Asianet Suvarna News Asianet Suvarna News

ವರದಕ್ಷಿಣೆ ವಿಚಾರದಲ್ಲಿ ಇಡೀ ದೇಶಕ್ಕೆ ಮಾದರಿಯಾದ ಕುಸ್ತಿಪಟು ಯೋಗೇಶ್ವರ್ ದತ್

ವರದಕ್ಷಿಣೆ ಪಡೆಯುವುದು ಗಂಡಿನ ಜನ್ಮಸಿದ್ಧ ಹಕ್ಕು ಎಂಬ ಭಾವನೆ ಬಹುತೇಕ ಮಂದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ದತ್ ಕೈಗೊಂಡ ಈ ಕ್ರಮವು ಸಾಮಾಜಿವಾಗಿ ವರದಕ್ಷಿಣ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುವ ನಿರೀಕ್ಷೆ ಇದೆ.

yogeshwar dutt does india proud by taking rs 1 token dowry for his marriage

ನವದೆಹಲಿ(ಜ. 15): 2012ರ ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ಮೂಡಿಸಿದ್ದ ಕುಸ್ತಿಪಟು ಯೋಗೇಶ್ವರ್ ದತ್ ಈಗ ವರದಕ್ಷಿಣೆ ವಿಚಾರದಲ್ಲಿ ದೇಶದ ಮನಸು ಗೆಲ್ಲುತ್ತಿದ್ದಾರೆ. ಹೆಣ್ಣು ಹೆತ್ತವರಿಗೆ ದೊಡ್ಡ ಪಿಡುಗಾಗಿರುವ ವರದಕ್ಷಿಣೆ ವಿರುದ್ಧ ಯೋಗೇಶ್ವರ್ ದತ್ ಬಿಗಿಪಟ್ಟು ಹಾಕಿದ್ದಾರೆ. ತಮ್ಮ ವಿವಾಹಕ್ಕೆ ಅವರು ಕೇವಲ 1 ರೂಪಾಯಿ ವರದಕ್ಷಿಣೆ ಪಡೆಯುವ ಮೂಲಕ ಸಮಾಜಕ್ಕೆ ಹೊಸ ಮಾದರಿ ಹಾಕಿಕೊಟ್ಟಿದ್ದಾರೆ. ಕಾನೂನಿನ ಪ್ರಕಾರ ಒಂದು ರೂಪಾಯಿ ವರದಕ್ಷಿಣೆ ಪಡೆಯುವುದೂ ಕೂಡ ಅಪರಾಧವಾಗಿದ್ದರೂ ಯೋಗೇಶ್ವರ್ ದತ್ ಕೈಗೊಂಡ ಈ ನಿರ್ಧಾರ ಸಾಮಾಜಿಕವಾಗಿ ಬಹಳ ದಿಟ್ಟವಾದುದು.

"ಹುಡುಗಿಯರ ಮದುವೆಗೆ ವರದಕ್ಷಿಣ ಹೊಂದಿಸಲು ನನ್ನ ಕುಟುಂಬದವರು ಪಡುತ್ತಿದ್ದ ಪಾಡು ನನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನಾನು ಎರಡು ವಿಷಯವನ್ನು ನಿರ್ಧರಿಸಿದ್ದೆ. ಕುಸ್ತಿಯಲ್ಲಿ ಸಾಧನೆ ಮಾಡಬೇಕು ಹಾಗೂ ವರದಕ್ಷಿಣೆಯನ್ನು ತೆಗೆದುಕೊಳ್ಳಬಾರದು ಎಂಬುದು ನನ್ನೆರಡು ಕನಸಾಗಿದ್ದವು. ಒಂದು ಕನಸು ಈಡೇರಿದೆ. ಮತ್ತೊಂದು ಕನಸು ಈಡೇರುವ ಕಾಲ ಬಂದಿದೆ" ಎಂದು ಯೋಗೇಶ್ವರ್ ದತ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಹರಿಯಾಣದ ಯೋಗೇಶ್ವರ್ ದತ್ ಅವರು ನಿನ್ನೆ ಶನಿವಾರ ಕಾಂಗ್ರೆಸ್ ಮುಖಂಡ ಜೈಭಗವಾನ್ ಶರ್ಮಾ ಅವರ ಪುತ್ರಿ ಶೀತಲ್ ಅವರೊಂದಿಗೆ ರೋಹತಕ್'ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ಯೋಗೇಶ್ವರ್ ದತ್ ಅವರ ತಾಯಿಯು ಸಂಪ್ರದಾಯದಂತೆ ವಧುವಿನ ಕುಟುಂಬದವರಿಂದ ನಾಮಕಾವಸ್ತೆಯಾಗಿ 1 ರೂಪಾಯಿ ವರದಕ್ಷಿಣೆ ಪಡೆದುಕೊಂಡರು. ನಾಳೆ, ಅಂದರೆ ಜ.16ರಂದು ದೆಹಲಿಯಲ್ಲಿ ವಿವಾಹ ಜರುಗಲಿದೆ.

ಕಾನೂನು ಪ್ರಕಾರ ವರದಕ್ಷಿಣೆ ಕೊಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ ದೇಶದ ಬಹುತೇಕ ಕಡೆ ಈ ಪಿಡುಗು ಅವ್ಯಾಹತವಾಗಿ ಆಚರಣೆಯಲ್ಲಿದೆ. ವರದಕ್ಷಿಣೆ ಪಡೆಯುವುದು ಗಂಡಿನ ಜನ್ಮಸಿದ್ಧ ಹಕ್ಕು ಎಂಬ ಭಾವನೆ ಬಹುತೇಕ ಮಂದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ದತ್ ಕೈಗೊಂಡ ಈ ಕ್ರಮವು ಸಾಮಾಜಿವಾಗಿ ವರದಕ್ಷಿಣ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುವ ನಿರೀಕ್ಷೆ ಇದೆ.

Follow Us:
Download App:
  • android
  • ios