Asianet Suvarna News Asianet Suvarna News

ದೊಡ್ಡಣ್ಣ ಸೇರಿ 15 ಮಂದಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ

ಶ್ರೀನಿವಾಸಮೂರ್ತಿ, ಸುಮಿತ್ರಾ, ಬಿ.ಎಲ್‌. ವೇಣು, ಬಿ.ವಿ. ರಾಧಾಗೂ ಗೌರವ | ಈ ಸಲದಿಂದ ಖಳನಟರಿಗೂ ಪ್ರಶಸ್ತಿ

karnataka film academy awards 2017

ಬೆಂಗಳೂರು: ನಟರಾದ ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ಉಮೇಶ್‌, ನಟಿ ಆದವಾನಿ ಲಕ್ಷ್ಮೇದೇವಿ ಸೇರಿದಂತೆ 15 ಸಾಧಕರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ 2017ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.

ಆರ್‌.ನಾಗೇಂದ್ರ ರಾವ್‌, ಎಂ.ವಿ.ರಾಜಮ್ಮ, ಟಿ.ಎನ್‌.ಬಾಲಕೃಷ್ಣ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಗಳು ತಲಾ ಐವತ್ತು ಸಾವಿರ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ. ಕಳೆದ ವರ್ಷ ಹತ್ತು ಮಂದಿಗೆ ಪ್ರಶಸ್ತಿ ನೀಡಿದ್ದ ಅಕಾಡೆಮಿ ಈ ವರ್ಷ ಹದಿನೈದು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಮಾರ್ಚ್ 3ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕನ್ನಡ ವಾಕ್ಚಿತ್ರ ಹುಟ್ಟುಹಬ್ಬ' ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಈ ಕುರಿತು ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್‌ ಬಾಬು, ‘ಎಲ್ಲೂ ಗುರುತಿಸಿಕೊಳ್ಳದ ಅಪರೂಪದ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಚಲನಚಿತ್ರ ಅಕಾಡೆಮಿ ಮಾಡುತ್ತಿದೆ. ಕಳೆದ ವರ್ಷ ನಾಟಕ ನಟ ದರ್ಶನ್‌ ಖಳನಾಯಕರಿಗೂ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಿದ್ದರು. ಆ ಪ್ರಕಾರ ಈ ಸಲ ಖಳ ನಟರಿಗೆ ತೂಗುದೀಪ ಶ್ರೀನಿವಾಸ್‌ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ನನಗೆ ಪ್ರಶಸ್ತಿ ಬೇಡ: ರಾಜು
ಚಲನಚಿತ್ರ ಅಕಾಡೆಮಿಯ ಬಿ.ಆರ್‌.ಪಂತುಲು ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ‘ನಾನು ಮಾಡಿದ ಕೆಲಸಕ್ಕೆ ಸಂಭಾವನೆ ಪಡೆದಿದ್ದೇನೆ. ನನಗೆ ಪ್ರಶಸ್ತಿಗಳನ್ನು ಪಡೆಯುವ ಇಚ್ಛೆ ಇಲ್ಲ. ಇದನ್ನು ಕೊಡಬೇಡಿ ಎಂದು ಮೊದಲೇ ಹೇಳಿದ್ದೆ. ಆದರೂ ನನ್ನ ಹೆಸರನ್ನು ಪ್ರಕಟಿಸಿದ್ದಾರೆ. ನಾನು ಈ ಪ್ರಶಸ್ತಿ ಸ್ವೀಕರಿಸುವುದಿಲ್ಲ' ಎಂದು ಕನ್ನಡಪ್ರಭಕ್ಕೆ ರಾಜು ತಿಳಿಸಿದ್ದಾರೆ.

* ಆರ್‌.ನಾಗೇಂದ್ರ ರಾವ್‌ ಪ್ರಶಸ್ತಿ (ಅಭಿನಯ- ನಟ)- ಜೆ.ಕೆ. ಶ್ರೀನಿವಾಸ ಮೂರ್ತಿ
* ಎಂ.ವಿ. ರಾಜಮ್ಮ ಪ್ರಶಸ್ತಿ (ಅಭಿನಯ-ನಟಿ)- ಆದವಾನಿ ಲಕ್ಷ್ಮೀದೇವಿ
* ಟಿ.ಎನ್‌. ಬಾಲಕೃಷ್ಣ ಪ್ರಶಸ್ತಿ (ಹಾಸ್ಯ ಪಾತ್ರ)- ಎಂ.ಎಸ್‌. ಉಮೇಶ್‌
* ತೂಗುದೀಪ ಶ್ರೀನಿವಾಸ್‌ ಪ್ರಶಸ್ತಿ (ಖಳ ಪಾತ್ರ)- ಎಸ್‌. ದೊಡ್ಡಣ್ಣ
* ಬಿ.ಆರ್‌. ಪಂತುಲು ಪ್ರಶಸ್ತಿ (ನಿರ್ದೇಶನ)- ಕೆ.ವಿ. ರಾಜು
* ಡಿ. ಶಂಕರಸಿಂಗ್‌ ಪ್ರಶಸ್ತಿ (ನಿರ್ಮಾಣ)- ಸಿ.ಜಯರಾಂ
* ಬಿ.ಜಯಮ್ಮ ಪ್ರಶಸ್ತಿ (ಪ್ರದರ್ಶಕ)- ಕುಮಾರ್‌ ಶೆಟ್ಟರ್‌
* ಎನ್‌. ವೀರಾಸ್ವಾಮಿ ಪ್ರಶಸ್ತಿ (ಹಂಚಿಕೆ ದಾರ)- ಪಾಲ್‌ ಎಸ್‌. ಚಂದಾನಿ
* ಜಿ.ವಿ. ಅಯ್ಯರ್‌ ಪ್ರಶಸ್ತಿ (ಸಂಗೀತ, ಗಾಯನ)- ಬಿ.ಕೆ. ಸುಮಿತ್ರಾ
* ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ (ಚಿತ್ರಸಾಹಿತ್ಯ)- ಡಾ.ಬಿ.ಎಲ್‌. ವೇಣು
* ಬಿ.ಎಸ್‌. ರಂಗ ಪ್ರಶಸ್ತಿ (ಛಾಯಾಗ್ರಹಣ)- ಎಸ್‌.ವಿ. ಶ್ರೀಕಾಂತ್‌
* ಪಂಡರಿಬಾಯಿ ಪ್ರಶಸ್ತಿ (ಪೋಷಕ ಪಾತ್ರ)- ಬಿ.ವಿ. ರಾಧ
* ಎಂ.ಪಿ. ಶಂಕರ್‌ ಪ್ರಶಸ್ತಿ (ತಂತ್ರಜ್ಞಾನ)- ದೇವಿ (ನೃತ್ಯ)
* ಶಂಕರ್‌ನಾಗ್‌ ಪ್ರಶಸ್ತಿ (ಕಾರ್ಮಿಕ ವಿಭಾಗ)- ಎನ್‌.ಎಲ್‌. ರಾಮಣ್ಣ (ನಿರ್ಮಾಣ ನಿರ್ವಾಹಕ)
* ಕೆ.ಎನ್‌. ಟೈಲರ್‌ ಪ್ರಶಸ್ತಿ (ಪ್ರಾದೇಶಿಕ ಭಾಷಾ ಚಿತ್ರ)- ರಾಮ್‌ ಶೆಟ್ಟಿ

(epaper.kannadaprabha.in)

Follow Us:
Download App:
  • android
  • ios