Asianet Suvarna News Asianet Suvarna News

ಸುಪ್ರೀಂಕೋರ್ಟ್ ಹಾಲಲ್ಲಿ ನೋ ಎಂದು ಚೀರಿದ್ದ ನಟಿ ರಮ್ಯಾ

 ಕೋರ್ಟ್ ಹಾಲ್‌ನಲ್ಲಿ ದೇಶದ ಪತ್ರಕರ್ತರ ಗಮನ ಸೆಳೆದ ಕನ್ನಡ ಚಿತ್ರನಟಿ

ramya loudly says no in supreme court hall

ನವದೆಹಲಿ(ಸೆ.28): ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಕೋರ್ಟ್ ಸಂಖ್ಯೆ 3 ಕಿಕ್ಕಿರಿದು ತುಂಬಿತ್ತು. ನ್ಯಾಯಾಂಗದ ಆದೇಶ ಪಾಲಿಸದೆ ಶಾಸಕಾಂಗ ನಿರ್ಣಯ ತೆಗೆದುಕೊಂಡ ಸಂವಿಧಾನಕ್ಕೆ ಸಂಬಂಸಿದ ಪ್ರಕರಣವಾದ್ದರಿಂದ ಕರ್ನಾಟಕ ತಮಿಳುನಾಡಿನ ಜೊತೆಗೆ ರಾಷ್ಟ್ರೀಯ ಮಾಧ್ಯಮಗಳು ಕಿರಿಯ ವಕೀಲರು ಗಳಿಂದ ಕೋರ್ಟ್ ಹಾಲ್ ತುಂಬಿ ಹೋಗಿತ್ತು. ಅದೇ ಹೊತ್ತಿಗೆ ಒಳ ಪ್ರವೇಶಿಸಿದವರು ಕರ್ನಾಟಕದ ಕಾಂಗ್ರೆಸ್ ಸಂಸದರಾದ ಪ್ರಕಾಶ ಹುಕ್ಕೇರಿ, ಡಿ.ಕೆ. ಸುರೇಶ್, ಆರ್.ಧ್ರುವನಾರಾಯಣ ಮತ್ತು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ. ಅವರಿಗೆ ಕುಳಿತುಕೊಳ್ಳಲು ಸ್ಥಳವೇ ಇರಲಿಲ್ಲ. ಆಗ ಏಕಾಏಕಿ ಸೀರೆ ಉಟ್ಟು ಒಳಗಡೆ ಬಂದ ಚೆಲುವೆ ಕೋರ್ಟ್ ಪ್ರವೇಶಿಸಿದಾಗ ತಮಿಳು ಮತ್ತು ಆಂಗ್ಲ ಭಾಷೆಯ ಪತ್ರಕರ್ತರು ‘‘ಅವರು ರಮ್ಯಾ ಅಲ್ಲವೇ? ಅವರು ಇಲ್ಲೇನು ಮಾಡುತ್ತಿದ್ದಾರೆ,’’ ಎಂದು ಕರ್ನಾಟಕದ ಪತ್ರಕರ್ತರನ್ನು ಕೇಳತೊಡಗಿದರು. ಪಾಕಿಸ್ತಾನದ ಹೇಳಿಕೆ ನಂತರ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಆಕರ್ಷಣೆ ದೆಹಲಿ ಮಾಧ್ಯಮಗಳಲ್ಲೂ ಆರಂಭವಾಗಿದೆ ಎಂಬುದು ಸ್ಪಷ್ಟವಾಗತೊಡಗಿತ್ತು. ಆದರೆ ಇವತ್ತು ತಮ್ಮ ಅನುಪಸ್ಥಿತಿಯಿಂದ ಗಮನ ಸೆಳೆದವರು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್. ನ್ಯಾಯಾಂಗ ನಿಂದನೆಯ ಹೆದರಿಕೆಯೋ ಏನೋ ಸಚಿವ ಪಾಟೀಲ್ ಮತ್ತು ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ನ್ಯಾಯವಾದಿ ಮೋಹನ್ ಕಾತರಕಿ ಅವರ ಕೊಣೆಯಲ್ಲಿದ್ದರೂ ಕೋರ್ಟ್ ಹಾಲ್ ಕಡೆಗೆ ತಲೆ ಹಾಕಲಿಲ್ಲ.

ಸರಿಯಾಗಿ 2 ಗಂಟೆಗೆ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ ಉಮೇಶ್ ಲಲಿತ್ ಕೋರ್ಟ್ ರೂಮ್ ಪ್ರವೇಶಿಸಿದಾಗ ಎಲ್ಲರಿಗೂ ಅವರ ಬಾಡಿ ಲಾಂಗ್ವೇಜ್ ಓದುವ ಕಾತರ. ಅಷ್ಟರಲ್ಲಿ ಬೇರೆ ಯಾವುದೋ ವಾದಕ್ಕೆ ಎಂದು ಬಂದಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ‘‘ನೀವು ಮುಂದಿನ ವಿಚಾರಣೆಗೆ ಇಲ್ಲಿಯೇ ಇರಿ,’’ ಎಂದು ನ್ಯಾಯಪೀಠ ಸೂಚಿಸಿದಾಗ ಕರ್ನಾಟಕದ ಪಾಳಯದಲ್ಲಿ ಢವ ಢವ ಆರಂಭವಾಗಿತ್ತು. ಒಬ್ಬ ಅಕಾರಿಯಂತೂ ಎಲ್ಲಿ ಇವತ್ತು ಜೈಲಿಗೆ ಕಳುಹಿಸಿಯೇ ಬಿಡುತ್ತಾರೋ, ಬಹಳ ಕಷ್ಟ ಎಂದು ಪತ್ರಕರ್ತರ ಎದುರು ಅಲವತ್ತುಕೊಳ್ಳತೊಡಗಿದರು.

ಆದರೆ ಕಾವೇರಿ ವಿಚಾರಣೆ ಆರಂಭವಾದಾಗ ನ್ಯಾಯಮೂರ್ತಿಗಳು ತಮಿಳುನಾಡು ಮತ್ತು ಕರ್ನಾಟಕದ ವಕೀಲರಿಂದ ಮುಂದೇನು ಮಾಡಬಹುದು ಎಂದು ಸಲಹೆ ಕೇಳುತ್ತಾ ಮೆತ್ತಗೆ ಮಾತನಾಡತೊಡಗಿದಾಗ ಸ್ವಲ್ಪ ಮಟ್ಟಿಗಿನ ನಿರಾಳ ಭಾವ ಕರ್ನಾಟಕದ ಅಕಾರಿಗಳಲ್ಲಿ ಕಾಣತೊಡಗಿತು. ಸೆ.20ರಂದು ‘‘ನಿಮ್ಮ ಆದೇಶವೇ ತಪ್ಪು,’’ ಎಂದು ನೇರವಾಗಿ ಹೇಳಿದ್ದ ಫಾಲಿ ನಾರಿಮನ್ ಮೊದಲಿಗೆ ವೌನವಾಗಿಯೇ ಇದ್ದರು. ಕೋರ್ಟ್ ಆದೇಶ ಪಾಲಿಸದೆ ನ್ಯಾಯಾಲಯದಲ್ಲಿ ಹೋಗಿ ಮಾತನಾಡುವುದು ಎಷ್ಟು ಕಷ್ಟ ಎಂದು ನಾರಿಮನ್ ಮಾತಿನ ಶೈಲಿಯಿಂದ ಸ್ಪಷ್ಟವಾಗತೊಡಗಿತ್ತು.

ಇತ್ತ ನ್ಯಾಯಮೂರ್ತಿಗಳು ಕರ್ನಾಟಕ ವಿಧಾನಸಭೆಯ ನಿರ್ಣಯ ಸುಪ್ರೀಂ ನಿರ್ಣಯದ ಮೇಲೆ ಬಾಧ್ಯ ಅಲ್ಲ ಎಂದು ಹೇಳಿದಾಗ ಕನ್ನಡ ಪತ್ರಕರ್ತರ ಬಳಿ ಬಂದ ಮಂಡ್ಯದ ಹುಡುಗಿ ರಮ್ಯಾ, ‘‘ಹಾಗಿದ್ದಲ್ಲಿ ನಾವು ಯಾರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು? ನಮ್ಮ ಜನರು ತೆಗೆದುಕೊಂಡ ನಿರ್ಣಯವಿದು. ಅದಕ್ಕೆ ಕಿಮ್ಮತ್ತಿಲ್ಲವೇ? ಯಾಕೆ ನ್ಯಾಯಾಲಯ ಹೀಗೆ ಹೇಳುತ್ತಿದೆ,?’’ ಎಂದು ಪಿಸುಗುಟ್ಟತೊಡಗಿದರು. ಅದೇ ಸಂದರ್ಭದಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ‘‘ಮಧ್ಯಪ್ರವೇಶಕ್ಕೆ ನಾವು ತಯಾರಿದ್ದೇವೆ,’’ ಎಂದು ಹೇಳಿದಾಗ ಖುಷಿಯಾದ ರಮ್ಯಾ, ‘‘ಇದನ್ನೇ ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಪ್ರಧಾನಿ ಮಧ್ಯ ಪ್ರವೇಶ ಒಂದೇ ದಾರಿ. ಆದರೆ ನೀವು ಪತ್ರಕರ್ತರು ನಾನು ಹೇಳಿದ್ದನ್ನು ಬರೆಯೋಲ್ಲ. ನಾನು ಹೇಳದಿರುವುದು ನಿಮಗೆ ಸುದ್ದಿ,’’ ಎಂದು ಹೇಳತೊಡಗಿದರು. ಆಗ ತಮಿಳಿನ ಪತ್ರಕರ್ತರೊಬ್ಬರು, ‘‘ದಯವಿಟ್ಟು ಯಾರೂ ಮಾತನಾಡಬೇಡಿ. ನ್ಯಾಯಮೂರ್ತಿಗಳು ಹೇಳುವುದು ಕೇಳುತ್ತಿಲ್ಲ ,’’ಎಂದು ಸಿಡುಕಿದಾಗ ಒಂದೆರಡು ನಿಮಿಷ ಮತ್ತೆ ಮೌನ.

ಆಗ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ನೀವು ಎರಡು ದಿನ ಆರು ಸಾವಿರ ಕ್ಯುಸೆಕ್ ನೀರು ಬಿಡಿ ಎಂದು ಹೇಳಿದಾಗ ಒಪ್ಪದ ನಾರಿಮನ್, ಸೆ.20ರ ಲಯವನ್ನು ಕಂಡುಕೊಂಡವರಂತೆ ಮತ್ತೆ ಜೋರಾಗಿ ನ್ಯಾಯಮೂರ್ತಿಗಳಿಗೆ ನೀರು ಬಿಡಲು ಡಿಸೆಂಬರ್ ವರೆಗೆ ಸಾಧ್ಯವಿಲ್ಲ ಎಂದು ಹೇಳಿದರು. ಆಗ ನ್ಯಾ. ದೀಪಕ್ ಮಿಶ್ರಾ ‘‘ಹಾಗಿದ್ದರೆ ಯಾವಾಗ ಬಿಡುತ್ತೀರಿ,’’ ಎಂದು ಕೇಳಿದಾಗ, ಫಾಲಿ ನಾರಿಮನ್ ‘‘ವರುಣ ದೇವನಿಗೆ ಮಾತ್ರ ಗೊತ್ತು,’’ ಎಂದು ಆಕಾಶಕ್ಕೆ ಕೈತೋರಿಸಿದಾಗ ನ್ಯಾ.ದೀಪಕ್ ಮಿಶ್ರಾ, ನ್ಯಾ.ಉದಯ ಉಮೇಶ್ ಲಲಿತ್ ಸೇರಿದಂತೆ ಎಲ್ಲರೂ ಗೊಳ್ಳನೆ ನಕ್ಕರು.

ಆದರೆ ನ್ಯಾಯಮೂರ್ತಿಗಳಿಗೆ ಕರ್ನಾಟಕ ತನ್ನ ಆದೇಶ ಪಾಲಿಸದೆ ಇದ್ದದ್ದು ಕೋಪ ಬರಿಸಿದೆ ಎಂದು ಅವರ ಮಾತು ಹಾವ ಭಾವ ಗಮನಿಸಿದರೆ ಸ್ಪಷ್ಟವಾಗುತ್ತಿತ್ತು. ಆದರೆ ಸ್ವಲ್ಪ ಬಲವಂತದ ತಾಳ್ಮೆ ತಂದುಕೊಂಡಂತೆ ಮಾತನಾಡುತ್ತಿದ್ದ ನ್ಯಾ.ದೀಪಕ್ ಮಿಶ್ರಾ ಕೊನೆಗೆ ತಮ್ಮ ಸಿಟ್ಟು ಹೊರಗಡೆ ಹಾಕಿದ್ದು ತಮಿಳುನಾಡಿನ ವಕೀಲ ಶೇಖರ್ ಮೇಲೆ, ‘‘ ನೀವು ಚಿಕ್ಕ ಚಿಕ್ಕ ಜಗಳ ತೆಗೆದುಕೊಂಡು ಕೋರ್ಟ್‌ಗೆ ಬರುತ್ತೀರಿ. ನಾವು ಪರಿಹಾರ ಸೂಚಿಸಬೇಕು. ಆದರೆ ದೇಶದಲ್ಲಿ ಒಕ್ಕೂಟದ ಭಾಗವಾಗಿ ರಾಜ್ಯಗಳಿಗೂ ಜವಾಬ್ದಾರಿಯಿದೆ,’’ ಎಂದು ಹೇಳಿದ ನ್ಯಾ.ದೀಪಕ್ ಮಿಶ್ರಾ, ನಾರಿಮನ್‌ಗೆ ಮಾತ್ರ ಏರಿದ ದನಿಯಲ್ಲಿ ಮಾತನಾಡದೆ ‘‘ನೀವು ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿದ್ದೀರಿ. ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಸಲಹೆ ನೀಡಿ,’’ಎಂದು ಹೇಳಿದರು. ನ್ಯಾಯಮೂರ್ತಿಗಳ ಮಾತುಗಳನ್ನು ಗಮನಿಸಿದರೆ ವಿಧಾನ ಸಭೆ ನಿರ್ಣಯದ ಬಗ್ಗೆ ಏನೋ ಮಾತನಾಡಿ ನ್ಯಾಯಾಂಗ ಶಾಸಕಾಂಗದ ನಡುವಿನ ತಿಕ್ಕಾಟದ ಅತಿರೇಕಕ್ಕೆ ಹೋಗದೆ ಇನ್ನೊಂದು ಅವಕಾಶವನ್ನು ಕರ್ನಾಟಕಕ್ಕೇ ನೀಡಬೇಕು ಎಂದು ಮೊದಲೇ ತೀರ್ಮಾನಿಸಿ ಬಂದಂತೆ ಅನ್ನಿಸುತ್ತಿತ್ತು. ಆದರೆ ಮಧ್ಯೆ ಮಧ್ಯೆ ನ್ಯಾಯಮೂರ್ತಿಗಳಿಗೆ, ಕರ್ನಾಟಕ ನಿಮ್ಮ ಆದೇಶವನ್ನು ಪಾಲಿಸಿಲ್ಲ ನಮಗೆ ಕ್ಯುಸೆಕ್ ನೀರು ಮುಖ್ಯವಲ್ಲ ಆದೇಶ ಪಾಲನೆಯಾಗದೆ ಇರುವುದು ನೋವು ತಂದಿದೆ. ಏನು ಮಾಡಬೇಕು ನೀವು ನಿರ್ಧರಿಸಿ ಎಂದು ಹೇಳುತ್ತಿದ್ದ ತಮಿಳುನಾಡಿನ ವಕೀಲ ಶೇಖರ್ ಕೊನೆಗಂತೂ ನ್ಯಾಯಾಂಗ ಮತ್ತು ಶಾಸಕಾಂಗ ದ ನಡುವೆ ಸಂಘರ್ಷ ಆಗಿಯೇ ಹೋಗಲಿ ಎಂದು ಹೊತ್ತದ ಅಗ್ಗಿಷ್ಟಿಕೆಗೆ ತುಪ್ಪ ಸುರಿಯುವ ವಿಲ ಪ್ರಯತ್ನ ಮಾಡುತ್ತಿದ್ದರು.

ಕೊನೆಗೆ ನ್ಯಾಯಮೂರ್ತಿಗಳು ವಿಧಾನಸಭೆ ನಿರ್ಣಯದ ಹೊರತಾಗಿಯೂ ನೀರು ಬಿಡಬೇಕು ಎಂದು ಹೇಳಿದಾಗ ಎರಡು ಸಲ ಸಣ್ಣದಾಗಿ ‘ನೋ’ ಎಂದು ಈ ಬಾರಿ ಚೀರಿದ್ದು ಮಂಡ್ಯದ ಹುಡುಗಿ ರಮ್ಯಾ. ಆಗ ಕನ್ನಡದ ಪತ್ರಕರ್ತರೊಬ್ಬರು ನೀವು ಹೀಗೆಲ್ಲ ಮಾತನಾಡಬಾರಾದು ಎಂದು ತಿಳಿಸಿ ಹೇಳಿದರೂ, ಕೇಳುವ ಸ್ಥಿತಿಯಲ್ಲಿ ರಮ್ಯಾ ಇರಲಿಲ್ಲ. ಆ ಕಡೆ ಸಂಸದ ಪ್ರಕಾಶ ಹುಕ್ಕೇರಿ ಅವರಿಗೂ ಕೂಡ ಸಂಸದ ಮಿತ್ರರು ಜೋರಾಗಿ ಮಾತನಾಡಬೇಡಿ ಎಂದು ಕೈ ಒತ್ತಿ ಒತ್ತಿ ಸಮಾಧಾನ ಮಾಡುತ್ತಿದ್ದರು .

ಸುಪ್ರೀಂಕೋರ್ಟ್ ತೀರ್ಮಾನದ ನಂತರ ಹೊರಗಡೆ ಬಂದ ಕಾಲಿಗೆ ಗಾಯವಾಗಿದ್ದರೂ ಉತ್ಸಾಹದಲ್ಲಿದ್ದ ಮಾಜಿ ಸಂಸದೆ ರಮ್ಯಾ ಮತ್ತು ಬೆಳಗಾವಿ ಸಂಸದ ಪ್ರಕಾಶ ಹುಕ್ಕೇರಿ ಮಾಧ್ಯಮಗಳಿಗೆ ಹೇಳಿಕೆ ನೀಡತೊಡಗಿದರೆ ಮುಖದಲ್ಲಿ ಚಿಂತೆಯ ಗೆರೆಗಳೊಂದಿಗೆ ಕಾಣಿಸಿಕೊಂಡ ಜಲಸಂಪನ್ಮೂಲ ಸಚಿವ ಎಂ. ಬಿ.ಪಾಟೀಲ್ ‘‘ಬುಧವಾರ ಸರ್ವ ಪಕ್ಷಗಳ ಸಭೆ ಕರೆಯುತ್ತೇವೆ. ಅಲ್ಲಿಯವರೆಗೆ ಏನೂ ಮಾತನಾಡುವುದಿಲ್ಲ,’’ ಎಂದು ಹೇಳಿ ನ್ಯಾಯವಾದಿಗಳಾದ ಫಾಲಿ ನಾರಿಮನ್ ಮತ್ತು ಮೋಹನ್ ಕಾತರಕಿ ಜೊತೆಗಿನ ಭೇಟಿಗಾಗಿ ಕಾರು ಹತ್ತಿದರು.

 

ಪ್ರಶಾಂತ್ ನಾತು ನವದೆಹಲಿ