Asianet Suvarna News Asianet Suvarna News

'ತಿವಾರಿ ಸಾವಿಗೂ ಮುನ್ನ ದೇಹಕ್ಕೆ ಗಾಯ ಆಗಿತ್ತು'

ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ತಿವಾರಿ ದೇಹದಲ್ಲಿರುವ ಆಹಾರ ಇನ್ನೂ ಪಚನಗೊಂಡಿರಲಿಲ್ಲ. ಆದ್ದರಿಂದ ಸಾವು ಎಷ್ಟು ಹೊತ್ತಿಗೆ ನಡೆದಿದೆ ಎನ್ನುವುದೇ ದೊಡ್ಡ ಪ್ರಶ್ನೆ. ಸಾಮಾನ್ಯವಾಗಿ ಆಹಾರ 2-3 ಗಂಟೆ ಪಚನವಾಗದೆ ದೇಹದಲ್ಲೇ ಉಳಿಯುತ್ತದೆ. 9 ಗಂಟೆಗೆ ತಿವಾರಿ ಊಟ ಮಾಡಿದ್ದರೆ ಅವರ ಸಾವು 12 ಗಂಟೆ ಒಳಗೆ ಆಗಿರುವ ಸಾಧ್ಯತೆಗಳಿವೆ. ಅದಕ್ಕಿಂತಲೂ ಮೊದಲೂ ಸಾವು ಸಂಭವಿಸಿರಬಹುದು.

injuries in the body of tiwari before his death indicates postmortem

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ದೇಹದ ಮೇಲೆ ಸಾವಿಗೂ ಮೊದಲು ಉಂಟಾದ ಹೊಸ ಗಾಯಗಳಿರುವುದಾಗಿ ಮರಣೋತ್ತರ ವರದಿಯಲ್ಲಿ ನಮೂದಿಸಲಾಗಿದೆ. ಈ ಗಾಯಗಳಿಗೂ ತಿವಾರಿ ಸಾವಿಗೂ ಸಂಬಂಧ ಇರಲೂಬಹುದು ಎಂದು ಮಂಗಳೂರಿನ ವಿಧಿವಿಜ್ಞಾನ ತಜ್ಞ ಪ್ರೊ.ಮಹಾಬಲೇಶ್‌ ಶೆಟ್ಟಿ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ‘ಕನ್ನಡಪ್ರಭ'ದೊಂದಿಗೆ ಮಾತನಾಡಿ, ದೇಹದ ಯಾವ ಭಾಗದಲ್ಲಿ ಗಾಯ ಆಗಿದೆ, ಎಷ್ಟು ಆಳ-ಉದ್ದಕ್ಕೆ ಆಗಿದೆ ಎನ್ನುವುದರ ಮೇಲೂ ಸಾವಿನ ಕಾರಣ ಅಂದಾಜಿಸಬಹುದು. ಗಾಯ ಎಷ್ಟುಹೊತ್ತಿನ ಮೊದಲು ಉಂಟಾಗಿದ್ದು ಎನ್ನುವುದನ್ನು ಮೇಲ್ನೋಟಕ್ಕೆ ನೋಡಿ ಅಥವಾ ಪರೀಕ್ಷೆಯ ಮೂಲಕ ತಿಳಿಯಲು ಸಾಧ್ಯವಿದೆ ಎಂದಿದ್ದಾರೆ.

ಮೆಕ್ಯಾನಿಕಲ್‌ ಆಸ್ಪೆಕ್ಷಿಯಾ?: ತಿವಾರಿ ಅವರ ಮರಣೋತ್ತರ ವರದಿಯಲ್ಲಿ ಸಾವಿಗೆ ತಕ್ಷಣದ ಕಾರಣ ‘ಆಸ್ಪೆಕ್ಷಿಯಾ' ಆಗಿರುವ ಸಾಧ್ಯತೆಯನ್ನೂ ಹೇಳಲಾಗಿದೆ. ‘ಆಸ್ಪೆಕ್ಷಿಯಾ' ಎಂದರೆ ಉಸಿರಾಟ ಸ್ಥಗಿತಗೊಂಡು ಉಂಟಾಗುವ ಸಾವು. ಇದರಲ್ಲಿ ಕೆಮಿಕಲ್‌ ಮತ್ತು ಮೆಕ್ಯಾನಿಕಲ್‌ ಎಂಬ ಎರಡು ವಿಭಾಗಗಳಿವೆ. ಉಸಿರುಗಟ್ಟಿ ಸಾಯಿಸುವುದು, ನೇಣು ಬಿಗಿದು ಆತ್ಮಹತ್ಯೆ, ನೀರಿನಲ್ಲಿ ಮುಳುಗಿಸಿ ಸಾಯಿಸುವುದು ಇತ್ಯಾದಿ ಮೆಕ್ಯಾನಿಕಲ್‌ ವಿಭಾಗಕ್ಕೆ ಬಂದರೆ, ವಿಷಾನಿಲ ತುಂಬಿಸಿ ಸಾಯಿಸುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದು ಕೆಮಿಕಲ್‌ ಆಸ್ಪೆಕ್ಷಿಯಾದಲ್ಲಿ ಬರುತ್ತದೆ. ತಿವಾರಿ ಸಾವಿನ ಪ್ರಕರಣದ ಮರಣೋತ್ತರ ವರದಿ ನೋಡಿದಾಗ ಈ ಸಾವು ಕೆಮಿಕಲ್‌ ಆಸ್ಪೆಕ್ಷಿಯಾ ಆಗಿರುವ ಸಾಧ್ಯತೆಯಿಲ್ಲ. ಹೆಚ್ಚಾಗಿ ಮೆಕ್ಯಾನಿಕಲ್‌ ಆಸ್ಪೆಕ್ಷಿಯಾ ಆಗಿರಬಹುದು ಎಂದು ಪ್ರೊ.ಮಹಾಬಲೇಶ್‌ ಶೆಟ್ಟಿಹೇಳುತ್ತಾರೆ.

ವರ್ಷವಾದರೂ ಬೇಕು: ರಾಜ್ಯದಲ್ಲಿ ಮರಣೋತ್ತರ ವರದಿ ಬರೆಯುವಾಗ ಸಾವಿನ ತಕ್ಷಣದ ಕಾರಣವನ್ನು ಅಂದಾಜಿಸಿ ನಮೂದಿಸುವ ಕ್ರಮ ಇಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಇಂಥ ಕಾರಣವನ್ನು ಅಂದಾಜಿಸಿದ್ದಾರೆ. ದೇಹದ ಎಲ್ಲ ಬಗೆಯ ವರದಿಗಳು ಬಂದ ನಂತರವೇ ಸಾವಿನ ಕಾರಣ ಸಮಗ್ರವಾಗಿ ಗೊತ್ತಾಗುವುದರಿಂದ ತಕ್ಷಣದ ಕಾರಣ ಅಂದಾಜಿಸುವುದು ಸರಿಯಾದುದಲ್ಲ. ಉಳಿದೆಲ್ಲ ವರದಿಗಳು ಬರಲು ಕನಿಷ್ಠ 1 ವರ್ಷವಾದರೂ ತಗುಲಬಹುದು ಎಂದವರು ತಿಳಿಸಿದ್ದಾರೆ.

ಆಹಾರ ಜೀರ್ಣ ಆಗಿರಲಿಲ್ಲ:
ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ತಿವಾರಿ ದೇಹದಲ್ಲಿರುವ ಆಹಾರ ಇನ್ನೂ ಪಚನಗೊಂಡಿರಲಿಲ್ಲ. ಆದ್ದರಿಂದ ಸಾವು ಎಷ್ಟು ಹೊತ್ತಿಗೆ ನಡೆದಿದೆ ಎನ್ನುವುದೇ ದೊಡ್ಡ ಪ್ರಶ್ನೆ. ಸಾಮಾನ್ಯವಾಗಿ ಆಹಾರ 2-3 ಗಂಟೆ ಪಚನವಾಗದೆ ದೇಹದಲ್ಲೇ ಉಳಿಯುತ್ತದೆ. 9 ಗಂಟೆಗೆ ತಿವಾರಿ ಊಟ ಮಾಡಿದ್ದರೆ ಅವರ ಸಾವು 12 ಗಂಟೆ ಒಳಗೆ ಆಗಿರುವ ಸಾಧ್ಯತೆಗಳಿವೆ. ಅದಕ್ಕಿಂತಲೂ ಮೊದಲೂ ಸಾವು ಸಂಭವಿಸಿರಬಹುದು. ಏಕೆಂದರೆ ಸಾವಿಗೀಡಾದ ವ್ಯಕ್ತಿಯ ದೇಹದಲ್ಲಿ ಆಹಾರ ಪಚನ ಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಅದನ್ನೇ ಮರಣೋತ್ತರ ವರದಿಯಲ್ಲಿ ನಮೂದಿಸಲಾ ಗುತ್ತದೆ ಎನ್ನುತ್ತಾರೆ ಪ್ರೊ.ಮಹಾಬಲೇಶ್‌ ಶೆಟ್ಟಿ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios