Asianet Suvarna News Asianet Suvarna News

ಸರ್ಪ ಸಂಬಂಧ; ಹಾವಿನ ಕಥೆಗಳಿರುವ ಸೀರಿಯಲ್'ಗಳ ಸುಗ್ಗಿ

ನಾಗರಹಾವು ಎಂದರೆ ಮೈ ರೋಮಗಳು ಸೆಟೆಯುತ್ತವೆ. ಈ ತಣ್ಣನೆಯ ರಕ್ತದ ಜೀವಿ ವಿಷ ಜಂತು ಎಂಬ ಕಾರಣಕ್ಕೆ ಭಯ ಒಂದೆಡೆ. ಹಾಗೆಯೇ ಭಕ್ತಿಯೂ ಇದೆ. ನಮ್ಮೆಲ್ಲಾ ದೋಷಗಳಿಗೆ ನಾಗಪೂಜೆ ಪರಿಹಾರ ಎಂಬ ನಂಬಿಕೆ ಇನ್ನೊಂದೆಡೆ. ನಮ್ಮ ಬದುಕಿನಲ್ಲಿ ಈ ವಿಶಿಷ್ಟಸ್ಥಾನ ಪಡೆದಿರುವ ಜೀವಿ ಕಿರುತೆರೆಯಲ್ಲೂ ರಾರಾಜಿಸುತ್ತದೆ. ದಶಕಗಳ ಹಿಂದಿನ ನಾಗ ಕತೆಗಳು ಈಗ ಹೊಸ ರೀತಿಯಲ್ಲಿ ಅವತರಿಸಿವೆ. ನಂಬಿಕೆ-ಮೂಢನಂಬಿಕೆಯ ಚರ್ಚೆಗಳ ದಿನಗಳಲ್ಲಿ ಈ ಧಾರಾವಾಹಿಗಳು ಹುಟ್ಟು ಹಾಕಿರುವ ಪ್ರಶ್ನೆಗಳು, ಮಾಧ್ಯಮಗಳು ಅದನ್ನು ರಂಜನೀಯ ವಸ್ತುವಾಗಿಸಿಕೊಂಡಿರುವ ಬಗೆಯತ್ತ ಒಂದು ವಿಶ್ಲೇಷಣಾತ್ಮಕ ನೋಟ...

serials with stories of snakes make impression

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ನಾಗರ ಹಾವೇ, ಹಾವೊಳು ಹೂವೇ
ಬಾಗಿಲ ಬಿಲದಲ್ಲಿ ನಿನ್ನ ಠಾವೆ..
ಹೀಗೆ ಶುರುವಾಗುತ್ತದೆ ಪಂಜೆ ಮಂಗೇಶರಾಯರ ಕವಿತೆ. ಆದರೆ ಈಗ ಚಿತ್ರಣ ಸ್ವಲ್ಪ ಬದಲು. ಹಾವಿನ ಬಿಲದ ಮುಂದೆ ಧಾರಾವಾಹಿ ನಿರ್ಮಾಪಕ-ನಿರ್ದೇಶಕರು, ಅವರ ಜೊತೆಗೆ ಪ್ರೇಕ್ಷಕರು ನಿಂತಿದ್ದಾರೆ, ಕೂತಿದ್ದಾರೆ, ತದೇಕಚಿತ್ತರಾಗಿ ವೀಕ್ಷಿಸುತ್ತಿದ್ದಾರೆ!

ಮೂರು ದಶಕಗಳ ಹಿಂದೆ ನಮಗೆ ಕಿರುತೆರೆಯ ಪರಿಚಯವಾಗಿತ್ತು. ಟಿವಿ ಎಂಬುದು ಅಚ್ಚರಿಯ ಪೆಟ್ಟಿಗೆಯಾಗಿತ್ತು. ಅದರಲ್ಲಿ ರಾಮಾಯಣ, ಮಹಾಭಾರತದ ಕತೆಗಳ ಜೊತೆಗೆ, ನಾಗ-ನಾಗಿನಿಯರ ಕತೆಗಳು ಅರಳಿ ದ್ದವೂ. ಚಿತ್ರ ನಿರ್ಮಾಣದ ಯಾವುದೇ ತಂತ್ರಜ್ಞಾನಗಳಿಲ್ಲದ ಕಾಲದಲ್ಲಿ ತನ್ನಿಚ್ಛೆಯ ದೇಹವನ್ನು ಧರಿಸುವ ನಾಗದೇವತೆಗಳ ಕತೆಗಳನ್ನು ಪರದೆಯ ಮೇಲೆ ನೋಡಿ, ಬೆಚ್ಚಿ, ಬೆವರಿ, ಅಚ್ಚರಿ ಪಟ್ಟಿದ್ದು ಈಗ ನೆನಪುಗಳು.

ಕಿರುತೆರೆಯ ಜೊತೆಗೆ ಬೆಳ್ಳಿತೆರೆಯ ಮೇಲೂ ಇಂಥ ಅವತಾರಗಳಲ್ಲಿ ನಮ್ಮ ನೆಚ್ಚಿನ ತಾರೆಯರು ಕಾಣಿಸಿಕೊಂಡಿದ್ದನ್ನಂತೂ ಮರೆಯಲು ಸಾಧ್ಯವಿಲ್ಲ. ಸುಂದರ ಕಂಗಳ ಮಾದಕ ನಟಿ, ಶ್ರೀದೇವಿ ಬುಸುಗುಟ್ಟುವ ನೋಟದಲ್ಲೂ ಮಾದಕಯನ್ನು ಕಂಡವರಿಗೆ ಮತ್ತೆ ನೆನಪಾಗುತ್ತಾಳೆ. ಕನ್ನಡದಲ್ಲಿ ಅರ್ಜುನ್‌ ಸರ್ಜಾ ಜೊತೆ ಹೆಜ್ಜೆ ಹಾಕಿದ ಮಾಲಾಶ್ರೀ ಶಿವ ನಾಗ ಚಿತ್ರದಲ್ಲಿ ಕಟ್ಟಿಕೊಡ ಪಾತ್ರವೂ ಕಣ್ಣ ಮುಂದೆ ನಿಲ್ಲುತ್ತದೆ. ಮತ್ತೆ 80ರ ದಶಕದಲ್ಲಿ ರೀನಾರಾಯ್‌, ನಂತರದಲ್ಲಿ ಚಿರಯೌವ್ವನೆ ರೇಖಾ, ಹಾಲುಬಣ್ಣದ ಚೆಲುವೆ ಮಂದಾಕಿನಿ, ಆಮೇಲೆ ಮಾಧವಿ ಹೀಗೆ..ಸುಂದರಿಯಲ್ಲಿ ನಾಗಕನ್ಯೆಯರಾಗಿ ಅವತರಿಸಿದರು. ಮೆಚ್ಚಬೇಕೊ, ಬೆಚ್ಚಬೀಳಬೇಕೊ ಎಂದು ಯೋಚಿಸುತ್ತಲೇ ನಮ್ಮ ನೆನಪಿನ ಪುಟಗಳಲ್ಲಿ ಅವರ ಪಾತ್ರಗಳನ್ನು ಅಚ್ಚೊತ್ತಿಕೊಂಡು ಬಿಟ್ಟಿದ್ದೇವೆ. 

ಆ ಕತೆಗಳು, ಆ ನಟಿಯರು ಎಲ್ಲ ಹಳತಾದವೆಂದುಕೊಂಡಿದ್ದೇವೆ. ಆದರೆ ನಟಿಯರಷ್ಟೇ ಮರೆಯಾಗಿದ್ದಾರೆ. ಕತೆಗಳು ಇನ್ನೂ ಜೀವಂತವಾಗಿವೆ. ಸರ್ಪದೋಷ, ಸರ್ಪ ಸಂಬಂಧ, ನಾಗಕನ್ಯೆ, ನಾಗಲೋಕ, ಹಾವಿನ ದ್ವೇಷದ ಸುತ್ತ ಇಂದಿಗೂ ಕಿರಿ ಮತ್ತು ಹಿರಿತೆರೆಗಳು ಕತೆಗಳನ್ನು ಹೆಣೆಯುತ್ತಿವೆ. ಹೊಸ ಕಾಲದ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ರೋಚಕವಾದ ಕತೆಯನ್ನು ಹೆಣೆಯುತ್ತಿವೆ. ಅದರಲ್ಲೂ ದೊಡ್ಡ ಮಾರುಕಟ್ಟೆಯಾಗಿ ರೂಪಾಂತರ ಹೊಂದಿರುವ ಟಿವಿಯಲ್ಲಂತೂ ನಾಗಕನ್ಯೆಯರ ಕತೆಗಳು ಹೆಚ್ಚು ಹೆಚ್ಚು ಸುದ್ದಿ ಮಾಡುತ್ತಿವೆ. ಸಂಜೆ 7 ಗಂಟೆಯ ನಂತರ ದೇಶದ ಯಾವುದೇ ಭಾಷೆಯ ಕಿರುತೆರೆಯ ಯಾವುದೇ ಮನರಂಜನಾ ಚಾನೆಲ್‌ಗೆ ಹೋದರೂ ಒಂದಾದರೂ ಧಾರಾವಾಹಿ ಸಿಕ್ಕುತ್ತದೆ. 

ಕನ್ನಡದಲ್ಲೇ ನೋಡಿ, ಕಲರ್ಸ್'ನಲ್ಲಿ ಸರ್ಪ ಸಂಬಂಧ, ಝೀ ಕನ್ನಡದಲ್ಲಿ ನಾಗಿನಿ ಪ್ರಸಾರವಾಗುತ್ತಿದ್ದು, ಉದಯಲ್ಲಿ ಸಪ್ತ ಮಾತೃಕಾ ಎಂಬ ಧಾರಾವಾಹಿ ಸದ್ಯದಲ್ಲೇ ಆರಂಭವಾಗಲಿದೆ. ಇದೇ ರೀತಿಯಲ್ಲಿ ದಕ್ಷಿಣಾ ತೆಲುಗು, ತಮಿಳು ಭಾಷೆಯ ಚಾನೆಲ್‌'ಗಳಲ್ಲಿ ಮತ್ತು ಹೆಚ್ಚು ವೀಕ್ಷಕ ವರ್ಗವನ್ನು ಹೊಂದಿರುವ ಹಿಂದಿ ಚಾನೆಲ್‌'ಗಳಲ್ಲೂ ನಾಗಕನ್ಯೆಯರ ಕತೆಯುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿವೆ. 

ಯಾಕೆ ಈ ಸೆಳೆತ?
ಸಿನಿಮಾ ಅಥವಾ ಕಿರುತೆರೆಯ ವ್ಯವಹಾರಕ್ಕೆ ಪುರಾಣ ಕತೆಗಳು, ಅನಾದಿ ಕಾಲದ ನಂಬಿಕೆಗಳು ಬಹು ಬೇಡಿಕೆಯ ವಸ್ತು. ಇವು ಒಂದು ರೀತಿಯಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ಕಥಾವಸ್ತುಗಳು. ಹೊಸ ಕಾಲದ ವೀಕ್ಷಕರ ಮನಸ್ಥಿತಿಗೆ ತಕ್ಕಂತೆ, ನಿರ್ಮಾಣದ ಶ್ರೀಮಂತಿಕೆ, ಪ್ರಸ್ತುತಿಯಲ್ಲಿ ವೈವಿಧ್ಯತೆಯನ್ನು ಒಳಗೊಂಡು ಧಾರಾವಾಹಿಯನ್ನು ನಿರ್ಮಿಸಲಾಗುತ್ತದೆ. ಒಂದೆರಡು ವರ್ಷಗಳ ಹಿಂದೆ ಮತ್ತೆ ಮಹಾಭಾರತ ನಿರ್ಮಾಣವಾಗಲಿಲ್ಲವೆ? ಭಯ ಮತ್ತು ಭಕ್ತಿಗಳನ್ನು ಹುಟ್ಟಿಸುವ ನಾಗಕನ್ಯೆಯರ ಕತೆಯೂ ಅಂಥದ್ದೇ ಶಕ್ತಿ ಇರುವ ಕತೆಗಳು. ಇದರಲ್ಲಿ ಭಕ್ತಿ ಕಡಿಮೆ ಇದ್ದರೂ, ಸಾಮಾನ್ಯ ಮಸಾಲಾ ಕತೆಗಳಲ್ಲಿರುವ ರೋಚಕತೆ ಇರುತ್ತದೆ. ಪ್ರೀತಿ, ಪ್ರೇಮ, ವಿರಹ, ಸೇಡುಗಳಿರುವ ನಾಗಕನ್ಯೆಯರ ಕತೆ ಯಾವುದೇ ಸಿನಿಮಾಕ್ಕಿಂತ ಕಡಿಮೆಯಾಗಿರುವು­ದಿಲ್ಲ. ಎಲ್ಲ ರೀತಿಯ ಮನರಂಜನೆಯ ಅಂಶಗಳನ್ನು ಕಟ್ಟಿಕೊಡುವ ಅವಕಾಶವನ್ನು ಈ ನಾಗಕನ್ಯೆಯರ ಕತೆಗಳು ನೀಡುತ್ತವೆ. ಹಾಗಾಗಿ ಈ ಕತೆಗಳಿಗೆ ಮನ್ನಣೆ ಸಿಕ್ಕುತ್ತಿದೆ ಎಂಬುದು ಒಂದು ವಾದ. 

ಇನ್ನೊಂದೆಡೆ ಅಲ್ಲದೆ ನಮ್ಮ ಬದುಕಿನಲ್ಲಿ ನಾಗದೇವತೆಗಳಿಗೆ ಒಂದು ಸ್ಥಾನವಿದೆ. ಆರೋಗ್ಯ, ಆರ್ಥಿಕತೆ, ಸಂಬಂಧಗಳಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ನಾಗಪೂಜೆಯಿಂದ ಪರಿಹಾರವೆಂಬ ನಂಬಿಕೆಯೊಂದು ನಮ್ಮ ನಡುವಿದೆ. ನಂಬಿಕೆಯೂ ಹುಟ್ಟಿಸಿರುವ ಕುತೂಹಲವೂ ಕಿರುತೆರೆಯ ಧಾರಾವಾಹಿಗಳು ತಲೆ ಎತ್ತುವುದಕ್ಕೆ ಮತ್ತು ಅವುಗಳನ್ನು ಪೋಷಿಸುವುದಕ್ಕೆ ಕಾರಣ. ಯಾಕೆಂದರೆ ನಾವು ಸಾರ್ವಜನಿಕ ಜೀವನದಲ್ಲಿ ನೋಡುವ ಎಷ್ಟೋ ಮಂದಿ ಗಣ್ಯರು ನಾಗದೋಷ ನಿವಾ ರಣೆಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಪೂಜೆ ಮಾಡಿಸುತ್ತಾರೆ. ಹೋಮ ಹವನಗಳಿಗೆ ಕೂತು ನಾಗದೇವತೆಗಳಿಗೆ ಕೈ ಮುಗಿಯುತ್ತಾರೆ!

ವಿಷ್ಣು ವರ್ಧನ್‌ ಅಭಿನಯದ ನಾಗರಹಾವು ಚಿತ್ರದಲ್ಲೊಂದು ಹಾಡಿದೆ ನೋಡಿ, ‘ಹಾವಿನ ದ್ವೇಷ, ಹನ್ನೆರಡು ವರುಷ..' ಅದು ನಮ್ಮ ನಡುವೆ ಜನಜನಿತವಾಗಿರುವ ನಂಬಿಕೆ. ಅದು ಹಾಡಾಗಿ ಆ ನಂಬಿಕೆಯನ್ನು ಇನ್ನಷ್ಟುಜನಪ್ರಿಯಗೊಳಿಸಿತು. ನಮ್ಮ ನಂಬಿಕೆಗಳಿಗೆ ಸೃಜನಶೀಲನವಾಗಿ ಸಿಕ್ಕುವ ಇಂಥ ವಿಸ್ತರಣೆ ಹೆಚ್ಚು ಹೆಚ್ಚು ಆಕರ್ಷಕವೂ, ರಂಜನೀಯವೂ ಆದ ರೂಪವನ್ನು ಪಡೆದುಕೊಳ್ಳುತ್ತವೆ. ಇಂಥ ಸೂತ್ರಗಳನ್ನು ಅನುಸರಿಸುವ ಮಂದಿ, ಹೊಸದಾಗಿ ಕಾಲಕ್ಕನುಗುಣವಾಗಿ ಅದೇ ಕತೆಗಳನ್ನು ಹೊಸದಾಗಿ, ಹೊಸೆಯುತ್ತಾರೆ. ಅದೂ ಅಲ್ಲದೆ ಹಲವು ಕಾರಣಗಳಿಗೆ ಮೈಮೇಲೆ ನಾಗದೇವತೆ ಬಂದ ಪ್ರಕರಣಗಳು, ಮನೆಯಲ್ಲಿ ನಾಗರಹಾವು ಕಾಣಿಸಿಕೊಳ್ಳುವ ಘಟನೆಗಳು ‘ಹೀಗೂ ಉಂಟೆ' ಎಂಬ ಅಚ್ಚರಿಯ ಉದ್ಘಾರದೊಂದಿಗೆ ಮತ್ತೆ ಮತ್ತೆ ಸುದ್ದಿಯಾಗುವುದೂ ಒಂದು ರೀತಿಯಲ್ಲಿ ನಾಗಲೋಕದ ಕುತೂಹಲವನ್ನು ಹೆಚ್ಚಿಸಿವೆ ಎನ್ನಬಹುದು. 

ವಿಚಾರವಾದಿ ನರೇಂದ್ರನಾಯಕ್‌ ಅವರು ನಾಗರಹಾವಿನ ಸುತ್ತ ನಂಬಿಕೆಗಳನ್ನು ರೂಪಿಸುವುದನ್ನು, ನಮ್ಮೊಳಗೆ ಸುಪ್ತ ಸ್ಥಿತಿಯಲ್ಲಿರುವ ಅನಾದಿಕಾಲದ ಭೀತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರವೆನ್ನುತ್ತಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಬೈಕೊಂದು ಸುದ್ದಿ ಮಾಡಿತು. ಸಂಭೋಗ ನಿರತ ಹಾವೊಂದರ ಮೇಲೆ ಹೊಸದೊಂದು ಬೈಕ್‌ ಹರಿದು ಗಂಡು ಹಾವು ಸತ್ತು ಹೋಯಿತಂತೆ. ಹೆಣ್ಣು ಹಾವು ಬೈಕ್‌ ಸವಾರರನ್ನು ಹುಡುಕಿಕೊಂದಿತಂತೆ. ಆ ಬೈಕ್‌ ಖರೀದಿಸಿದ ಇನ್ನೊಬ್ಬ ವ್ಯಕ್ತಿಯನ್ನು ಹಾವು ಕೊಂದಿತಂತೆ. ಆಮೇಲೆ ಆ ಬೈಕನ್ನು ಯಾರು ಕೊಳ್ಳಲು ಮುಂದಾಗಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತು. ನಾನು ಕೊಳ್ಳಲು ಸಿದ್ದನಾಗಿ ಹುಡುಕಿದರೆ, ಪತ್ರಿಕೆಯವರೇ ಮಾಹಿತಿ ಕೊಡಲಿಲ್ಲ. ಕಡೆಗೆ ಸ್ನೇಹಿತರು, ಪತ್ರಿಕಾ ಕಚೇರಿಗೆ ಚೆಕ್‌ ಕಳಿಸಿ, ಬೈಕ್‌ ಕೊಡಿಸಲು ಕೇಳಿದ್ದರು. ಇದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ನಮ್ಮೊಳಗೆ ಇರುವ ಅಮೂರ್ತ ಭಯವನ್ನು ಕಾಲಕ್ಕೆ ತಕ್ಕಂತೆ ಜನ ಬಳಸಿಕೊಳ್ಳುತ್ತಾರೆ. ಮುಗ್ಧರನ್ನು ವಂಚಿಸುತ್ತಾರೆ. ಇದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ'' ಎಂದು ಹೇಳುತ್ತಾರೆ. 

ಟಿವಿ ಧಾರಾವಾಹಿಗಳು ನೇರವಾಗಿ ಜನರಿಂದ ಏನನ್ನೂ ಕಸಿದುಕೊಳ್ಳದೇ ಇರಬಹುದು. ಮನರಂಜನೆಯ ನೆಪದಲ್ಲಿ ದೊಡ್ಡ ವೀಕ್ಷಕ ವರ್ಗವನ್ನು ಸೃಷ್ಟಿಸಿ ತನ್ನ ಎಳೆದುಕೊಳ್ಳುವುದು ಒಂದು ರೀತಿಯಲ್ಲಿ ಒಂದು ಮಾರುಕಟ್ಟೆಯನ್ನು ರೂಪಿಸಿದಂತೇ ಅಲ್ಲವೆ?

ಮನುಷ್ಯ ಮತ್ತು ಹಾವಿನ ನಂಟು
ಪ್ರಾಕೃತಿಕವಾಗಿ ಮನುಷ್ಯ ಮತ್ತು ನಾಗರ ಹಾವಿನ ನಡುವೆ ಬೆಳೆದು ಬಂದ ಸಂಬಂಧ ಅತ್ಯಂತ ವೈಜ್ಞಾನಿಕವಾದದ್ದು. ಧವಸ ಧಾನ್ಯಗಳ ಸಂರಕ್ಷಣೆಯೇ ಏಕ ಮಾತ್ರ ಕಾರಣ. ರೈತ ತಾನು ಬೆಳೆದ ಧವಸ ಧಾನ್ಯಗಳನ್ನು ಹಗೆವುಗಳಲ್ಲಿ ಅಥವಾ ರಾಜಕಣಗಳಲ್ಲಿ ಸಂರಕ್ಷಣೆ ಮಾಡುತ್ತಿದ್ದರು. ಈ ಜಾಗಗಳಿಗೆ ಇಲಿಗಳ ಕಾಟ ಹೆಚ್ಚಾಗುತ್ತಿದ್ದರಿಂದ ರೈತ ಹಾವುಗಳನ್ನು ಸಾಕುವ ಪ್ರವೃತ್ತಿ ಬೆಳೆಸಿಕೊಂಡ. ರಾಜಕಣ ಅಥವಾ ಹಗೆವುಗಳಿಗೆ ಇಲಿಗಳ ಕಾಟ ಹೆಚ್ಚಾದಾಗ ಅಲ್ಲಿಗೆ ಹಾವುಗಳನ್ನು ಬಿಟ್ಟು ಇಲಿಗಳು ಬರದಂತೆ ತಡೆಯಲಾಗುತ್ತಿತ್ತು. ಮುಂದೆ ಇಲಿಗಳ ಪ್ರಮಾಣ ಹೆಚ್ಚಾಗಿ ಹಳ್ಳಿಗಳಲ್ಲಿ ಪ್ಲೇಗ್‌ ರೋಗ ಬಂದಾಗಲೂ ಹಾವುಗಳು ರೈತನ ಮಿತ್ರ ಎನಿಸಿಕೊಂಡವು. ಇಲಿಗಳ ಸಂಹಾರಕ್ಕೆ ಹಾವುಗಳು ಬೇಕಿನಿಸಿದ್ದು ಕ್ರಮೇಣ ಹಾವನ್ನು ಪೂಜನೀಯ ಸ್ಥಾನಕ್ಕೆ ತೆಗೆದುಕೊಂಡು ಹೋಗು­ವಂತೆ ಮಾಡಿತು. ಪ್ಲೇಗ್‌ ಮಾರಿ ಬರದಂತೆ ಎಚ್ಚರ ವಹಿಸಬೇಕಾದರೆ, ಇಲಿಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಿತ್ತು. ಇಲಿಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಾದರೆ ಹಾವುಗಳು ಬೇಕಿತ್ತು. ಇಂಥದೊಂದು ಅವಲಂಬನೆ, ಆರಾಧನೆಯ ರೂಪವನ್ನು ಪಡೆದುಕೊಂಡಿತು. ನಾಗರಹಾವು ಮತ್ತು ಮನುಷ್ಯನ ಸಂಬಂಧವವನ್ನು ಗಟ್ಟಿಗೊಳಿಸುತ್ತಾ ಬಂತು. ಮುಂದೆ ನಾಗರಕಟ್ಟೆಗಳು ಹುಟ್ಟಿಕೊಂಡಿದ್ದು ಕೂಡ ಹಾಗೆಯೇ.

ಪವಾಡ ಮತ್ತು ಬಾನಾಮತಿಗಳನ್ನು ಬೇಧಿಸುವ ಕೆಲಸದಲ್ಲಿ ನಿರತರಾಗಿರುವ ಅನೇಕರು, ನಾಗದೇವತೆಯ ಆವಾಹನೆಯ ವಿದ್ಯ­ ಮಾನ­ವನ್ನು ಮಾನಸಿಕ ಸ್ಥಿತಿಯನ್ನಾಗಿ ವಿಶ್ಲೇಷಿಸಿದ ಉದಾಹರಣೆಗಳೂ ನಮ್ಮ ನಡುವೆ ಇವೆ. ಮನೋವೈದ್ಯರಾದ ವಿಜಯ್‌ ಕುಮಾರ್‌ ಅವರು ಹೇಳುವಂತೆ, ‘‘ ನಾಗರ ಹಾವಿನ ಬಗೆಗಿನ ಭಯ ಮತ್ತು ನಾಗ­ದೋಷದ ಬಗೆಗಿನ ನಂಬಿಕೆ ಈ ಕಾಲದಲ್ಲೂ ಅದು ಮತ್ತಷ್ಟುಗಟ್ಟಿಯಾ­ ಗುವುದಕ್ಕೆ ಅದೊಂದು ವಿಷ ಜಂತು ಎನ್ನುವುದೇ ಕಾರಣ. ನಂಬಿಕೆಗಳ ವಿಚಾರದಲ್ಲಿ ಮನುಷ್ಯನದ್ದು ದುರ್ಬಲ ಮನಸ್ಸು. ಅದನ್ನು ನಂಬಿಸುವು­ದಕ್ಕೆ ಭಯ ಹುಟ್ಟಿಸುವ ಕತೆಗಳನ್ನು ಹೇಳುತ್ತಾ ಹೋದರೆ ಸಾಕು. ಅದೇ ದಾರಿಯಲ್ಲಿ ಸಿನಿಮಾ ಮತ್ತು ಕಿರುತೆರೆ ನಾಗಕನ್ಯೆಯರ ಕತೆಗಳನ್ನು ಪ್ರಬಲವಾಗಿ ಬಳಿಸಿಕೊಂಡು ಬಂದಿವೆ. ಇನ್ನು ಆತ್ಮವೊಂದು ನಾಗರ­ ಹಾವಿನ ರೂಪದಲ್ಲಿ ಬರುವುದು, ಪುನರ್ಜನ್ಮದ ಕತೆ ಹೇಳುವುದು ಇಲ್ಲಿ ತನಕ ಬಂದ ಸಿನಿಮಾ ಮತ್ತು ಕಿರುತೆರೆಯ ನಾಗಿನಿ ಕತೆಗಳ ಮೂಲ ಕಥಾ ಹಂದರವೇ ಆಗಿದೆ'. ಹಾಗಾದ್ರೆ, ಎಂದೋ ಮೃತಪಟ್ಟಮನುಷ್ಯನ ಆತ್ಮಕ್ಕೂ, ನಾಗರ ಹಾವಿನ ರೂಪಕ್ಕೂ ಎಲ್ಲಿಯ ಸಂಬಂಧ?ಯಾಕೆ ಅಂಥದೊಂದು ಆತ್ಮ ನಾಗರ ಹಾವಿನ ರೂಪದಲ್ಲಿ ಬರುತ್ತದೆ? ಈ ತನಕದ ಅಷ್ಟುಸಿನಿಮಾ ನೋಡಿದವರಿಗೂ ಕಾಡುವ ಪ್ರಶ್ನೆಯಿದು.

ಕೆಣಕದೇ ಯಾರ ಮೇಲೂ ಎರಗದ, ಕಚ್ಚದ ಶೀತರಕ್ತ ಪ್ರಾಣಿ ಹಾವನ್ನು ದ್ವೇಷಕ್ಕೆ ಸಂಕೇತವಾಗಿಸಿಕೊಂಡಿದ್ದು ಕೂಡ ಅದೊಂದು ವಿಷ ಸರ್ಪ ಎನ್ನುವ ಕಾರಣಕ್ಕಾಗಿಯೇ. ಕೆಣಕಿದರೆ ಯಾವುದೇ ಪ್ರಾಣಿ ಸುಮ್ಮನಿರಲು ಸಾಧ್ಯವಿಲ್ಲ. ಹಾಗೆ ಕೆಣಕಿದ ಕಾರಣಕ್ಕೆ ವಿಷಕಾರಿತು ಎನ್ನುವುದನ್ನೇ ನೆಪವಾಗಿಟ್ಟುಕೊಂಡು ಅದನ್ನು ದ್ವೇಷದ ಸಂಕೇತವಾಗಿ ಬಳಸಿಕೊಂಡು ಬರಲಾಗಿದೆ. ನೊಂದ ಆತ್ಮ ನಾನು ಸತ್ತ ನಂತರವೂ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳಬೇಕಾದರೆ ಅದಕ್ಕೊಂದು ದ್ವೇಷದ ರೂಪ ಬೇಕು. ಅದಕ್ಕೆ ಸಿಕ್ಕಿದ್ದು ನಾಗರಹಾವು. ನಾಗರ ಹಾವಿನ ಸುತ್ತ ಹುಟ್ಟಿಕೊಂಡ ಇಂತಹ ಕತೆಗಳು, ಅದನ್ನು ನಾಗಿಣಿ ರೂಪಕ್ಕೆ ತಂದು ನಿಲ್ಲಿಸಿದ್ದೇ ಸಿನಿಮಾ ಮತ್ತು ಕಿರುತೆರೆಗೆ ಕಥಾವಸ್ತು ಆಗಲು ಕಾರಣವಾ­ಗಿದೆ. ಈ ನಂಬಿಕೆಗಳು ಇದ್ದಷ್ಟುಕಾಲ ನಾಗಿಣಿ ಧಾರಾವಾಹಿ ಗಳು ಬರುತ್ತವೆ. ನಂಬಿಕೊಂಡ ಕಾರಣಕ್ಕೆ ಆ ಧಾರಾವಾಹಿಗಳನ್ನು ನೋಡುವ ಜನರು ಇರುತ್ತಾರೆ. ಆ ಜನರು ಇರುವ ತನಕ ಕಿರುತೆರೆ ಮಂದಿಗೆ ನಾಗ ಕನ್ಯೆ ಬಂಡವಾಳ ಗಳಿಕೆಯ ಸೂತ್ರವಾಗುತ್ತಾಳೆ ಎನ್ನುವುದು ತಜ್ಞರ ಮಾತು ಕೂಡ ಹೌದು.

ಸಿನಿಮಾ ಅಥವಾ ಸಿರಿಯಲ್‌ ಯಾವುದೇ ಆಗಲಿ, ಇಲ್ಲಿನ ನೇಟಿವಿಟಿಗೆ ತಕ್ಕಂತೆ ತಾಜಾತನ ಕತೆ ಇರಬೇಕು ಎನ್ನುವುದು ಸಹಜ. ಈ ಕತೆಯನ್ನು ತೆಗೆದುಕೊಂಡಿದ್ದಕ್ಕೂ ಅದೇ ಕಾರಣ ಇರಬಹುದು. ಯಾಕಂದ್ರೆ ನಾನು ಈ ಧಾರಾವಾಹಿಗೆ ಒಂದಷ್ಟುದಿನ ಕಳೆದ ನಂತರ ಬಂದವನು. ನನ್ನ ಪ್ರಕಾರ ಈ ಕತೆ ಜನರಿಗೆ ತಲುಪಿರುವುದಕ್ಕೆ ನಾಗದೇವತೆಗಳ ಬಗೆಗಿನ ನಂಬಿಕೆ ಕೂಡ ಕಾರಣ. ದೈವಿಕ ಶಕ್ತಿಗಳ ಬಗೆಗಿನ ನಂಬಿಕೆ ಯಾವ ಕಾಲಕ್ಕೂ ಬದಲಾಗುವುದಿಲ್ಲ . ಯಾವತ್ತಿಗೂ ಅವು ನಂಬಿಕೆಯಾಗಿ ಉಳಿಯುತ್ತವೆ. ಕಿಚನ್‌ ಡ್ರಾಮಾ ಧಾರಾವಾಹಿಗಳು ತೆರೆಗೆ ಸರಿದ ನಂತರ ವೀಕ್ಷಕರು ಹೊಸದನ್ನು ಬಯಸುತ್ತಿದ್ದಾರೆನ್ನುವುದಕ್ಕೆ ಸಾಬೀತಾಗಿದೆ. ಪುರಾಣದ ಕತೆಗಳು ಇಷ್ಟವಾಗುತ್ತಿವೆ.
- ವಿನೋದ್‌ ನಿರ್ದೇಶಕ (ಸರ್ಪ ಸಂಬಂಧ, ಧಾರಾವಾಹಿ)

(epaper.kannadaprabha.in)

Follow Us:
Download App:
  • android
  • ios