Asianet Suvarna News Asianet Suvarna News

ಕನ್ನಡ ಕಡೆಗಣಿಸುವ ಬ್ಯಾಂಕುಗಳ ವಿರುದ್ಧ ಉಗ್ರ ಹೋರಾಟ: ಕರವೇ ಎಚ್ಚರಿಕೆ

ಕನ್ನಡವನ್ನು ಕಡೆಗಣಿಸಿರುವ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳ ವಿರುದ್ಧ ಆಕ್ರೋಶಗೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಒಂದು ವಾರದೊಳಗೆ ಬ್ಯಾಂಕುಗಳು ಕನ್ನಡಮಯವಾಗಿರದಿದ್ದರೆ ಅಂತಹ ಬ್ಯಾಂಕುಗಳ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ

Kannada Should Be Compulsory Says Karave Activists

ಬೆಂಗಳೂರು(ಎ.27): ಕನ್ನಡವನ್ನು ಕಡೆಗಣಿಸಿರುವ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳ ವಿರುದ್ಧ ಆಕ್ರೋಶಗೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಒಂದು ವಾರದೊಳಗೆ ಬ್ಯಾಂಕುಗಳು ಕನ್ನಡಮಯವಾಗಿರದಿದ್ದರೆ ಅಂತಹ ಬ್ಯಾಂಕುಗಳ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ರಾಜ್ಯದಲ್ಲಿ ನಾನಾ ಸ್ವರೂಪದಲ್ಲಿ ಹಿಂದಿ ಹೇರಿಕೆ ನಡೆಯುತ್ತಿರುವುದನ್ನು ಉಗ್ರವಾಗಿ ಖಂಡಿಸಿದ್ದರೆ ಬ್ಯಾಂಕ್‌ಗಳು ಕೂಡ ಕನ್ನಡ ದ್ರೋಹಿಗಳಂತೆ ವರ್ತಿಸುತ್ತಿವೆ. ಈ ಧೋರಣೆ ಸರಿಪಡಿಸಿಕೊಳ್ಳದಿ ದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಕಟುವಾಗಿ ತಿಳಿಸಿದ್ದಾರೆ. 

ಕನ್ನಡದಲ್ಲೇ ಎಲ್ಲಾ ವ್ಯವಹಾರ ಮಾಡದಿದ್ದರೆ ಕನ್ನಡ ದ್ರೋಹಿ ಬ್ಯಾಂಕುಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು. ನಂತರದ ಬೆಳವಣಿಗೆಗಳಿಗೆ ಬ್ಯಾಂಕ್‌ ಮ್ಯಾನೇಜರುಗಳೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ. ಬೆಂಗಳೂರಿನಲ್ಲಿ ಇರುವ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡ ಆಡಳಿತ ಭಾಷೆ ಎಂಬುದನ್ನು ಮರೆತಿವೆ. ಈ ಬಗ್ಗೆ ಕರವೇ ನೀಡಿದ ಅನೇಕ ಮನವಿ, ಎಚ್ಚರಿಕೆಗಳು ವಿಫಲವಾಗಿವೆ, ಇತ್ತೀಚೆಗೆ ಎಲ್ಲ ಬ್ಯಾಂಕುಗಳು ಹಿಂದಿ ಭಾಷೆಯನ್ನು ಅನಗತ್ಯವಾಗಿ ಮೆರೆಸುತ್ತಿವೆ. ತ್ರಿಭಾಷಾ ಸೂತ್ರ ಪಾಲಿಸುವುದಾಗಿ ಹೇಳುವ ಬ್ಯಾಂಕುಗಳು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಈ ಎಲ್ಲಾ ಕಾರಣಗಳಿಂದ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿರುವ ಕ್ರಮ ದೊಡ್ಡ ಅಪರಾಧ ಕೃತ್ಯವಾಗಿದ್ದು, ಈ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ತಿಳಿಸಿದ್ದಾರೆ. 

ಬುಧವಾರ ಪರಿಷತ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿ ಭಾಷೆಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡಲಾಗಿದೆ. ಇದೇ ರೀತಿ ಮುಂದು​ವರಿದರೆ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳ ಮೇಲೆ ಹಿಂದಿ ಭಾಷೆ ಸವಾರಿ ಮಾಡಿದಂತಾಗುತ್ತದೆ. ಆದ್ದರಿಂದ ಹಿಂದಿ ಭಾಷೆ ಹೇರಿಕೆಗೆ ನಮ್ಮ ವಿರೋಧವಿದೆ ಎಂದರು.

ಕರ್ನಾಟಕದಲ್ಲಿ ಕನ್ನಡವೇ ಮೊದಲ ಭಾಷೆಯಾ​ಗಿ​ರ​ಬೇಕು. ಕನ್ನಡವನ್ನು ಹೊರತು​ಪಡಿಸಿ ಮತ್ಯಾವುದೇ ಭಾಷೆಗೆ ಪ್ರಾಶಸ್ತ್ಯ ನೀಡಲು ಸಾಧ್ಯವಿಲ್ಲ. ಅಲ್ಲದೆ, ರಾಜ್ಯದಲ್ಲಿ ಕೇಂದ್ರ ಸರ್ಕಾ​ರದ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಒಂದು ವಿಷಯವಾಗಿ ಆಳವಡಿಸುವಂತೆ ಸಿಎಂಗೆ ಒತ್ತಾಯಿಸಲಾಗಿದೆ ಎಂದರು.

ಬ್ಯಾಂಕುಗಳಿಗೆ ಕರವೇ ಐದು ಹಕ್ಕೊತ್ತಾಯ

1 ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕುಗಳು ಕೇವಲ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸಬೇಕು. ಹಿಂದಿ ಭಾಷೆಯನ್ನು ಬ​ಳಸಬಾರದು.

2 ಬ್ಯಾಂಕುಗಳ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು. ಹೊರ ರಾಜ್ಯ ಅಥವಾ ಕನ್ನಡ ಬಾರದ ಸಿಬ್ಬಂದಿಗಳಿದ್ದಲ್ಲಿ ಅವರನ್ನು ತವರು ಜಿಲ್ಲೆಗಳಿಗೆ ವರ್ಗಾಯಿಸಬೇಕು. ಬ್ಯಾಂಕು ಗಳಲ್ಲಿ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಶೇ. 100 ರಷ್ಟುಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು.

3 ಬ್ಯಾಂಕುಗಳಲ್ಲಿ ಇನ್ನು ಮುಂದೆ ಕನ್ನಡದಲ್ಲಿ ಮಾತ್ರ ವ್ಯವಹಾರ ನಡೆಯಬೇಕು, ಬ್ಯಾಂಕ್‌ ಸಿಬ್ಬಂದಿ ಹಿಂದಿಯಲ್ಲಿ ಗ್ರಾಹಕರ ಜೊತೆ ಮಾತನಾಡಬಾರದು. ಗ್ರಾಹಕನಿಗೆ ಕನ್ನಡ ಬಾರದೇ ಇದ್ದಲ್ಲಿ ಮಾತ್ರ ಇಂಗ್ಲಿಷ್‌ನಲ್ಲಿ ವ್ಯವಹರಿಸಬೇಕು.

4 ಚಲನ್‌, ಚೆಕ್‌ ಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮುದ್ರಣವಾಗಬೇಕು. ಕನ್ನಡದಲ್ಲಿ ಭರ್ತಿ ಮಾಡಿದ ಅರ್ಜಿ, ಚಲನ್‌ ಹಾಗೂ ಚೆಕ್‌ ಪುಸ್ತಕಗಳನ್ನು ತಿರಸ್ಕರಿಸಬಾರದು. ಗ್ರಾಹಕನಿಗೆ ನೀಡುವ ದಾಖಲೆ, ಮಾಹಿತಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಬೇಕು. ಹಿಂದಿಯಲ್ಲಿ ಯಾವುದೇ ದಾಖಲೆ ನೀಡಬಾರದು.

5 ಎಲ್ಲಾ ನಾಮಫಲಕ, ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು. ಕನ್ನಡದ ವಾತಾವರಣವನ್ನು ಸಿಬ್ಬಂದಿ ನಿರ್ಮಿಸಬೇಕು.

Follow Us:
Download App:
  • android
  • ios