ವಿಧಾನಮಂಡಲದಲ್ಲಿ  ಪ್ರತಿಧ್ವನಿಸಿತು ಕಲ್ಲಡ್ಕ ಪ್ರಕರಣ; ರಮಾನಾಥ್ ರೈ ವಿರುದ್ಧ ಭುಗಿಲೆದ್ದ ಆಕ್ರೋಶ
news
By Suvarna Web Desk | 07:48 PM June 19, 2017

ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಸಚಿವ ರಮಾನಾಥ್ ಆಡಿದ ಮಾತಿನ ವಿಡಿಯೋ ವಿಚಾರ ವಿಧಾನಸಭೆಯಲ್ಲಿ ಸದ್ದು ಮಾಡಿತು. ರಮಾನಾಥ್ ರೈ ವಿರುದ್ಧ ಬಂಟ್ವಾಳದಲ್ಲಿ ದೂರು ಕೂಡ ದಾಖಲಾಗಿದೆ. 

ಬೆಂಗಳೂರು (ಜೂ.19): ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಸಚಿವ ರಮಾನಾಥ್ ಆಡಿದ ಮಾತಿನ ವಿಡಿಯೋ ವಿಚಾರ ವಿಧಾನಸಭೆಯಲ್ಲಿ ಸದ್ದು ಮಾಡಿತು. ರಮಾನಾಥ್ ರೈ ವಿರುದ್ಧ ಬಂಟ್ವಾಳದಲ್ಲಿ ದೂರು ಕೂಡ ದಾಖಲಾಗಿದೆ. 

ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಅರಣ್ಯ ಸಚಿವ ರಮಾನಾಥ್ ರೈ ಆಡಿದ ಮಾತಿನ ವಿಡಿಯೋ ಸಾಮಾಜಿಕ ಜಾಲಜತಾಣಗಳಲ್ಲಿ ವೈರಲ್ ಆಗಿದೆ. ಇದೇ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ರಮಾನಾಥ ರೈ ಮೇಲೆ ಮುಗಿಬಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಯೇ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಮುಖಂಡ ಜಗದೀಶ ಶೆಟ್ಟರ್ ಈ ವಿಚಾರವನ್ನ ಪ್ರಸ್ತಾಪಿಸುತ್ತಾ, ಪ್ರಭಾಕರ ಭಟ್ಟರ ಬಗ್ಗೆ ರೈ ಒಬ್ಬ ಸಚಿವರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವಂತದ್ದು. ಇಂತಹ ಮಾತನ್ನು ಆಡಿದ ರಮಾನಾಥ್ ರೈ ಅವರು ಸಚಿವರಾಗಿ ಮುಂದುವರೆಯಬಾರದು ಎಂದು ಆಗ್ರಹಿಸಿದರು. ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲಕುಮಾರ್ ಕೂಡಾ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಂತಯುತವಾಗಿದ್ದ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವನ್ನ ಸಚಿವರು ನಡೆಸಿದ್ದು, ಸಿಎಂ ಇವರನ್ನ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಸದಸ್ಯರ ಮಾತಿಗೆ ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಅಭಯಚಂದ್ರ ಜೈನ್, ಮೋಯುದ್ದೀನ್ ಬಾವಾ ಸೇರಿ ಇತರರು ರೈಗೆ ಸಪೋರ್ಟ್ ಆಗಿ ನಿಂತರು. ಬಳಿಕ ರಮಾನಾಥ್ ರೈ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೂ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಇದರ ನಡುವೆಯೇ ಮಾತು ಮುಂದುವರೆಸಿದ ಸಚಿವರು, ತಾವು ಯಾವತ್ತೂ ಶಾಂತಿ ಭಂಗ ತರುವ ಪ್ರಯತ್ನವನ್ನಾಗಲಿ, ಮಾತನ್ನಾಗಲಿ ಆಡಿಲ್ಲ. ಒಂದು ವೇಳೆ ಆಡಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು.

ಸಚಿವರ ಸ್ಪಷ್ಟನೆಗೆ ತಣ್ಣಗಾಗದ ಪ್ರತಿಪಕ್ಷ ಸದಸ್ಯರು ಗೃಹ ಸಚಿವರೇ ಉತ್ತರ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪೀಕರ್ ಆಯ್ತು ಗೃಹ ಸಚಿವರಿಂದ ಉತ್ತರ ನೀಡಿಸುವ ಭರವಸೆ ನೀಡಿದರು. ಮತ್ತೊಂದೆಡೆ, ಬಂಟ್ವಾಳದಲ್ಲಿ ಪ್ರಭಾಕರ ಭಟ್ಟ ಬಗ್ಗೆ ರೈ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತವಾಗಿದ್ದು, ಈ ಬಗ್ಗೆ ದಿನೇಶ ಅಮ್ಟೂರು ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಮುಂಬೈ ಹಿಂದೂಗಳು ಕೂಡ ಸಚಿವರ ಅವಹೇಳನಕಾರಿ ಮಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರೆದಲ್ಲಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಇದೇ ವೇಳೆ, ಮುಂಬೈಯಿಂದ ರಮಾನಾಥ ರೈಗಳಿಗೆ ಬೆದರಿಕೆ ಕರೆ ಕೂಡಾ ಬಂದಿದ್ದು, ತುಳುವಿನಲ್ಲೇ ಬೆದರಿಕೆ ಹಾಕಿದ್ದಾನೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಯಂತ ರೈ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಇದೇ ವೇಳೆ, ರಮಾನಾಥ್ ರೈ ರನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮತ್ತು ಕರಾವಳಿ ಭಾಗದ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಸಚಿವ ರಮಾನಾಥ ರೈ ಪೊಲೀಸ್ ಅಧಿಕಾರಿಯನ್ನು ಕರೆದು ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಕೇಸ್ ಹಾಕಿ ಎಂದಿರುವ ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರ ಮುಂಬರುವ ಚುನಾವಣೆಲೀ ಭಾರೀ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

Show Full Article