ಏರ್'ಟೆಲ್'ನಿಂದ ಬಂಪರ್ ಆಫರ್; 3 ತಿಂಗಳು ಉಚಿತ 30ಜಿಬಿ 4G ಡೇಟಾ
technology
By Suvarna Web Desk | 01:33 PM March 13, 2017

ತನ್ನ ಗ್ರಾಹಕರು ಜಿಯೋಗೆ ವಲಸೆ ಹೋಗುವುದನ್ನು ತಡೆಯಲು ಏರ್'ಟೆಲ್ ಸರಿಯಾದ ಸಮಯಕ್ಕೆ ಉಚಿತ 30ಜಿಬಿ ಡೇಟಾ ಆಫರ್ ನೀಡಿದೆ.

ನವದೆಹಲಿ(ಮಾ. 13): ರಿಲಾಯನ್ಸ್ ಜಿಯೋ ಬಂದ ಬಳಿಕ ದೇಶದ ಮೊಬೈಲ್ ಆಪರೇಟರ್'ಗಳ ಬೆಲೆ ಸಮರಕ್ಕೆ ಭಾರೀ ಶಕ್ತಿ ಸಿಕ್ಕಿದೆ. ಪ್ರತಿಯೊಬ್ಬರೂ ಬೆಲೆ ಇಳಿಕೆ ಪೈಪೋಟಿಯಲ್ಲಿ ತೊಡಗಿವೆ. ದುಬಾರಿ ಹಣ ತೆತ್ತು ಕಂಗಾಲಾಗುತ್ತಿದ್ದ ಗ್ರಾಹಕರಿಗೆ ಸದ್ಯಕ್ಕಂತೂ ಸುಗ್ಗಿಯ ಕಾಲ. ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಏರ್'ಟೆಲ್ ಇದೀಗ ತನ್ನ ಪೋಸ್ಟ್ ಪೇಡ್ ಗ್ರಾಹಕರಿಗೆ ಹೋಳಿ ಕೊಡುಗೆ ನೀಡಿದೆ. ಮೂರು ತಿಂಗಳು ಉಚಿತ 30ಜಿಬಿ 4ಜಿ ಡೇಟಾ ಒದಗಿಸಲಿದೆ. ಮೂರು ತಿಂಗಳ ಕಾಲ ಪ್ರತೀ ತಿಂಗಳು 10ಜಿಬಿ ಉಚಿತ ಡೇಟಾ ಸಿಗುತ್ತದೆ. ಆದರೆ, ಕಂಡೀಷನ್ ಏನಂದ್ರೆ, ನಿಮ್ಮ ಮೊಬೈಲ್'ನಲ್ಲಿ "MyAirtel" ಆ್ಯಪ್ ಇನ್'ಸ್ಟಾಲ್ ಆಗಿರಬೇಕು. ಆ ಆ್ಯಪ್ ಓಪನ್ ಮಾಡಿದರೆ ನಿಮಗೆ ಸರ್'ಪ್ರೈಸ್ ಆಫರ್'ನ ಮೆಸೇಜ್ ಪ್ರತ್ಯಕ್ಷವಾಗುತ್ತದೆ. ಆ ಸಂದೇಶವನ್ನು ಕ್ಲಿಕ್ ಮಾಡಿದರೆ ಉಚಿತ ಡೇಟಾ ಪ್ಯಾಕೇಜ್ ನಿಮ್ಮದಾಗುತ್ತದೆ.

ಜಿಯೋ ಭಯ:
ರಿಲಾಯನ್ಸ್ ಜಿಯೋ ಕಂಪನಿಯು ಆಫರ್'ಗಳ ಮೇಲೆ ಆಫರ್'ಗಳನ್ನು ಕೊಡುತ್ತಿದೆ. ಕೆಲ ಸುದ್ದಿಗಳ ಪ್ರಕಾರ, ಏರ್'ಟೆಲ್ ಸೇರಿದಂತೆ ವಿವಿಧ ಕಡೆ ಮೊಬೈಲ್ ಆಪರೇಟರ್'ಗಳ ಗ್ರಾಹಕರು ರಿಲಾಯನ್ಸ್ ಜಿಯೋಗೆ ವಲಸೆ ಹೋಗುತ್ತಿದ್ದಾರೆ. ಜಿಯೋ ಕಂಪನಿಯು 303 ರೂಪಾಯಿಗೆ ಬರೋಬ್ಬರಿ 28ಜಿಬಿ ಡೇಟಾ ನೀಡುತ್ತಿದೆ. ಆದರೆ, ಇದಕ್ಕಾಗಿ ಜಿಯೋ ಪ್ರೈಮ್ ಸದಸ್ಯತ್ವ ಹೊಂದಿರಬೇಕು. ಪ್ರೈಮ್ ಮೆಂಬರ್'ಶಿಪ್'ಗೆ ಮಾರ್ಚ್ 31 ಕೊನೆಯ ದಿನಾಂಕ.

ಹೀಗಾಗಿ, ತನ್ನ ಗ್ರಾಹಕರು ಜಿಯೋಗೆ ವಲಸೆ ಹೋಗುವುದನ್ನು ತಡೆಯಲು ಏರ್'ಟೆಲ್ ಸರಿಯಾದ ಸಮಯಕ್ಕೆ ಉಚಿತ 30ಜಿಬಿ ಡೇಟಾ ಆಫರ್ ನೀಡಿದೆ.

Show Full Article