Asianet Suvarna News Asianet Suvarna News

PUC 2 Exam: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2 ಸೋಮವಾರ ರಾಜ್ಯಾದ್ಯಂತ ಆರಂಭವಾಗಿದ್ದು ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. 84,933 ಗಂಡು ಮಕ್ಕಳು, 64,367 ಹೆಣ್ಣು ಮಕ್ಕಳು ಸೇರಿ ಒಟ್ಟು 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 

Statewide Secondary PUC 2 Examination On Apr 29th gvd
Author
First Published Apr 29, 2024, 9:53 AM IST

ಬೆಂಗಳೂರು (ಏ.29): 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2 ಸೋಮವಾರ ರಾಜ್ಯಾದ್ಯಂತ ಆರಂಭವಾಗಿದ್ದು ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. 84,933 ಗಂಡು ಮಕ್ಕಳು, 64,367 ಹೆಣ್ಣು ಮಕ್ಕಳು ಸೇರಿ ಒಟ್ಟು 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ದಿನ ಸೋಮವಾರ ಕನ್ನಡ ಮತ್ತು ಅರೇಬಿಕ್‌ ವಿಷಯಗಳ ಪರೀಕ್ಷೆ ನಡೆಯಿತು. ಮೇ 6ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಬಹುತೇಕ ಎಲ್ಲಾ ದಿನದ ಪರೀಕ್ಷೆಗಳೂ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಬೆಂಗಳೂರಿನ 39 ಸೇರಿದಂತೆ ರಾಜ್ಯಾದ್ಯಂತ 301 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ಪರೀಕ್ಷೆ ನಡೆಸಲು ಎಲ್ಲ ಕ್ರಮ ವಹಿಸಲಾಗಿದೆ. 

ಎಲ್ಲ ಕೇಂದ್ರಗಳ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಯು ನಿಷೇಧಾಜ್ಞೆ ಜಾರಿಗೊಳಿಸಿದೆ. ಪರೀಕ್ಷಾ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಒಟ್ಟು 1.49 ಲಕ್ಷ ವಿದ್ಯಾರ್ಥಿಗಳಲ್ಲಿ ಪರೀಕ್ಷೆ- 1ರಲ್ಲಿ ಅನುತ್ತೀರ್ಣರಾಗಿದ್ದ 89,221 ಜನ, ಹಿಂದಿನ ಪರೀಕ್ಷೆಯ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು 32,848 ವಿದ್ಯಾರ್ಥಿಗಳು, 27,092 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಪರೀಕ್ಷೆ-1ರ ವೇಳೆ ಶೇ.75ರಷ್ಟು ಹಾಜರಾತಿ ಇಲ್ಲದೆ ಪರೀಕ್ಷೆಯಿಂದ ವಂಚಿತರಾಗಿದ್ದ 139 ಮಂದಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 

ವಿಭಾಗವಾರು ಕಲಾ ವಿಭಾಗದಿಂದ 52,492, ವಾಣಿಜ್ಯ ವಿಭಾಗದಲ್ಲಿ 39,427, ವಿಜ್ಞಾನ ವಿಭಾಗದಿಂದ 57,381 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ದ್ವಿತೀಯ ಪಿಯು ಪರೀಕ್ಷೆ-2 ಪ್ರವೇಶ ಪತ್ರದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ನೋಂದಾಯಿಸಿರುವ ವಿಷಯಗಳಿಗಿಂತ ಹೆಚ್ಚಿನ ವಿಷಯಗಳು ನೋಂದಣಿಯಾಗಿವೆ. ಅಂತಹವರು ಆತಂಕ ಪಡಬೇಕಿಲ್ಲ, ಆರಾಮಾಗಿ ನೋಂದಾಯಿತ ವಿಷಯಗಳ ಪರೀಕ್ಷೆಗಳಿಗೆ ಹಾಜರಾದರೆ ಸಾಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಸಿಇಟಿ ಪರೀಕ್ಷೆ: 50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಮೂರು ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ಈಗಾಗಲೇ ಪರೀಕ್ಷೆ 1 ಬರೆದು ಪಾಸಾಗಿದ್ದರೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು 32 ಸಾವಿರಕ್ಕೂ ಹೆಚ್ಚು ಮಂದಿ ಮತ್ತೆ ಪರೀಕ್ಷೆ ಬರೆಯುತ್ತಿದ್ದಾರೆ. ಈಗ ಪರೀಕ್ಷೆ 2ರಲ್ಲಿ ಬಂದ ಫಲಿತಾಂಶವೂ ಸಮಾಧಾನ ತರದಿದ್ದರೆ ಮತ್ತೆ ಮೇ ಮಾಸಾಂತ್ಯದಲ್ಲಿ ನಡೆಯುವ ಪರೀಕ್ಷೆ 3 ಬರೆಯಬಹುದು. ಈ ಮೂರು ಪರೀಕ್ಷೆಯಲ್ಲಿ ಒಟ್ಟಾರೆ ಫಲಿತಾಂಶವಾಗಲಿ, ವಿಷಯವಾರು ಆಗಲಿ ಹೆಚ್ಚು ಅಂಕ ಬಂದ ಫಲಿತಾಂಶ ಉಳಿಸಿಕೊಳ್ಳುವ ಅವಕಾಶ ವಿದ್ಯಾರ್ಥಿಗಳ ಆಯ್ಕೆಗಿದೆ.

Follow Us:
Download App:
  • android
  • ios