Asianet Suvarna News Asianet Suvarna News

ಜಯಲಲಿತಾ ಸಾವಿನ ಮುಂಚಿನ ಆ 6 ಗಂಟೆಗಳು; ಕ್ಷಣಕ್ಷಣಕ್ಕೂ ಟ್ವಿಸ್ಟ್ ಕೊಟ್ಟ ಪ್ರಸಂಗಗಳು

ಜಯಲಲಿತಾ ಸಾವು ಘೋಷಣೆಯಾಗುವ ಮುಂಚಿನ 6 ಗಂಟೆಗಳು ಕ್ಷಣಕ್ಷಣಕ್ಕೂ ತಿರುವುಗಳಿದ್ದ ಪ್ರಸಂಗಗಳಿಗೆ ಸಾಕ್ಷಿಯಾದವಂತೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶವಾಗದೇ ಹೋಗಿದ್ದರೆ ಇಷ್ಟೊತ್ತಿಗೆ ತಮಿಳುನಾಡಿನಲ್ಲಿ ಅಕ್ಷರಶಃ ಮನ್ನಾರ್'ಗುಡಿ ಗ್ಯಾಂಗ್'ನ ಅಧಿಪತ್ಯ ಅಧಿಕೃತವಾಗಿ ಸ್ಥಾಪನೆಯಾಗುತ್ತಿತ್ತಂತೆ.

those 6 hours before jayalalithas death

ಚೆನ್ನೈ: ಮಂಡ್ಯದಲ್ಲಿ ಹುಟ್ಟಿ ತಮಿಳುನಾಡಿನ ಅರಸಿಯಂತೆ ಬಾಳಿದ ಜಯಲಲಿತಾ ಅವರ ಜೀವನವೇ ಒಂದು ರೋಚಕ ಕಥೆ. ಈಗ ಅವರ ಸಾವು ಅದಕ್ಕಿಂತ ರೋಚಕ ಕಥೆ ಸೃಷ್ಟಿಸಿದೆ. ಮನ್ನಾರ್'ಗುಡಿ ಮಾಫಿಯಾ ಎಂದೇ ಕುಖ್ಯಾತರಾಗಿರುವ ಶಶಿಕಲಾ ಅಂಡ್ ಗ್ಯಾಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧಾರಾಕಾರ ಮಾಹಿತಿ ಹರಿದುಬರುತ್ತಿದೆ. ಅಂಥದ್ದೊಂದು ಮಾಹಿತಿ ಪ್ರಕಾರ, ಜಯಲಲಿತಾ ಸಾವು ಘೋಷಣೆಯಾಗುವ ಮುಂಚಿನ 6 ಗಂಟೆಗಳು ಕ್ಷಣಕ್ಷಣಕ್ಕೂ ತಿರುವುಗಳಿದ್ದ ಪ್ರಸಂಗಗಳಿಗೆ ಸಾಕ್ಷಿಯಾದವಂತೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶವಾಗದೇ ಹೋಗಿದ್ದರೆ ಇಷ್ಟೊತ್ತಿಗೆ ತಮಿಳುನಾಡಿನಲ್ಲಿ ಅಕ್ಷರಶಃ ಮನ್ನಾರ್'ಗುಡಿ ಗ್ಯಾಂಗ್'ನ ಅಧಿಪತ್ಯ ಅಧಿಕೃತವಾಗಿ ಸ್ಥಾಪನೆಯಾಗುತ್ತಿತ್ತಂತೆ. ಮೊನ್ನೆ ಡಿಸೆಂಬರ್ 5ರಂದು ನಡೆದ ಘಟನೆಗಳ ಟೈಮ್'ಲೈನ್ ಇಲ್ಲಿದೆ.

ಡಿಸೆಂಬರ್ 5, 2016

ಸಂಜೆ 5:05: ಓ. ಪನ್ನೀರ್'ಸೆಲ್ವಂ ಅವರ ಅನುಪಸ್ಥಿತಿಯಲ್ಲಿ ಎಐಎಡಿಎಂಕೆ ಸದಸ್ಯರು ಸಭೆ ಸೇರುತ್ತಾರೆ. ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಆಕೆಯ ಬಲಗೈ ಬಂಟ ಎಡಪಾಡಿ ಪಳನಿಚಾಮಿಯನ್ನು ಸಿಎಂ ಸ್ಥಾನಕ್ಕೆ ಕೂರಿಸುವುದು ಈ ಸಭೆಯ ಉದ್ದೇಶವಾಗಿರುತ್ತದೆ.

ಸಂಜೆ 5:45: ಶಶಿಕಲಾ ಮತ್ತವರ ಗ್ಯಾಂಗ್'ಗೆ ದಿಲ್ಲಿಯಿಂದ ನೇರ ಫೋನ್ ಕಾಲ್ ಬರುತ್ತದೆ. ಸಭೆಯನ್ನು ತತ್'ಕ್ಷಣ ರದ್ದುಗೊಳಿಸುವಂತೆ ಸೂಚನೆ ಸಿಗುತ್ತದೆ. ಸಭೆ ರದ್ದಾಗುತ್ತದೆ.

ಸಂಜೆ 6:04: ಕೇಂದ್ರ ಸಚಿವರೊಬ್ಬರು ನೇರವಾಗಿ ಅಪೋಲೋ ಆಸ್ಪತ್ರೆಗೆ ಧಾವಿಸಿ ಮನ್ನಾರ್'ಕುಡಿ ಗ್ಯಾಂಗ್ ಜೊತೆ ಮಾತುಕತೆ ನಡೆಸುತ್ತಾರೆ.

ಸಂಜೆ 6:57: ಎಐಎಡಿಎಂಕೆ ಪಕ್ಷ ಹಾಗೂ ಸರಕಾರದ ಮೇಲೆ ಅಧಿಕಾರ ಸ್ಥಾಪಿಸುವ ಯಾವುದೇ ಕ್ರಮ ಕೈಗೊಂಡರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಆ ಕೇಂದ್ರ ಸಚಿವರು ಈ ಗ್ಯಾಂಗ್'ಗೆ ಎಚ್ಚರಿಕೆ ನೀಡಿ ಆಸ್ಪತ್ರೆಯಿಂದ ಹೊರಬರುತ್ತಾರೆ.

ಸಂಜೆ 7:10: ಆಸ್ಪತ್ರೆಯ 2ನೇ ಮಹಡಿಯಲ್ಲಿರುವ 207ನೇ ನಂಬರಿನ ಕೊಠಡಿಯಲ್ಲಿ ಮನ್ನಾರ್'ಕುಡಿ ಗ್ಯಾಂಗ್ ಒಟ್ಟುಸೇರಿ ಚರ್ಚೆ ನಡೆಸುತ್ತದೆ. ಕೇಂದ್ರ ಸರಕಾರ ತಲೆತೂರಿಸುವುದರಿಂದ ತಾವು ಮುಂದುವರಿಯುವುದು ಕಷ್ಟ ಎಂಬ ಅರಿವಿಗೆ ಬಂದರು. ಅಲ್ಲಿಗೆ ತಮ್ಮ ಪ್ರಯತ್ನವನ್ನು ಕೈಬಿಡಲು ನಿರ್ಧರಿಸುತ್ತಾರೆ.

ರಾತ್ರಿ 11:10: ಎಐಎಡಿಎಂಕೆ ಶಾಸಕರ ಸಭೆಯನ್ನು ಮತ್ತೊಮ್ಮೆ ಕರೆಯಲಾಯಿತು. ಈ ಬಾರಿ ಪನ್ನೀರ್'ಸೆಲ್ವಂ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ರಾತ್ರಿ 12:10: ಜಯಲಲಿತಾ ಅವರು ಸಾವನ್ನಪ್ಪಿದ್ದಾರೆಂದ ಘೋಷಣೆ ಮಾಡಲಾಯಿತು.

ರಾತ್ರಿ 12:50: ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾಗುವ ಪನ್ನೀರ್ ಸೆಲ್ವಂ ಅವರು ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ.

(ಸೂಚನೆ: ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿ. ಈ ಬಗ್ಗೆ ಅಧಿಕೃತ ಮಾಹಿತಿ ಯಾವುದೂ ಇಲ್ಲ.)

Follow Us:
Download App:
  • android
  • ios