Asianet Suvarna News Asianet Suvarna News

ಕೆ ಪಿ ನಂಜುಂಡಿ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ತೊರೆದಿರುವ ಕೆ.ಪಿ. ನಂಜುಂಡಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ವೇಳೆ ನಂಜುಂಡಿಯವರ ಬಿಜೆಪಿ ಸೇರ್ಪಡೆ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್​ ತಮಗೆ ಬೆದರಿಕೆ ಹಾಕಿದ್ದಾರೆ ಅಂತ ವಿಶ್ವಕರ್ಮ ಸಮುದಾಯದ ಸ್ವಾಮೀಜಿ ಆಪಾದಿಸಿದ್ದಾರೆ.

KP Nanjundi Joined BJP

ಬೆಂಗಳೂರು (ಜೂ.22):  ಕಾಂಗ್ರೆಸ್ ತೊರೆದಿರುವ ಕೆ.ಪಿ. ನಂಜುಂಡಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ವೇಳೆ ನಂಜುಂಡಿಯವರ ಬಿಜೆಪಿ ಸೇರ್ಪಡೆ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್​ ತಮಗೆ ಬೆದರಿಕೆ ಹಾಕಿದ್ದಾರೆ ಅಂತ ವಿಶ್ವಕರ್ಮ ಸಮುದಾಯದ ಸ್ವಾಮೀಜಿ ಆಪಾದಿಸಿದ್ದಾರೆ.

ಕಾಂಗ್ರೆಸ್​ಗೆ ಗುಡ್​ಬೈ ಹೇಳಿರುವ ಕೆ.ಪಿ. ನಂಜುಂಡಿ ಕಮಲ ಪಾಳೆಯಕ್ಕೆ ಕಾಲಿಡುವುದು ಅಧಿಕೃತವಾಗಿದೆ. ಇವತ್ತು ಮಧ್ಯಾಹ್ನ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವತ: ನಂಜುಂಡಿ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿ, ಪಕ್ಷಕ್ಕೆ ಬರಮಾಡಿಕೊಳ್ಳೋದಾಗಿ ತಿಳಿಸಿದರು.

ಇದೇ ವೇಳೆ ಯಡಿಯೂರಪ್ಪನವರಿಂದ ಆಹ್ವಾನ ಸ್ವೀಕರಿಸಿ ಮಾತನಾಡಿದ ಕೆ.ಪಿ. ನಂಜುಂಡಿ, ಬೇಷರತ್ತಾಗಿ ಬಿಜೆಪಿ ಸೇರುತ್ತಿದ್ದೇನೆ. ಪಕ್ಷದಲ್ಲಿ ಅಟೆಂಡರ್ ಕೆಲಸ ನೀಡಿದರೂ ಶ್ರದ್ಧೆಯಿಂದ ಮಾಡ್ತೇನೆ. ನಾನು ಬಿಜೆಪಿ ಸೇರುತ್ತಿರುವ ಹಿನ್ನಲೆಯಲ್ಲಿ ರಘು ಆಚಾರ್​ನಮ್ಮ ಸಮುದಾಯದ ಸ್ವಾಮೀಜಿಯವರಿಗೆ ಧಮ್ಕಿ ಹಾಕಿದ್ದಾರೆ. ಅಂತಹ ಗುಳ್ಳೆನರಿ ಕಾಡಿನ ರಾಜ ಆಗೋಕೆ ಸಾಧ್ಯವಿಲ್ಲ ಅಂತ ರಘು ಆಚಾರ್​ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಮಾತನಾಡಿದ ವಿಶ್ವಕರ್ಮ ಸಮುದಾಯದ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ರಘು ಆಚಾರ್​ ನನಗೆ ಕರೆಮಾಡಿ ನೀವು ರಾಜಕೀಯ ಮಾಡ್ತಿದ್ದೀರಿ ಅಂತ ಬೆದರಿಕೆ ಹಾಕಿದ್ದಾನೆ.  ನಮ್ಮ ಭಾಗದಲ್ಲಿ ನಮ್ಮನ್ನು ಹೊರಗಿಟ್ಟು ಕಾರ್ಯಕ್ರಮ ಮಾಡೋದಾಗಿ ಹೇಳಿದ್ದಾನೆ. ಇಷ್ಟು ವರ್ಷ ನಮ್ಮೊಂದಿಗೆ ಮಾತನಾಡದ ರಘು ಆಚಾರ್ ಇಂದು ಏಕಾಏಕಿ ನಮಗೆ ಕರೆಮಾಡಿ ಬೆದರಿಕೆ ಹಾಕಿದ್ದಾನೆ.  ಆದರೆ ನರಿ ಎಂದಿದ್ದರೂ ನರಿಯೇ, ಹುಲಿ ಹುಲಿಯೇ ಅಂತ ವ್ಯಾಖ್ಯಾನಿಸಿದರು.

ಇತ್ತ ಪ್ರತಿಕ್ರಿಯೆ ನೀಡಿದ ರಘು ಆಚಾರ್​, ಗುಳ್ಳೆ ನರಿ ಯಾರು ಎಂಬುದು ಮುಂದೆ ಗೊತ್ತಾಗುತ್ತದೆ, ಕೆ.ಪಿ.ನಂಜುಂಡಿ ಕಾಂಗ್ರೆಸ್​ನಲ್ಲಿ ಉಳಿದಿದ್ದರೆ ಸ್ಥಾನ ಮಾನ ಸಿಗುತ್ತಿತ್ತು, ಈಗ ಅಧಿಕಾರಕ್ಕಾಗಿ ಕೆ.ಪಿ.ನಂಜುಂಡಿ ಬಿಜೆಪಿ ಸೇರಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.  ಒಟ್ಟಾರೆ, ಕೆ.ಪಿ. ನಂಜುಂಡಿ ಬಿಜೆಪಿ ಸೇರ್ಪಡೆಯ ನಿರ್ಧಾರದ ಬೆನ್ನಲ್ಲೇ ರಘು ಆಚಾರ್​ ಸ್ವಾಮೀಜಿಗೆ ಬೆದರಿಕೆ ಹಾಕಿದ್ದಾರೆಂಬ ಆಪಾದನೆಯ ಸದ್ಯ ಚರ್ಚೆಗೆ ಗ್ರಾಸವಾಗಿದೆ.

 

Follow Us:
Download App:
  • android
  • ios