ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗಿದು ಸಿಹಿ ಸುದ್ದಿ...!
sports
By Suvarna Web Desk | 06:39 PM June 19, 2017

ಕಳೆದ ವರ್ಷ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಹರ್ಷಾ ಬೋಗ್ಲೆ ಅವರನ್ನು ಯಾವುದೇ ಕಾರಣ ನೀಡದೇ ಬಿಸಿಸಿಐ ವೀಕ್ಷಕ ವಿವರಣೆ ಪ್ಯಾನಲ್'ನಿಂದ ಹೊರಗಟ್ಟಿತ್ತು.

ಬೆಂಗಳೂರು(ಜೂ.19): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕ್ ಎದುರು ಎಡವಿ ಟೀಂ ಇಂಡಿಯಾ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ ಇದೀಗ ಆ ನೋವನ್ನು ಮರೆಸುವ ಹೊಸ ಸುದ್ದಿಯೊಂದು ಟೀಂ ಇಂಡಿಯಾ ಅಭಿಮಾನಿಗಳಿಗಾಗಿ ಹೊರಬಿದ್ದಿದೆ. ಅದೇನಪ್ಪಾ ಸುದ್ದಿ ಅಂತಿರಾ..?

ಹೌದು, ಮುಂಬರುವ ವೆಸ್ಟ್'ಇಂಡಿಸ್ ಪ್ರವಾಸದ ವೇಳೆಗೆ ಖ್ಯಾತ ಮಾತಿನ ಮಲ್ಲ ಹರ್ಷಾ ಬೋಗ್ಲೆ ಕಾಮೆಂಟೇಟರಿ ಬಾಕ್ಸ್ ಕೂಡಿಕೊಳ್ಳಲಿದ್ದಾರೆ.

ಈ ವಿಚಾರವನ್ನು ಹರ್ಷಾ ಬೋಗ್ಲೆ ಸ್ವತಃ ಟ್ವಿಟರ್'ನಲ್ಲಿ ಸ್ಪಷ್ಟಪಡಿಸಿದ್ದು, ನಾನು ವೆಸ್ಟ್'ಇಂಡಿಸ್ ತೆರಳುತ್ತಿದ್ದು, ಅಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡಲಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಹರ್ಷಾ ಬೋಗ್ಲೆ ಅವರನ್ನು ಯಾವುದೇ ಕಾರಣ ನೀಡದೇ ಬಿಸಿಸಿಐ ವೀಕ್ಷಕ ವಿವರಣೆ ಪ್ಯಾನಲ್'ನಿಂದ ಹೊರಗಟ್ಟಿತ್ತು.

ಬಿಸಿಸಿಐನ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ವಿಶ್ಲೇಷಣಾತ್ಮಕ ವೀಕ್ಷಕ ವಿವರಣೆಯಿಂದ ತನ್ನದೇ ಆದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಹರ್ಷಾ ಬೋಗ್ಲೆ, ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಸಕ್ರಿಯರಾಗಿದ್ದರು.

ಇದೀಗ ಜೂನ್ 23ರಿಂದ ಆರಂಭವಾಗಲಿರುವ ಭಾರತ-ವೆಸ್ಟ್'ಇಂಡಿಸ್  ಏಕದಿನ ಪಂದ್ಯದಲ್ಲಿ ಹರ್ಷಾ ಬೋಗ್ಲೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

Show Full Article