Asianet Suvarna News Asianet Suvarna News

ಮಂಚನಬೆಲೆಯ ಆನೆ ಸಿದ್ಧ ಇನ್ನಿಲ್ಲ

ಬದುಕುವ ಭರವಸೆ ಮೂಡಿಸಿದ್ದ ಮಂಚನಬೆಲೆಯ ಕಾಡಾನೆ ಸಿದ್ದ  99 ದಿನಗಳ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

manchabele elephant sidda death

ರಾಮನಗರ(ಡಿ.09): ಸತತ 99 ದಿನಗಳಿಂದ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ ಕಾಡಾನೆ ಸಿದ್ದ  ಕೊನೆಗೂ ಬದುಕುಳಿಯಲೇ ಇಲ್ಲ. ಸುಮಾರು 30 ವರ್ಷದ ಕಾಡಾನೆ ಸಿದ್ದನನ್ನ ಬದುಕಿಸಲು ರಾಜ್ಯ, ಹೊರ ರಾಜ್ಯದ ವೈದ್ಯರು ನಡೆಸಿದ ಚಿಕಿತ್ಸೆ ಕೊನೆಗೂ ಫಲಿಸಲಿಲ್ಲ.

ಆಗಸ್ಟ್  30 ರಂದು ಬನ್ನೇರುಘಟ್ಟದಿಂದ ಮೇವಿಗಾಗಿ ಬಂದು ವಾಪಸಾಗುತ್ತಿದ್ದ  ವೇಳೆ ಕಾಡಾನೆ ಸಿದ್ದ ಬಲಗಾಲು ಮುರಿದುಕೊಂಡಿದ್ದ. ಬಳಿಕ ಮಂಚನ ಬೆಲೆ ಹಿನ್ನೀರಿನಲ್ಲೇ  ಸುಮಾರು 15 ದಿನಗಳ ಕಾಲ ನರಳಾಡುತ್ತಿದ್ದ.  ಸೆಪ್ಟೆಂಬರ್​ ನಲ್ಲಿ  ಸಿದ್ದನ ನರಳಾಟದ ಬಗ್ಗೆ ಮಾಧ್ಯಮಗಳ ವರದಿಯಿಂದ ಸರ್ಕಾರ ಎಚ್ಚೆತ್ತುಕೊಂಡಿತ್ತು. ಕೂಡಲೇ ಮುತುವರ್ಜಿ ವಹಿಸಿ, ಚಿಕಿತ್ಸೆಗಾಗಿ ಸಮಿತಿಯೊಂದನ್ನು ರಚಿಸಿ, ಮಂಚನಬೆಲೆಯ ಅವ್ವೇರಹಳ್ಳಿಯಲ್ಲಿ  ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಕಾಡಾನೆ ಸಿದ್ದನನ್ನು ನೋಡಲು ಮಂಚಲಬೆಲೆ  ಗ್ರಾಮಸ್ಥರು ಸೇರಿದಂತೆ  ರಾಜಕಾರಣಿಗಳು, ಅಧಿಕಾರಿಗಳ ದಂಡೇ ಧಾವಿಸಲು ಶುರುವಿಟ್ಟುಕೊಂಡರು. ಸಿದ್ದ ಬೇಗನೇ ಗುಣಮುಖನಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿದರು.

ಹಲವು ದಿನಗಳ ಚಿಕಿತ್ಸೆ ಬಳಿಕವೂ ಸುಧಾರಣೆ ಕಾಣಲಿಲ್ಲ. ಹೀಗಾಗಿ ಕ್ರೇನ್​ ಸಹಾಯದಿಂದ ಸಿದ್ದನನ್ನು ಎತ್ತಿ ನಿಲ್ಲಿಸಲಾಯ್ತು. ಬಳಿಕ ಸೇನಾ ಪಡೆಯಿಂದ ಗ್ಯಾಂಟ್ರಿ ಟವರ್​ ನಿರ್ಮಾಣ ಮಾಡಿ ಅದರಲ್ಲೇ ಕೆಲ ದಿನಗಳ ಕಾಲ ಚಿಕಿತ್ಸೆ ಮುಂದುವರೆಸಿದರು.

ಬದುಕುವ ಭರವಸೆ ಮೂಡಿಸಿದ್ದ ಮಂಚನಬೆಲೆಯ ಕಾಡಾನೆ ಸಿದ್ದ  99 ದಿನಗಳ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.