Asianet Suvarna News Asianet Suvarna News

ಕೊಹ್ಲಿ, ಜಾಧವ್ ಧಮಾಕ; ಇಂಗ್ಲೆಂಡ್'ನ 350 ರನ್ ಸ್ಕೋರನ್ನು ಚೇಸ್ ಮಾಡಿದ ಭಾರತ

ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ ಧೀರೋದ್ದಾತ ಪ್ರದರ್ಶನ ನೀಡಿದರು. ಇವರಿಬ್ಬರು 5ನೇ ವಿಕೆಟ್'ಗೆ 200 ರನ್ ಜೊತೆಯಾಟ ತಂಡಕ್ಕೆ ಗೆಲುವಿನ ಆಸೆ ಜೀವಂತವಾಗಿರಿಸಿದರು.

india beat england in first match of odi series

ಪುಣೆ(ಜ. 15): ತವರಿನಲ್ಲಿ ಬೃಹತ್ ಗುರಿಯನ್ನು ಚೇಸ್ ಮಾಡುವ ಕಲೆ ತನಗೆ ಸಿದ್ಧಿಸಿರುವುದನ್ನು ಟೀಮ್ ಇಂಡಿಯಾ ಮತ್ತೊಮ್ಮೆ ಸಾಬೀತುಪಡಿಸಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ 3 ವಿಕೆಟ್'ಗಳಿಂದ ಗೆದ್ದಿದೆ. ಗೆಲ್ಲಲು 351 ರನ್ ಗುರಿ ಬೆನ್ನತ್ತಿದ ಭಾರತ ಇನ್ನೂ 11 ಎಸೆತ ಇರುವಂತೆಯೇ ಜಯದ ದಡ ಮುಟ್ಟಿದೆ. ಕ್ಯಾಪ್ಟನ್ ಆಗಿ ಕೊಹ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಶತಕ ಭಾರಿಸುವ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ. ಬೃಹತ್ ಗುರಿಯನ್ನು ಪಡೆದ ಭಾರತ ಒಂದು ಹಂತದಲ್ಲಿ 63 ರನ್'ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಧೋನಿ, ಯುವರಾಜ್ ಸಿಂಗ್'ರಂತಹ ಬಿಗ್ ಹಿಟ್ಟರ್'ಗಳು ಪೆವಿಲಿಯನ್'ಗೆ ಮರಳಿದ್ದರು. ಆದರೆ, ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ ಧೀರೋದ್ದಾತ ಪ್ರದರ್ಶನ ನೀಡಿದರು. ಇವರಿಬ್ಬರು 5ನೇ ವಿಕೆಟ್'ಗೆ 200 ರನ್ ಜೊತೆಯಾಟ ತಂಡಕ್ಕೆ ಗೆಲುವಿನ ಆಸೆ ಜೀವಂತವಾಗಿರಿಸಿದರು. ಕೊಹ್ಲಿ ಮತ್ತು ಜಾಧವ್ ನಿರ್ಗಮಿಸಿದಾಗ ಭಾರತ 61 ಬಾಲ್'ನಲ್ಲಿ 60 ರನ್ ಗಳಿಸಬೇಕಿತ್ತು. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಬಹಳ ಸಂಯಮದಿಂದ ಬ್ಯಾಟ್ ಮಾಡಿದರು. ಜಡೇಜಾ ಬೇಗ ನಿರ್ಗಮಿಸಿದರೂ ಹಾರ್ದಿಕ್ ಪಾಂಡ್ಯ ಬಹಳ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಸಾಧಾರಣ ಆರಂಭ ಪಡೆಯಿತು. ಆದರೆ, ಅಗ್ರಕ್ರಮಾಂಕದಲ್ಲಿ ಜೇಸನ್ ರಾಯ್, ಜೋ ರೂಟ್ ಅವರು ತಂಡಕ್ಕೆ ಚೇತರಿಕೆ ನೀಡಿದರು. ಬಟ್ಲರ್, ಸ್ಟೋಕ್ಸ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟುಗಾರರು ಇಂಗ್ಲೆಂಡ್ ತಂಡದ ಸ್ಕೋರನ್ನು 300 ರನ್ ಗಡಿ ದಾಟಿಸಿದರು. ಕೊನೆಯ ಹತ್ತು ಓವರ್'ನಲ್ಲಿ ಇಂಗ್ಲೆಂಡ್ ತಂಡ ನೂರಕ್ಕೂ ಹೆಚ್ಚು ರನ್ ಚಚ್ಚಿತು. 320 ರನ್ ಗಳಿಸುವ ಕುರುಹು ತೋರಿದ್ದ ಆಂಗ್ಲರು ಕೊನೆಕೊನೆಯಲ್ಲಿ ಭಾರತೀಯ ಬೌಲರ್'ಗಳ ಬೆಂಡೆತ್ತಿ ಸ್ಕೋರನ್ನು 350ಕ್ಕೆ ಉಬ್ಬಿಸಿದರು.

ಸ್ಕೋರು ವಿವರ:

ಇಂಗ್ಲೆಂಡ್ 50 ಓವರ್ 350/7
(ಜೋ ರೂಟ್ 78, ಜೇಸನ್ ರಾಯ್ 73, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ 31, ಇಯಾನ್ ಮೋರ್ಗನ್ 28, ಮೊಯೀನ್ ಅಲಿ 28 ರನ್ - ಹಾರ್ದಿಕ್ ಪಾಂಡ್ಯ 46/2, ಜಸ್'ಪ್ರೀತ್ ಬುಮ್ರಾ 79/2)

ಭಾರತ 48.1 ಓವರ್ 356/7
(ವಿರಾಟ್ ಕೊಹ್ಲಿ 122, ಕೇದಾರ್ ಜಾಧವ್ 120, ಹಾರ್ದಿಕ್ ಪಾಂಡ್ಯ ಅಜೇಯ 40 ರನ್ - ಜೇಕ್ ಬಾಲ್ 67/3, ಡೇವಿಡ್ ವಿಲ್ಲೀ 47/2, ಬೆನ್ ಸ್ಟೋಕ್ಸ್ 73/2)

Follow Us:
Download App:
  • android
  • ios