Asianet Suvarna News Asianet Suvarna News

ಕಾನ್‌ಸ್ಟೇಬಲ್‌ಗೆ ಮಹಿಳೆಯಿಂದ ಕಪಾಳ ಮೋಕ್ಷ

ಕಳೆದ ಸೋಮವಾರ ನಗರದಲ್ಲಿ ನಡೆದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಬೆಂಗಾವಲು ವಾಹನ ಹಿಂಬಾಲಿಸಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಯುವತಿ, ಕರ್ತವ್ಯನಿರತ ಕಾನ್‌ಸ್ಟೇಬಲ್‌ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ರೌದ್ರಾವತಾರ ತೋರಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Woman Assault Police Constable in Bengaluru

ಬೆಂಗಳೂರು: ಕಳೆದ ಸೋಮವಾರ ನಗರದಲ್ಲಿ ನಡೆದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಬೆಂಗಾವಲು ವಾಹನ ಹಿಂಬಾಲಿಸಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಯುವತಿ, ಕರ್ತವ್ಯನಿರತ ಕಾನ್‌ಸ್ಟೇಬಲ್‌ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ರೌದ್ರಾವತಾರ ತೋರಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾಡುಗೊಂಡನಹಳ್ಳಿ ಸಂಚಾರ ಠಾಣೆ ಕಾನ್‌ಸ್ಟೇಬಲ್‌ ಆರ್‌.ಜಿ.ವೆಂಕಟೇಶ್‌ ಹಲ್ಲೆಗೊಳಗಾಗಿದ್ದು, ಈ ಘಟನೆ ಸಂಬಂಧ 24 ವರ್ಷದ ಸಾರಿಕಾ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ.12 ಸೋಮವಾರ ನಗರದಲ್ಲಿ ಆಯೋಜನೆಗೊಂಡಿದ್ದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಬಿಡುಗಡೆ ಸಮಾರಂಭ ಪಾಲ್ಗೊಳ್ಳಲು ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬಂದಿದ್ದರು. ಹೀಗಾಗಿ ಗಣ್ಯರು ಪ್ರಯಾಣಿಸುವ ರಸ್ತೆಗಳಲ್ಲಿ ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ವಾಹನಗಳಿಗೆ ಕೆಲ ಹೊತ್ತು ಸಂಚಾರ ನಿರ್ಬಂಧಿಸಲಾಗಿತ್ತು. ಅಂದು ಕ್ವೀನ್ಸ್‌ ರಸ್ತೆಯಲ್ಲಿ ಕರ್ತವ್ಯಕ್ಕೆ ಕೆ.ಜಿ.ಹಳ್ಳಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ವೆಂಕಟೇಶ್‌ ನಿಯೋಜನೆಗೊಂಡಿದ್ದರು.

ಅಂದು ಕಾರ್ಯಕ್ರಮದ ನಡೆಯಲಿದ್ದ ಅಂಬೇಡ್ಕರ್‌ ಭವನಕ್ಕೆ ರಾಹುಲ್‌ ಗಾಂಧಿ ಅವರು ಮಧ್ಯಾಹ್ನ 2.45ರ ವೇಳೆ ತೆರಳುತ್ತಿದ್ದರು. ಆಗ ಅವರ ಬೆಂಗಾವಲು ಪಡೆಯ ಹಿಂದೆಯೇ ಯುವತಿಯೊಬ್ಬಳು ಸ್ಕೂಟರ್‌ (ಕೆಎ03 ಎಚ್‌ಕೆ 2976) ನಲ್ಲಿ ಬರುತ್ತಿದ್ದರು. ಇದನ್ನು ಗಮನಿಸಿದ ತಾನು, ಕೂಡಲೇ ಆ ಸ್ಕೂಟರ್‌ನ್ನು ಅಡ್ಡಗಟ್ಟಿದೆ. ಬಳಿಕ ಗಣ್ಯರ ವಾಹನಗಳ ಆಡಚಣೆ ಆಗುತ್ತದೆ ಎಂದು ರಸ್ತೆ ಬದಿಗೆ ಬರುವಂತೆ ಆಕೆಗೆ ಸೂಚಿಸಿದೆ. ಆಗ ಜೋರಾಗಿ ಕಿರುಚಾಟ ಶುರು ಮಾಡಿದ ಆಕೆ, ಸ್ಕೂಟರ್‌ನಿಂದ ಗುದ್ದಿ ಬ್ಯಾರಿಕೇಡ್‌ ಬೀಳಿಸಿದರು. ನಂತರ ‘ಯಾಕೋ ಲೋಫರ್‌ ಗಾಡಿ ತಡೆಯುತ್ತೀಯಾ' ಎಂದು ನಿಂದಿಸಿದರು. ಮಹಿಳೆ ಎಂಬ ಕಾರಣಕ್ಕೆ ತಾನು ಸಹನೆಯಿಂದ ವರ್ತಿಸಿದೆ. ಅವರ ಕೂಗಾಟ ಜೋರಾದಾಗ ತಾನು, ಹಿರಿಯ ಅಧಿಕಾರಿ ಗಳಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡುತ್ತಿದ್ದೆ. ಆ ವೇಳೆ ಚಪ್ಪಲಿಯಿಂದ ಕೆನ್ನೆಗೆ ಹೊಡೆದ ಆಕೆ, ‘ನನ್ನ ಹೆಸರು ಸಾರಿಕಾ. ಏನು ಬೇಕಾದರೂ ಮಾಡಿಕೊ' ಎನ್ನುತ್ತಲೇ ಅಲ್ಲಿಂದ ಹೊರಟರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವೈಯಾಲಿ ಕಾವಲ್‌ ಠಾಣೆ ಪ್ರೊಬೆಷನರಿ ಪಿಎಸ್‌ಐ ಸುಲೋಚನಾ ಹಾಗೂ ಕಾನ್‌ಸ್ಟೇಬಲ್‌ ನೇತ್ರಾವತಿ ಅವರು, ಸಾರಿಕಾಳನ್ನು ಹಿಡಿದುಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ಅವರು ಸ್ಥಳದಿಂದ ಪರಾರಿಯಾದರು ಎಂದು ಕಾನ್‌ಸ್ಟೇಬಲ್‌ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಯುವತಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇದಕ್ಕೆ ಆಕೆ ಪ್ರತಿಕ್ರಿಯಿಸದೆ ಹೋದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios