Asianet Suvarna News Asianet Suvarna News

ಐಎಎಸ್ ಅಧಿಕಾರಿ ಸಾವಿನ ಹಿಂದಿದೆಯಾ ಅನ್ನಭಾಗ್ಯ ಯೋಜನೆ ಅಕ್ರಮ?

ಅನುರಾಗ್ ತಿವಾರಿ 4 ತಿಂಗಳ ಹಿಂದೆ ಆಹಾರ ಇಲಾಖೆಗೆ ವರ್ಗವಾಗಿ ಹೋಗಿದ್ದರು. ಅಲ್ಲಿಗೆ ಬಂದಾಗಿನಿಂದ ಅವರು ಹಿರಿಯ ಅಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡದಿಂದ ಹೈರಾಣಾಗಿ ಹೋಗಿದ್ದರು. ಮಾನಸಿಕವಾಗಿ ಕುಸಿದುಹೋಗಿದ್ದರು. 4 ತಿಂಗಳಲ್ಲಿ 2 ತಿಂಗಳು ರಜೆ ಹಾಕಿದ್ದರು. "ಆಹಾರ ಇಲಾಖೆಗೆ ಯಾಕಾದರೂ ಬಂದೆನೋ" ಎಂದು ತಿವಾರಿ ತಮ್ಮ ಆಪ್ತರೊಂದಿಗೆ ದುಃಖ ತೋಡಿಕೊಂಡ ಮಾಹಿತಿಯೂ ಮಾಧ್ಯಮಕ್ಕೆ ಸಿಕ್ಕಿದೆ.

food dept corruption allegedly behind the death of ias officer anurag tiwari

ಬೆಂಗಳೂರು(ಮೇ 19): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಸ್ಪದ ಸಾವಿನ ಪ್ರಕರಣದಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಆಹಾರ ಇಲಾಖೆಯ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಒತ್ತಡವಿತ್ತು ಎಂಬ ಸುದ್ದಿಗೆ ಪುಷ್ಟಿ ನೀಡುವಂಥ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ. ಅನ್ನಭಾಗ್ಯ ಯೋಜನೆಯ ಅಕ್ರಮವನ್ನು ತಡೆಯಲು ತಿವಾರಿ ಮುಂದಾಗಿದ್ದು, ಅದಕ್ಕಾಗಿ ಇಲಾಖೆಯ ಕೆಲ ಅಧಿಕಾರಿಗಳು ಹಾಗು ರಾಜಕಾರಣಿಗಳ ವಿರೋಧ ಕಟ್ಟಿಕೊಂಡಿದ್ದು ಬೆಳಕಿಗೆ ಬಂದಿದೆ.

ಏನಿದು ಅನ್ನಭಾಗ್ಯ ಅಕ್ರಮ?
ಅನ್ನಭಾಗ್ಯ ಯೋಜನೆಗೆ ಸ್ಟಾಕ್ ಇದ್ದರೂ ಬೇಳೆ ಕಾಳು ಖರೀದಿಸಲು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗಿದ್ದರು. ಹೆಚ್ಚುವರಿ ಬೇಳೆಕಾಳು ಖರೀದಿಗೆ ಮತ್ತೊಮ್ಮೆ ಟೆಂಡರ್ ಕರೆಯಲು ನಿಶ್ಚಯಿಸಿದ್ದರು. ಆದರೆ, ಬೇಳೆಕಾಳು ಸಂಗ್ರಹ ಸಾಕಷ್ಟು ಇದ್ದರಿಂದ ಮತ್ತೊಮ್ಮೆ ಖರೀದಿಸಲು ಟೆಂಡರ್ ಬೇಡ ಎಂದು ಅನುರಾಗ್ ತಿವಾರಿ ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ವಿಚಾರದಲ್ಲಿ ಅನುರಾಗ್ ತಿವಾರಿಯವರು ಹಿರಿಯ ಅಧಿಕಾರಿಗಳೊಂದಿಗೆ ಮನಸ್ತಾಪಕ್ಕೆ ಗುರಿಯಾಗಬೇಕಾಯಿತು. ಕೆಲ ರಾಜಕಾರಣಿಗಳೂ ಕೂಡ ತಿವಾರಿ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು ಎಂಬಂತಹ ಮಾಹಿತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, ಆಹಾರ ಇಲಾಖೆಯಲ್ಲಿನ ಭ್ರಷ್ಟಾಚಾರಗಳ ಬಗ್ಗೆ ರಾಜ್ಯ ಸರಕಾರದ ಗಮನಕ್ಕೂ ತಿವಾರಿ ತಂದಿದ್ದರು. ಆದರೆ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲವೆನ್ನಲಾಗಿದೆ.

ಅನುರಾಗ್ ತಿವಾರಿ 4 ತಿಂಗಳ ಹಿಂದೆ ಆಹಾರ ಇಲಾಖೆಗೆ ವರ್ಗವಾಗಿ ಹೋಗಿದ್ದರು. ಅಲ್ಲಿಗೆ ಬಂದಾಗಿನಿಂದ ಅವರು ಹಿರಿಯ ಅಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡದಿಂದ ಹೈರಾಣಾಗಿ ಹೋಗಿದ್ದರು. ಮಾನಸಿಕವಾಗಿ ಕುಸಿದುಹೋಗಿದ್ದರು. 4 ತಿಂಗಳಲ್ಲಿ 2 ತಿಂಗಳು ರಜೆ ಹಾಕಿದ್ದರು. "ಆಹಾರ ಇಲಾಖೆಗೆ ಯಾಕಾದರೂ ಬಂದೆನೋ" ಎಂದು ತಿವಾರಿ ತಮ್ಮ ಆಪ್ತರೊಂದಿಗೆ ದುಃಖ ತೋಡಿಕೊಂಡ ಮಾಹಿತಿಯೂ ಮಾಧ್ಯಮಕ್ಕೆ ಸಿಕ್ಕಿದೆ.

ಅನ್ನಭಾಗ್ಯ ಯೋಜನೆಯು ಬಡವರಿಗೆ ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ಆಹಾರಧಾನ್ಯವನ್ನು ಒದಗಿಸುವ ಯೋಜನೆಯಾಗಿದೆ. ಸಾವಿರಾರು ಕೋಟಿ ರೂಪಾಯಿಯನ್ನು ಈ ಯೋಜನೆಗೆ ಹಾಕಲಾಗುತ್ತದೆ. ಸಮರ್ಪಕವಾಗಿ ಅನುಷ್ಠಾನಗೊಳ್ಳದಿದ್ದರೆ, ಭ್ರಷ್ಟಾಚಾರಕ್ಕೆ ಸುಲಭ ತುತ್ತಾಗುವ ಯೋಜನೆ ಇದಾಗಿದೆ.

ರಜೆಯ ಮೇಲೆ ಉತ್ತರಪ್ರದೇಶಕ್ಕೆ ಹೋಗಿದ್ದ ಅನುರಾಗ್ ತಿವಾರಿ ಅವರು ಮೊನ್ನೆ ಬೆಳಗ್ಗೆ ಲಕ್ನೋದ ಗೆಸ್ಟ್ ಹೌಸ್ ಸಮೀಪ ಶವವಾಗಿ ಪತ್ತೆಯಾಗಿದ್ದರು. ಖಿನ್ನತೆಯಿಂದ ತಿವಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಮಾತು ಕೇಳಿಬರುತ್ತಿದೆ. ಆದರೆ, ತಿವಾರಿ ಸಾವು ಅನುಮಾನಸ್ಪದವಾಗಿದ್ದು, ಕೊಲೆಯಾಗಿರಬಹುದೆಂಬ ಶಂಕೆಯೂ ಇದೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದೆ.

Follow Us:
Download App:
  • android
  • ios