253 ಮತಗಟ್ಟೆಗಳು ಹಾಗೂ 30 ಅತಿ ಹೆಚ್ಚು ಖರ್ಚು ವೆಚ್ಚದ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. 102 ಚೆಕ್ ಪೋಸ್ಟ್ ಮತ್ತು 28 ಮಾಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಮತಗಟ್ಟೆ ಕಾರ್ಯಕ್ಕೆ 43,123 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಮತಗಟ್ಟೆಗಳ ಪೈಕಿ ಶೇಕಡ 50ರಷ್ಟು ಮತಗಟ್ಟೆಗಳು ಅಂದರೆ, 4,492 ಮತಗಟ್ಟೆಗಳಲ್ಲಿ ಮತದಾನದಂದು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11,793 ಸಿಎಪಿಎಫ್‌ ಸಿಬ್ಬಂದಿ ಹಾಗೂ ನಾನ್ ಸಿಎಪಿಎಫ್‌ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಅಕ್ರಮ ಕಂಡರೆ 112ಕ್ಕೆ ದೂರು ನೀಡಿ

ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಾರ್ವನಿಕರು ನಿರ್ಭೀತಿಯಿಂದ ಮತದಾನ ಮಾಡಲು ಅಗತ್ಯವಾದ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಾಯಕ್ಕಾಗಿ ಇಲ್ಲವೆ ಚುನಾವಣಾ ಅಕ್ರಮಗಳನ್ನು ಮಾಹಿತಿ ನೀಡಲು ಪೊಲೀಸರು ದೂರವಾಣಿ 112ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಚುನಾವಣಾ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆಬೀಳಲಿದೆ. ಚುನಾವಣಾ ಕರ್ತವ್ಯಕ್ಕಾಗಿ ಬೆಂಗಳೂರು ನಗರ ಪೊಲೀಸ್ ಘಟಕದಿಂದ 9,397 ಪೊಲೀಸ್ ಅಕಾರಿ ಮತ್ತು ಸಿಬ್ಬಂದಿ, 3,919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿ ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಟ್ಟು 8,088 ಮತಗಟ್ಟೆಗಳಿವೆ. ಈ ಪೈಕಿ 1,737 ಸೂಕ್ಷ್ಮ, 6,351 ಸಾಮಾನ್ಯ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಆಯೋಗದ ಮಾರ್ಗ ಸೂಚಿಯಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರದ ಎಲ್ಲ ವಿಭಾಗಗಳ ವ್ಯಾಪ್ತಿಯಲ್ಲಿ ಕೇಂದ್ರಿಯಾ ಭದ್ರತಾ ಪಡೆಗಳೊಂದಿಗೆ ಸ್ಥಳೀಯ ಪೊಲೀಸ್ ಅಕಾರಿಗಳ ಗಸ್ತು ಕೈಗೊಳ್ಳಲಾಗಿದೆ. 8 ವಿಭಾಗಗಳ ವ್ಯಾಪ್ತಿಯಲ್ಲಿ 103 ಚೆಕ್ ಪೋಸ್ಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. 91 ಪ್ಲೈಯಿಂಗ್ ಸ್ಕ್ವಾಡ್‌ಗಳ ಕಾರ್ಯಾಚರಣೆಯಲ್ಲಿವೆ. ಏ.24ರಿಂದ 26ರ ಮಧ್ಯರಾತ್ರಿ ವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ ಎಂದರು.

146 ಕಡೆಗಳಲ್ಲಿ ಶಸ್ತ್ರಾಸ್ತ್ರ ತುಕಡಿ

ನಗರ ವ್ಯಾಪ್ತಿಯಲ್ಲಿ ಬರುವ ರೌಡಿಗಳ ಪಟ್ಟಿ ಗುರುತಿಸಿ 5,117 ಜನರಿಂದ ಭದ್ರತಾ ಕಾಯಿದೆ ಅಡಿಯಲ್ಲಿ ಶಾಂತಿಭಂಗ ಉಂಟು ಮಾಡದಂತೆ ಮುಚ್ಚಳಿಕೆ ಪಡೆಯಲಾಗಿದೆ. 146 ಕಡೆಗಳಲ್ಲಿ ಶಸ್ತ್ರಾಸ್ತ್ರ ತುಕ್ಕಡಿಗಳೊಂದಿಗೆ ಪೊಲೀಸ್ ಪಥ ಸಂಚಲನ ನಡೆಸಲಾಗಿದೆ. 7,533 ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮಾ ಮಾಡಲಾಗಿದೆ. ವಾರೆಂಟ್ ಜಾರಿಗೆ ವಿಶೇಷ ಕಾರ್ಯಾಚರಣೆ ಕೈಗೊಂಡು 1,444 ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಇಂದು ಸಂಜೆಯಿಂದ ನಿಷೇಧಾಜ್ಞೆ

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತದಾನ ಕೊನೆಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಅಂದರೆ, ಬುಧವಾರ ಸಂಜೆ 6 ಗಂಟೆಯಿಂದ ಬೆಂಗಳೂರು ನಗರ ಜಿಲ್ಲೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಜಾರಿ ಮಾಡಲಾಗುವುದು. ಮತದಾನ ನಡೆಯುವ 48 ಗಂಟೆ ಮುಂಚಿತವಾಗಿ ಮತದಾರಲ್ಲದೆ ಇರುವವರು ಕ್ಷೇತ್ರವನ್ನು ಬಿಟ್ಟು ಅವರ ಮಾತೃ ಮತಕ್ಷೇತ್ರಕ್ಕೆ ತೆರಳುವುದು, ಯಾವುದೇ ತರಹದ ಗುಂಪುಗಾರಿಕೆ, ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ದಯಾನಂದ್‌ ತಿಳಿಸಿದರು.

ಮತಗಟ್ಟೆಗೆ ಹೋಗಲು ಉಚಿತ ಸಾರಿಗೆ

ಮತದಾನಕ್ಕೆ ಬರುವ ಅಂಗವಿಕರು ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಸಾರಿಗೆ ಸೌಲಭ್ಯ ಬೇಕಾದ ಅಂಗವಿಕರು ಮತ್ತು ಹಿರಿಯ ನಾಗರಿಕರು, ಚುನಾವಣಾ ಆಯೋಗದ ಸಕ್ಷಮ್ ತಂತ್ರಾಂಶದ ಮೂಲಕ ನೋಂದಾಣಿ ಮಾಡಿಕೊಳ್ಳಬೇಕು. ಮತದಾನದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಮೊದಲ ಹಂತದ ಲೋಕಸಭಾ ಚುನಾವಣೆ ಸಂಪನ್ನ: ಶೇ.62 ಮತದಾನ

224 ವಿಷಯಾಧಾರಿತ ಮತಗಟ್ಟೆ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಉದ್ದೇಶದಿಂದ ಈ ಬಾರಿ ಒಟ್ಟು 224 ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು ರೂಪಿಸಲಾಗಿದೆ. 140 ಸಖೀ ಮತಗಟ್ಟೆ, ವಿಧಾನಸಭಾ ಕ್ಷೇತ್ರವಾರು ತಲಾ ಒಂದರಂತೆ ಅಂಗವಿಕರು, ಯುವ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಅಂಕಿ ಅಂಶ:

ಒಟ್ಟು ಮತದಾರರು- 1,01,27,869

ಪುರುಷರು- 5,216,091
ಮಹಿಳೆ -4,909,958
ಲೈಂಗಿಕ ಅಲ್ಪಸಂಖ್ಯಾತರು-1,820
ಅಂಗವಿಕರು-31,173
ಯುವ ಮತದಾರರು 1,60,232
ಸೇವಾ ಮತದಾರರು - 1,665
ಎನ್‌ಆರ್‌ಐ ಮತದಾರರು - 2,158

ಭದ್ರತಾ ಸಿಬ್ಬಂದಿ ನಿಯೋಜನೆ ವಿವರ

*ಎಸಿಪಿ- 53
*ಪಿಎಸ್‌ಐ- 737
*ಎಎಸ್‌ಐ- 902
*ಎಸ್‌ಐ- 3555
*ಕಾನ್‌ಸ್ಟೆಬಲ್- 6352
*ಹೋಮ್ ಗಾರ್ಡ್- 3919
*ಸಿವಿಲ್ ಡಿಫೆನ್ಸ್ - 500
*ಪಾರೆಸ್ಟ್ ಗಾರ್ಡ್-32
*ಶಸ್ತ್ರಾಸ್ತ್ರ ತುಕಡಿಗಳು- 44
*ಕೇಂದ್ರೀಯ ಪೊಲೀಸ್ ತುಕಡಿ- 11

ಮತಗಟ್ಟೆ ವಿವರ

ಒಟ್ಟು ಮತಗಟ್ಟೆ-8,984
ಸೂಕ್ಷ್ಮ ಮತಗಟ್ಟೆ- 2,003
ಅತೀ ಸೂಕ್ಷ್ಮ ಮತಗಟ್ಟೆ 253
ಅತಿ ಹೆಚ್ಚು ಖರ್ಚು ವೆಚ್ಚದ ಮತಗಟ್ಟೆ-30

Follow Us:
Download App:
  • android
  • ios