Asianet Suvarna News Asianet Suvarna News

ತಮ್ಮನ ಮದುವೆಗೆ ಯತ್ನಿಸಿದ ಅಕ್ಕನಿಗೆ ವಿವಾಹ ಆ್ಯಪ್‌ನಲ್ಲಿ 45000 ವಂಚನೆ

ಸೈಬರ್‌ ವಂಚಕರು ಕಸ್ಟಮ್ಸ್‌ ಅಧಿಕಾರಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ₹45 ಸಾವಿರ ಪಡೆದು ವಂಚಿಸಿರುವ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

45000 fraud on marriage app for elder sister who tried for her marriage gvd
Author
First Published Apr 30, 2024, 7:03 AM IST

ಬೆಂಗಳೂರು (ಏ.30): ಸೈಬರ್‌ ವಂಚಕರು ಕಸ್ಟಮ್ಸ್‌ ಅಧಿಕಾರಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ₹45 ಸಾವಿರ ಪಡೆದು ವಂಚಿಸಿರುವ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಟನ್‌ಪೇಟೆಯ ಉಷಾ ಎಂಬುವವರು ನೀಡಿದ ದೂರಿನ ಮೇರೆಗೆ ಆರ್ಯ ಎಂಬಾಕೆಯ ವಿರುದ್ಧ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  ದೂರುದಾರೆ ಉಷಾ ಅವರು ತನ್ನ ಸಹೋದರ ಸುರೇಶ್‌ಕುಮಾರ್‌ಗೆ ಮದುವೆ ಮಾಡಲು ಹುಡುಗಿ ಹುಡುಕುತ್ತಿದ್ದರು. 

ಆರು ತಿಂಗಳ ಹಿಂದೆ ಕ್ರಿಶ್ಚಿಯನ್‌ ಮ್ಯಾಟ್ರಿಮೋನಿಯಲ್‌ ಆ್ಯಪ್‌ಗೆ ಸಹೋದರನ ಫೋಟೋ ಸಹಿತ ಮಾಹಿತಿ ಅಪ್‌ಲೋಡ್‌ ಮಾಡಿದ್ದಾರೆ. ಮಾ.21ರಂದು ಆರ್ಯ ಎಂಬ ಯುವತಿ ಉಷಾ ಅವರ ವಾಟ್ಸಾಪ್‌ಗೆ ಸಂದೇಶ ಕಳುಹಿಸಿ ಪರಿಚಯಿಸಿಕೊಂಡಿದ್ದಾಳೆ. ನಾನು ಇಂಗ್ಲೆಂಡ್‌ನಲ್ಲಿ ಇದ್ದು ಇನ್ನೂ ಮದುವೆಯಾಗಿಲ್ಲ. ನಾನು ಭಾರತೀಯರನ್ನು ಮದುವೆಯಾಗುವ ಆಸೆ ಇದೆ. ನಿಮ್ಮ ಸಹೋದರನ ಮದುವೆಯಾಗಲು ಆಸಕ್ತಳಾಗಿದ್ದೇನೆ. ನಿಮ್ಮ ಕುಟುಂಬವನ್ನು ಭೇಟಿಯಾಗಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದಿದ್ದಾಳೆ. ಇದಕ್ಕೆ ಉಷಾ ಸಮ್ಮತಿ ಸೂಚಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ, ಎನ್‌ಡಿಎ ವಿರುದ್ಧ ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ: ಸಾಮಾಜಿಕ ಜಾಲತಾಣದಲ್ಲೂ ಟೀಕೆ

ಕಸ್ಟಮ್ಸ್‌ ಅಧಿಕಾರಿ ಸೋಗಿನಲ್ಲಿ ಕರೆ: ನಾನು ಏ.22ರಂದು ಬೆಂಗಳೂರಿಗೆ ಬರುತ್ತಿರುವುದಾಗಿ ಆರ್ಯ ವೀಸಾ ಮತ್ತು ವಿಮಾನ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಉಷಾಗೆ ಏ.19ರಂದು ವಾಟ್ಸಾಪ್‌ನಲ್ಲಿ ಮಾಹಿತಿ ನೀಡಿದ್ದಾಳೆ. ಅದರಂತೆ ಏ.22ರಂದು ಅಪರಿಚಿತ ಮಹಿಳೆ ದೆಹಲಿ ಕಸ್ಟಮ್ಸ್‌ ಅಧಿಕಾರಿ ಸೋಗಿನಲ್ಲಿ ಉಷಾಗೆ ಕರೆ ಮಾಡಿದ್ದಾಳೆ. ಆರ್ಯ ಎಂಬಾಕೆ ಸುರೇಶ್‌ ಕುಮಾರ್‌ ಎಂಬುವವರನ್ನು ಭೇಟಿಯಾಗಲು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಸದ್ಯ ಅವರು ದೆಹಲಿಯಲ್ಲಿ ಇದ್ದಾರೆ ಎಂದಿದ್ದಾಳೆ.

ಆರ್ಯ ಕೆಲವು ವಸ್ತುಗಳನ್ನು ತಮ್ಮ ಜತೆಯಲ್ಲಿ ತಂದಿದ್ದು, ಅವುಗಳಿಗೆ ಕಸ್ಟಮ್ಸ್‌ ಶುಲ್ಕ ಪಾವತಿಸಿಲ್ಲ. ಹೀಗಾಗಿ ಕಸ್ಟಮ್ಸ್‌ ಶುಲ್ಕ ₹45,500 ಪಾವತಿಸಬೇಕು. ಆಕೆಯ ಬಳಿ ಭಾರತೀಯ ಕರೆನ್ಸಿ ಇಲ್ಲ. ಹೀಗಾಗಿ ನೀವು ಆ ಹಣವನ್ನು ಪಾವತಿಸಿ ಬಳಿಕ ಅವರಿಂದ ಪಡೆದುಕೊಳ್ಳಿ ಎಂದು ಹೇಳಿದ್ದಾಳೆ. ಇದನ್ನು ನಂಬಿದ ಉಷಾ, ಹಣ ಪಾವತಿಸಲು ಒಪ್ಪಿದ್ದಾರೆ. ಬಳಿಕ ಆರ್ಯಳಿಗೆ ಕರೆ ಮಾಡಿ ₹45,500 ಪಾವತಿಸಿದ್ದಾರೆ 

ಪ್ರಜ್ವಲ್ ಪರ ಪ್ರಚಾರ ಮಾಡಿದ್ದ ಮೋದಿ ಈಗೇನು ಹೇಳುತ್ತಾರೆ: ಪ್ರಿಯಾಂಕಾ ಗಾಂಧಿ

ಶುಲ್ಕ ನೆಪದಲ್ಲಿ ₹1.78 ಲಕ್ಷಕ್ಕೆ ಬೇಡಿಕೆ: ಸ್ವಲ್ಪ ಸಮಯದ ಬಳಿಕ ಮತ್ತೆ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಉಷಾಗೆ ಕರೆ ಮಾಡಿದ್ದ ಮಹಿಳೆ, ಆರ್ಯ ಬಳಿ ಸಾಕಷ್ಟು ಹಣವಿದೆ. ಇದಕ್ಕೆ ₹1.78 ಲಕ್ಷ ಕಸ್ಟಮ್ಸ್‌ ಶುಲ್ಕ ಪಾವತಿಸಬೇಕು. ಈ ಶುಲ್ಕವನ್ನು ಪಾವತಿಸಿದರೆ ಕೂಡಲೇ ಆರ್ಯಳನ್ನು ಬೆಂಗಳೂರಿಗೆ ತೆರಳಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾಳೆ. ಇಲ್ಲವಾದರೆ, ಆರ್ಯ ಮತ್ತು ನಿಮಗೆ ಇಬ್ಬರಿಗೂ ತೊಂದರೆಯಾಗಲಿದೆ ಎಂದು ಬೆದರಿಸಿದ್ದಾಳೆ. ಈ ವೇಳೆ ಅನುಮಾನಗೊಂಡ ಉಷಾ ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios