Asianet Suvarna News Asianet Suvarna News

ಕೌಶಲ್ಯಕ್ಕೆ ವೇದಿಕೆಯಾದ ಫೀನಿಕ್ಸ್; ಮಾಲ್'ನಲ್ಲಿ ದೇಶದ ವಿಶಿಷ್ಟ ಕಲಾಕೃತಿಗಳ ಅನಾವರಣ

ದೇಶ ವಿದೇಶದ ವಿವಿಧ ಕಲಾ ಪ್ರಕಾರಗಳಿಗೆ ವೇದಿಕೆಯಾಗಿದೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಕಲಾ ಪ್ರದರ್ಶನ ಮತ್ತು ಮಾರಾಟ. ವಿವಿಧ ರಾಜ್ಯಗಳ ವಿಶಿಷ್ಟಕಲಾಕೃತಿಗಳನ್ನು ಅಗ್ಗದಲ್ಲಿ ಕೊಂಡುಕೊಳ್ಳಬೇಕೆಂದಿದ್ದರೆ ಇಲ್ಲಿಗೊಮ್ಮೆ ಭೇಟಿ ಕೊಡಬಹುದು.

Phoenix Marketcity presents thematic exhibition cum  sale of Indian handicrafts

ನವೀನ್ ಕೊಡಸೆ

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಯಾಂತ್ರಿಕವಾಗಿ ಬಿಟ್ಟಿದೆ. ಯಾಂತ್ರಿಕ ಜಗತ್ತಿನ ನಡುವೆಯೂ ಜೀವಂತಿಕೆ ತುಂಬಿಕೊಂಡ ಕಲಾಕೃತಿಗಳು ನೋಡಸಿಕ್ಕಿದ್ದು ನಗರದ ವೈಟ್'ಫೀಲ್ಡ್ ಫೀನಿಕ್ಸ್ ಮಾಲ್'ನಲ್ಲಿ.  ಫೀನಿಕ್ಸ್ ಮಾಲ್'ನಲ್ಲಿ ಆಯೋಜಿಸಿರುವ ಕಲಾ ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪಡೆದ ಕಲಾವಿದರು ತಯಾರಿಸಿದ ಕರಕುಶಲ ಕಲಾಕೃತಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.

ಜನವರಿ 25ರಿಂದ ಆರಂಭವಾಗಿರುವ ಈ ಮೇಳವು ಜನವರಿ 31ರವರೆಗೆ ನಡೆಯಲಿದೆ. ಇಲ್ಲಿ ಚೆನ್ನಪಟ್ಟಣದ ತರಹೇವಾರಿ ಕೈ ಗೊಂಬೆಗಳಿಂದ ಹಿಡಿದು ದೂರದ ಬಿಹಾರದಲ್ಲಿನ ಮಧುಬನಿ ಚಿತ್ತಾರ, ಜೈಪುರದ ಲೆದರ್ ಸ್ಲಿಪ್ಪರ್, ಲಲನೆಯರ ಅಲಂಕಾರಿಕ ಸಾಮಗ್ರಿಗಳು, ಡ್ರೆಸ್ ಮೆಟೀರಿಯಲ್ಸ್'ಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಲು ಬೆಳೆಯುತ್ತಲೇ ಹೋಗುತ್ತದೆ.

ಸಮಾಜದ ತಳ ವರ್ಗದ ಕಲಾವಿದರು ತಯಾರಿಸಿದ ಕರಕುಶಲ ಉತ್ಫನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿಷ್ಟಿತ ಮಾಲ್'ಗಳು, ವಸ್ತು ಸಂಗ್ರಹಾಲಯಗಳಲ್ಲಿ, ಪ್ರಮುಖ ಪ್ರದರ್ಶನ ಕೇಂದ್ರಗಳಲ್ಲಿ ಭಾರತೀಯ ಕರಕುಶಲ ವಸ್ತುಗಳ ಮಾರಾಟ-ಪ್ರದರ್ಶನವನ್ನು ಏರ್ಪಡಿಸಿದೆ. ಈ ಮೇಳದಲ್ಲಿ ಭಾಗವಹಿಸಿರುವ ಬಹುತೇಕ ಮಂದಿ ಸಾಂಪ್ರದಾಯಿಕವಾಗಿ ವೃತ್ತಿಬದುಕನ್ನು ಸಾಗಿಸುತ್ತಾ ಬಂದವರು. ಕೇವಲ ವ್ಯಾಪಾರದ ಉದ್ದೇಶ ಮಾತ್ರವಾಗಿರದೇ ದೇಶೀ ಕಲೆ ಉಳಿಸುವ, ಜಾಗತಿಕ ಮಟ್ಟದಲ್ಲಿ ತಮ್ಮ ಕಲೆಯನ್ನು ಅನಾವರಣ ಮಾಡುವ ಹಂಬಲವು ಈ ಕಲಾವಿದರ ಮನದಲ್ಲಿದೆ.

Phoenix Marketcity presents thematic exhibition cum  sale of Indian handicrafts

ಮಧುಬನಿ ಚಿತ್ರಕಲೆ ಬಿಹಾರದ ವಿಶಿಷ್ಟ ಚಿತ್ರಕಲೆ. ರಾಮಾಯಣ, ಮಹಾಭಾರತ ಸೇರಿದಂತೆ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಈ ಚಿತ್ರಗಳಿಗೆ ಸ್ವಾಭಾವಿಕ ಬಣ್ಣಗಳನ್ನು ಬಳಸಲಾಗಿದೆ. ಈ ಚಿತ್ರಕಲೆಯ ಇನ್ನೊಂದು ವಿಶೇಷವೆಂದರೆ ದಶಕಗಳಗಟ್ಟಲೇ ಇಟ್ಟರೂ ಬಣ್ಣ ಕಳೆಗುಂದುವುದಿಲ್ಲವಂತೆ, ಬದಲಾಗಿ ಇನ್ನಷ್ಟು ಹೊಳಪು ಮೂಡುತ್ತದೆಯಂತೆ. ದಿಲ್ಲಿ, ಮುಂಬೈ, ಗುಜರಾತ್, ಕೋಲ್ಕತಾದಲ್ಲಿ ತಮ್ಮ ಕಲೆಯನ್ನು ಅನಾವರಣಗೊಳಿಸಿರುವ ಸಂತೋಷ್ ಕುಮಾರ್'ಗೆ ರಾಜ್ಯ ಪ್ರಶಸ್ತಿ ಅರಿಸಿ ಬಂದಿದೆ.  ಇವರಲ್ಲಿ 100 ರೂಪಾಯಿಯಿಂದ 10,000 ರೂಪಾಯಿಯ ಕಲಾಕೃತಿಗಳು ಇಲ್ಲಿ ಲಭ್ಯವಿವೆ. ಮಧುಬನಿ ಕಲಾಕೃತಿಯಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಂತೋಷ್ ಮೂರನೇ ತಲೆಮಾರಿನ ಕಲಾವಿದ ಎನ್ನುವುದು ಮತ್ತೊಂದು ವಿಶೇಷ.

ಇನ್ನು ನೈಸರ್ಗಿಕ ಬಣ್ಣ ಬಳಸಿ ಬಟ್ಟೆಗಳ ಮೇಲೆ, ಪೇಪರ್'ಗಳಲ್ಲಿ ಚಿತ್ರ ಬಿಡಿಸು ನವದೆಹಲಿ ಮೂಲದ ಮಹೇಂದ್ರ ಪಾಡಿಯಾ ಬಳಿ 100 ವರ್ಷ ಹಳೆದಾದ ಬಾಂಡ್ ಪೇಪರ್'ನಲ್ಲಿ ರಾಧೆ, ಕೃಷ್ಣ ಸೇರಿದಂತೆ ಪುರಾಣ ಪ್ರಸಿದ್ದ ಚಿತ್ರಗಳು, ಪ್ರಕೃತಿಯ ಚಿತ್ರಗಳು, ಅವರ ಕೈ ಚಳಕ ಹುಬ್ಬೇರಿಸುವಂತೆ ಮಾಡುತ್ತಿವೆ. 500 ರಿಂದ 1 ಲಕ್ಷ ರೂಪಾಯಿವರೆಗಿನ ಕಲಾಕೃತಿಗಳು ಇವರ ಬಳಿಯಿವೆ.

ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಚೆನ್ನಪಟ್ಟಣದ ಕೈಗೊಂಬೆಗಳೂ ಕೂಡ ಈ ಮೇಳದಲ್ಲಿವೆ. ಆಲೆ ಮರ(ಐವರಿ ಟ್ರೀ) ನಿಂದ ನಿರ್ಮಿಸಲಾಗುವ ಮರದ ಗೊಂಬೆಗಳು, ಬಳೆಗಳು, ಆಟಿಕೆ ಸಾಮಾನುಗಳು ಮಕ್ಕಳ ಮೊಗದಲ್ಲಿ ನಗು ತರಿಸುವುದರಲ್ಲಿ ಅನುಮಾಣವೇ ಇಲ್ಲ. ಯವುದೇ ಅಡ್ಡಪರಿಣಾಮವಾಗದಂತೆ ನೈಸರ್ಗಿಕವಾಗಿ, ತರಕಾರಿಗಳಿಂದ ತಯಾರಿಸದ ಬಣ್ಣಗಳನ್ನು ಈ ಗೊಂಬೆಗಳಿಗೆ ಬಳಸಲಾಗಿದೆ.

Phoenix Marketcity presents thematic exhibition cum  sale of Indian handicrafts

ರಾಜಸ್ಥಾನದ ಜೈಪುರ ಮೂಲದ ಲೆದರ್ ಚಪ್ಪಲಿಗಳು ಕೈಗೆಟುವ ದರದಲ್ಲಿ ದೊರೆಯುತ್ತಿದೆ. ಇದೇ ಗುಣಮಟ್ಟದ ಚಪ್ಪಲಿಗಳು ಬೇರೆ ಕಡೆ ಸಾವಿರಾರು ರೂಪಾಯಿ ಕೊಟ್ಟು ಜನ ಕೊಂಡುಕೊಳ್ಳುತ್ತಾರೆ. ಅವುಗಳು ಕಂಪನಿಯ ಬ್ರ್ಯಾಂಡ್ ಹೆಸರಿದೆ. ನಮಗೆ ಸರಿಯಾದ ವ್ಯಾಪಾರದ ವೇದಿಕೆ ಸಿಕ್ಕಿಲ್ಲ. ಸರ್ಕಾರದ ಈ ಪ್ರಯತ್ನ ನಮ್ಮಂತ ಬಡ ಕಲಾವಿದರಿಗೆ ನೆರವಾಗಬಹುದು ಎನ್ನುವ ವಿಶ್ವಾಸ ರಾಮ್ ಧನ್ ಐಗಾರ್ ಅವರದ್ದು.   ಇದಷ್ಟೇ ಅಲ್ಲದೇ ಮಧ್ಯಪ್ರದೇಶ ಮೂಲದ ಬಾಟಿಕ್ ಪ್ರಿಂಟಿಂಗ್ ಮತ್ತು ಎಂಬ್ರಾಡರಿ ಮಳಿಗೆಯಲ್ಲಿ ಸಲ್ವಾರ್ ಕಮೀಜ್, ಕುರ್ತಾ ಮುಂತಾದ ಯುವತಿಯರ ಡ್ರೆಸ್'ಗಳು ಲಭ್ಯವಿವೆ. ವಿಶೇಷವಾಗಿ ಮಧ್ಯಪ್ರದೇಶದ ವಿಶೇಷತೆಗಳಲ್ಲಿ ಒಂದಾದ ಮಹೇಶ್ವರಿ ಹಾಗೂ ಚಂದೇರಿ ಬಟ್ಟೆಗಳ ಕರಕುಶಲ ವಸ್ತ್ರವಿನ್ಯಾಸಕ್ಕೆ ನಿಜಕ್ಕೂ ತಲೆದೂಗಲೇ ಬೇಕು. ಕೈಗೆಟುವ ದರದಲ್ಲಿ ಮಾಲ್'ನಲ್ಲಿ ಈ ಡ್ರೆಸ್'ಗಳು ಸಿಗುತ್ತಿರುವುದು ಇನ್ನೊಂದು ಪ್ಲಸ್ ಪಾಯಿಂಟ್.

ಕರ್ನಾಟಕ ಗೊಂಬೆಯಾಟದ ಪ್ರಕಾರದಲ್ಲಿ ತೊಗಲುಗೊಂಬೆಯಾಟಕ್ಕೆ ವಿಶಿಷ್ಟ ಸ್ಥಾನವಿದೆ. ಇಲ್ಲಿನ ಭಾನು ಅವರ ಮಳಿಗೆಯಲ್ಲಿ ವಿವಿಧ ಪ್ರಾಣಿಗಳ, ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳಿಗೆ ಸಂಬಂಧಿಸಿದ ಗೊಂಬೆಗಳು ಇಲ್ಲಿವೆ. ಇದಷ್ಟೇ ಅಲ್ಲದೇ ಬೆಡ್'ಲ್ಯಾಂಪ್ಸ್, ಹ್ಯಾಂಗರ್ಸ್ ಮುಂತಾದ ಗೃಹೋಪಯೋಗಿ ಸಾಧನಗಳು ಮಾಡಿರುವ ಭಾನು ದೇಶದ ವಿವಿದೆಡೆ ನಾಡಿನ ಕಲೆಯನ್ನು ಅನಾವರಣಗೊಳಿಸಿದ್ದಾರೆ. ಈ ಕಲೆಯನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು, ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವುದು ಭಾನು ಮಾತಿನ ಹಂಬಲವಾಗಿದೆ.

ಈ ಮೇಳದಲ್ಲಿ ಕೇರಳ ಮೂಲದ ಹುಲ್ಲಿನಿಂದ ಮಾಡಿದ ಚಾಪೆ, ಬ್ಯಾಗ್'ಗಳು, ಯಲಚೇನ ಹಳ್ಳಿಯ ಭಾಗ್ಯಲಕ್ಷ್ಮಿ ಟೆರ್ರಾಕೋಟ್'ನ ಮಳಿಗೆಯ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಅಲಂಕಾರಿಕ ಆಭರಣಗಳು ಹಾಗೂ ತಮಿಳು ನಾಡು ಮೂಲದ ಬಿದಿನ ಕೊಳಲು ಜನರ ಆಕರ್ಷಣೆಯ ಕೇಂದ್ರಗಳಾಗಿವೆ.

ಒಟ್ಟಾರೆ ಕೇಂದ್ರ ಹಾಗೂ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಈ ಮೇಳವು ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವಿನ ಕೊಂಡಿಯಾಗಿ ಫೀನಿಕ್ಸ್ ಮಾಲ್ ಕೆಲಸ ಮಾಡುತ್ತಿದೆ.

Follow Us:
Download App:
  • android
  • ios