Asianet Suvarna News Asianet Suvarna News

ಲಿಬಿಯಾದಲ್ಲಿ ಭಾರತೀಯ ವೈದ್ಯನ ಕಥೆ; ಐಸಿಸ್ ಉಗ್ರರ ಸೆರೆಯಲ್ಲಿ ಅನುಭವಿಸಿದ ನರಕಯಾತನೆ

"ಐಸಿಸ್'ನಲ್ಲಿರುವ ಬಹುತೇಕ ಉಗ್ರರು ಉನ್ನತ ಶಿಕ್ಷಣ ಹೊಂದಿರುವ ಯುವಕರಾಗಿದ್ದಾರೆ. ಇವರಿಗೆ ಭಾರತದ ಆರ್ಥಿಕತೆ, ಶಿಕ್ಷಣದ ಬೆಳವಣಿಗೆ ಇತ್ಯಾದಿ ಅನೇಕ ವಿಚಾರಗಳ ಕುರಿತು ಮಾಹಿತಿ ಇದೆ," ಎಂದು ರಾಮಮೂರ್ತಿ ಹೇಳುತ್ತಾರೆ.

indian doctor rescued in libya narrates his horror story

ನವದೆಹಲಿ(ಫೆ. 26): ಲಿಬಿಯಾದಲ್ಲಿ ಅನೇಕ ವರ್ಷಗಳಿಂದ ಐಸಿಸ್ ಉಗ್ರರ ಬಂಧಿಯಾಗಿದ್ದ ಆಂಧ್ರಪ್ರದೇಶದ ವೈದ್ಯ ಡಾ. ಕೆ.ರಾಮಮೂರ್ತಿ ಅವರನ್ನು ಉಗ್ರರಿಂದ ರಕ್ಷಿಸಿ ಸ್ವದೇಶಕ್ಕೆ ಕರೆತರಲಾಗಿದೆ. ಲಿಬಿಯಾದಲ್ಲಿ 18 ವರ್ಷವಿದ್ದ ಭಾರತೀಯ ವೈದ್ಯರು, ಐಸಿಸ್ ಉಗ್ರರ ಕೈಯಲ್ಲಿ ಅನುಭವಿಸಿದ ನರಕಯಾತನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ. ಉಗ್ರರ ಚಟುವಟಿಕೆ, ಮೃಗೀಯ ವರ್ತನೆ, ಶಿಕ್ಷಣ, ಜ್ಞಾನ ಇತ್ಯಾದಿ ಬಗ್ಗೆ ರಾಮಮೂರ್ತಿ ಅವರು ಎಎನ್'ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಐಸಿಸ್ ಮತ್ತು ಭಾರತ:
ರಾಮಮೂರ್ತಿ ಹೇಳುವ ಪ್ರಕಾರ ಐಸಿಸ್ ಉಗ್ರರಿಗೆ ಭಾರತದ ಕುರಿತು ಸಾಕಷ್ಟು ಮಾಹಿತಿ ಇದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ತಮ್ಮ ಸಂಘಟನೆಯ ತತ್ವವನ್ನು ಪಸರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

"ಐಸಿಸ್'ನಲ್ಲಿರುವ ಬಹುತೇಕ ಉಗ್ರರು ಉನ್ನತ ಶಿಕ್ಷಣ ಹೊಂದಿರುವ ಯುವಕರಾಗಿದ್ದಾರೆ. ಇವರಿಗೆ ಭಾರತದ ಆರ್ಥಿಕತೆ, ಶಿಕ್ಷಣದ ಬೆಳವಣಿಗೆ ಇತ್ಯಾದಿ ಅನೇಕ ವಿಚಾರಗಳ ಕುರಿತು ಮಾಹಿತಿ ಇದೆ," ಎಂದು ರಾಮಮೂರ್ತಿ ಹೇಳುತ್ತಾರೆ.

ಐಸಿಸ್'ನಿಂದ ಹಿಂಸೆ:
ರಾಮಮೂರ್ತಿ ಅವರು ವೈದ್ಯರಾದ್ದರಿಂದ ಅವರನ್ನು ಕ್ಯಾಂಪ್'ಗಳಲ್ಲಿ ವೈದ್ಯಕೀಯ ಸೇವೆಗೋಸ್ಕರ ಐಸಿಸ್'ನವರು ಬಳಸಿಕೊಳ್ಳುತ್ತಾರೆ. ಹೀಗಾಗಿ, ಅವರಿಗೆ ದೈಹಿಕ ಹಿಂಸೆ ನೀಡದೇ ಹೋದರೂ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ.

"ಐಸಿಸ್ ಉಗ್ರರು ತಾವು ಇರಾಕ್, ಸಿರಿಯಾ, ನೈಜೀರಿಯಾ ಮೊದಲಾದ ಸ್ಥಳಗಳಲ್ಲಿ ಮಾಡಿದ ಭೀಕರ ಕೃತ್ಯಗಳ ವಿಡಿಯೋಗಳನ್ನು ವೀಕ್ಷಿಸಲು ನಮಗೆ ಬಲವಂತಪಡಿಸುತ್ತಿದ್ದರು. ಈ ವಿಡಿಯೋ ನೋಡಲು ನಿಜಕ್ಕೂ ಬಹಳ ಕಷ್ಟವಾಗುತ್ತಿತ್ತು" ಎಂದು ಆಂಧ್ರಪ್ರದೇಶ ಮೂಲದ ವೈದ್ಯರು ತಿಳಿಸುತ್ತಾರೆ.

ಐಸಿಸ್ ಉಗ್ರರ ಮನಃಸ್ಥಿತಿ:
ಮೊದಲೇ ಹೇಳಿದಂತೆ ಐಸಿಸ್ ಉಗ್ರರ ಪೈಕಿ ಉನ್ನತ ಶಿಕ್ಷಣ ಪಡೆದ ಯುವಕರೇ ಅಧಿಕ. 10 ವರ್ಷದ ಬಾಲಕರಿಂದ ಹಿಡಿದು 60-70 ವರ್ಷದ ವಯೋವೃದ್ಧರೂ ಸಂಘಟನೆಯಲ್ಲಿದ್ದಾರೆ. ಎಲ್ಲಾ ವಯೋಮಾನದವರೂ ಆತ್ಮಹತ್ಯಾದಾಳಿಗೆ ಸಜ್ಜಾಗಿರುತ್ತಾರೆ. ಒಂದು ಸ್ಫೋಟದಲ್ಲಿ 100 ಜನರನ್ನು ಸಂಹಾರ ಮಾಡುವಷ್ಟು ಪ್ರಬಲ ಸೂಸೈಡ್ ಬೆಲ್ಟ್'ಗಳು ಸಂಘಟನೆಯಲ್ಲಿವೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಪ್ರತಿಯೊಬ್ಬ ವ್ಯಕ್ತಿಯೂ ಅತೀವ ಧ್ಯೇಯನಿಷ್ಠೆ ಹೊಂದಿರುತ್ತಾನೆ. ಸಂಘಟನೆಯ ಪ್ರತಿಯೊಂದು ನಿಯಮವನ್ನೂ ಚಾಚೂ ತಪ್ಪದೇ ಪಾಲಿಸುತ್ತಾನೆ ಎಂದು ರಾಮಮೂರ್ತಿ ವಿವರಿಸುತ್ತಾರೆ.

ರಾಮಮೂರ್ತಿ ಸೇರಿದಂತೆ ಕೈದುಗಳಿಗೆ ಐಸಿಸ್'ನವರು ಇಸ್ಲಾಂ ಧರ್ಮದ ಪಾಠ ಕಲಿಸಿಕೊಡುತ್ತಿದ್ದರಂತೆ. ದಿನಕ್ಕೆ ಐದು ಬಾರಿ ನಮಾಜು ಮಾಡುವುದು; ಪ್ರಾರ್ಥನೆಗೆ ಮುನ್ನ ಸ್ವಚ್ಛ ಮಾಡಿಕೊಳ್ಳುವುದು ಹೀಗೆ ತರಬೇತಿಗಳನ್ನು ನೀಡಲಾಗುತ್ತಿತ್ತು. ಜೊತೆಗೆ, ಐಸಿಸ್ ಸಂಘಟನೆಯ ನೀತಿ-ನಿಯಮಗಳನ್ನು ಕೈದಿಗಳಿಗೆ ಹೇಳಿಕೊಡಲಾಗುತ್ತಿತ್ತು. ಐಸಿಸ್ ಕೈಯಲ್ಲಿ ಸೆರೆ ಸಿಕ್ಕವರಲ್ಲಿ ಭಾರತೀಯರು, ಟರ್ಕಿಗಳು, ಕೊರಿಯನ್ನರು ಮೊದಲಾದ ವಿವಿಧ ದೇಶದ ಜನರಿದ್ದರು.

ಬಿಡುಗಡೆಯಾಗಿದ್ದು ಹೇಗೆ?
2016ರ ರಂಜಾನ್ ವೇಳೆ ಡಾ. ರಾಮಮೂರ್ತಿಯವರಿಗೆ ಮೂರು ಬುಲೆಟ್'ಗಳು ತಗುಲಿ ತೀವ್ರ ಗಾಯಗೊಂಡು ಮೂರು ವಾರ ಕಾಲ ಐಸಿಯುನಲ್ಲಿದ್ದರು. ಚೇತರಿಸಿಕೊಂಡ ಬಳಿಕ ಅನೇಕ ದಿನಗಳ ಕಾಲ ಅವರನ್ನು ಅದೇ ಕ್ಯಾಂಪ್'ನಲ್ಲಿ ಮುಂದುವರಿಸಲಾಗಿತ್ತು. ಅದೃಷ್ಟಕ್ಕೆ ಆ ಸಮಯದಲ್ಲಿ ಲಿಬಿಯಾದ ಸರಕಾರೀ ಸೈನ್ಯ ಪಡೆಗಳು ರಾಮಮೂರ್ತಿ ಇದ್ದ ಕ್ಯಾಂಪ್ ಬಳಿಗೆ ಬರುತ್ತವೆ. ಸೈನ್ಯದ ಸುಳಿವು ಸಿಕ್ಕ ಬಳಿಕ ರಾಮಮೂರ್ತಿ ಮೊದಲಾದ ಕೈದಿಗಳು ಸಹಾಯಕ್ಕಾಗಿ ಕೂಗು ಹಾಕುತ್ತಾರೆ. ನಂತರ, ಲಿಬಿಯಾ ಯೋಧರು ಈ ಜನರನ್ನು ಬಂಧಮುಕ್ತಗೊಳಿಸುತ್ತಾರೆ.

ಮೋದಿಯ ನೆರವು:
ಐಸಿಸ್ ಸೈನಿಕರಿಂದ ರಾಮಮೂರ್ತಿ ರಕ್ಷಿಸಲ್ಪಟ್ಟಿರುವ ವಿಚಾರ ಭಾರತದ ರಾಯಭಾರಿ ಅಧಿಕಾರಿಗಳಿಗೆ ತಿಳಿಯುತ್ತದೆ. ಫೆ. 14ರಂದು ರಾಮಮೂರ್ತಿಯವರನ್ನು ಲಿಬಿಯಾದಿಂದ ಸುರಕ್ಷಿತವಾಗಿ ಟರ್ಕಿ ದೇಶದ ಇಸ್ತಾಂಬುಲ್'ಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ರಾಮಮೂರ್ತಿ ಭಾರತಕ್ಕೆ ಆಗಮಿಸುತ್ತಾರೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಭಾರತೀಯ ಅಧಿಕಾರಿಗಳ ತಂಡದ ಪಾತ್ರವನ್ನು ರಾಮಮೂರ್ತಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

(ಮಾಹಿತಿ: ಎಎನ್'ಐ ಸುದ್ದಿ ಸಂಸ್ಥೆ)

Follow Us:
Download App:
  • android
  • ios