Asianet Suvarna News Asianet Suvarna News

ಭಾರತಕ್ಕಾಗಿ ಕಡಿಮೆ ವೇಗದಲ್ಲೂ ಕೆಲಸ ಮಾಡುವ ಗೂಗಲ್ ಸ್ಟೇಷನ್ ರಿಲೀಸ್

ಕಡಿಮೆ ಇಂಟರ್‌ನೆಟ್ ವೇಗದಲ್ಲೂ ಕೆಲಸ ಮಾಡಲು ಸಾಧ್ಯವಿರುವಂತಹ ಹಲವು ಹೊಸ ಉತ್ಪನ್ನಗಳನ್ನು ತಂತ್ರಜ್ಞಾನ ಸಂಸ್ಥೆ ಗೂಗಲ್ ಪ್ರಕಟಿಸಿದೆ

google releases new products for india

ನವದೆಹಲಿ(ಸೆ.28): ಕಡಿಮೆ ಇಂಟರ್‌ನೆಟ್ ವೇಗದಲ್ಲೂ ಕೆಲಸ ಮಾಡಲು ಸಾಧ್ಯವಿರುವಂತಹ ಹಲವು ಹೊಸ ಉತ್ಪನ್ನಗಳನ್ನು ತಂತ್ರಜ್ಞಾನ ಸಂಸ್ಥೆ ಗೂಗಲ್ ಪ್ರಕಟಿಸಿದೆ. ವಿಶೇಷವಾಗಿ ಭಾರತದ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಈ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ‘ಗೂಗಲ್ ಸ್ಟೇಷನ್’ ಎಂದು ಕರೆಯುವ ಹೊಸ ವೈಫೈ, ‘ಯೂಟ್ಯೂಬ್ ಗೋ’, ಆನ್`ಲೈನ್‌ನಲ್ಲಿ ಕೆಲಸ ಮಾಡುವ ಕ್ರೋಮ್ ವೆಬ್ ಬ್ರೌಸರ್ ಮತ್ತು 2ಜಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ‘ಗೂಗಲ್ ಪ್ಲೇ’ ಪರಿಚಯಿಸಿದೆ.

ಪ್ರಮುಖ ಮೂರು ಬಳಕೆ ವಿಭಾಗಗಳಾದ ಆ್ಯಕ್ಸಸ್, ಪ್ರಾಡಕ್ಟ್ಸ್ ಮತ್ತು ಪ್ಲಾಟ್‌ಾರ್ಮ್ ಗುರಿಯಾಗಿಸಿಕೊಂಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿನ ಆನ್‌ಲೈನ್ ಬಳಕೆದಾರರಿಗೆ ಅತಿಹೆಚ್ಚು ಮತ್ತು ಉತ್ತಮ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಗೂಗಲ್ ಉಪಾಧ್ಯಕ್ಷ ಸೀಸರ್ ಸೇನ್‌ಗುಪ್ತಾ ಹೇಳಿದ್ದಾರೆ.

ಭಾರತೀಯರು ಹೆಚ್ಚು ಆನ್‌ಲೈನ್ ಸೇವೆಗಳನ್ನು ಪಡೆಯುವುದಷ್ಟೆ ಕಂಪನಿ ಗುರಿಯಲ್ಲ. ಆದರೆ ಅವರಿಗೆ ಬೇಕಾದ ರೀತಿಯಲ್ಲಿ ಆನ್‌ಲೈನ್ ಬಳಕೆ ಮಾಡಿಕೊಳ್ಳುವಂತೆ ಸೇವೆ ಸಲ್ಲಿಸುವುದು ಕಂಪನಿ ಉದ್ದೇಶವಾಗಿದೆ. ಹೀಗಾಗಿ ಹೊಸ ಬಳಕೆದಾರರಿಗೆ ಎಂತಹ ಸೌಲಭ್ಯಗಳನ್ನು ನೀಡಬೇಕು ಎಂಬುದರ ಕುರಿತು ಕಂಪನಿ ಚಿಂತಿಸುತ್ತಿದೆ ಎಂದು ಸೇನ್‌ಗುಪ್ತಾ ತಿಳಿಸಿದ್ದಾರೆ.

ಯಾವುದೇ ಸಂಪರ್ಕ ಜಾಲದಲ್ಲೂ ಮತ್ತು ಭಾರತದ ಎಲ್ಲ ಭಾಷೆಗಳನ್ನೂ ಒಳಗೊಳ್ಳುವಂತೆ ಹಾಗೂ ಯಾವುದೇ ಕಂಪನಿಯ ಮೊಬೈಲ್ ಬಳಕೆ ಮಾಡುತ್ತಿದ್ದರೂ ಅವುಗಳನ್ನು ಬಳಕೆ ಮಾಡಲು ಸಾಧ್ಯವಿರುವಂತಹ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವತ್ತ ನೋಟ ಹರಿಸಲಾಗಿದೆ ಎಂದು ಹೇಳಿದ್ದಾರೆ. ಭಾರತದ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯವನ್ನು ಒದಗಿಸಲು ರೇಲ್‌ಟೆಲ್ ಮತ್ತು ಇಂಡಿಯನ್ ರೈಲ್ವೇಸ್ ಜೊತೆ ಪಾಲುದಾರಿಕೆಯನ್ನು ಮುಂದುವರೆಸಿರುವ ಕಂಪನಿ ಈಗ ಗೂಗಲ್ ಸ್ಟೇಷನ್ ಎಂಬ ಹೊಸ ಪ್ಲಾಟಫಾರ್ಮ್ ಬಿಡುಗಡೆ ಮಾಡಿದೆ.