Asianet Suvarna News Asianet Suvarna News

ಕುಬ್ಜ ಅಥ್ಲೀಟ್'ಗಳಿಗೆ ನೆರವಿನ ಆಶ್ವಾಸನೆ ಮರೆತ ರಾಜ್ಯ ಸರ್ಕಾರ

ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ದಿಗ್ಗಜರು ಈ ಅಥ್ಲೀಟ್‌ಗಳ ಸಾಧನೆಯನ್ನು ಕೊಂಡಾಡಿದ್ದರು. ಕೆನಡಾದಲ್ಲಿನ ಭಾರತೀಯ ರಾಯಭಾರಿ ಅಥ್ಲೀಟ್‌'ಗಳನ್ನು ಸ್ವಾತಂತ್ರ್ಯ ದಿನದಂದು ಅತಿಥಿಗಳಾಗಿ ಕರೆದಿದ್ದರು.

State Neglects World Dwarf Games players

ಬೆಂಗಳೂರು(ಆ.20): ಕೆನಡಾದಲ್ಲಿ ನಡೆದ 7ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಪದಕ ಬೇಟೆಯಾಡಿ ದೇಶಕ್ಕೆ ಹೆಮ್ಮೆ ತಂದ ಅಥ್ಲೀಟ್‌ಗಳೀಗ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದಾರೆ. 15 ಚಿನ್ನ ಸೇರಿ ಭಾರತ ಒಟ್ಟು 37 ಪದಕಗಳನ್ನು ಗೆದ್ದಿತ್ತು. ಈ ಪೈಕಿ ಕರ್ನಾಟಕದ 7 ಅಥ್ಲೀಟ್‌'ಗಳು ಒಟ್ಟು 15 ಪದಕಗಳಿಗೆ ಕೊರಳೊಡ್ಡಿದ್ದರು.

ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ದಿಗ್ಗಜರು ಈ ಅಥ್ಲೀಟ್‌ಗಳ ಸಾಧನೆಯನ್ನು ಕೊಂಡಾಡಿದ್ದರು. ಕೆನಡಾದಲ್ಲಿನ ಭಾರತೀಯ ರಾಯಭಾರಿ ಅಥ್ಲೀಟ್‌'ಗಳನ್ನು ಸ್ವಾತಂತ್ರ್ಯ ದಿನದಂದು ಅತಿಥಿಗಳಾಗಿ ಕರೆದಿದ್ದರು. ಇಷ್ಟೆಲ್ಲಾ ಸಾಧನೆ ಹಿಂದೆ ಅತಿಯಾದ ನೋವಿದೆ. ರಾಜ್ಯದ ಅಥ್ಲೀಟ್‌'ಗಳು ಕೆನಡಾಗೆ ತೆರಳಲು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಣಕಾಸಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಕ್ರೀಡಾಕೂಟಕ್ಕೆ ತೆರಳಲು ಇನ್ನು ಮೂರು ದಿನ ಮಾತ್ರ ಇದ್ದಾಗ ಆರ್ಥಿಕ ನೆರವು ನೀಡಲಾಗುವುದಿಲ್ಲ ಎಂದರು’ ಎಂದು ವಿಶ್ವಕೂಟದಲ್ಲಿ 3 ಚಿನ್ನದ ಪದಕ ಗೆದ್ದ ಸಿ.ವಿ.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

‘ಕ್ರೀಡಾಕೂಟಕ್ಕೆ ತೆರಳಲು ಪ್ರತಿಯೊಬ್ಬರು ಬಹಳ ಸಮಸ್ಯೆ ಎದುರಿಸಬೇಕಾಯಿತು. ವಿಮಾನ ಟಿಕೆಟ್‌'ಗಳು, ವೀಸಾ, ಅಲ್ಲಿನ ಖರ್ಚು ಹೀಗೆ ಪ್ರತಿಯೊಂದಕ್ಕೂ ಹಣ ಹೊಂದಿಸಲು ಅಥ್ಲೀಟ್'ಗಳು ಸಾಲ ಮಾಡಬೇಕಾಯಿತು. ಕೆಲವರು ಒಡವೆ ಅಡವಿಟ್ಟು ಹಣ ವ್ಯವಸ್ಥೆ ಮಾಡಿದ್ದರು. ಗೆದ್ದು ಬನ್ನಿ ನಂತರ ನೋಡೋಣ ಎಂದು ಸರ್ಕಾರ ಹೇಳಿತ್ತು. ಈಗ ಪದಕ ಗೆದ್ದಿದ್ದೇವೆ. ದೇಶವೇ ನಮ್ಮ ಸಾಧನೆಯನ್ನು ಹೊಗಳುತ್ತಿದೆ. ಆದರೆ ಸರ್ಕಾರದ ಕಣ್ಣಿಗೆ ಮಾತ್ರ ನಾವು ಕಾಣುತ್ತಿಲ್ಲ. ವಿದೇಶಗಳಲ್ಲಿ ಹೀಗಿಲ್ಲ. ಎಲ್ಲಾ ಕ್ರೀಡಾಪಟುಗಳನ್ನೂ ಒಂದೇ ರೀತಿ ಕಾಣಲಾಗುತ್ತದೆ. ಆದರೆ ಇಲ್ಲೇಕೆ ತಾರತಮ್ಯ’ ಎಂದು ರಾಜಣ್ಣ ಸರ್ಕಾರವನ್ನು ಪ್ರಶ್ನೆ ಮಾಡಿದರು.

‘ನಾವು ಅಮೆರಿಕ, ಕೆನಡಾ, ಇಂಗ್ಲೆಂಡ್ ತಂಡಗಳ ಅಥ್ಲೀಟ್‌'ಗಳ ಕಥೆ ಕೇಳಿದಾಗ ಆಶ್ಚರ್ಯವಾಯಿತು. ಅವರಿಗೆ 6 ತಿಂಗಳ ಹಿಂದೆಯೇ ಅಭ್ಯಾಸ ಶಿಬಿರ ನಡೆಸಲಾಗುತ್ತದೆ. ಜತೆಗೆ ಬೇಕಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಸರ್ಕಾರವೇ ನೀಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಪ್ರತಿಯೊಂದಕ್ಕೂ ನಾವು ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು.

‘ನಮಗೆ ನೀಡುವ ಪದಕ ನಿಜವಾಗಿಯೂ ಚಿನ್ನದ್ದೇ ಆಗಿದ್ದರೆ ಸರ್ಕಾರದ ಸಹಾಯ ಕೇಳುತ್ತಿರಲಿಲ್ಲ. ಈವರೆಗೂ ಗೆದ್ದಿರುವ ಪದಕಗಳನ್ನು ಮಾರಿ ಮುಂದಿನ ಕ್ರೀಡಾಕೂಟಗಳಿಗೆ ಹಣದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ ನಮಗೆ ಸಿಗುವುದು ಚಿನ್ನದ ಪದಕವಲ್ಲ. ಆದರೂ ನಾವು ಅದನ್ನೇ ಚಿನ್ನವೆಂದು ನಂಬಿದ್ದೇವೆ. ದೇಶಕ್ಕೆ ಚಿನ್ನ ಗೆಲ್ಲಬೇಕು ಎನ್ನುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿದೆ’ ಎಂದು ರಾಜಣ್ಣ ಹೇಳಿದರು.

ಇದೇ ವೇಳೆ ಕ್ರೀಡಾಕೂಟದಲ್ಲಿ ತಲಾ ಒಂದು ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಎಂ.ಪ್ರಕಾಶ್, ‘ಮಂತ್ರಿಗಳು ಸೂಚನೆ ನೀಡಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಕಚೇರಿಗಳಲ್ಲಿ ನಮ್ಮನ್ನು ಗಂಟೆಗಟ್ಟಲೆ ಕಾಯಿಸಲಾಗುತ್ತಿದೆ. ತೀರಾ ಕೆಳಮಟ್ಟದವರಂತೆ ನಮ್ಮನ್ನು ನೋಡಲಾಗುತ್ತಿದೆ’ ಎಂದರು.

‘ಕ್ರೀಡಾಕೂಟ ಮುಗಿದ ಬಳಿಕ ನಮಗೆ ಹಣದ ಕೊರತೆ ಎದುರಾಯಿತು. ಭಾರತಕ್ಕೆ ವಿಮಾನ ಹತ್ತುವ ಮೊದಲು ಎರಡು-ಮೂರು ದಿನ ನಾವು ಅಲ್ಲೇ ಕಳೆಯಬೇಕಿತ್ತು. ಆ ಸಂದರ್ಭದಲ್ಲಿ ಶೃಂಗೇರಿ ಮಠದವರು ನಮಗೆ ಸಹಾಯ ಮಾಡಿದರು. ಇಲ್ಲವಾಗಿದ್ದರೆ ನಾವು ವಿಮಾನ ನಿಲ್ದಾಣದಲ್ಲೇ ಮಲಗಬೇಕಾಗುತ್ತಿತ್ತು. ಕೆನಡಾದಲ್ಲಿರುವ ಅನಿವಾಸಿ ಭಾರತೀಯರು ಸಹ ನಮ್ಮನ್ನು ಆದರದಿಂದ ನೋಡಿಕೊಂಡರು. ಸುತ್ತ ಮುತ್ತಲಿನ ಕೆಲ ಪ್ರೇಕ್ಷಣೀಯ ಸ್ಥಳಗಳನ್ನೂ ಆಟಗಾರರು ನೋಡಲು ಸಾಧ್ಯವಾಯಿತು’ ಎಂದು ತಂಡದ ವ್ಯವಸ್ಥಾಪಕ ಶಿವಾನಂದ್ ಗುಂಜಲ್ ಹೇಳಿದರು.

Follow Us:
Download App:
  • android
  • ios