Asianet Suvarna News Asianet Suvarna News

ಮಂಡ್ಯ: ಪಾಂಡವಪುರದಲ್ಲಿ ಮತ್ತೊಂದು ಹೆಣ್ಣು ಭ್ರೂಣ ಹತ್ಯೆ ಕೇಸು ದಂಧೆ, 4 ಜನ ಅರೆಸ್ಟ್‌

ವಸತಿ ಗೃಹದಲ್ಲಿ ವಾಸವಿದ್ದ ಆನಂದ್ ಮತ್ತು ಅಶ್ವಿನಿ ರಹಸ್ಯವಾಗಿ ಹೊರಗಿನಿಂದ ಗರ್ಭಿಣಿ ಮಹಿಳೆಯರನ್ನು ಕರೆತಂದು ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದರು. ಕಳೆದ ಆರು ತಿಂಗಳಿಂದ ದಂಪತಿ ಈ ಕೃತ್ಯದಲ್ಲಿ ತೊಡಗಿದ್ದರು. ಇದಕ್ಕೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿ ಕೆಲಸ ನಿರ್ವಹಿಸಿ ಅನುಭವ ಹೊಂದಿದ್ದ ಗಿರಿಜಮ್ಮ ಸಾಥ್‌ ನೀಡಿದ್ದರು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

Another Case of Female Fetus Killed at Pandavapura in Mandya grg
Author
First Published May 7, 2024, 7:28 AM IST

ಪಾಂಡವಪುರ(ಮೇ.07):  ಮಂಡ್ಯ ತಾಲೂಕಿನ ಹಾಡ್ಯ ಸಮೀಪದ ಆಲೆಮನೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಪ್ರಕರಣ ಇನ್ನೂ ಜೀವಂತ ಇರುವಾಗಲೇ ಪಾಂಡವಪುರದಲ್ಲಿ ಮತ್ತೊಂದು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪಾಂಡವಪುರ ತಾಲೂಕು ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಇಂತಹ ಹೀನಕೃತ್ಯ ನಡೆದಿರುವುದು ಅಚ್ಚರಿ ಮೂಡಿಸಿದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಆನಂದ್‌ (೩೭), ಹೊರಗುತ್ತಿಗೆ ಡಿ-ಗ್ರೂಪ್ ನೌಕರೆ ಅಶ್ವಿನಿ (೩೨), ಆಕೆಯ ತಾಯಿ ಸತ್ಯಮ್ಮ (೫೪), ಹಿಂದೆ ಪಾಂಡವಪುರ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿದ್ದ ಗಿರಿಜಮ್ಮ (೪೮) ಬಂಧಿತರು.

ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆ! ವೈದ್ಯರ ವಿರುದ್ಧ ಎಫ್‌ಐಆರ್ ದಾಖಲು

ಪ್ರಕರಣವೇನು?

ಆಂಬ್ಯುಲೆನ್ಸ್ ಚಾಲಕನಾಗಿದ್ದ ಆನಂದ್‌ಗೆ ಪಾಂಡವಪುರ ತಾಲೂಕು ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹವನ್ನು ವಾಸಕ್ಕೆ ನೀಡಲಾಗಿತ್ತು. ಆನಂದ್, ಪತ್ನಿ ಅಶ್ವಿನಿ, ಆಕೆಯ ತಾಯಿ ಸತ್ಯಮ್ಮ ಅಲ್ಲಿ ವಾಸವಿದ್ದರು. ಅಶ್ವಿನಿ ಆರೋಗ್ಯ ಇಲಾಖೆಯಲ್ಲೇ ಹೊರಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್ ನೌಕರೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಸತಿ ಗೃಹದಲ್ಲಿ ವಾಸವಿದ್ದ ಆನಂದ್ ಮತ್ತು ಅಶ್ವಿನಿ ರಹಸ್ಯವಾಗಿ ಹೊರಗಿನಿಂದ ಗರ್ಭಿಣಿ ಮಹಿಳೆಯರನ್ನು ಕರೆತಂದು ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದರು. ಕಳೆದ ಆರು ತಿಂಗಳಿಂದ ದಂಪತಿ ಈ ಕೃತ್ಯದಲ್ಲಿ ತೊಡಗಿದ್ದರು. ಇದಕ್ಕೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿ ಕೆಲಸ ನಿರ್ವಹಿಸಿ ಅನುಭವ ಹೊಂದಿದ್ದ ಗಿರಿಜಮ್ಮ ಸಾಥ್‌ ನೀಡಿದ್ದರು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಸ್ಥಳೀಯರಿಂದ ಮಾಹಿತಿ:

ಅದೇ ರೀತಿ ಭಾನುವಾರ ತಡರಾತ್ರಿ ಮೈಸೂರು ಮೂಲದ ಗರ್ಭಿಣಿಯೊಬ್ಬರು ವಸತಿ ಗೃಹಕ್ಕೆ ಆಗಮಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಗರ್ಭಿಣಿ ಮಹಿಳೆ ಮೇಲೆ ಅನುಮಾನ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್ ಅವರಿಗೆ ರಾತ್ರಿ ೧೧ ಗಂಟೆಗೆ ವಿಷಯ ಮುಟ್ಟಿಸಿದರು. ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಅವರಿಗೆ ವಿಷಯ ಮುಟ್ಟಿಸಿ ದಾಳಿ ನಡೆಸುವಂತೆ ಸೂಚಿಸಿದರು. ಡಾ.ಅರವಿಂದ್ ಅವರು ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಗರ್ಭಿಣಿ ಮಹಿಳೆಗೆ ಅಬಾರ್ಷನ್ ಮಾಡುವ ಪ್ರಕ್ರಿಯೆ ನಡೆದಿತ್ತು ಎನ್ನಲಾಗಿದೆ.

ನಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ಬಂದರು. ವಸತಿ ಗೃಹದಲ್ಲಿ ಪರಿಶೀಲನೆ ನಡೆಸಿದಾಗ ಗರ್ಭಪಾತ ಮಾತ್ರೆಗಳು, ಸಿರೆಂಜ್, ಡ್ರಿಪ್ ಸೇರಿದಂತೆ ಭ್ರೂಣ ಸುಗಮವಾಗಿ ಹೊರಬರುವಂತೆ ನೀಡುವ ಔಷಧಗಳು ಕಂಡುಬಂದಿವೆ. ಆ ನಂತರದಲ್ಲಿ ಪೊಲೀಸರು ದಂಪತಿಯನ್ನು ಸ್ಥಳದಲ್ಲೇ ಬಂಧಿಸಿದರಲ್ಲದೇ, ಈ ಪಾಪಕೃತ್ಯಕ್ಕೆ ನೆರವಾಗಿದ್ದ ಶಶಿಕಲಾ ಮತ್ತು ಗಿರಿಜಾಂಬ ಅವರನ್ನೂ ವಶಕ್ಕೆ ತೆಗೆದುಕೊಂಡು ಕರೆದೊಯ್ದರು.

ಮೂರನೇ ಮಗುವೂ ಹೆಣ್ಣು:

ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಬಂದಿದ್ದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿನ ಬಯಕೆಯಲ್ಲಿದ್ದ ಕುಟುಂಬದವರು ಮತ್ತೆ ಹೆಣ್ಣು ಮಗು ಹುಟ್ಟುವ ವಿಷಯವನ್ನು ಬೇರೆಲ್ಲೋ ಸ್ಕ್ಯಾನಿಂಗ್ ಮಾಡಿಸಿ ತಿಳಿದುಕೊಂಡು ಗರ್ಭಪಾತಕ್ಕೆ ಇಲ್ಲಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಗರ್ಭಪಾತದ (ಅನ್ವಾಂಟೆಡ್ ಕಿಟ್) ಮಾತ್ರೆ ನೀಡಿ ಅರ್ಧಂಬರ್ಧ ಅಬಾರ್ಷನ್ ಆಗಿದ್ದ ಗರ್ಭಿಣಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಸುಗಮವಾಗಿ ಅಬಾರ್ಷನ್ ಆಗುವಂತೆ ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.

ಹೆಣ್ಣು ಭ್ರೂಣಲಿಂಗ ಹತ್ಯೆ ಬೆನ್ನಲ್ಲೇ ಈ ವರ್ಷ 4500 ಗರ್ಭಪಾತ ಮಾತ್ರೆಗಳು ಪೂರೈಕೆ!

ಜಿಲ್ಲಾಧಿಕಾರಿ, ಎಸ್ಪಿ ಭೇಟಿ:

ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದ ವಸತಿ ಗೃಹಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಆಸ್ಪತ್ರೆಯಲ್ಲಿ ಸಭೆ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು. ತಾಲೂಕು ಆಸ್ಪತ್ರೆ ಹಿಂಭಾಗದಲ್ಲೇ ದಂಧೆ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಇದನ್ನು ನೋಡಿದರೆ ಹೆಣ್ಣು ಭ್ರೂಣ ಹತ್ಯೆ ದಂಧೆಯಲ್ಲಿ ಸ್ಥಳೀಯ ವೈದ್ಯರು ಮತ್ತು ಅಧಿಕಾರಿಗಳು ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದರು.

ಹೆಣ್ಣು ಭ್ರೂಣ ಹತ್ಯೆ ವಿಚಾರ ತಿಳಿದ ಕೂಡಲೇ ಮಧ್ಯರಾತ್ರಿಯೇ ಪಾಂಡವಪುರಕ್ಕೆ ಭೇಟಿ ನೀಡಿದೆ. ಹೊರಗುತ್ತಿಗೆ ನೌಕರರು ಈ ಕೃತ್ಯವೆಸಗಿರುವುದು ಕಂಡುಬಂದಿದೆ. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಬಾರ್ಷನ್ ಆಗಿರುವ ಮಹಿಳೆಯನ್ನು ರಿವರ್ಸ್ ಆಪರೇಷನ್ ಮಾಡುವ ಅಗತ್ಯವಿದೆ. ಎಲ್ಲಿ ಸ್ಕ್ಯಾನಿಂಗ್ ಮಾಡಲಾಯಿತು, ಅಬಾರ್ಷನ್‌ಗೆ ಇಲ್ಲಿಗೆ ಕಳುಹಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುವುದರಿಂದ ಹೆಣ್ಣು ಭ್ರೂಣ ಹತ್ಯೆ ಹಿಂದಿರುವವರು ಯಾರೆಂಬುದು ಗೊತ್ತಾಗುತ್ತದೆ. ಆಕೆ ಮತ್ತು ಕುಟುಂಬದವರ ವಿರುದ್ಧವೂ ಕ್ರಮಕ್ಕೆ ತಿಳಿಸಿದ್ದೇವೆ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ಮ ಹೇಳಿದ್ದಾರೆ. 

ಮೈಸೂರು ಮೂಲದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೆಯದೂ ಹೆಣ್ಣಾಗಿದ್ದರಿಂದ ಅದನ್ನು ಗರ್ಭಪಾತ ಮಾಡಿಸಿ ತೆಗೆಸುವುದಕ್ಕೆ ಇಲ್ಲಿಗೆ ಬಂದಿದ್ದಾರೆ. ಅನ್‌ವಾಂಟೆಡ್‌ ಕಿಟ್‌ ನೀಡಿ ಅಬಾರ್ಷನ್‌ ಮಾಡಿಸುತ್ತಿದ್ದರು. ಇಲ್ಲಿ ಯಾವುದೇ ಆಪರೇಷನ್‌ ನಡೆಸುತ್ತಿದ್ದರ ಬಗ್ಗೆ ಪತ್ತೆಯಾಗಿಲ್ಲ. ಗರ್ಭಿಣಿ ಎಲ್ಲಿ ಸ್ಕ್ಯಾನಿಂಗ್‌ ಮಾಡಿಸಿದರು. ಇಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಬಗ್ಗೆ ಮಾಹಿತಿ ನೀಡಿದವರು ಯಾರು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದ್ದಾರೆ. 

Follow Us:
Download App:
  • android
  • ios