ಬಿಸಿಸಿಐ ಸಂವಿಧಾನದಲ್ಲಿ ಭಾರೀ ಬದಲಾವಣೆ
sports
By Suvarna Web Desk | 02:47 PM March 19, 2017

ಮುಂಬೈ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೆ ಬಿಸಿಸಿಐನ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶವಿದ್ದರೂ, ಮತ ಹಾಕುವ ಹಕ್ಕಿಲ್ಲ ಎಂದು ಸಿಒಎ ಸ್ಪಷ್ಟಪಡಿಸಿದೆ.

ನವದೆಹಲಿ(ಮಾ.19): ದೇಶಿಯ ಕ್ರಿಕೆಟ್ ಸಾಮ್ರಾಟ, 41 ಬಾರಿ ರಣಜಿ ಚಾಂಪಿಯನ್ ಮುಂಬೈ ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ತನ್ನ ಪೂರ್ಣಾವಧಿ ಸದಸ್ಯತ್ವವನ್ನು ಕಳೆದುಕೊಂಡಿದೆ. ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಆಡಳಿತ ಸಮಿತಿ ನ್ಯಾ.ಲೋಧಾ ಸಮಿತಿಯ ಶಿಫಾರಸ್ಸಿನಂತೆ ಒಂದು ರಾಜ್ಯಕ್ಕೆ ಒಂದು ಮತ ಪದ್ಧತಿಯನ್ನು ಜಾರಿಗೆ ತರುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ.

ಮುಂಬೈ, ಬರೋಡಾ ಹಾಗೂ ಸೌರಾಷ್ಟ್ರ ಕ್ರಿಕೆಟ್ ಮಂಡಳಿಗಳು ಬಿಸಿಸಿಐನ ಸಹಾಯಕ ಸದಸ್ಯತ್ವ ಪಡೆದುಕೊಂಡಿವೆ. ಮುಂಬೈ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೆ ಬಿಸಿಸಿಐನ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶವಿದ್ದರೂ, ಮತ ಹಾಕುವ ಹಕ್ಕಿಲ್ಲ ಎಂದು ಸಿಒಎ ಸ್ಪಷ್ಟಪಡಿಸಿದೆ. ಜತೆಗೆ ಬಿಸಿಸಿಐನ ವಾರ್ಷಿಕ ಸಭೆ ಪ್ರತಿ ವರ್ಷ ಸೆಪ್ಟೆಂಬರ್ 30ರೊಳಗೆ ನಡೆಸಬೇಕಿದ್ದು, ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಸಿಸಿಐ ಆಡಳಿತ ಮಂಡಳಿಯಲ್ಲಿ 9 ಸದಸ್ಯರು ಇರಲಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದಾರೆ. ಬಿಸಿಸಿಐನ ಪೂರ್ಣಾವಧಿ ಸದಸ್ಯ ಮಂಡಳಿಯ ಪ್ರತಿನಿಧಿಯೊಬ್ಬರು, ಪುರುಷ ಹಾಗೂ ಮಹಿಳಾ ಕ್ರಿಕೆಟರ್‌'ಗಳ ಪ್ರತಿನಿಧಿಗಳಾಗಿ ಇಬ್ಬರು ಹಾಗೂ ಸಿಎಜಿಯಿಂದ ಒಬ್ಬರು ಆಡಳಿತ ಮಂಡಳಿಯಲ್ಲಿ ಇರಲಿದ್ದಾರೆ. ರಾಷ್ಟ್ರೀಯ ತಂಡಗಳ ಆಯ್ಕೆಗಿರುವ ಮಾನದಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆಡಳಿತ ಸಮಿತಿ ತಿಳಿಸಿದೆ.

Show Full Article