Asianet Suvarna News Asianet Suvarna News

ಹಳ್ಳಿಗಳಿಗೇ ಬರಲಿದೆ ಉಚಿತ ‘ಸರ್ಕಾರಿ ಆಸ್ಪತ್ರೆ'

ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿಯೇ ಆರಂಭಿಸಲಾಗಿದೆ. ಘಟಕಗಳಲ್ಲಿ ಒಬ್ಬರು ವೈದ್ಯ, ಸಹಾಯಕರು, ಟೆಕ್ನೀಶಿಯನ್‌, ಫಾರ್ಮಾಸಿಸ್ಟ್ಇರುತ್ತಾರೆ. ಸದ್ಯ 78 ಸಂಚಾರಿ ಘಟಕಗಳು ಆರಂಭಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ 130 ಸಂಚಾರಿ ವೈದ್ಯಕೀಯ ಘಟಕಗಳ ಸೇವೆಯನ್ನು ಆರಂಭಿಸುವ ಯೋಚನೆ ಇದೆ

Soon Free Govt Hospitals at Rural areas

ಬೆಂಗಳೂರು(ಮಾ.26): ವೈದ್ಯಕೀಯ ಕೋರ್ಸ್‌ಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬುದ್ಧಿವಂತ ವೈದ್ಯರೇ ಸರ್ಕಾರಿ ಆಸ್ಪತ್ರೆಗಳಿಗೆ ಆಯ್ಕೆಯಾಗುತ್ತಾರೆಯೇ ವಿನಾ ಖಾಸಗಿ ಕ್ಷೇತ್ರದ ವೈದ್ಯರು ಮಾತ್ರ ಜಾಣರು ಎಂಬ ಮನೋಭಾವವನ್ನು ಜನರ ಮನಸ್ಸಿನಿಂದ ಹೊಡೆದೋಡಿಸುವ ಸವಾಲು ಸರ್ಕಾರಿ ಆಸ್ಪತ್ರೆಗಳ ಮುಂದಿದೆ ಎಂದು ಮುಖ್ಯ​ಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ರಾಜ್ಯದ ದುರ್ಗಮ ಪ್ರದೇಶಗಳಲ್ಲಿ ಕಾರ್ಯನಿರ್ವ​ಹಿಸುವ 78 ಸಂಚಾರಿ ವೈದ್ಯಕೀಯ ಘಟಕಗಳ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯಕೀಯ ಕೋರ್ಸ್‌ಗೆ ಸೀಟು ಪಡೆಯುವವರು ಪ್ರತಿಭಾವಂತ ವಿದ್ಯಾರ್ಥಿಗಳು. ಅವರು ಮೆರಿಟ್‌ ಆಧಾರದ ಮೇಲೆ ಸರ್ಕಾರಿ ವೈದ್ಯರಾಗಿ ನೇಮಕ​ಗೊಳ್ಳು​ತ್ತಾರೆ. ಆದರೆ ಡೊನೇಶನ್‌ ಕೊಟ್ಟು ವೈದ್ಯ​ರಾದವರು ಮೆರಿಟ್‌ ಪಡೆಯದೇ ಖಾಸಗಿ ಆಸ್ಪತ್ರೆಗಳ ಸೇವೆಗೆ ಅನಿವಾರ್ಯವಾಗಿ ಹೋಗು​ತ್ತಾರೆ. ಈ ಸತ್ಯವನ್ನು ಜನರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಜನರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಿ ಚಿಕಿತ್ಸೆ ಪಡೆಯುತ್ತಾರೆ. ಆಮೇಲೆ ಮುಖ್ಯ​ಮಂತ್ರಿ​ಗಳ ನಿಧಿಯಿಂದ ಆರ್ಥಿಕ ನೆರವು ಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೇ ಪ್ರತಿಭಾವಂತ ವೈದ್ಯರಿರುವಾಗ ಖಾಸಗಿ ಆಸ್ಪತ್ರೆಗೆ ಹೋಗುವ ಬಗೆಗೆ ಜನರೂ ಮರು​ಚಿಂತನೆ ನಡೆಸಬೇಕು. ವಿಶೇಷವಾಗಿ ಬಡವರು, ಹಿಂದುಳಿದವರ ಬಗೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕಾಳಜಿ ಕಡಿಮೆ. ಏಕೆಂದರೆ ದುಬಾರಿ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದಾದರೆ ಖಾಸಗಿ ವೈದ್ಯರು ಸರಿಯಾದ ಚಿಕಿತ್ಸೆ ಕೊಡುವುದಿಲ್ಲ. ಬಡವರಿಗೆ ಹಸಿವಿನ ಮಹತ್ವ ಗೊತ್ತಿರುತ್ತದೆ. ಆದರೆ ಶ್ರೀಮಂತರಿಗೆ ಬಡವರ ನೋವು ಗೊತ್ತಾಗುವುದಿಲ್ಲ. ಆದ್ದರಿಂದ ಯಾವ ಆಸ್ಪತ್ರೆಗಳನ್ನು ನಾವು ನಂಬಬೇಕು ಎಂಬುದನ್ನು ಜನರು ಕೂಡ ಯೋಚಿಸಬೇಕು ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ಬಗೆಗೆ ಇರುವ ಕೀಳರಿಮೆ ಮನೋಭಾವ​ವನ್ನು ಜನರು ದೂರ ಮಾಡಬೇಕು. ಮುಖ್ಯವಾಗಿ ಸರ್ಕಾರದ ಭಾಗವಾಗಿರುವ ಆರೋಗ್ಯ ಇಲಾಖೆ​ಯವರು, ಸರ್ಕಾರಿ ನೌಕರರು, ಅವರ ಕುಟುಂಬ​ದವರು ಸರ್ಕಾರಿ ಆಸ್ಪತ್ರೆಗಳ ಬಗೆಗಿನ ವಿಶ್ವಾಸಾರ್ಹತೆ ಹೆಚ್ಚಿಸಲು ಪಣ ತೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಯಾವ ದೃಷ್ಟಿಯಿಂದಲೂ ಕಡಿಮೆ ಇಲ್ಲದಂತಹ ಉತ್ಕೃಷ್ಟಸೇವೆಗಳು ಈಗ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯ ಇವೆ ಎಂದು ಹೇಳಿದರು.
ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿಯೇ ಆರಂಭಿಸಲಾಗಿದೆ. ಈ ಘಟಕಗಳಲ್ಲಿ ಒಬ್ಬರು ವೈದ್ಯ, ಸಹಾಯಕರು, ಟೆಕ್ನೀಶಿಯನ್‌, ಫಾರ್ಮಾಸಿಸ್ಟ್‌ ಇರುತ್ತಾರೆ. ಸದ್ಯ 78 ಸಂಚಾರಿ ಘಟಕಗಳು ಆರಂಭಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ 130 ಸಂಚಾರಿ ವೈದ್ಯಕೀಯ ಘಟಕಗಳ ಸೇವೆಯನ್ನು ಆರಂಭಿಸುವ ಯೋಚನೆ ಇದೆ ಎಂದು ತಿಳಿಸಿದರು.

ಸಂಚಾರಿ ಘಟಕಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತೆ ?

1) ಬೆಟ್ಟ, ಗುಡ್ಡಗಾಡು, ದುರ್ಗಮ ಪ್ರದೇಶಗಳು, ಸಾರಿಗೆ ಸಂಪರ್ಕವಿಲ್ಲದ ಪ್ರದೇಶಗಳು, ಆರೋಗ್ಯ ಸಂಸ್ಥೆಯಿಂದ ದೂರವಿರುವ ಗ್ರಾಮಗಳು ಮತ್ತು ಎಸ್ಸಿ, ಎಸ್ಟಿಜನÜರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಇವು ಸಂಚರಿಸುತ್ತವೆ.
2) ವಾಹನದೊಳಗೆ ಅಗತ್ಯ ಪೀಠೋಪ ಕರಣಗಳು, ಔಷಧಿಗಳು, ಲ್ಯಾಬ್ ವಸ್ತುಗಳನ್ನು ಒದಗಿಸಲಾಗಿದೆ. ಇದರಲ್ಲಿ ತಲಾ ಒಬ್ಬ ಎಂಬಿಬಿಎಸ್‌ ವೈದ್ಯ, ಶುಶ್ರೂ ಷಕ, ಔಷಧಿ ವಿತರಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಯೋಗಾಲಯ ತಜ್ಞ, ವಾಹನ ಚಾಲಕ ಇರುತ್ತಾರೆ.
3) ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 14 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಅನುದಾನದಿಂದ 14 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಇವೂ ಸೇರಿದಂತೆ ಒಟ್ಟಾರೆ 78 ಸಂಚಾರಿ ಆರೋಗ್ಯ ಘಟಕಗಳು ಆರಂಭವಾಗಿವೆ.
4) ಸಂಚಾರಿ ಆರೋಗ್ಯ ಘಟಕಗಳು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಒಂದು ಹಳ್ಳಿಯಲ್ಲಿ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆವರೆಗೆ ಮತ್ತೊಂದು ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
5) ಪ್ರತಿ ಸಂಚಾರಿ ಆರೋಗ್ಯ ಘಟಕಗಳಿಗೆ 13ರಿಂದ 15 ಹಳ್ಳಿಗಳನ್ನು ನಿಗದಿಪಡಿಸಲಾಗಿದೆ. ಇಂತಹ ಪ್ರತಿ ಹಳ್ಳಿಗೆ ಸಂಚಾರಿ ಆರೋಗ್ಯ ಘಟಕವು ತಿಂಗಳಲ್ಲಿ ಕನಿಷ್ಠ 4 ಅಥವಾ 5 ಬಾರಿ ಭೇಟಿ ನೀಡುತ್ತದೆ.
6) ಸಂಚಾರಿ ಆರೋಗ್ಯ ಘಟಕವು ನಿಗದಿತ ಹಳ್ಳಿಗೆ ಪ್ರತಿದಿನ ಭೇಟಿ ನೀಡಿ, ಆರೋಗ್ಯ ತಪಾಸಣೆ, ಪ್ರಯೋಗಾಲಯ ಪರೀಕ್ಷೆ ಮತ್ತು ಔಷಧಿ ಸೌಲಭ್ಯವನ್ನು ಎಲ್ಲರಿಗೂ ಉಚಿತವಾಗಿ ನೀಡುತ್ತದೆ.
7) ಗ್ರಾಮದ ಜನರಿಗೆ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಕೀಲುನೋವು, ಶ್ವಾಸಕೋಶದ ಕಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ, ಅನುಸರಣೆ ಮತ್ತು ವಾರಕ್ಕೆ ಬೇಕಾದ ಔಷಧಿಗಳನ್ನು ಉಚಿತವಾಗಿ ನೀಡುತ್ತದೆ.
8) ಸಂಚಾರಿ ಆರೋಗ್ಯ ಘಟಕವು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಮೇಲ್ದರ್ಜೆಯ ಆಸ್ಪತ್ರೆಗೆ ಕಳುಹಿಸಿಕೊಡುವ (ರೆಫರಲ್‌ ಸರ್ವಿಸ್‌) ಸೇವೆಯನ್ನೂ ಒದಗಿಸುತ್ತದೆ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios