Asianet Suvarna News Asianet Suvarna News

ಸತೀಶ್ ಜಾರಕೀಹೊಳಿ-ರಾಹುಲ್ ಗಾಂಧಿ ಭೇಟಿ

ಸಹೋದರ ರಮೇಶ್ ಜಾರಕಿಹೊಳಿ ಜೊತೆಗಿನ ಭಿನ್ನಮತದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡಸಿದರು. 

Satish Jarakiholi Met Rahul Gandhi
ನವದೆಹಲಿ ( ಮೇ.23): ಸಹೋದರ ರಮೇಶ್ ಜಾರಕಿಹೊಳಿ ಜೊತೆಗಿನ ಭಿನ್ನಮತದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡಸಿದರು. 
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್, ಕಾಂಗ್ರೆಸ್‌ನ ಎಸ್‌ಟಿ ನಾಯಕರ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿದ್ದೇನೆ. ನಮ್ಮ ಸಹೋದರರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ರಾಹುಲ್ ಗಾಂಧಿ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಈ ಬಿಕ್ಕಟ್ಟು ನಮ್ಮ ಸಹೋದರರ ನಡುವಿನ ಬಿಕ್ಕಟ್ಟು. ಅಗತ್ಯ ಬಿದ್ದರೆ ನನ್ನ ಸೀಟ್ ಅನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು. 2018 ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದು ರಾಹುಲ್ ಅವರು ಕೂಡ ಪಕ್ಷದ ಸೇವೆಗೆ ನಿಮ್ಮನ್ನು ಬಳಸಿಕೊಳ್ಳುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕು ಎಂದು ಕೆಲವು ಸಮಯಗಳಿಂದ ಪ್ರಯತ್ನಿಸುತ್ತಿದ್ದೆ. ಈ ಭೇಟಿಯ ಸಂದರ್ಭದಲ್ಲಿ 2018 ರ ಚುನಾವಣೆ ಮತ್ತು ಬೆಳಗಾವಿ ಕಾಂಗ್ರೆಸ್ ನಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪರ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದು, ‘‘ನಾನು ಹಿಂದೆಯೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದು ಮುಂದಿನ ಚುನಾವಣೆಯಲ್ಲಿಯೂ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೇನೆ’’ ಎಂದು ಹೇಳಿದರು.
 
ಹೆಬ್ಬಾಳ್ಕರ್ ಮೇಲೆ ದೂರು
ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ಅಷ್ಟೆ ಅಲ್ಲದೆ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಧೋರಣೆ ಬಗೆಗೂ ಬೇಸರ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಮಾಡಿದರೆ ಪಕ್ಷ ತ್ಯಜಿಸುತ್ತೇನೆ. ಇಂತಹ ಕೆಲಸಕ್ಕೆ ರಮೇಶ್ ಜಾರಕಿಹೊಳಿ ಸೇರಿದಂತೆ ಅವರ ಮೂಲಕ ಪಕ್ಷದ ಇನ್ನಿತರ ನಾಯಕರು ಮಾಡಿದ್ದೇ ಆದರೆ ನಾನು ನನ್ನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರಲ್ಲಿ ಜಾರಕಿಹೊಳಿ ತಿಳಿಸಿದ್ದಾರೆ ಎನ್ನಲಾಗಿದೆ.
 
ಯಮನಕರಡಿಯಿಂದ ನಾನೇ ಸ್ಪರ್ಧೆ
ಬೆಳಗಾವಿಯ ಯಮನಕರಡಿಯಲ್ಲಿ ನಾನೇ ಸ್ಪರ್ಧಿಸುತ್ತೇನೆ. ಬದಲಾವಣೆಯ ಅಗತ್ಯವಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೂಡ ಸೋಮವಾರ ಬೆಂಗಳೂರಿನಲ್ಲಿ ಇದನ್ನು ಸ್ಪಷ್ಟ ಪಡಿಸಿದ್ದು ಟಿಕೆಟ್ ನೀಡುವ ಅಧಿಕಾರ ನಿಮಗ್ಯಾರಿಗೂ ಇಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ನಮ್ಮಲ್ಲಿದ್ದ ಭಿನ್ನಮತ ನಿನ್ನೆಯೆ ಪರಿಹಾರ ಕಂಡಿದೆ ಎಂದು ಜಾರಕಿಹೊಳಿ ತಿಳಿಸಿದರು.
ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಸಮಸ್ಯೆ ಹುಟ್ಟಿಕೊಂಡಿತ್ತು. ನಮ್ಮ ಇನ್ನೊಬ್ಬ ಸೋದರನನ್ನು ಯಮನಕರಡಿಯಲ್ಲಿ ನಿಲ್ಲಿಸುವ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಆದರೆ ನಿಮಗೆ ಈ ರೀತಿ ಹೇಳುವ ಯಾವುದೇ ಅಧಿಕಾರವಿಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ. ನಾನು ಯಮನಕರಡಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಕಾರ್ಯಕರ್ತರಿಗೆ ಹೆಚ್ಚಿನ ಸಮಯ ನೀಡಲಿ
 
ಮುಂದಿನ ಚುನಾವಣೆಗೆ ಪೂರ್ವಭಾವಿಯಾಗಿ ಸಿಎಂ ಅವರಲ್ಲಿ ಸೇರಿದಂತೆ ಕಾರ್ಯಕರ್ತರಲ್ಲಿ ಬದಲಾವಣೆ ಆಗಬೇಕು. ಎಲ್ಲರೂ ತಮ್ಮಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. ಮುಖ್ಯಮಂತ್ರಿಗಳು ಕಾರ್ಯಕರ್ತರು ಮತ್ತು ಶಾಸಕರಿಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಜಾರಕಿಹೊಳಿ ಸಲಹೆ ನೀಡಿದ್ದಾರೆ. ಬುಧವಾರ ಎಐಸಿಸಿ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಪರಿಶಿಷ್ಟ ಪಂಗಡಗಳ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಮತ್ತವರ ಸೋದರ ರಮೇಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ.
Follow Us:
Download App:
  • android
  • ios