Asianet Suvarna News Asianet Suvarna News

'ಸ್ಮಾರ್ಟ್' ಆಗಿಲ್ಲ ಗಾಂಧಿ ತಂಗಿದ್ದ ಕೊಠಡಿ

ಈಗ ಸ್ಮಾರ್ಟ್‌ಸಿಟಿಯಾಗಿರುವ ತುಮಕೂರಿಗೆ ಮುಂದಿನ 5 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 1 ಸಾವಿರ ಕೋಟಿ ಬರಲಿದೆ. ಅಲ್ಲದೇ ಸ್ಥಳೀಯ ಸಂಸ್ಥೆಯಿಂದ ಸಂಗ್ರಹವಾದ ಹಣ ಸೇರಿ ಒಟ್ಟು 2 ಸಾವಿರ ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇದರಲ್ಲಿ ಎಲ್ಲೋ ಗಾಂಧೀಜಿ ತಂಗಿದ್ದ ಕೊಠಡಿಗೆ ಕಾಯಕಲ್ಪ ಮಾಡುವ ವಿಷಯವೇ ಪ್ರಸ್ತಾಪವಾಗಿಲ್ಲ.

Gandhi Memorial Left Out From Smart City Planning

ತುಮಕೂರು (ಏ.26): ಸ್ಮಾರ್ಟ್ ಸಿತಟಿಯಾಗಿ ಆಯ್ಕೆಯಾಗಿರುವ ತುಮ​ಕೂರು ಮುಂದಿನ ಐದು ವರ್ಷಗಳಲ್ಲಿ ಏನೆಲ್ಲಾ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕೆಂಬ ಮಾಸ್ಟ​ರ್‌ ​ಪ್ಲಾನ್‌ ಸಿದ್ಧವಾಗುತ್ತಿದೆ. ಆದರೆ 1927ರಲ್ಲಿ ಗಾಂಧೀಜಿ ತಂಗಿದ್ದ ಐತಿಹಾಸಿಕ ಕಟ್ಟಡ ಪುನರು​ಜ್ಜೀವನಗೊಳಿಸುವ ಚಿಂತನೆಯನ್ನೇ ನಗರಾಡಳಿತ, ಜಿಲ್ಲಾಡಳಿತ, ಸ್ಮಾರ್ಟ್‌ಸಿಟಿ ಕಾರ್ಪೋರೇಷನ್‌ ಮಾಡಿಲ್ಲ.

ತುಮಕೂರಿನ ಜೂನಿಯರ್‌ ಕಾಲೇಜು ಮೈದಾನ​ದಲ್ಲಿರುವ ಈ ಕಟ್ಟಡದ ಪಕ್ಕ ಪ್ರಥಮ ದರ್ಜೆ ಕಾಲೇಜು ತಲೆ ಎತ್ತುತ್ತಿದೆ. ಆದರೆ 90 ವರ್ಷಗಳ ಹಿಂದೆ ಹರಿಜನ ಸಭೆ ನಡೆಸಿ ತಂಗಿದ್ದ ಕೊಠಡಿಗೆ ಮಾತ್ರ ಯಾವುದೇ ಕಾಯಕಲ್ಪವಿಲ್ಲ. ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಓ. ಅನಂತರಾಮಯ್ಯ ಅವರು ಗಾಂಧಿ ತಂಗಿದ್ದ ಕಟ್ಟಡವನ್ನು ವಿವಿಗೆ ತೆಗೆದುಕೊಂಡು ಗಾಂಧಿ ಅಧ್ಯಯನ ಕೇಂದ್ರ ಆರಂಭಿಸುವ ಯೋಜನೆ ರೂಪಿಸಿದ್ದರು. ಅಲ್ಲದೇ ಗಾಂಧಿ ಕುಟುಂಬಸ್ಥರು ಕೂಡ ಈ ಜಾಗಕ್ಕೆ ಬಂದಿದ್ದರು. ಗಾಂಧೀಜಿಗೆ ಸಂಬಂಧಿಸಿದ ಪುಸ್ತಕಗಳು, ಗಾಂಧಿ ಬಗ್ಗೆ ಬೇರೆ ಬೇರೆಯವರು ಬರೆದ ಪುಸ್ತಕಗಳು, ಅವರು ಸಂಪಾದಿಸುತ್ತಿದ್ದ ‘ಹರಿ​ಜನ' ಪತ್ರಿಕೆ ಸಂಚಿಕೆಗಳನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಗಾಂಧೀಜಿ ಕುರಿತು ಡಿಜಿಟಲ್‌ ಲೈಬ್ರರಿ ಮಾಡಲು ಪ್ರಸ್ತಾಪನೆ ಸಿದ್ಧವಾಗಿತ್ತು. ಆದರೆ ಅದ್ಯಾಕೋ ಈ ಯೋಜನೆಗೆ ಚಾಲನೆ ಸಿಗಲೇ ಇಲ್ಲ. ಇದೇ ಸಮಯದಲ್ಲಿ ಕುಲ​ಪತಿ ಪ್ರೊ. ಓ. ಅನಂತರಾಮಯ್ಯ ಅವರು ಸೇವೆ​ಯಿಂದ ನಿವೃತ್ತಿಯಾದ ಬಳಿಕ ಆ ಯೋಜನೆಗೆ ಶಾಶ್ವತವಾಗಿ ಮೂಲೆ ಸೇರಿತು.

ಈಗ ಸ್ಮಾರ್ಟ್‌ಸಿಟಿಯಾಗಿರುವ ತುಮಕೂರಿಗೆ ಮುಂದಿನ 5 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 1 ಸಾವಿರ ಕೋಟಿ ಬರಲಿದೆ. ಅಲ್ಲದೇ ಸ್ಥಳೀಯ ಸಂಸ್ಥೆಯಿಂದ ಸಂಗ್ರಹವಾದ ಹಣ ಸೇರಿ ಒಟ್ಟು 2 ಸಾವಿರ ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇದರಲ್ಲಿ ಎಲ್ಲೋ ಗಾಂಧೀಜಿ ತಂಗಿದ್ದ ಕೊಠಡಿಗೆ ಕಾಯಕಲ್ಪ ಮಾಡುವ ವಿಷಯವೇ ಪ್ರಸ್ತಾಪವಾಗಿಲ್ಲ.

ಹೆಂಚುಗಳು ಒಡೆದಿತ್ತು: ಗಾಂಧಿ ತಂಗಿದ್ದ ಈ ಕೊಠಡಿ​ಯ ಹೆಂಚುಗಳು ಕೂಡ ಒಡೆದು ಹೋಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಹೋರಾಟ​ದಿಂದ ಕಡೆಗೂ ಜಿಲ್ಲಾಡಳಿತ ಈ ಕೊಠಡಿಗೆ ಹೊಸ ಹೆಂಚುಗಳನ್ನು ಹಾಕಿಸಿ, ಸುಣ್ಣ ಬಣ್ಣ ಬಳಿಸಿ ಸುಮ್ಮ​ನಾದರು. ಆದರೆ ಮತ್ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡುವ ಗೋಜಿಗೆ ಹೋಗಲಿಲ್ಲ. ಈ ಕಟ್ಟಡದ ಬಾಗಿಲನ್ನು ಪ್ರತಿ ವರ್ಷ ಗಾಂಧಿ ಜಯಂತಿಯಂದು ತೆಗೆಯುತ್ತಾರೆ. ಅವತ್ತು ಗಾಂಧೀಜಿ ಫೋಟೋ ಇಟ್ಟು ಸಭೆ ನಡೆಸಿದೆ ಬಾಗಿಲು ಮುಚ್ಚಿದರೆ ಮತ್ತೆ ಕಟ್ಟಡದ ಬಾಗಿಲು ತೆರೆಯುವುದು ಮುಂದಿನ ಗಾಂ​ಧಿ ಜಯಂತಿಯ ದಿವಸ. ಅಷ್ಟರ ಮಟ್ಟಿಗೆ ಈ ಚಾರಿತ್ರಿಕ ಕಟ್ಟಡವನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ.

ವಿವಿ ಮುಂದೆ ಬರಲಿ: ಈಗಾಗಲೇ ವಿಶ್ವವಿದ್ಯಾಲಯ ಹಲವಾರು ಪೀಠಗಳನ್ನು ಆರಂಭಿಸಿದೆ. ಹೀಗಾಗಿ ವಿವಿಯೇ ಗಾಂಧಿ ತಂಗಿದ್ದ ಕಟ್ಟಡವನ್ನು ವಶಕ್ಕೆ ತೆಗೆ​ದುಕೊಂಡು ಅಭಿವೃದ್ಧಿಪಡಿಸಲಿ ಎಂಬುದು ಸ್ವಾತಂ​ತ್ರ್ಯ ಹೋರಾಟಗಾರರ ಅನಿಸಿಕೆ. ವರ್ಷಕ್ಕೊಮ್ಮೆ ಮಾತ್ರ ಕೊಠಡಿ ಬಾಗಿಲು ತೆಗೆಯುವುದನ್ನು ಬಿಟ್ಟು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡು ಗಾಂಧೀಜಿ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಲಿ ಎಂಬುದು ಇವರ ಒತ್ತಾಸೆಯಾಗಿದೆ.

Follow Us:
Download App:
  • android
  • ios