Asianet Suvarna News Asianet Suvarna News

ಕೋಟಿ ಕೋಟಿ ಸೊಳ್ಳೆ ಹಿಡಿಯುವ ಮಂಗಳೂರು ಯಂತ್ರ!

ಇಗ್ನೇಷಿಯಸ್‌ ಒರ್ವಿನ್‌ ನೊರೊನ್ಹಾ ರೂಪಿಸಿರುವ ಈ ವಿಶಿಷ್ಟ ಯಂತ್ರವು ಸೊಳ್ಳೆಗಳನ್ನು ಕೊಲ್ಲುವ ಬಗೆಯೇ ವಿಶಿಷ್ಟವಾದುದು. ಸೊಳ್ಳೆಗಳು ಮನುಷ್ಯರಿರುವ ತಾಣವನ್ನು ಪತ್ತೆ ಮಾಡಿ, ಕರಾರುವಕ್ಕಾಗಿ ರಕ್ತ ನಾಳವನ್ನು ಹುಡುಕಿ ಹೇಗೆ ರಕ್ತ ಹೀರುತ್ತವೋ ಅಷ್ಟೇ ಕರಾರುವಾಕ್ಕಾಗಿ ಈ ಯಂತ್ರ ಸೊಳ್ಳೆಗಳನ್ನು ತನ್ನತ್ತ ಆಕರ್ಷಿಸಿ ಕೊಲ್ಲುತ್ತದೆ. ಸತ್ತ ಸೊಳ್ಳೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹ ತೊಟ್ಟಿ(ಕಲೆಕ್ಷನ್‌ ಕಂಟೇನರ್‌) ಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. 

mozziquit mosquito killing machine

ಬೆಂಗಳೂರು(ಏ. 09): ಮಾರಕ ಡೆಂಘೀ, ಮಲೇರಿಯಾ, ಜತೆಗೆ ಮನುಕುಲವನ್ನೇ ವಿನಾಶ ಮಾಡಬಲ್ಲ ಭೀತಿ ಹುಟ್ಟಿಸಿರುವ ಝೈಕಾ... ಹೀಗೆ ಸೊಳ್ಳೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ದೇಶವನ್ನೇ ಸೊಳ್ಳೆಮುಕ್ತ ಮಾಡಿದರೆ ಹೇಗೆ?

ಇಂತಹದೊಂದು ಆಲೋಚನೆ ಹಲವು ದಶಕಗಳಿಂದ ಇರಬಹುದು. ಆದರೆ, ಅದನ್ನು ಸಾಕಾರಗೊಳಿಸುವ ದಾರಿ ಇನ್ನೂ ಸಿಕ್ಕಿಲ್ಲ. ಇದೀ ಗ ಮಂಗಳೂರು ಮೂಲದ ಇಗ್ನೇಷಿಯಸ್‌ ಒರ್ವಿನ್‌ ನೊರೊನ್ಹಾ ಎಂಬುವರು ಸೊಳ್ಳೆ ಯನ್ನು ಆಕರ್ಷಿಸಿ, ಕೊಲ್ಲುವ ವಿನೂತನ ಯಂತ್ರ ರೂಪಿಸಿದ್ದು, ಇದರ ಮೂಲಕ ‘ಮಚ್ಚರ್‌ ಮುಕ್ತ್ ಭಾರತ್‌ ಅಭಿಯಾನ'ವನ್ನು ಕೈಗೊಳ್ಳಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೆ, ಯಂತ್ರದ ಕಾರ್ಯಕ್ಷಮತೆ ನಿರೂಪಿಸಲು ರಾಷ್ಟ್ರಪತಿಯವರ ಸಮ್ಮುಖದಲ್ಲೇ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ.

ಈ ಯಂತ್ರದ ಹೆಸರು ‘ಮೊಝಿ ಕ್ವಿಟ್‌'(Mozzi Quit). ಈ ಯಂತ್ರವನ್ನು ಕೇವಲ ಮನೆಗಳಲ್ಲಿ ಮಾತ್ರವಲ್ಲ, ಕೊಟ್ಟಿಗೆಗಳಲ್ಲೂ ಬಳಸಲು ಸಾಧ್ಯ. ರಾಸುಗಳಿಗೆ ವಿಪರೀತ ಕಾಡುವ ಸೊಳ್ಳೆಗಳನ್ನು ಕೋಟಿಗಳ ಸಂಖ್ಯೆಯಲ್ಲಿ ಆಕರ್ಷಿಸಿ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ ಎಂಬುದನ್ನು ಸಾಬೀತುಪಡಿಸಲು ಬೀದರ್‌ ಕೃಷಿ ವಿಶ್ವವಿದ್ಯಾಲಯದ ಕೊಟ್ಟಿಗೆ ಯಲ್ಲಿ ಯಶಸ್ವಿ ಪ್ರಾತ್ಯಕ್ಷಿಕೆ ನಡೆಸಿ ವಿ.ವಿ.ಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. 

ಹೊಗೆ ಉಗುಳದ, ವಾಸನೆಯನ್ನೂ ಹರಡದ, ಯಾವುದೇ ರಾಸಾಯನಿಕಗಳನ್ನೂ ಬಳಸದ ಈ ಸೊಳ್ಳೆನಾಶಕ ಯಂತ್ರ ಮನುಷ್ಯರನ್ನು ಕಚ್ಚುವ ಸೊಳ್ಳೆಗಳನ್ನು ತನ್ನತ್ತ ಆಕರ್ಷಿಸುತ್ತದೆ. ಅವುಗಳನ್ನು ತನ್ನ ಬಲೆಗೆ ಎಳೆದುಕೊಂಡು ಕೊಂದುಹಾಕುತ್ತದೆ. ದಿನವೊಂದಕ್ಕೆ ಕೆಲವೇ ಪೈಸೆಗಳ ಖರ್ಚಿನಲ್ಲಿ ಈ ಕೆಲಸ ಮಾಡಬಹುದು ಎಂಬುದು ನೊರ್ಹೊನಾ ಅವರ ವಾದ. 

ಏನಿದು ತಂತ್ರಜ್ಞಾನ?: ಇಗ್ನೇಷಿಯಸ್‌ ಒರ್ವಿನ್‌ ನೊರೊನ್ಹಾ ರೂಪಿಸಿರುವ ಈ ವಿಶಿಷ್ಟ ಯಂತ್ರವು ಸೊಳ್ಳೆಗಳನ್ನು ಕೊಲ್ಲುವ ಬಗೆಯೇ ವಿಶಿಷ್ಟವಾದುದು. ಸೊಳ್ಳೆಗಳು ಮನುಷ್ಯರಿರುವ ತಾಣವನ್ನು ಪತ್ತೆ ಮಾಡಿ, ಕರಾರುವಕ್ಕಾಗಿ ರಕ್ತ ನಾಳವನ್ನು ಹುಡುಕಿ ಹೇಗೆ ರಕ್ತ ಹೀರುತ್ತವೋ ಅಷ್ಟೇ ಕರಾರುವಾಕ್ಕಾಗಿ ಈ ಯಂತ್ರ ಸೊಳ್ಳೆಗಳನ್ನು ತನ್ನತ್ತ ಆಕರ್ಷಿಸಿ ಕೊಲ್ಲುತ್ತದೆ. ಸತ್ತ ಸೊಳ್ಳೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹ ತೊಟ್ಟಿ(ಕಲೆಕ್ಷನ್‌ ಕಂಟೇನರ್‌) ಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. 

ಸೊಳ್ಳೆಗಳು ಮನುಷ್ಯರು ಹಾಗೂ ರಾಸುಗಳನ್ನು ಪತ್ತೆ ಮಾಡಿ ರಕ್ತ ಹೀರಲು ಮುಖ್ಯ ಕಾರಣ ಮನುಷ್ಯರು ಹಾಗೂ ರಾಸುಗಳು ಉಸಿರಾಡುವಾಗ ಹೊರಬಿಡುವ ಇಂಗಾಲದ ಡೈ ಆಕ್ಸೈಡ್‌. ಈ ಇಂಗಾಲದ ಡೈ ಆಕ್ಸೈಡ್‌ನ ವಾಸನೆಯ ಜಾಡು ಹಿಡಿದು ಬರುವ ಸೊಳ್ಳೆಗಳು ರಕ್ತ ನಾಳಗಳ ತಾಪಮಾನವನ್ನು ಅನುಸರಿಸಿ ದಾಳಿ ಮಾಡುತ್ತವೆ. ಈ ತಂತ್ರವನ್ನೇ ಅನುಸರಿಸಿ ರುವ ನೊರೊನ್ಹಾ ಸೊಳ್ಳೆಗಳನ್ನು ತಮ್ಮ ಯಂತ್ರಗಳ ಮೂಲಕ ಆಕರ್ಷಿಸುತ್ತಾರೆ. 

ಅತ್ಯಂತ ಅಗ್ಗ ಈ ಯಂತ್ರ: ಪ್ರಸ್ತುತ ಮೂರು ಮಾದರಿಯ ಸೊಳ್ಳೆನಾಶಕ ಯಂತ್ರಗಳನ್ನು ತಯಾರಿಸಿರುವ ನೊರೊನ್ಹಾ, ಒಟ್ಟು 12 ವಿವಿಧ ವಿನ್ಯಾಸಗಳಿಗೆ ಪೇಟೆಂಟ್‌ ಪಡೆದಿದ್ದಾರೆ. ಈಗ ತಯಾರು ಮಾಡಿರುವ ಎಂಕ್ಯೂ-ಮ್ಯಾಕ್ಸ್‌ (ರು.2,990) ಜಂಬೋ ಮಾದರಿಯದ್ದಾಗಿದ್ದು, ದನದ ಕೊಟ್ಟಿಗೆಗಳಿಗೂ ಬಳಕೆ ಮಾಡಬಹುದು. ಈ ಮಾದರಿಯನ್ನು ಬೀದರ್‌ನ ಕೃಷಿ ವಿವಿಯು ಕೊಟ್ಟಿಗೆಯಲ್ಲಿರಿಸಿ ಪ್ರಯೋಗ ನಡೆಸಿದ್ದು, ಕೋಟ್ಯಂತರ ಸೊಳ್ಳೆಗಳನ್ನು(3 ತಿಂಗಳಲ್ಲಿ ಹತ್ತು ಕೋಟಿಗೂ ಮಿಕ್ಕಿ) ನಾಶ ಮಾಡಿರುವುದನ್ನು ದಾಖಲಿಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಸೊಳ್ಳೆ ಕಡಿತದಿಂದಾಗಿ ನರಳುವ ರಾಸುಗಳ ಹಾಲಿನ ಪ್ರಮಾಣ ಕಡಿಮೆಯಿರುತ್ತಿತ್ತು. ಆದರೆ, ಈ ಯಂತ್ರದ ಬಳಕೆ ನಂತರ ರಾಸುಗಳ ಹಾಲು ಉತ್ಪಾದನೆ ಪ್ರಮಾಣದಲ್ಲಿ ಶೇ.10ರಷ್ಟುಹೆಚ್ಚಳ ಕಂಡು ಬಂದಿದೆ. ಇದನ್ನು ಬೀದರ್‌ ಕೃಷಿ ವಿ.ವಿ. ದೃಢಪಡಿಸಿದೆ. ಮತ್ತೊಂದು ಮಾದರಿ ಎಂ-ಕ್ಯೂ ಮಿನಿ 3 ಪಿನ್‌'ಗೆ ರು.1500 ಮತ್ತು ಎಂಕ್ಯೂ ಮಿನಿ 2 ಪಿನ್‌'ಗೆ ರು.990 ಬೆಲೆ ನಿಗದಿ ಮಾಡಲಾಗಿದೆ. ಈ ಎರಡೂ ಮಾದರಿಗಳನ್ನು ಮನೆಗಳಲ್ಲಿ ಬಳಸಬಹುದಾಗಿದೆ.

ಮೋಝಿಕ್ವಿಟ್ ಯಂತ್ರದ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು, ಅಥವಾ ಆನ್'ಲೈನ್'ನಲ್ಲಿ ಆರ್ಡರ್ ಬುಕ್ ಮಾಡಲು ಅದರ ವೆಬ್'ಸೈಟ್'ಗೆ ಭೇಟಿಕೊಡಬಹುದು. http://mozziquit.com

ವರದಿ: ಪ್ರಶಾಂತ್ ಕುಮಾರ್ ಎಂ.ಎಸ್., ಕನ್ನಡಪ್ರಭ
epaper.kannadaprabha.in

Follow Us:
Download App:
  • android
  • ios