Asianet Suvarna News Asianet Suvarna News

ಬಡವರಿಗೆ ಸಿಗುತ್ತಿಲ್ಲ ಇಂದಿರಾ ಕ್ಯಾಂಟೀನ್ ಆಹಾರ

ಉದ್ಯಾನ ನಗರಿಯ ನಿರ್ಗತಿಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಜನರಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ‘ಇಂದಿರಾ ಕ್ಯಾಂಟೀನ್’ನ ಊಟ ಶ್ರೀಮಂತರು ಕಬಳಿಸುತ್ತಿದ್ದರೂ, ಇದನ್ನು ತಪ್ಪಿಸುವ ಯಾವುದೇ ಪ್ರಯತ್ನವನ್ನು ಬಿಬಿಎಂಪಿ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಸದ್ಯಕ್ಕೆ ಇದನ್ನು ತಡೆಗಟ್ಟಬೇಕು ಎಂಬ ಯಾವ ಯೋಜನೆಯೂ ಪಾಲಿಕೆ ಬಳಿಯಿಲ್ಲ.

Poor People Are Not Getting The Food Of Indira Canteen

ಬೆಂಗಳೂರು(ಆ.19): ಉದ್ಯಾನ ನಗರಿಯ ನಿರ್ಗತಿಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಜನರಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ‘ಇಂದಿರಾ ಕ್ಯಾಂಟೀನ್’ನ ಊಟ ಶ್ರೀಮಂತರು ಕಬಳಿಸುತ್ತಿದ್ದರೂ, ಇದನ್ನು ತಪ್ಪಿಸುವ ಯಾವುದೇ ಪ್ರಯತ್ನವನ್ನು ಬಿಬಿಎಂಪಿ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಸದ್ಯಕ್ಕೆ ಇದನ್ನು ತಡೆಗಟ್ಟಬೇಕು ಎಂಬ ಯಾವ ಯೋಜನೆಯೂ ಪಾಲಿಕೆ ಬಳಿಯಿಲ್ಲ.

ಒಟ್ಟಾರೆ ಬಡವರ್ಗದ ಜನರಿಗಾಗಿ ಸರ್ಕಾರ ನಗರದಾದ್ಯಂತ ಮೊದಲ ಹಂತದಲ್ಲಿ 101 ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಿದೆ. ಇಲ್ಲಿ ಬೆಳಗ್ಗೆ 5 ರು. ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಕೇವಲ 10 ರು.ಗೆ ಊಟ ನೀಡುತ್ತಿದೆ. ರಿಯಾಯ್ತಿ ದರದಲ್ಲಿ ಊಟ ಪೂರೈಸಲು ಸರ್ಕಾರವು ತೆರಿಗೆದಾರರ ಲಕ್ಷಾಂತರ ರು. ಬಳಸುತ್ತದೆ. ಹೀಗೆ ತೆರಿಗೆದಾರರ ಹಣ ಬಳಕೆ ಮಾಡಿದಾಗ ಅದು ಕಡು ಬಡವರ, ಹಸಿದವರಿಗೆ ಊಟ ತಲುಪಿದ್ದರೆ ಉತ್ತಮವಿತ್ತು. ಆದರೆ, ಕಾರು, ಬೈಕುಗಳಲ್ಲಿ ಬರುವ ಹಾಗೂ ನೋಡಲು ಸಾಕಷ್ಟು ಸ್ಥಿತಿವಂತರಂತೆ ಕಾಣುವವರೇ ಎಲ್ಲಾ ಇಂದಿರಾ ಕ್ಯಾಂಟೀನ್ನಲ್ಲೂ ತುಂಬಿರುತ್ತಾರೆ. ಇದನ್ನು ತಡೆಗಟ್ಟುವ ವ್ಯವಸ್ಥೆ ಬಿಬಿಎಂಪಿ ರೂಪಿಸಬೇಕಿತ್ತು ಎಂದು ಟೀಕಾಕಾರರು ಹೇಳುತ್ತಾರೆ.

ಪಕ್ಷವೊಂದು ಮತ ಸೆಳೆಯಲು ಸರ್ಕಾರಿ ಖರ್ಚಿನಲ್ಲಿ ಉಚಿತ ಊಟ ಹಾಕುವ ಯೋಜನೆಯಾಗಿ ಕ್ಯಾಂಟೀನ್ ಬಳಕೆಯಾಗಬಾರದು ಎಂಬುದು ಅವರ ಆಗ್ರಹ. ಆದರೆ, ಈ ಅಭಿಪ್ರಾಯವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಒಪ್ಪುವುದಿಲ್ಲ. ಇಂದಿರಾ ಕ್ಯಾಂಟೀನ್ ಬಡವರಿಗಾಗಿ ಆರಂಭಿಸಿರುವ ಮಹತ್ವದ ಯೋಜನೆ ನಿಜ. ಆದರೆ, ಶ್ರೀಮಂತರೂ ಬರುತ್ತಿದ್ದಾರೆ, ಬರಬೇಡಿ ಎಂದು ಹೇಳಲಾಗುವುದಿಲ್ಲ. ಅವರೇ ಅರ್ಥಮಾಡಿ ಕೊಳ್ಳಬೇಕು ಎನ್ನುತ್ತಾರೆ.

ಸ್ಥಿತಿವಂತರು... ಮೊದಲ 2 ದಿನದಂತೆ ಶುಕ್ರವಾರ ಕೂಡ ಎಲ್ಲಾ 101 ಕ್ಯಾಂಟೀನ್ಗಳಲ್ಲೂ ಶ್ರೀಮಂತರ ವರ್ಗದವರೂ ತಿಂಡಿ, ಊಟ ಕ್ಕಾಗಿ ಸರದಿಯಲ್ಲಿ ನಿಂತು ಬಡವರಿಗೆ ಮೀಸಲಾದ ಆಹಾರ ತಮ್ಮದಾಗಿಸಿಕೊಂಡಿದ್ದು, ಹಸಿದವರು ಖಾಲಿ ಹೊಟ್ಟೆಯಲ್ಲೇ ಹಿಂತಿರುಗುವಂತೆ ಮಾಡಿತು. ಎಲ್ಲೆಡೆ ಜನರು ತಿಂಡಿ, ಊಟಕ್ಕಾಗಿ ಜನರು ಮೂರೂ ಹೊತ್ತು ಸಮಯಕ್ಕೆ ಸರಿಯಾಗಿ ಧಾವಿಸಿದ್ದರು. ಸರದಿಯಲ್ಲಿ ನಿಂತು ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇವಿಸಿದರು.

 ಮೂರನೇ ದಿನವೂ ಕೂಡ ಒಂದು ಹೊತ್ತಿಗೆ 300 ಜನರಿಗೆ ಮಾತ್ರ ಆಹಾರ ವಿತರಣೆಗೆ ವ್ಯವಸ್ಥೆ ಮುಂದುವರೆದಿದ್ದರಿಂದ ಕೆಲ ಹೊತ್ತಿನಲ್ಲೇ ತಿಂಡಿ, ಊಟ ಖಾಲಿಯಾಯಿತು. ಕೆಲವೆಡೆ ಮೊದಲೇ ಬಂದವರು ಆಹಾರ ಸೇವಿಸಿದ್ದರಿಂದ ತಡವಾಗಿ ಬಂದ ಬಡವರ್ಗದವರು ಸರದಿಯಲ್ಲಿ ನಿಂತರೂ ಕೊನೆಗೆ ಊಟ ಖಾಲಿಯಾಗಿದ್ದರಿಂದ ಬರಿಹೊಟ್ಟೆಯಲ್ಲಿ ಹಿಂತಿರುಗಿದರು. ಈ ಮಧ್ಯ ಸ್ಥಿತಿವಂತರು ಬಡವರ ಆಹಾರ ಕಸಿಯುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳೂ ವ್ಯಕ್ತವಾಗುತ್ತಿವೆ. ಉಳ್ಳವರೇ ಹೀಗೆ ಮಾಡಿದರೆ ಇಲ್ಲದವರು ಎಲ್ಲಿಗೆ ಹೋಗಬೇಕು. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎನ್ನುತ್ತಾರೆ ಶುಕ್ರವಾರ ಸರದಿಯಲ್ಲಿ ನಿಂತರೂ ಊಟ ದೊರೆಯದೆ ನಿರಾಶರಾದ ಕಾರ್ಮಿಕ ಸುಂದರೇಶ್.

Follow Us:
Download App:
  • android
  • ios