Asianet Suvarna News Asianet Suvarna News

ತವರಿನ ಚಿನ್ನಸ್ವಾಮಿಯಲ್ಲಿ ನಿರ್ಣಾಯಕ ಕದನ ಗೆಲ್ಲುತ್ತಾ ಆರ್‌ಸಿಬಿ?

ಫಾಫ್‌ ಡು ಪ್ಲೆಸಿ ಸಾರಥ್ಯದ ಆರ್‌ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿದೆ. ಎದ್ದು ಬಿದ್ದು ಒಂದು ಪಂದ್ಯ ಗೆದ್ದಿರುವ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ತಂಡಕ್ಕೆ ಸೋಮವಾರದ್ದು ಸೇರಿ ಇನ್ನು 8 ಪಂದ್ಯ ಬಾಕಿ ಇದೆ.

IPL 2024 Royal Challengers Bengaluru eyes on Second win take on SRH Challenge in M Chinnaswamy Stadium kvn
Author
First Published Apr 15, 2024, 8:54 AM IST

ಬೆಂಗಳೂರು(ಏ.15): 17ನೇ ಆವೃತ್ತಿ ಐಪಿಎಲ್‌ನ ಅರ್ಧ ಭಾಗ ಮುಕ್ತಾಯಗೊಳ್ಳುವ ಮೊದಲೇ ಪ್ಲೇ-ಆಫ್‌ ರೇಸ್‌ನ ಅಳಿವು-ಉಳಿವಿನ ಲೆಕ್ಕಾಚಾರ ಆರಂಭಿಸಿರುವ ಆರ್‌ಸಿಬಿ ಈಗ ನಿರ್ಣಾಯಕ ಘಟ್ಟದಲ್ಲಿದೆ. ಗೆದ್ದರೆ ಪ್ಲೇ-ಆಫ್‌, ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್‌ಸಿಬಿ ಸೋಮವಾರ ತವರಿನಲ್ಲಿ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಾಡಲಿದೆ.

ಫಾಫ್‌ ಡು ಪ್ಲೆಸಿ ಸಾರಥ್ಯದ ಆರ್‌ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿದೆ. ಎದ್ದು ಬಿದ್ದು ಒಂದು ಪಂದ್ಯ ಗೆದ್ದಿರುವ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ತಂಡಕ್ಕೆ ಸೋಮವಾರದ್ದು ಸೇರಿ ಇನ್ನು 8 ಪಂದ್ಯ ಬಾಕಿ ಇದೆ.

ನೆಟ್‌ ರನ್‌ರೇಟ್‌ ಲೆಕ್ಕ ಹಾಕಲು ಕ್ಯಾಲ್ಕ್ಯುಲೇಟರ್‌ ಮೊರೆ ಹೋಗದೆ, ಇತರ ತಂಡಗಳ ಸೋಲಿಗಾಗಿ ಪಾರ್ಥಿಸದೆ ಪ್ಲೇ-ಆಫ್‌ಗೇರಬೇಕಿದ್ದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಆರ್‌ಸಿಬಿ ಗೆಲ್ಲಲೇಬೇಕು. ಸೋತರೆ ಪ್ಲೇ-ಆಫ್‌ ಹಾದಿ ಭಗ್ನಗೊಳ್ಳುವುದು ಬಹುತೇಕ ಖಚಿತ.

ರೋಹಿತ್ ಶರ್ಮಾ ಶತಕ ಸಿಡಿಸಿದ್ರೂ, ವಾಖೇಡೆಲಿ ಚೆನ್ನೈ ಗೆ ಶರಣಾದ ಮುಂಬೈ..!

ಎಲ್ಲದರಲ್ಲೂ ವಿಫಲ: ಈ ಬಾರಿ ಆರ್‌ಸಿಬಿಯ ಪ್ರದರ್ಶನದ ಬಗ್ಗೆ ಹೇಳಿಕೊಳ್ಳುವಂತದ್ದೇನೂ ಇಲ್ಲ. ಒನ್‌ ಮ್ಯಾನ್‌ ಶೋ ಎಂಬಂತೆ ವಿರಾಟ್‌ ಕೊಹ್ಲಿ ಮಾತ್ರ ಅಬ್ಬರಿಸುತ್ತಿದ್ದಾರೆ. ಉಳಿದಂತೆ ಯಾರೊಬ್ಬರೂ 200ಕ್ಕಿಂತ ಹೆಚ್ಚು ಮೊತ್ತ ಕಲೆಹಾಕಿಲ್ಲ. ದಿನೇಶ್‌ ಕಾರ್ತಿಕ್‌ ಡೆತ್‌ ಓವರ್‌ಗಳಲ್ಲಿ ಮಿಂಚುತ್ತಿದ್ದರೂ ಇತರರಿಂದ ಸೂಕ್ತ ಬೆಂಬಲ ಸಿಗದ ಕಾರಣ ಅವರ ಕೊಡುಗೆಯೂ ಬೆಲೆ ಕಳೆದುಕೊಳ್ಳುತ್ತಿದೆ.

ಫಾಫ್ ಡು ಪ್ಲೆಸಿಸ್, ರಜತ್‌ ಪಾಟೀದಾರ್‌ರಿಂದ ತಂಡ ಮತ್ತಷ್ಟು ನಿರೀಕ್ಷೆಯಲ್ಲಿದೆ. ಇನ್ನು, ಕೈ ಬೆರಳಿನ ಗಾಯಕ್ಕೆ ತುತ್ತಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ಪಂದ್ಯದಲ್ಲಿ ಆಡುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ತಂಡದ ಬೌಲಿಂಗ್‌ ವಿಭಾಗ ಎಷ್ಟು ಸಪ್ಪೆಯಾಗಿದೆ ಎಂದರೆ ಯಾರೊಬ್ಬರೂ ತಲಾ 5+ ಹೆಚ್ಚು ವಿಕೆಟ್‌ ಪಡೆದಿಲ್ಲ. ಈ ಪಂದ್ಯದಲ್ಲಾದರೂ ಬೌಲರ್‌ಗಳು ತಂಡದ ಕೈ ಹಿಡಿಯುತ್ತಾರಾ ನೋಡಬೇಕಿದೆ.

ಮತ್ತೊಂದೆಡೆ 5ರಲ್ಲಿ 3 ಪಂದ್ಯ ಗೆದ್ದಿರುವ ಸನ್‌ರೈಸರ್ಸ್‌ ತನ್ನ ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿಯಲ್ಲಿ ಸನ್‌ರೈಸರ್ಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

IPL 2024: ಲಖನೌ ಗಾಯದ ಮೇಲೆ 'ಸಾಲ್ಟ್' ಸುರಿದ ಕೆಕೆಆರ್..!

ಒಟ್ಟು ಮುಖಾಮುಖಿ: 22

ಆರ್‌ಸಿಬಿ: 10

ಹೈದ್ರಾಬಾದ್: 12

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ವಿಲ್‌ ಜ್ಯಾಕ್ಸ್‌, ರಜತ್‌, ಮ್ಯಾಕ್ಸ್‌ವೆಲ್‌, ದಿನೇಶ್‌, ಲೊಮ್ರೊರ್‌, ಟಾಪ್ಲೀ, ವೈಶಾಖ್‌, ಸಿರಾಜ್‌, ಯಶ್‌ ದಯಾಳ್‌

ಹೈದ್ರಾಬಾದ್‌: ಹೆಡ್‌, ಅಭಿಷೇಕ್‌, ಏಡನ್‌, ಕ್ಲಾಸೆನ್‌, ಸಮದ್‌, ನಿತೀಶ್‌, ಶಾಬಾಜ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಉನಾದ್ಕಟ್‌, ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

ಪಿಚ್‌ ರಿಪೋರ್ಟ್: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿದ್ದರೂ ಈ ಬಾರಿ 3 ಪಂದ್ಯಗಳಲ್ಲಿ ಒಮ್ಮೆಯೂ 190+ ಮೊತ್ತ ದಾಖಲಾಗಿಲ್ಲ. ಆದರೆ ಇಲ್ಲಿ ಚೇಸಿಂಗ್‌ ಸುಲಭವಾಗಲಿರುವ ಕಾರಣ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಅಧಿಕ.

Follow Us:
Download App:
  • android
  • ios