Asianet Suvarna News Asianet Suvarna News

ಬಿಳಿಗಿರಿರಂಗನ ಬೆಟ್ಟದ ಬಳಿ ವನ್ಯಜೀವಿ ಸಂರಕ್ಷಣೆ ಅಭಿಯಾನದಲ್ಲಿ ಪ್ರಕಾಶ್ ರೈ ಮತ್ತು ಮಯೂರಿ

ವನ್ಯಜೀವಿ ಸಂರಕ್ಷಣೆಗಾಗಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆಸುತ್ತಿರುವ ಸೇವ್ ಟೈಗರ್ ಮಹಾ ಅಭಿಯಾನ ಭರದಿಂದ ಸಾಗಿದೆ.  ಹುಲಿ ಸಂರಕ್ಷಿತಾ ಪ್ರದೇಶ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಎರಡು ತಿಂಗಳ ಕಾಲ ನಡೆಯುವ ಅಭಿಯಾನ ಇಂದು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ಅರಣ್ಯದಲ್ಲಿ ನಡೆಯಿತು. ಚಿತ್ರನಟ ಹಾಗೂ ಅಭಿಯಾನದ ರಾಯಭಾರಿ ಪ್ರಕಾಶ್ ರೈ ಹಾಗೂ ನಟಿ ಮಯೂರಿ ಅರಣ್ಯ ಸಿಬ್ಬಂದಿ ಹಾಗೂ ಸೋಲಿಗರೊಂದಿಗೆ ಅರಣ್ಯ ಹಾಗೂ ವನ್ಯಜೀವಿ ಉಳಿವಿನ ಬಗ್ಗೆ ಸಂವಾದ ನಡೆಸಿದರು.

prakash rai and mayuri in suvarna news campaign on save wildlife

ಚಾಮರಾಜನಗರ(ಮೇ 27): ಮಾನವ ಹಾಗೂ ವನ್ಯಜೀವಿ ನಡುವೆ ನಾನಾ ಕಾರಣಗಳಿಗಾಗಿ ಅನಾದಿ ಕಾಲದಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಈ ಸಂಘರ್ಷ ತಪ್ಪಿಸುವ ಸಲುವಾಗಿ ಸರಕಾರ, ಅರಣ್ಯ ಇಲಾಖೆ ಸೇರಿದಂತೆ ಮಾಧ್ಯಮ ಸಹ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಆದರೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಹುಲಿ ಸಂರಕ್ಷಿತಾ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆಗೆ ಮಹಾ ಅಭಿಯಾನ ಕೈಗೊಂಡಿದೆ.

ಅಭಿಯಾನದ ಅಂಗವಾಗಿ ಇಂದು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ಅಭಿಯಾನ ನಡೆಯಿತು. ಚಿತ್ರನಟ ಹಾಗೂ ಅಭಿಯಾನದ ರಾಯಭಾರಿ ಪ್ರಕಾಶ್ ರೈ ಅರಣ್ಯ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಅರಣ್ಯದ ಮೇಲೆ ಆಗುತ್ತಿರುವ ಒತ್ತಡಗಳು, ದುಷ್ಪರಿಣಾಮಗಳ ಬಗ್ಗೆ ಹಾಗೂ ಅರಣ್ಯ ಹಾಗೂ ವನ್ಯಜೀವಿ ಉಳಿವಿಗೆ ಸರಕಾರ ಹಾಗೂ ಸಾರ್ವಜನಿಕರು ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನು, ಸೋಲಿಗರ ಹಾಡಿಗೆ ಭೇಟಿ ನೀಡಿದ್ದ ಅವರು ಸೋಲಿಗರಿಂದಲೂ ಸಹ ಅರಣ್ಯ ಸಂರಕ್ಷಣೆ ಹಾಗೂ ಅವರ ಜೀವನ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಅಲ್ಲದೇ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಕೈಜೊಡಿಸುವಂತೆ ಮನವಿ ಮಾಡಿಕೊಂಡರು.

ಅಭಿಯಾನದಲ್ಲಿ ಭಾಗವಹಿಸಿದ್ದ ಚಿತ್ರನಟಿ ಮಯೂರಿ ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಕೇವಲ ಅರಣ್ಯ ಸಿಬ್ಬಂದಿಯಷ್ಟೇ ಅಲ್ಲದೇ ಪ್ರತಿಯೊಬ್ಬರ ಪಾತ್ರ ಮುಖ್ಯವಾದುದು. ಕಾಡು ಉಳಿದರೆ ನಾಡು ಎಂಬಂತೆ ಪ್ರತಿಯೊಬ್ಬರೂ ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಉತ್ತಮ ಕೆಲಸ ಮಾಡುತ್ತಿದೆ. ನಾನು ಸಹ ಕೇವಲ ಅಭಿಯಾನದಲ್ಲಿ ಭಾಗವಹಿಸಿ ಜಾಗೃತಿ ಮೂಢಿಸುವುದಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿಯೂ ಸಹ ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಭಾಗಿಯಾಗುವುದರ ಜೊತೆಗೆ ಅವುಗಳ ಉಳಿವಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದರು.

ಇನ್ನು ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಕೈಗೊಂಡಿರುವ ವನ್ಯಜೀವಿ ಸಂರಕ್ಷಣಾ ಮಹಾ ಅಭಿಯಾನದ ಬಗ್ಗೆ ಬಿಆರ್'ಟಿ ಹುಲಿ ಸಂರಕ್ಷಿತಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ವನ್ಯಜೀವಿ ಹಾಗೂ ಮಾನವನ ನಡುವೆ ಸಂಘರ್ಷ ತಪ್ಪಿಸಬೇಕು ಎಂದರೆ ಅದು ಮಾಧ್ಯಮದ ಮೂಲದ ಮಾತ್ರ ಸಾಧ್ಯ. ಈಗಾಗಿ ಮಾಧ್ಯಮಗಳು ಆ ನಿಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡಬೇಕು. ಹಾಗೂ ಅರಣ್ಯ ಉಳಿವಿಗೆ ಸಹಕರಿಸಬೇಕು ಎಂದರು.

ಒಟ್ಟಾರೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಕೈಗೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಆ ಮೂಲಕ ಕಾಡಂಚಿನ ಗ್ರಾಮಗಳಲ್ಲಿ ಸಂಚರಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ವನ್ಯಜೀವಿ ವಿಷಯದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಕೈಗೊಂಡಿರುವ ಈ ಮಹಾ ಅಭಿಯಾನಕ್ಕೆ, ಕಾಳಜಿಗೆ ನಾಗರೀಕರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ.

- ಶಶಿಧರ ಕೆ.ವಿ., ಸುವರ್ಣ ನ್ಯೂಸ್, ಚಾಮರಾಜನಗರ

Follow Us:
Download App:
  • android
  • ios